ವಿರಾಟ್ ಕೊಹ್ಲಿ ಪಾಕಿಸ್ತಾನಕ್ಕೆ ಬಂದರೆ ಭಾರತದ ಆತಿಥ್ಯವನ್ನೇ ಮರೆಯುವಷ್ಟು ಚೆನ್ನಾಗಿ ನೋಡಿಕೊಳ್ತೇವೆ: ಶಾಹಿದ್ ಅಫ್ರಿದಿ
2025ರ ಫೆಬ್ರವರಿಯಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು ಭಾರತ ತಂಡ ಬರಬೇಕು ಎಂದು ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಒತ್ತಾಯಿಸಿದ್ದಾರೆ.
Shahid Afridi on Virat Kohli: 2025ರ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ದೇಶಕ್ಕೆ ಪ್ರಯಾಣಿಸುವುದಿಲ್ಲ ಎಂಬ ಭಾರತ ತಂಡದ ನಿಲುವಿನ ಮಧ್ಯೆಯೇ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರು, ಬಿಸಿಸಿಐ ಬೇರೆ ರೀತಿಯಲ್ಲಿ ಯೋಚಿಸಬೇಕೆಂದು ಹೇಳಿದ್ದಾರೆ. ಟೀಮ್ ಇಂಡಿಯಾ ಪಾಕ್ಗೆ ಬಂದು ಆಡಬೇಕೆಂದು ಬಯಸಿದ ಅಫ್ರಿದಿ, ಎರಡು ದೇಶಗಳ ನಡುವಿನ ಕ್ರಿಕೆಟ್ ಸಂಬಂಧ ಬೆಳೆಸಲು ಸಹಾಯ ಮಾಡುತ್ತದೆ. ಜೊತೆಗೆ ವಿರಾಟ್ ಕೊಹ್ಲಿ ಆಟ ತಮ್ಮ ದೇಶದ ಪ್ರೇಕ್ಷಕರು ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ ಎಂದಿದ್ದಾರೆ.
ಪಾಕಿಸ್ತಾನದಲ್ಲಿ ಹೊರತುಪಡಿಸಿ ವಿಶ್ವದಾದ್ಯಂತ ಕೊಹ್ಲಿ ಭಾರತದ ಪರ ಆಡಿದ್ದಾರೆ. ಗಡಿಯುದ್ದಕ್ಕೂ ಕೊಹ್ಲಿ ಅಭಿಮಾನಿಗಳು ಹೇರಳವಾಗಿರುವ ಕಾರಣ ಶಾಹೀದ್ ಅಫ್ರಿದಿ ತಮ್ಮ ದೇಶದಲ್ಲಿ ವಿರಾಟ್ ಆಡಬೇಕೆಂದು ಬಯಸಿದ್ದಾರೆ. 2008ರಲ್ಲಿ ಭಾರತ ತಂಡ ಕೊನೆಯ ಬಾರಿ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. 35 ವರ್ಷದ ಕೊಹ್ಲಿಗೆ ಪಾಕ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲು ಇದು ಕೊನೆಯ ಅವಕಾಶವಾಗಿದೆ. ಈಗಾಗಲೇ ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದು, ಏಕದಿನ, ಟೆಸ್ಟ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹಿಂದಿನ ದಿನಗಳನ್ನು ಮೆಲುಕು ಹಾಕಿದ ಅಫ್ರಿದಿ
ವಿರಾಟ್ ಕೊಹ್ಲಿ ಅವರು ಪಾಕ್ನಲ್ಲಿ ಆಡಬೇಕೆಂದು ಒತ್ತಾಯಿಸಿರುವ ಅಫ್ರಿದಿ, ಇಲ್ಲಿನ ಆತಿಥ್ಯ ಕಂಡರೆ ನಿಮ್ಮ ದೇಶದ ಆತಿಥ್ಯವನ್ನೂ ಮರೆಯುತ್ತೀರಿ ಎಂದು ಹೇಳಿದ್ದಾರೆ. ಕೊಹ್ಲಿ ಕುರಿತು ಅಫ್ರಿದಿ ಮಾತನಾಡಿದ್ದು, ನಾನು ಭಾರತ ತಂಡವನ್ನು ಸ್ವಾಗತಿಸುತ್ತೇನೆ. ಪಾಕಿಸ್ತಾನ ಪ್ರವಾಸ ಕೈಗೊಂಡಾಗಲೂ ನಾವು ಭಾರತದಿಂದ ಸಾಕಷ್ಟು ಗೌರವ ಮತ್ತು ಪ್ರೀತಿ ಪಡೆದಿದ್ದೇವೆ. ಮತ್ತು 2005-06ರಲ್ಲಿ ಭಾರತದ ಆಟಗಾರರು ಪಾಕ್ಗೆ ಬಂದಾಗ ಅವರೆಲ್ಲರೂ ಆನಂದಿಸಿದರು ಎಂದು ಈ ಹಿಂದಿನ ದಿನಗಳನ್ನು ಮೆಲುಕು ಹಾಕಿದ್ದಾರೆ.
ಪಾಕ್ಗೆ ಬನ್ನಿ ಎಂದು ವಿರಾಟ್ಗೆ ಅಫ್ರಿದಿ ಸಂದೇಶ
ಇದೇ ವೇಳೆ ಉಭಯ ದೇಶಗಳ ನಡುವೆ ಶಾಂತಿ ನೆಲೆಸಲು ಏನು ಮಾಡಬೇಕೆಂದು ಕೂಡ ಸೂಚಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನ ದೇಶಗಳು ಪರಸ್ಪರರ ದೇಶಕ್ಕೆ ಹೋಗಿ ಕ್ರಿಕೆಟ್ ಆಡುವುದಕ್ಕಿಂತ ಉತ್ತಮವಾದ ಶಾಂತಿ ನೆಲೆಸುವುದಿಲ್ಲ. ವಿರಾಟ್ ಕೊಹ್ಲಿ ಪಾಕಿಸ್ತಾನಕ್ಕೆ ಬಂದು ಕ್ರಿಕೆಟ್ ಆಡಬೇಕು. ಅವರು ಇಲ್ಲಿಗೆ ಬಂದರೆ, ಅವರು ಭಾರತದ ಪ್ರೀತಿ ಮತ್ತು ಆತಿಥ್ಯವನ್ನೇ ಮರೆತು ಬಿಡುತ್ತಾರೆ. ಅವರು ತಮ್ಮದೇ ಆದ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ. ಇದನ್ನು ಅವರ ಕಣ್ಣಾರೆ ನೋಡಬೇಕು ಎಂದು ಅಫ್ರಿದಿ ತಿಳಿಸಿದ್ದಾರೆ.
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಗೆ ಪಾಕ್ನಲ್ಲಿ ಫ್ಯಾನ್ ಫಾಲೋಯಿಂಗ್ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಅವರಂತೆಯೇ ಕೊಹ್ಲಿಗೂ ಲಕ್ಷಾಂತರ ಅಭಿಮಾನಿಗಳ ದಂಡಿದೆ. ನಾವು-ನೀವು ಸಾಕಷ್ಟು ಸಲ ಕೊಹ್ಲಿಗಾಗಿ ಪಾಕ್ ಅಭಿಮಾನಿಗಳು ಮೈದಾನಕ್ಕೆ ಬಂದಿರುವ ದೃಶ್ಯಗಳನ್ನು ನೋಡಿದ್ದೇವೆ. ಹಾಗಾಗಿ ಚಾಂಪಿಯನ್ಸ್ ಟ್ರೋಫಿ ಆಡಲು ಭಾರತಕ್ಕೆ ಬರಬೇಕು ಎಂದು ನಿಮ್ಮಲ್ಲಿ ಕೋರುತ್ತೇವೆ. ನಮ್ಮ ಆತಿಥ್ಯ ನೋಡಿದರೆ, ನಿಮ್ಮ ದೇಶದ ಆತಿಥ್ಯವನ್ನೇ ಮರೆಯುತ್ತೀರಿ ಎಂದು ಅಫ್ರಿದಿ ಹೇಳಿದ್ದಾರೆ.
ವಿರಾಟ್ ನಿವೃತ್ತಿ ಕೊಡಬಾರದಿತ್ತು ಎಂದ ಮಾಜಿ ನಾಯಕ
ಟಿ20ಐ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ಕುರಿತು ಮಾತನಾಡಿದ ಅಫ್ರಿದಿ, ಕೊಹ್ಲಿ ಅವರು ಭಾರತದ ಪರ ಟಿ20ಐ ಕ್ರಿಕೆಟ್ ಆಡುವುದನ್ನು ಮುಂದುವರಿಸಬೇಕಿತ್ತು. ತಂಡದಲ್ಲಿ ಕೊಹ್ಲಿ ಇದ್ದಿದ್ದರೆ ಯುವ ಆಟಗಾರರು ಹೆಚ್ಚು ಪ್ರಯೋಜನ ಪಡೆಯುತ್ತಿದ್ದರು ಎಂದು ಪಾಕ್ ಮಾಜಿ ನಾಯಕ ಅಭಿಪ್ರಾಯಪಟ್ಟಿದ್ದಾರೆ. ಜೂನ್ 29ರಂದು ನಡೆದ ಟಿ20 ವಿಶ್ವಕಪ್ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿದ ಭಾರತ ಚಾಂಪಿಯನ್ ಆಯಿತು. ನಂತರ ಕೊಹ್ಲಿ ಮತ್ತು ರೋಹಿತ್ ಟಿ20ಐ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರು.
ಅವರು (ಕೊಹ್ಲಿ) ಟಿ20 ಕ್ರಿಕೆಟ್ ತೊರೆಯಬಾರದಿತ್ತು. ಏಕೆಂದರೆ, ಈ ಸ್ವರೂಪದಲ್ಲಿ ಅವರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರು ತುಂಬಾ ಫಿಟ್ ಆಗಿದ್ದಾರೆ. ಅವರು ಫಾರ್ಮ್ನಲ್ಲಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅವರೊಂದಿಗೆ ಯುವ ಆಟಗಾರರು ಹೆಚ್ಚಿನ ಯಶಸ್ಸನ್ನು ಕಂಡುಕೊಳ್ಳುತ್ತಿದ್ದರು. ಯುವಕರ ತಂಡವನ್ನು ಸಂಯೋಜಿಸುವುದು ಅಷ್ಟು ಸುಲಭವಲ್ಲ. ಹಿರಿಯರು ಮತ್ತು ಕಿರಿಯರ ಸಂಯೋಜನೆ ಬೇಕು. ಹಾಗಾಗಿ ಕೊಹ್ಲಿ ಕಲಿಸಿದಷ್ಟೂ ಬೇರೆ ಯಾರೂ ಕಲಿಸಲು ಸಾಧ್ಯವಿಲ್ಲ ಎಂದು ಅಫ್ರಿದಿ ಗಮನಸೆಳೆದಿದ್ದಾರೆ.
ಹೈಬ್ರಿಡ್ ಮಾದರಿಗೆ ಬಿಸಿಸಿಐ ಒಪ್ಪಿಗೆ
ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿಯು ಕೊನೆಯದಾಗಿ 2012 ಮತ್ತು 2013ರಲ್ಲಿ ನಡೆದಿತ್ತು. ಆ ಬಳಿಕ ಉಭಯ ದೇಶಗಳು ಐಸಿಸಿ ಟೂರ್ನಿಗಳು ಹಾಗೂ ಏಷ್ಯಾಕಪ್ನಲ್ಲಿ ಮಾತ್ರ ಮುಖಾಮುಕಿಯಾಗುತ್ತಿವೆ. 2023ರಲ್ಲಿ ನಡೆದ 50 ಓವರ್ಗಳ ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ತಂಡವು ಭಾರತಕ್ಕೆ ಭೇಟಿ ನೀಡಿತ್ತು. ಹೀಗಾಗಿ ನಾವು ಭಾರತಕ್ಕೆ ಹೋಗಿದ್ದೇವೆ, ಅವರು ಸಹ ನಮ್ಮ ದೇಶಕ್ಕೆ ಬರಬೇಕು ಎಂಬುದು ಪಿಸಿಬಿ ವಾದವಾಗಿದೆ. ಆದರೆ, ಬಿಸಿಸಿಐ ತಮ್ಮ ತಂಡ ಕಳುಹಿಸಲು ಸುತಾರಂ ಒಪ್ಪುತ್ತಿಲ್ಲ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಪಂದ್ಯಗಳಲ್ಲಿ ಭಾರತದ ಗಡಿಗೆ ಹತ್ತಿರವಿರುವ ಲಾಹೋರ್ನಲ್ಲಿ ಆಯೋಜಿಸಲು ಪಾಕ್ ಮುಂದಾಗಿದೆ. ಆದರೆ, ಬಿಸಿಸಿಐ ತಮ್ಮ ತಂಡವನ್ನು ಗಡಿಯಾಚೆಗೆ ಕಳುಹಿಸಲು ಉತ್ಸುಕತೆ ತೋರುತ್ತಿಲ್ಲ. ಹಾಗಾಗಿ ಕಳೆದ ವರ್ಷ ಏಷ್ಯಾ ಕಪ್ನಂತೆ ಹೈಬ್ರಿಡ್ ಮಾದರಿಯಲ್ಲಿ ಭಾರತ ಪಂದ್ಯಗಳನ್ನು ನಡೆಸುವಂತೆ ಐಸಿಸಿಗೆ ಬಿಸಿಸಿಐ ಮನವಿ ಮಾಡಿದೆ ಎಂದು ಎಎನ್ಐ ವರದಿ ಮಾಡಿದೆ. ಶ್ರೀಲಂಕಾ ಅಥವಾ ದುಬೈನಲ್ಲಿ ತಮ್ಮ ಪಂದ್ಯಗಳನ್ನು ಆಯೋಜಿಸಲು ಕೋರಿದೆ.