ಪ್ಯಾರಿಸ್ ಒಲಿಂಪಿಕ್ಸ್ ಆರ್ಚರಿ: ಆರಂಭದಲ್ಲೇ ಮಿಂಚಿದ ಧೀರಜ್ ಬೊಮ್ಮದೇವರ-ಅಂಕಿತಾ ಭಕತ್ ಯಾರು?
ಕನ್ನಡ ಸುದ್ದಿ  /  ಕ್ರೀಡೆ  /  ಪ್ಯಾರಿಸ್ ಒಲಿಂಪಿಕ್ಸ್ ಆರ್ಚರಿ: ಆರಂಭದಲ್ಲೇ ಮಿಂಚಿದ ಧೀರಜ್ ಬೊಮ್ಮದೇವರ-ಅಂಕಿತಾ ಭಕತ್ ಯಾರು?

ಪ್ಯಾರಿಸ್ ಒಲಿಂಪಿಕ್ಸ್ ಆರ್ಚರಿ: ಆರಂಭದಲ್ಲೇ ಮಿಂಚಿದ ಧೀರಜ್ ಬೊಮ್ಮದೇವರ-ಅಂಕಿತಾ ಭಕತ್ ಯಾರು?

ಭಾರತೀಯ ಬಿಲ್ಲುಗಾರರು ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಮಿಂಚುತ್ತಿದ್ದಾರೆ. ಕ್ರೀಡಾಜಾತ್ರೆಯ ಉದ್ಘಾಟನೆಗೂ ಮುನ್ನವೇ ಆರಂಭವಾದ ಆರ್ಚರಿ ಶ್ರೇಯಾಂಕ ಸುತ್ತಿನಲ್ಲಿ ಭಾರತದ ಎರಡು ಹೆಸರುಗಳು ಎಲ್ಲರ ಗಮನ ಸೆಳೆದಿದೆ. ಅವರೇ ಧೀರಜ್ ಬೊಮ್ಮದೇವರ ಹಾಗೂ ಅಂಕಿತಾ ಭಕತ್. ಇವರ ಕಿರು ಪರಿಚಯ ಇಲ್ಲಿದೆ.

ಪ್ಯಾರಿಸ್ ಒಲಿಂಪಿಕ್ಸ್ ಆರಂಭದಲ್ಲೇ ಮಿಂಚಿದ ಧೀರಜ್ ಬೊಮ್ಮದೇವರ-ಅಂಕಿತಾ ಭಕತ್ ಯಾರು?
ಪ್ಯಾರಿಸ್ ಒಲಿಂಪಿಕ್ಸ್ ಆರಂಭದಲ್ಲೇ ಮಿಂಚಿದ ಧೀರಜ್ ಬೊಮ್ಮದೇವರ-ಅಂಕಿತಾ ಭಕತ್ ಯಾರು? (PTI)

ಪ್ಯಾರಿಸ್ ಒಲಿಂಪಿಕ್ಸ್‌ ಉದ್ಘಾಟನೆಗೂ ಮುನ್ನವೇ ಭಾರತದ ಬಿಲ್ಲುಗಾರರು ಆರ್ಚರಿಯಲ್ಲಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಹಾಕಿದ್ದಾರೆ. ಜುಲೈ 25ರ ಗುರುವಾರ ನಡೆದ ಆರ್ಚರಿ ಶ್ರೇಯಾಂಕ ಸುತ್ತಿನಲ್ಲಿ ಮೂವರು ಬಿಲ್ಲುಗಾರರನ್ನೊಳಗೊಂದ ಭಾರತ ಪುರಷರ ಆರ್ಚರಿ ತಂಡವು ಮೂರನೇ ಸ್ಥಾನ ಪಡೆಯಿತು. ಅತ್ತ ವನಿತೆಯರ ತಂಡವು ನಾಲ್ಕನೇ ಸ್ಥಾನದೊಂದಿಗೆ ಅಗ್ರ ಎಂಟರ ಘಟ್ಟಕ್ಕೆ ಟಿಕೆಟ್‌ ಪಡೆಯಿತು. ಪುರುಷರ ತಂಡದ ಪರ ಧೀರಜ್ ಬೊಮ್ಮದೇವರ, ಭಾರತೀಯರ ಪೈಕಿ ಉನ್ನತ ಶ್ರೇಯಾಂಕ ಪಡೆದರು. ಅತ್ತ ವನಿತೆಯರ ಪೈಕಿ ಅಂಕಿತಾ ಭಕತ್ ಉತ್ತಮ ಶ್ರೇಯಾಂಕ ಗಿಟ್ಟಿಸಿಕೊಂಡರು. ಅರ್ಹತಾ ಸುತ್ತಿನಲ್ಲಿ ಧೀರಜ್ ಮತ್ತು ಅಂಕಿತಾ ಅವರ ಅದ್ಭುತ ಪ್ರದರ್ಶನವು ಭಾರತ ತಂಡವು ಎರಡೂ ವಿಭಾಗಗಳಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಲು ನೆರವಾಯ್ತು.

ಶ್ರೇಯಾಂಕ ಸುತ್ತಿನಲ್ಲಿ ತಂಡಗಳ ಅಂಕಪಟ್ಟಿಯಲ್ಲಿ ಅಗ್ರ ನಾಲ್ಕು ಸ್ಥಾನ ಪಡೆಯುವ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸುತ್ತವೆ. ಉಳಿದಂತೆ 5ರಿಂದ 12ನೇ ಸ್ಥಾನ ಪಡೆಯುವ ತಂಡಗಳು ರೌಂಡ್ ಆಫ್ 16 ಪಂದ್ಯಗಳಲ್ಲಿ ಆಡುತ್ತವೆ. ಅಲ್ಲಿ ಅಗ್ರ ನಾಲ್ಕು ಸ್ಥಾನ ಪಡೆಯುವ ತಂಡಗಳು ಕ್ವಾರ್ಟರ್‌ ಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಳ್ಳುತ್ತವೆ.

ವನಿತೆಯರ ವಿಭಾಗದಲ್ಲಿ ಹೆಚ್ಚು ನಿರೀಕ್ಷೆ ಮೂಡಿಸಿದ್ದವರು ಅನುಭವಿ ಆಟಗಾರ್ತಿ ದೀಪಿಕಾ ಕುಮಾರಿ. ಆದರೆ ಅನುಭವಿ ಆಟಗಾರ್ತಿಯನ್ನು ಹಿಂದಿಕ್ಕಿ ಮಹಿಳಾ ವೈಯಕ್ತಿಕ ಅರ್ಹತಾ ಪಂದ್ಯಗಳಲ್ಲಿ 11ನೇ ಸ್ಥಾನದೊಂದಿಗೆ ಭಾರತದ ಪರ ಅತ್ಯುತ್ತಮ ಶ್ರೇಯಾಂಕ ಗಳಿಸಿ ಮಿಂಚಿದವರು ಅಂಕಿತಾ. 26 ವರ್ಷದ ಅಂಕಿತಾ ಅಗ್ರ ಶ್ರೇಯಾಂಕದ ಭಾರತೀಯ ಬಿಲ್ಲುಗಾರ್ತಿಯಾಗಿ ಹೊರಹೊಮ್ಮಿದರು. ಭಾರತ ತಂಡವಾಗಿ 1983 ಅಂಕಗಳನ್ನು ಗಳಿಸುವ ಮೂಲಕ ನಾಲ್ಕನೇ ಸ್ಥಾನ ಗಳಿಸಿತು. ದಕ್ಷಿಣ ಕೊರಿಯಾ 2046 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರೆ, ಚೀನಾ ಎರಡನೇ ಸ್ಥಾನ ಪಡೆಯಿತು.

ಭಾರತ ವನಿತೆಯರು ಮುಂದೆ ಕ್ವಾರ್ಟರ್ ಫೈನಲ್‌ನಲ್ಲಿ ಫ್ರಾನ್ಸ್ ಅಥವಾ ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸಲಿದೆ. ಒಂದು ವೇಳೆ ಕ್ವಾರ್ಟರ್ ಫೈನಲ್ ತಲುಪಿದರೆ ಭಾರತ ತಂಡ ಕೊರಿಯಾ ವಿರುದ್ಧ ಸೆಮಿಫೈನಲ್ ಪ್ರವೇಶಿಸಲಿದೆ.

ಅಂಕಿತಾ ಭಕತ್ ಯಾರು?

ಬಂಗಾಳ ಮೂಲದ ಅಂಕಿತಾ, ಟಾಟಾ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಾರೆ. ಪ್ಯಾರಿಸ್‌ನಲ್ಲಿ ಇವರು ಅಗ್ರಸ್ಥಾನಿಯಾಗಿದ್ದು ಭಾರತೀಯರ ಹುಬ್ಬೇರಿದೆ. ಯಾಕೆಂದರೆ ನಾಲ್ಕು ಬಾರಿ ಒಲಿಂಪಿಕ್ಸ್‌ ಆಡಿರುವ ಅನುಭವಿ ದೀಪಿಕಾ ಅವರನ್ನೇ ಅಂಕಿತಾ ಹಿಂದಿಕ್ಕಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್ 2024ಕ್ಕೂ ಮುಂಚಿತವಾಗಿ, ಅಂಕಿತಾ ಅವರು 2023ರ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳಾ ತಂಡ ರಿಕರ್ವ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡದಲ್ಲಿದ್ದರು. ಆಗ ಇವರ ತಂಡದಲ್ಲಿ ಸಿಮ್ರಂಜೀತ್ ಕೌರ್ ಮತ್ತು ಭಜನ್ ಕೌರ್ ಆಡಿದ್ದರು. ಟರ್ಕಿಯ ಅಂಟಲ್ಯದಲ್ಲಿ ನಡೆದ ವರ್ಲ್ಡ್ ಆರ್ಚರಿ ಒಲಿಂಪಿಕ್ ಕ್ವಾಲಿಫೈಯರ್ 2024ರಲ್ಲಿಯೂ ಉತ್ತಮ ಪ್ರದರ್ಶನವನ್ನು ನೀಡಿದ್ದರು. 10 ವರ್ಷದವಳಿದ್ದಾಗಲೇ ಬಿಲ್ಲುಗಾರಿಕೆ ಕಡೆಗೆ ಆಸಕ್ತಿ ಬೆಳೆಸಿದ್ದ ಅವರು, ಕಲ್ಕತ್ತಾ ಆರ್ಚರಿ ಕ್ಲಬ್‌ನಲ್ಲಿ ತರಬೇತಿ ಪಡೆದರು. ಆ ನಂತರ ಜೆಮ್ಶೆಡ್‌ಪುರದ ಆರ್ಚರಿ ಅಕಾಡೆಮಿಗೆ ಸೇರಿದರು.‌

ಧೀರಜ್ ಬೊಮ್ಮದೇವರ ಸಾಧನೆಗಳೇನು?

ವಿಶ್ವಕಪ್ ಕಂಚಿನ ಪದಕ ವಿಜೇತ ಧೀರಜ್, ಪ್ಯಾರಿಸ್‌ನಲ್ಲಿ 681 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದರು. ಉಳಿದಂತೆ ತರುಣ್ ದೀಪ್ ರಾಯ್ 674 ಅಂಕಗಳೊಂದಿಗೆ 14ನೇ ಸ್ಥಾನದಲ್ಲಿದ್ದರೆ, ಪ್ರವೀಣ್ ಜಾಧವ್ 658 ಅಂಕಗಳೊಂದಿಗೆ 39ನೇ ಸ್ಥಾನ ಪಡೆದರು.

ಆಂಧ್ರಪ್ರದೇಶದವರಾದ ಧೀರಜ್‌, 2006ರಲ್ಲಿ ವಿಜಯವಾಡದ ವೋಲ್ಗಾ ಆರ್ಚರಿ ಅಕಾಡೆಮಿಯಲ್ಲಿ ತರಬೇತಿ ಆರಂಭಿಸಿದರು. ಆ ಬಳಿಕ ನಾಲ್ಕು ವರ್ಷಗಳ ಕಾಲ ಪುಣೆಯ ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ ತರಬೇತಿ ಪಡೆದ ನಂತರ 2021ರಲ್ಲಿ ಭಾರತೀಯ ಸೇನೆಗೆ ಸೇರಿದರು.

2017ರಲ್ಲಿ ಧೀರಜ್ ಬೊಮ್ಮದೇವರ ಅಂತಾರಾಷ್ಟ್ರೀಯ ಮಟ್ಟಕ್ಕೆ ಪದಾರ್ಪಣೆ ಮಾಡಿದರು. 2021ರ ವಿಶ್ವ ಆರ್ಚರ್ ಯೂತ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಗುರುತಿಸಿಕೊಂಡರು. ವಿಶ್ವದ 15ನೇ ಶ್ರೇಯಾಂಕದ ಧೀರಜ್, ಟರ್ಕಿಯ ಅಂಟಲ್ಯದಲ್ಲಿ ನಡೆದ ವಿಶ್ವಕಪ್ 2024ರಲ್ಲಿ ಕಂಚಿನ ಪದಕವನ್ನು ಪಡೆದರು. 2023ರ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತೀಯ ಪುರುಷರ ತಂಡದಲ್ಲಿ ಧೀರಜ್ ಕೂಡಾ ಇದ್ದರು. ಅವರೊಂದಿಗೆ ಅತನು ದಾಸ್ ಮತ್ತು ತುಷಾರ್ ಶೆಲ್ಕೆ ಜೊತೆಗಿದ್ದರು. ಅಲ್ಲಿ ರಿಪಬ್ಲಿಕ್ ಆಫ್ ಕೊರಿಯಾ ವಿರುದ್ಧ ಫೈನಲ್‌ನಲ್ಲಿ ಭಾರತ ಸೋತಿತ್ತು.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.