ಪ್ಯಾರಿಸ್ ಒಲಿಂಪಿಕ್ಸ್: ಹಾಕಿ-ಬ್ಯಾಡ್ಮಿಂಟನ್ ಇಂದು ಆರಂಭ, ಶೂಟಿಂಗ್ ಪದಕ ಸುತ್ತು; ಜುಲೈ 27ರ ವೇಳಾಪಟ್ಟಿ-ಲೈವ್ ಸ್ಟ್ರೀಮಿಂಗ್ ವಿವರ
Jul 27, 2024 05:10 AM IST
ಪ್ಯಾರಿಸ್ ಒಲಿಂಪಿಕ್ಸ್: ಹಾಕಿ-ಬ್ಯಾಡ್ಮಿಂಟನ್ ಇಂದು ಆರಂಭ, ಶೂಟಿಂಗ್ ಪದಕ ಸುತ್ತು
- ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಜುಲೈ 27ರಂದು ಭಾರತಕ್ಕೆ ಪದಕ ಗೆಲ್ಲುವ ಅವಕಾಶವಿದೆ. 10 ಮೀಟರ್ ಏರ್ ರೈಫಲ್ ಶೂಟಿಂಗ್‌ನಲ್ಲಿ ಭಾರತ ಮಿಶ್ರ ತಂಡ ಪದಕ ಗೆಲ್ಲುವ ಅವಕಾಶ ಪಡೆಯಲಿದೆ. ಉಳಿದಂತೆ ಇಂದು ಹಾಕಿ ಹಾಗೂ ಬ್ಯಾಡ್ಮಿಂಟನ್ ಪಂದ್ಯಗಳು ನಡೆಯಲಿದೆ.
ಪ್ಯಾರಿಸ್ ಒಲಿಂಪಿಕ್ಸ್‌ಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಜುಲೈ 26ರ ಶುಕ್ರವಾರ ರಾತ್ರಿ ಪ್ರೇಮನಗರಿಯ ಸೀನ್ ನದಿಯಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು. ಜಗತ್ತಿನ ಕ್ರೀಡಾಪಟುಗಳು ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟರು. ಉದ್ಘಾಟನೆ ಬಳಿಕ ಇಂದಿನಿಂದ ಪದಕ ಸುತ್ತುಗಳು ನಡೆಯುತ್ತಿದ್ದು, ವಿವಿಧ ಕ್ರೀಡೆಗಳಲ್ಲಿ ಆಟಗಾರರು ಪದಕಗಳಿಗೆ ಕೊರಳೊಡ್ಡಲಿದ್ದಾರೆ. ಭಾರತ ದೇಶದ ಕ್ರೀಡಾಪಟುಗಳು ಕೂಡಾ ಇಂದು ವಿವಿಧ ಈವೆಂಟ್‌ಗಳಲ್ಲಿ ಪಾಲ್ಗೊಳ್ಳುತ್ತಿದ್ದು, ಇದರಲ್ಲಿ ಪದಕ ಗೆಲ್ಲುವ ಅವಕಾಶವೂ ಭಾರತೀಯರಿಗಿದೆ. ಶೂಟಿಂಗ್‌ನಲ್ಲಿ ಪದಕ ಗೆಲ್ಲುವ ನಿರೀಕ್ಷೆ ಇದೆ.
ಜುಲೈ 27ರ ಶನಿವಾರ ಭಾರತ ಪದಕ ಖಾತೆಯನ್ನು ತೆರೆಯುವ ನಿರೀಕ್ಷೆಯಲ್ಲಿದೆ. ಶೂಟರ್‌ಗಳಾದ ಎಲವೆನಿಲ್ ವಲರಿವನ್, ಸಂದೀಪ್ ಸಿಂಗ್, ರಮಿತಾ ಮತ್ತು ಅರ್ಜುನ್ ಬಾಬುತಾ ಅವರನ್ನೊಳಗೊಂಡ 10 ಮೀಟರ್ ಏರ್ ರೈಫಲ್ ಮಿಶ್ರ ತಂಡವು ಅರ್ಹತಾ ಮತ್ತು ಪದಕ ಸುತ್ತುಗಳಲ್ಲಿ ಭಾಗವಹಿಸುತ್ತಿದ್ದಾರೆ. ಇಲ್ಲಿ ಭಾರತವು ಪದಕ ಗೆದ್ದರೆ, ಮೊದಲ ದಿನದಾಟದಲ್ಲೇ ಶುಭಾರಂಭ ಮಾಡಿದಂತಾಗುತ್ತದೆ.
ಇಂದು ಪುರುಷರ ಬ್ಯಾಡ್ಮಿಂಟನ್ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಆರಂಭಿಕ ಪಂದ್ಯದಲ್ಲಿ ಆಡಲಿದ್ದಾರೆ. ಇದೇ ವೇಳೆ ಭಾರತ ಪುರುಷರ ಹಾಕಿ ತಂಡ ಕೂಡಾ ಅಭಿಯಾನ ಆರಂಭಿಸುತ್ತಿದೆ. ಮೊದಲ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಸಿಂಗ್ ಪಡೆಯು ನ್ಯೂಜಿಲೆಂಡ್ ವಿರುದ್ಧ ಮೊದಲ ಪಂದ್ಯ ಆಡುತ್ತಿದೆ.
ಜುಲೈ 27ರ ಶನಿವಾರ ಭಾರತದ ಕ್ರೀಡೆಗಳ ವೇಳಾಪಟ್ಟಿ ಹೀಗಿದೆ
- ಮಧ್ಯಾಹ್ನ 12:30: ಶೂಟಿಂಗ್ -10 ಮೀಟರ್ ಏರ್ ರೈಫಲ್ ಮಿಶ್ರ ತಂಡ ಅರ್ಹತಾ ಸುತ್ತು. ಎಲವೆನಿಲ್ ವಲರಿವನ್-ಸಂದೀಪ್ ಸಿಂಗ್ ಮತ್ತು ರಮಿತಾ-ಅರ್ಜುನ್ ಬಾಬುತಾ.
- ಮಧ್ಯಾಹ್ನ 12:30: ರೋಯಿಂಗ್ - ಪುರುಷರ ಸಿಂಗಲ್ಸ್ ಸ್ಕಲ್ಸ್ ಹೀಟ್ಸ್‌ನಲ್ಲಿ ಬಾಲರಾಜ್ ಪನ್ವಾರ್.
- ಮಧ್ಯಾಹ್ನ 2 ಗಂಟೆ: ಶೂಟಿಂಗ್ - ಪುರುಷರ 10 ಮೀಟರ್ ಏರ್ ಪಿಸ್ತೂಲ್ ಅರ್ಹತಾ ಸುತ್ತು. ಅರ್ಜುನ್ ಸಿಂಗ್ ಚೀಮಾ ಮತ್ತು ಸರಬ್ಜೋತ್ ಸಿಂಗ್.
- ಮಧ್ಯಾಹ್ನ 2 ಗಂಟೆ: ಶೂಟಿಂಗ್ - 10 ಮೀಟರ್ ಏರ್ ರೈಫಲ್ ಮಿಶ್ರ ತಂಡದ ಕಂಚು ಮತ್ತು ಚಿನ್ನದ ಪದಕ ಸ್ಪರ್ಧೆಗಳು.
ಇದನ್ನೂ ಓದಿ | ಪ್ಯಾರಿಸ್ ಒಲಿಂಪಿಕ್ಸ್ ಆಡುತ್ತಿರುವ ಟಾಪ್-10 ಶ್ರೀಮಂತ ಕ್ರೀಡಾಪಟುಗಳು; ಈ ಗಾಲ್ಫ್ ಆಟಗಾರ 1750 ಕೋಟಿ ಒಡೆಯ
- ಮಧ್ಯಾಹ್ನ 3:30: ಟೆನಿಸ್ - ಪುರುಷರ ಡಬಲ್ಸ್ ಮೊದಲ ಸುತ್ತು. ಭಾರತದ ಎನ್ ಶ್ರೀರಾಮ್ ಬಾಲಾಜಿ ಮತ್ತು ರೋಹನ್ ಬೋಪಣ್ಣ ಫ್ರಾನ್ಸ್‌ನ ಫ್ಯಾಬಿಯನ್ ರೆಬೌಲ್ ಮತ್ತು ಎಡ್ವರ್ಡ್ ರೋಜರ್ ವಾಸೆಲಿನ್.
- ಸಂಜೆ 4 ಗಂಟೆಗೆ: ಶೂಟಿಂಗ್ - ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಅರ್ಹತಾ ಸುತ್ತು. ಮನು ಭಾಕರ್ ಮತ್ತು ರಿದಮ್ ಸಾಂಗ್ವಾನ್.
- ಸಂಜೆ 7:10ರ ನಂತರ: ಬ್ಯಾಡ್ಮಿಂಟನ್ (ಪುರುಷರ ಸಿಂಗಲ್ಸ್ ಗುಂಪು ಹಂತದ ಪಂದ್ಯ)- ಭಾರತದ ಲಕ್ಷ್ಯ ಸೇನ್ ವಿರುದ್ಧ ಗ್ವಾಟೆಮಾಲಾದ ಕೆವಿನ್ ಕಾರ್ಡನ್.
- ರಾತ್ರಿ 8 ಗಂಟೆಯ ನಂತರ : ಬ್ಯಾಡ್ಮಿಂಟನ್ (ಪುರುಷರ ಡಬಲ್ಸ್ ಗುಂಪು ಹಂತದ ಪಂದ್ಯ) - ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ವಿರುದ್ಧ ಫ್ರಾನ್ಸ್‌ನ ಲುಕಾಸ್ ಕಾರ್ವಿ ಮತ್ತು ರೊನಾನ್ ಲ್ಯಾಬರ್.
- ಸಂಜೆ 7:30 : ಟೇಬಲ್ ಟೆನಿಸ್ - ಪುರುಷರ ಸಿಂಗಲ್ಸ್ ಮೊದಲ ಸುತ್ತು. ಹರ್ಮೀತ್ ದೇಸಾಯಿ ವಿರುದ್ಧ ಯುಎಇಯ ಜೈದ್ ಅಬೋ ಯಮನ್.
- ರಾತ್ರಿ 9 : ಹಾಕಿ - ಪುರುಷರ ಪೂಲ್ ಹಂತದ ಪಂದ್ಯ ಭಾರತ vs ನ್ಯೂಜಿಲೆಂಡ್.
- ರಾತ್ರಿ 11:50ರ ನಂತರ: ಬ್ಯಾಡ್ಮಿಂಟನ್ (ಮಹಿಳೆಯರ ಡಬಲ್ಸ್ ಗ್ರೂಪ್ ಸಿ ಪಂದ್ಯ) - ಭಾರತದ ಅಶ್ವಿನಿ ಪೊನ್ನಪ್ಪ ಮತ್ತು ತನಿಶಾ ಕ್ರಾಸ್ಟೊ ವಿರುದ್ಧ ದಕ್ಷಿಣ ಕೊರಿಯಾದ ಕಿಮ್ ಸೋ ಯೊಂಗ್ ಮತ್ತು ಕಾಂಗ್ ಹೀ ಯೋಂಗ್.
- ತಡರಾತ್ರಿ 12 ಗಂಟೆ: ಬಾಕ್ಸಿಂಗ್ - ಮಹಿಳೆಯರ 54 ಕೆಜಿ ರೌಂಡ್-32. ಭಾರತದ ಪ್ರೀತಿ ವಿರುದ್ಧ ವಿಯೆಟ್ನಾಂನ ವೋ ಥಿ ಕಿಮ್ ಅನ್ಹ್ ಸ್ಪರ್ಧೆ.
ಲೈವ್ ಸ್ಟ್ರೀಮಿಂಗ್ ವಿವರ
ಭಾರತದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟದ ಈವೆಂಟ್‌ಗಳನ್ನು ಮೊಬೈಲ್ ಮೂಲಕ ಜಿಯೋ ಸಿನಿಮಾದಲ್ಲಿ ವೀಕ್ಷಿಸಬಹುದು. ಟಿವಿ ಮೂಲಕ Sports18 ಚಾನೆಲ್‌ನಲ್ಲಿ ವೀಕ್ಷಿಸಬಹುದು.
ಇನ್ನಷ್ಟು ಒಲಿಂಪಿಕ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಪ್ಯಾರಿಸ್ ಒಲಿಂಪಿಕ್ಸ್ ಆರ್ಚರಿ: ಆರಂಭದಲ್ಲೇ ಮಿಂಚಿದ ಧೀರಜ್ ಬೊಮ್ಮದೇವರ-ಅಂಕಿತಾ ಭಕತ್ ಯಾರು?