ಬ್ರಹ್ಮನ ಐದನೇ ತಲೆಯನ್ನು ಕಾಲ ಭೈರವ ಬೇರ್ಪಡಿಸಿದ್ದೇಕೆ, ಆಜ್ಞೆ ನೀಡಿದ್ದು ಯಾರು? ಕಥೆ ಇಲ್ಲಿದೆ
ಕಾಶಿಯಲ್ಲಿ ಕಾಲ ಭೈರವೇಶ್ವರ ನೆಲೆಸಿದ್ದು ಇಂದಿಗೂ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ವಾರಣಾಸಿಯಲ್ಲಿ ಕಾಲಭೈರವೇಶ್ವರನು ಬ್ರಹ್ಮನ ಐದನೇ ತಲೆಯನ್ನು ದೇಹದಿಂದ ಬೇರ್ಪಡಿಸುತ್ತಾನೆ. ಅವನಿಗೆ ಆ ರೀತಿ ಅಜ್ಞೆ ನೀಡದ್ದು ಯಾರು? ಕಾರಣವೇನು? ಇಲ್ಲಿದೆ ಕಥೆ. (ಬರಹ: ಎಚ್. ಸತೀಶ್, ಜ್ಯೋತಿಷಿ)
ತ್ರಿಲೋಕ ಸಂಚಾರಿಗಳಾದ ಶ್ರೀ ನಾರದ ಮಹರ್ಷಿಗಳು ಒಮ್ಮೆ ದೇವೇಂದ್ರನ ಸಭೆಗೆ ಆಗಮಿಸುತ್ತಾರೆ. ಆ ಸಭೆಯಲ್ಲಿ ದೊಡ್ಡದೊಂದು ವಾಗ್ವಾದ ನಡೆಯುತ್ತಿರುತ್ತದೆ. ಬೃಹಸ್ಪತಿಯ ಸಮೇತ ಎಲ್ಲರೂ ಮೌನವಾಗಿ ಇರುತ್ತಾರೆ. ಕೆಲವರು ತಮ್ಮಲ್ಲಿನ ಸಹನೆ ಕಳೆದುಕೊಂಡು ಉದ್ವೇಗದಿಂದ ಪರಸ್ಪರ ವಾದ ವಿವಾದಗಳಲ್ಲಿ ತೊಡಗಿರುತ್ತಾರೆ. ಇದನ್ನು ಕಂಡ ನಾರದಮುನಿಗಳು ಇವರ ಮಧ್ಯೆ ಸಿಲುಕಿದರೆ ತಮಗೆ ತೊಂದರೆ ಉಂಟಾಗಬಹುದು ಎಂದುಕೊಳ್ಳುತ್ತಾರೆ.
ತ್ರಿಮೂರ್ತಿಗಳಲ್ಲಿ ಯಾರು ಶ್ರೇಷ್ಠ?
ಆ ಕ್ಷಣದಲ್ಲೇ ದೇವಸಭೆಯನ್ನು ತೊರೆದು ಹೊರಡಲು ಅನುವಾಗುತ್ತಾರೆ. ಆದರೆ ಇವರನ್ನು ಕಂಡ ದೇವೇಂದ್ರನು ತನ್ನ ಸಿಂಹಾಸನದಿಂದ ಎದ್ದು, ನಾರದ ಮುನಿಗಳಿಗೆ ಶಿರಬಾಗಿ ವಂದಿಸಿ ತಮ್ಮ ಸಂದೇಹಕ್ಕೆ ಪರಿಹಾರ ಸೂಚಿಸಲು ವಿನಂತಿಸಿಕೊಳ್ಳುತ್ತಾನೆ. ಮನಸ್ಸಿಲ್ಲದೇ ಹೋದರೂ ಸಂದರ್ಭಕ್ಕೆ ಕಟ್ಟು ಬಿದ್ದ ನಾರದರು ದೇವಸಭೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸುತ್ತಾರೆ. ಅಲ್ಲಿನ ವಾದ ವಿವಾದಗಳಿಗೆ ಕಾರಣವಾಗಿರುವ ವಿಚಾರವನ್ನು ತಿಳಿದು ಮನದಲ್ಲಿ ಅಳಕು ಉಂಟಾಗುತ್ತದೆ. ತ್ರಿಮೂರ್ತಿಗಳಲ್ಲಿ ಅತಿ ಶ್ರೇಷ್ಠರು ಯಾರೆಂಬ ಬಗ್ಗೆ ವಾದ ವಿವಾದ ನಡೆಯುತ್ತಿರುತ್ತದೆ. ತ್ರಿಮೂರ್ತಿಗಳಲ್ಲಿ ಯಾರೊಬ್ಬರನ್ನೇ ಆಗಲಿ ಶ್ರೇಷ್ಠರನ್ನು ತಿಳಿಸಿದರೆ ನಾರದ ಮುನಿಗಳಿಗೆ ಉಳಿದಿಬ್ಬರನ್ನು ತಪ್ಪಾದ ದೃಷ್ಠಿಯಿಂದ ನೋಡಿದ ಪಾಪ ಬರುತ್ತದೆ. ಹೇಳದೆ ಹೋದರೆ ದೇವತೆಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ನಾರದ ಮುನಿಗಳು ಬುದ್ದಿವಂತಿಕೆಯಿಂದ ಈ ವಿಚಾರದ ಬಗ್ಗೆ ತ್ರಿಮೂರ್ತಿಗಳನ್ನೇ ಪ್ರಶ್ನಿಸೋಣ ಎಂದು ತಿಳಿಸುತ್ತಾರೆ. ಇದಕ್ಕೆ ಸಂಬಂಧಿಸಿದ ದೇವತೆಗಳು ಎಲ್ಲರೊಡನೆ ಕೂಡಿ ಬ್ರಹ್ಮನ ಆಸ್ಥಾನಕ್ಕೆ ಬರುತ್ತಾರೆ.
ಬ್ರಹ್ಮನ ಬಳಿ ತಮ್ಮಲ್ಲಿರುವ ಸಂದೇಹವನ್ನು ತಿಳಿಸುತ್ತಾರೆ. ಆಗ ಬ್ರಹ್ಮದೇವನು ಸೃಷ್ಟಿಕರ್ತನಾದ ನಾನೇ ತ್ರಿಮೂರ್ತಿಗಳಲ್ಲಿ ಶ್ರೇಷ್ಠ ಎಂದು ತಿಳಿಸುತ್ತಾನೆ. ಆಗ ಬೃಹಸ್ಪತಿಯು ಬ್ರಹ್ಮನನ್ನು ಕುರಿತು ನಿನ್ನ ಜನ್ಮಕ್ಕೆ ಕಾರಣನಾದ ವಿಷ್ಣುವೇ ಶೇಷ್ಠವಾದವನು ಎಂದು ತಿಳಿಸುತ್ತಾರೆ. ಆಗ ಬ್ರಹ್ಮನು ವಿಷ್ಣು ಮತ್ತು ಈಶ್ವರರನ್ನು ಕಡೆಗಣಿಸಿ ಅವರಿಗಿಂತಲೂ ನಾನೇ ಶ್ರೇಷ್ಠ ಎನ್ನುತ್ತಾನೆ. ಆಗ ನಾರದ ಮುನಿಗಳು ಇದರ ಬಗ್ಗೆ ತಿಳಿಸಲು ವಿಷ್ಣುವಿನ ಬಳಿಗೆ ಬರುತ್ತಾರೆ. ನಡೆದ ವಿಚಾರವನ್ನು ತಿಳಿದ ವಿಷ್ಣುವು ಇದರ ಬಗ್ಗೆ ಎಲ್ಲರಿಗೂ ಕಾಶಿಯಲ್ಲಿ ತಿಳಿಯಲಿದೆ ಎಂದು ಹೇಳುತ್ತಾನೆ. ಮರು ಮಾತನ್ನು ಆಡದ ನಾರದರು ದೇವತೆಗಳ ಜೊತೆಗೂಡಿ ಕಾಶಿಗೆ ತೆರಳಲು ನಿರ್ಧರಿಸುತ್ತಾರೆ.
ಶಿವನನ್ನು ನಿಂದಿಸುವ ಬ್ರಹ್ಮ
ನಾರದ ಮುನಿಗಳು ಬ್ರಹ್ಮ, ವಿಷ್ಣು ಹಾಗೂ ದೇವತೆಗಳ ಸಮೇತ ಕೈಲಾಸಕ್ಕೆ ಬರುತ್ತಾರೆ. ಆಗ ಶಿವನು ಧ್ಯಾನಾಸಕ್ತನಾಗಿರುತ್ತಾನೆ. ಇದನ್ನು ಕಂಡ ಬ್ರಹ್ಮನು ಶಿವನನ್ನು ನಿಂದಿಸುತ್ತಾನೆ. ಬ್ರಹ್ಮನ ಮಾತುಗಳನ್ನು ನಾರದ ಮುನಿಗಳು, ದೇವತೆಗಳು ಮತ್ತು ಸ್ವತಃ ಪಾರ್ವತಿಯು ವಿರೋಧಿಸುತ್ತಾರೆ. ಪಾರ್ವತಿಯು ಶಿವಶಕ್ತಿಯ ಗುಣಗಾನವನ್ನು ಮಾಡುತ್ತಾಳೆ. ಆದರೆ ಬ್ರಹ್ಮನು ತನ್ನ ತಪ್ಪನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸುವುದೇ ಇಲ್ಲ. ಪತಿಯ ನಿಂದನೆಯನ್ನು ಸಹಿಸದ ಪಾರ್ವತಿಯು ಶಿವನನ್ನು ಎಚ್ಚರಿಸುತ್ತಾಳೆ. ಬ್ರಹ್ಮನ ತಪ್ಪಿಗೆ ಕೋಪಗೊಂಡ ಶಿವನು ಭೈರವನನ್ನು ಸೃಷ್ಠಿಸುತ್ತಾನೆ. ಬ್ರಹ್ಮನಿಗೆ ಐದು ತಲೆಗಳಿರುತ್ತವೆ. ಐದನೇ ತಲೆಯು ಮೇಲ್ಮುಖವಾಗಿರುತ್ತದೆ. ಇದರಿಂದಲೇ ಬ್ರಹ್ಮನಲ್ಲಿ ನಾನು ಎಂಬ ಅಜ್ಞಾನ ಮನೆ ಮಾಡಿರುತ್ತದೆ. ಇದನ್ನರಿತ ಶಿವನು ಭೈರವನಿಗೆ ಆ ಐದನೆಯ ತಲೆಯನ್ನು ಬೇರ್ಪಡಿಸಲು ತಿಳಿಸುತ್ತಾನೆ. ಶಿವನ ಅಪ್ಪಣೆಯ ಪ್ರಕಾರ ಭೈರವನು ಬ್ರಹ್ಮನ ಐದನೆ ತಲೆಯನ್ನು ಬೇರ್ಪಡಿಸುತ್ತಾನೆ. ಆಗ ಬ್ರಹ್ಮನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಆನಂತರ ಭೈರವನು ಕಾಶಿಯಲ್ಲಿ ನೆಲೆಸುತ್ತಾನೆ.
ಮತ್ತೊಂದು ಕಥೆಯ ಪ್ರಕಾರ ಶಿವ ಪಾರ್ವತಿಯ ವಿವಾಹವನ್ನು ಸ್ವಯಂ ಬ್ರಹ್ಮನೇ ಮಾಡಿಸುತ್ತಾನೆ. ಬ್ರಹ್ಮನಿಗೆ ದಕ್ಷಿಣೆ ನೀಡುವ ವೇಳೆ ಶಿವ ಮತ್ತು ಬ್ರಹ್ಮರ ಮಧ್ಯೆ ವಾದ ವಿವಾದಗಳಾಗುತ್ತವೆ. ಬ್ರಹ್ಮನು ಜಗತ್ತಿನಲ್ಲಿ ನಾನೇ ಶ್ರೇಷ್ಠ ಎಂದು ಹೇಳುತ್ತಾನೆ. ಇದರಿಂದ ಕೊಪಗೊಂಡ ಶಿವನು ಬ್ರಹ್ಮನ ಐದನೆಯ ಮುಖವನ್ನು ಬೇರ್ಪಡಿಸಿ, ಇನ್ನು ಮುಂದೆ ಬ್ರಹ್ಮನಿಗೆ ಪೂಜೆ ಇಲ್ಲದಂತಾಗಲಿ ಎಂದು ಶಾಪ ನೀಡುತ್ತಾನೆ. ಇಂದಿಗೂ ಕಾಶಿಕ್ಷೇತ್ರವನ್ನು ಕಾಪಾಡುತ್ತಿರುವ ಕ್ಷೇತ್ರಪಾಲಕನೇ ಶ್ರೀಭೈರವೇಶ್ವರ ಸ್ವಾಮಿ. ಇಂದಿಗೂ ಈ ದೇವರಿಗೆ ವಿಶೇಷವಾದ ಪೂಜೆ ಸಲ್ಲಿಸಲಾಗುತ್ತದೆ. ಭೈರವೇಶ್ವರ ಪೂಜೆ ಮಾಡದೆ ಹೋದಲ್ಲಿ ಕಾಶಿಗೆ ಹೋದ ಪೂರ್ಣಫಲವು ಲಭ್ಯವಾಗುವುದಿಲ್ಲ. ಶ್ರಿ ಭೈರವೇಶ್ವರ ಸ್ವಾಮಿಯನ್ನು ಕಾಲ ಭೈರವೇಶ್ವರ ಎಂದೂ ಕರೆಯಲಾಗುತ್ತದೆ. ಇದರ ಬಗ್ಗೆ ವಿವಿಧ ರೀತಿಯ ಕಥೆಗಳಿವೆ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ.)