ದೃಷ್ಟಿದೋಷ ನಿವಾರಣೆಗೆ ಶಕ್ತಿಶಾಲಿ ಮಂತ್ರಗಳು: ಶಿವನ ನೆನೆದರೆ ದುಷ್ಟರ ಸಂಚು ನಿಷ್ಫಲ, ಸರಿಯಾದ ಕ್ರಮ ತಿಳಿದುಕೊಳ್ಳಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ದೃಷ್ಟಿದೋಷ ನಿವಾರಣೆಗೆ ಶಕ್ತಿಶಾಲಿ ಮಂತ್ರಗಳು: ಶಿವನ ನೆನೆದರೆ ದುಷ್ಟರ ಸಂಚು ನಿಷ್ಫಲ, ಸರಿಯಾದ ಕ್ರಮ ತಿಳಿದುಕೊಳ್ಳಿ

ದೃಷ್ಟಿದೋಷ ನಿವಾರಣೆಗೆ ಶಕ್ತಿಶಾಲಿ ಮಂತ್ರಗಳು: ಶಿವನ ನೆನೆದರೆ ದುಷ್ಟರ ಸಂಚು ನಿಷ್ಫಲ, ಸರಿಯಾದ ಕ್ರಮ ತಿಳಿದುಕೊಳ್ಳಿ

ಏನು ಮಾಡಿದರೂ ಪ್ರಗತಿ ಸಾಧಿಸಲಾಗುತ್ತಿಲ್ಲ ಎಂಬ ಸ್ಥಿತಿ ಬಂದಾಗ, ದೃಷ್ಟಿ ಬಿದ್ದಿರಬೇಕು ಎನ್ನುತ್ತಾರಲ್ಲ. ಅಂತಹ ದೃಷ್ಟಿ ದೋಷಗಳ ನಿವಾರಣೆಗೆ ಶಕ್ತಿಶಾಲಿ ಮಂತ್ರಗಳು ಇವೆ. ವಿಶೇಷವಾಗಿ ಶಿವನ ನೆನೆದರೆ ದುಷ್ಟರ ಸಂಚು ನಿಷ್ಫಲವಾಗುತ್ತದೆ. ಅಂತಹ 5 ಶಕ್ತಿಶಾಲಿ ಮಂತ್ರಗಳು ಇಲ್ಲಿದ್ದು, ಅನುಷ್ಠಾನಕ್ಕೆ ಸಂಬಂಧಿಸಿ ಪರಿಣತರಿಂದ ಸರಿಯಾದ ಕ್ರಮ ತಿಳಿದುಕೊಂಡು ಅನುಸರಿಸಿ.

 ಶಿವನ ನೆನೆದರೆ ದುಷ್ಟರ ಸಂಚು ನಿಷ್ಫಲವಾಗುವುದಷ್ಟೇ ಅಲ್ಲ, ಬಿದ್ದ ಕೆಟ್ಟ ದೃಷ್ಟಿಯೂ ದೂರವಾಗುತ್ತದೆ ಎಂಬುದು ನಂಬಿಕೆ. (ಸಾಂಕೇತಿಕ ಚಿತ್ರ)
ಶಿವನ ನೆನೆದರೆ ದುಷ್ಟರ ಸಂಚು ನಿಷ್ಫಲವಾಗುವುದಷ್ಟೇ ಅಲ್ಲ, ಬಿದ್ದ ಕೆಟ್ಟ ದೃಷ್ಟಿಯೂ ದೂರವಾಗುತ್ತದೆ ಎಂಬುದು ನಂಬಿಕೆ. (ಸಾಂಕೇತಿಕ ಚಿತ್ರ) (Pexel)

ಮನುಷ್ಯ ದೃಷ್ಟಿ ಬಿದ್ದರೆ ಕಲ್ಲುಗಳೂ ಸಿಡಿದು ಚೂರಾಗುತ್ತವೆ ಎಂಬ ಮಾತಿದೆ. ಎಲ್ಲರ ದೃಷ್ಟಿಯೂ ಹಾಗಿದೆ ಎಂದಲ್ಲ. ಆದರೆ ಕೆಲವು ಸಂದರ್ಭಗಳಲ್ಲಿ ಕೆಲವು ವ್ಯಕ್ತಿಗಳ ದೃಷ್ಟಿ ಬಿದ್ದರೆ ಅಂತಹ ಅನಾಹುತಗಳಾದ ಅನುಭವದ ಕಾರಣಕ್ಕೆ ಪೂರ್ವಜರು ಅದನ್ನು “ದೃಷ್ಟಿ ಬಿದ್ದಿದೆ” (ಕೆಟ್ಟ ದೃಷ್ಟಿ) ಎಂದು ಹೇಳುತ್ತಿದ್ದರು. ಇದು ವಾಡಿಕೆಯಲ್ಲಿ ಹಾಗೆಯೇ ಮುಂದುವರಿದಿದೆ. ದೃಷ್ಟಿ ತೆಗೆಯಲು ಜನಪದದಲ್ಲಿ ಹಲವು ರೀತಿಯ ಆಚರಣೆಗಳಿರುವುದನ್ನೂ ನೀವು ಗಮನಿಸಿರಬಹುದು. ಕೆಟ್ಟ ದೃಷ್ಟಿ ಕೌಟುಂಬಿಕ ಸಮಸ್ಯೆಗಳನ್ನು ಮತ್ತು ಮಾನಸಿಕ ಒತ್ತಡವನ್ನು ಉಂಟುಮಾಡಬಹುದು. ಮಾಟಮಂತ್ರ ಮತ್ತು ನರದಿಷ್ಟಿ ಬಹಳ ಕೆಟ್ಟ ಪರಿಣಾಮ ಬೀರುವಂಥದ್ದು ಎಂದು ಹಿರಿಯರು ಹೇಳುತ್ತಾರೆ. ಕೆಲವರು ಇತರರ ಬೆಳವಣಿಗೆಯನ್ನು ಸಹಿಸಲಾರರು. ಅವರು ಅದಕ್ಕಾಗಿ ವಾಮಾಚಾರವನ್ನು ಆಶ್ರಯಿಸುತ್ತಾರೆ. ನಕಾರಾತ್ಮಕ ಶಕ್ತಿಗಳನ್ನು ತೊಡೆದುಹಾಕಲು ನಾವು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಅವುಗಳಿಂದ ಪ್ರಭಾವಿತವಾಗದಿರಲು ಸಹಾಯ ಮಾಡುವ ಕೆಲವು ಮಂತ್ರಗಳಿವೆ. ಮಾಟಮಂತ್ರ ಮತ್ತು ದುಷ್ಟ ಕಣ್ಣುಗಳಿಂದ ನಿಮ್ಮನ್ನು ರಕ್ಷಿಸಲು ಬಳಸಬಹುದಾದ ಕೆಲವು ಮಂತ್ರಗಳು ಇವು. ಇವುಗಳನ್ನು ನಿತ್ಯ ಜಪಿಸುವುದು ಒಳ್ಳೆಯದು.

ದೃಷ್ಟಿ ದೋಷ ನಿವಾರಣೆಗಾಗಿ ನಿತ್ಯವೂ ಜಪಿಸಬಹುದಾದ ಮಂತ್ರಗಳಿವು

1) ಓಂ ನಮಃ ಶಿವಾಯ

ಓಂ ನಮಃ ಶಿವಾಯ - ನಾನು ಶಿವನಿಗೆ ನಮಸ್ಕರಿಸುತ್ತೇನೆ ಎಂಬುದು ಇದರ ಅರ್ಥ. ಶಿವನಿಗೆ ಸಮರ್ಪಿತವಾದ ಸರಳ ಮತ್ತು ಶಕ್ತಿಶಾಲಿ ಮಂತ್ರಗಳಲ್ಲಿ ಇದೂ ಒಂದು. ಶಿವನಿಗೆ ಶರಣಾಗುವುದರಿಂದ, ಆತನೇ ನಮ್ಮನ್ನು ಯಾವುದೇ ವಾಮಾಚಾರ ಅಥವಾ ದುಷ್ಟ ಕಣ್ಣಿನಿಂದ ತೊಂದರೆಯಾಗದಂತೆ ರಕ್ಷಿಸುತ್ತಾನೆ. ಭಗವಾನ್ ಶಿವನು ಆದಿಯೋಗಿ, ಪರಮ ತಪಸ್ವಿ, ಸರ್ವಶಕ್ತ. ಅವನನ್ನು ಆಶ್ರಯಿಸಿದರೆ ಖಂಡಿತವಾಗಿಯೂ ರಕ್ಷಿಸುತ್ತಾನೆ. ನೀವು ಯಾವುದೇ ನಕಾರಾತ್ಮಕ ಶಕ್ತಿಯಿಂದ ಬಳಲುತ್ತಿದ್ದರೆ ಬೆಳಿಗ್ಗೆ ಸ್ನಾನದ ನಂತರ ಪೂಜಾ ಕೋಣೆಯಲ್ಲಿ ಕುಳಿತುಕೊಳ್ಳಿ. ದೇವರ ದೀಪ ಬೆಳಗಿಸಿ. ಅದಾಗಿ ಓಂ ನಮಃ ಶಿವಾಯ ಎಂಬ ಮಂತ್ರವನ್ನು ಜೋರಾಗಿ 108 ಬಾರಿ ಜಪಿಸಿ. ದೇವರಿಗೆ ಆರತಿ ಎತ್ತಿ.

2) ಮಹಾಮೃತ್ಯುಂಜಯ ಮಂತ್ರ

ಮಹಾ ಮೃತ್ಯುಂಜಯ ಮಂತ್ರವು ಶಿವನ ಮತ್ತೊಂದು ಅತ್ಯಂತ ಶಕ್ತಿಯುತ ಮಂತ್ರವಾಗಿದೆ. ಇದು ದುಷ್ಟಶಕ್ತಿಗಳು, ದುಷ್ಟ ಕಣ್ಣು ಮತ್ತು ಮಾಟಮಂತ್ರವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮಹಾಮೃತ್ಯುಂಜಯ ಮಂತ್ರವನ್ನು 'ಸಾವನ್ನು ಜಯಿಸುವ' ಮಂತ್ರ ಎಂದೂ ಕರೆಯುತ್ತಾರೆ. ಅನಾರೋಗ್ಯ, ಅನಿಷ್ಠ, ಮೃತ್ಯು ಭಯ ಹೋಗಲಾಡಿಸಲು ಪುರಾತನ ಕಾಲದಿಂದಲೂ ಪಠಿಸಲಾಗುತ್ತಿದೆ. ಪ್ರತಿದಿನ ಬೆಳಿಗ್ಗೆ ಸ್ನಾನದ ನಂತರ ಪೂಜಾ ಕೋಣೆಯಲ್ಲಿ ಕುಳಿತಾಗ ಅಥವಾ ಮಲಗುವ ಮೊದಲು ಮಹಾ ಮೃತ್ಯುಂಜಯ ಮಂತ್ರವನ್ನು 108 ಬಾರಿ ಜಪಿಸಿ.

3) ಓಂ ಹ್ರೌಂ ಜೂಂ ಸಃ

ಓಂ ಹ್ರೌಂ ಜೂಂ ಸಃ' ಎಂಬ ಮಂತ್ರವನ್ನು ಮಹಾಮೃತ್ಯುಂಜಯ ಬೀಜ ಮಂತ್ರ ಎಂದು ಕರೆಯಲಾಗುತ್ತದೆ. ಇದು ಬಹಳ ಶಕ್ತಿಯುತವಾದುದು. ಬ್ರಹ್ಮಾಂಡವು ಓಂ ಎಂಬ ಆದಿಸ್ವರದಿಂದ ಪ್ರಾರಂಭವಾಗುತ್ತದೆ. ಈ ಮಂತ್ರದಲ್ಲಿರುವ ಹ್ರೂಮ್ ಎಲ್ಲ ನಕಾರಾತ್ಮಕತೆ ಮತ್ತು ಅಜ್ಞಾನವನ್ನು ನಾಶಪಡಿಸುತ್ತದೆ. ಜೂಮ್ ದುಷ್ಟರ ವಿರುದ್ಧ ಗುರಾಣಿಯಾಗಿ ಕಾರ್ಯನಿರ್ವಹಿಸುತ್ತದೆ. ಸಃ ಮಂತ್ರದ ಸುತ್ತಲೂ ರಕ್ಷಣೆಯನ್ನು ರೂಪಿಸುತ್ತದೆ.

3) ಓಂ ವಜ್ರಪಾಣಿ ಹಮ್ ಫಟ್

ಓಂ ವಜ್ರಪಾಣಿ ಹಮ್ ಫಟ್ ಎಂಬುದು ಬೌದ್ಧ ಸಂಪ್ರದಾಯಗಳಿಂದ ಬಂದ ಮಂತ್ರವಾಗಿದೆ. ಎಲ್ಲ ಬುದ್ಧರ ಶಕ್ತಿಯನ್ನು ಪ್ರತಿನಿಧಿಸುವ ಬೋಧಿಸತ್ವ ವಜ್ರಪಾಣಿಗೆ ಸಂಬಂಧಿಸಿದೆ. ಆತನು ಎಲ್ಲರ ಉದ್ಧಾರಕನೆಂದು ಭಕ್ತರು ನಂಬುತ್ತಾರೆ. ಕೈಯಲ್ಲಿ ವಜ್ರವನ್ನು ಹಿಡಿದಿರುವ ಅವನ ಕಣ್ಣುಗಳು ಶಕ್ತಿಯ ಭಾವವನ್ನು ತೋರಿಸುತ್ತವೆ. ಅವರು ದುಷ್ಟ ಶಕ್ತಿಗಳ ಮೇಲೆ ದಾಳಿ ಮಾಡಲು ಸಿದ್ಧರಾಗಿರುವಂತೆ ತೋರುತ್ತಿದೆ. ಈ ಮಂತ್ರವನ್ನು ಪಠಿಸುವುದು ಮಾಟಮಂತ್ರ ಮತ್ತು ನರ ದೃಷ್ಟಿ ತೊಲಗಿಸಲು ಸಹಾಯ ಮಾಡುತ್ತದೆ.

4) ಓಂ ರುದ್ರಾಭಿ ದ್ರವ ಹೋ

ಇದು ರುದ್ರನ ಉಗ್ರ ರೂಪವನ್ನು ಆರಾಧಿಸುವುದಕ್ಕೆ ಸಮರ್ಪಿತವಾದ ಮಂತ್ರವಾಗಿದೆ. ಕಷ್ಟದ ಸಮಯದಲ್ಲಿ ನಿಮಗೆ ಸಹಾಯ ಮಾಡುವಂತೆ ದೇವರನ್ನು ಬೇಡಿಕೊಳ್ಳುವುದು ಇದರ ಅರ್ಥ. ಗರ್ಭಿಣಿಯರು ತಮ್ಮೊಳಗೆ ಬೆಳೆಯುತ್ತಿರುವ ಜೀವವನ್ನು ದುಷ್ಟ ಶಕ್ತಿಗಳಿಂದ ರಕ್ಷಿಸಲು ಕನಿಷ್ಠ 108 ಬಾರಿ ಈ ಮಂತ್ರವನ್ನು ಜಪಿಸುವುದು ಒಳ್ಳೆಯದು.

5) ವಿಷ್ಣು ಮಂತ್ರ

ಅಪವಿತ್ರಃ ಪವಿತ್ರೋ ವಾ ಸರ್ವಾವಸ್ಥಾಂ” ಗತೋಽಪಿವಾ |

ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರ ಶ್ಶುಚಿಃ ||

ಈ ಮಂತ್ರವು ಶುದ್ಧೀಕರಣ ಸ್ತೋತ್ರದಂತೆ ಕೆಲಸ ಮಾಡುತ್ತದೆ. ದುಷ್ಟ ಶಕ್ತಿಗಳಿಂದ ಜನರನ್ನು ರಕ್ಷಿಸುವುದಕ್ಕೆ ನೆರವಾಗುತ್ತದೆ. ಧ್ಯಾನ ಮಾಡುವಾಗ, ಪೂಜಾ ವಿಧಿವಿಧಾನಗಳನ್ನು ಪ್ರಾರಂಭಿಸುವ ಮೊದಲು ಇದನ್ನು ಪಠಿಸಬಹುದು. ಇದನ್ನು ಪಠಿಸುವುದರಿಂದ ನಿಮ್ಮ ಸುತ್ತಲಿನ ನಕಾರಾತ್ಮಕ ಶಕ್ತಿಗಳನ್ನು ದೂರವಾಗಿ ಧನಾತ್ಮಕ ಶಕ್ತಿಗಳು ಸೃಷ್ಟಿಯಾಗುತ್ತದೆ.

ಗಮನಿಸಿ: ಇದು ಪ್ರಚಲಿತ ನಂಬಿಕೆಗಳು ಮತ್ತು ಸಂಪ್ರದಾಯ ಆಧರಿಸಿದ ಬರಹ. ಇಲ್ಲಿರುವ ಮಾಹಿತಿಯನ್ನು ಅನುಸರಿಸುವ ಮೊದಲು ನಿಮ್ಮ ಮನೆಯ ಹಿರಿಯರು, ಗುರುಗಳೊಂದಿಗೆ ಸಮಾಲೋಚಿಸಿ. ಎಚ್‌ಟಿ ಕನ್ನಡ ಈ ಮಾಹಿತಿಯನ್ನು ಪುಷ್ಟೀಕರಿಸುವುದೂ ಇಲ್ಲ, ನಿರಾಕರಿಸುವುದೂ ಇಲ್ಲ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.