Annapurna Jayanti 2024: ಇಂದು ಅನ್ನಪೂರ್ಣ ಜಯಂತಿ: ಈ ಆಚರಣೆಯ ಮಹತ್ವ, ಮುಹೂರ್ತ, ಪೂಜಾ ವಿಧಾನದ ಬಗ್ಗೆ ಇಲ್ಲಿದೆ ಮಾಹಿತಿ
Annapurna Jayanti 2024: ಪ್ರತಿ ವರ್ಷ ಮಾರ್ಗಶೀರ್ಷ ಮಾಸದ ಹುಣ್ಣಿಮೆಯಂದು ಅನ್ನಪೂರ್ಣ ಜಯಂತಿಯನ್ನು ಆಚರಿಸಲಾಗುತ್ತದೆ. ಈ ದಿನ ಉಪವಾಸವಿದ್ದು ಅನ್ನಪೂರ್ಣ ಮಂತ್ರವನ್ನು ಜಪಿಸಿ ಪೂಜೆ ಮಾಡಿದರೆ ಭಕ್ತರಿಗೆ ಜೀವನದಲ್ಲಿ ಎಂದಿಗೂ ಆಹಾರ ಕೊರತೆ ಎದುರಾಗುವುದಿಲ್ಲ. ಅನ್ನಪೂರ್ಣ ದೇವಿಯ ಪೂಜಾ ವಿಧಾನ ಹೀಗಿದೆ.
ಅನ್ನಪೂರ್ಣ ಜಯಂತಿ 2024: ಇಂದು ವರ್ಷದ ಕೊನೆಯ ಹುಣ್ಣಿಮೆ. ಹಾಗೇ ಈ ದಿನ ಅನ್ನಪೂರ್ಣ ಜಯಂತಿಯನ್ನು ಆಚರಿಸಲಾಗುತ್ತದೆ. ಪ್ರತಿದಿನ ಬೆಳಗ್ಗಿನಿಂದ ಸಂಜೆವರೆಗೂ ತಿಂಡಿ, ಮಧ್ಯಾಹ್ನದ ಊಟ, ಸಂಜೆ ಸ್ನಾಕ್ಸ್, ರಾತ್ರಿ ಊಟ ಎಂದು ನಮಗೆ ಹಸಿವಾದಾಗ ಊಟ ಮಾಡುತ್ತೇವೆ. ಎಷ್ಟೇ ಶ್ರೀಮಂತಿಕೆ ಇದ್ದರೂ ಬದುಕಲು ಅನ್ನ ಬೇಕೇ ಬೇಕು. ನಮ್ಮ ಹಸಿವನ್ನು ನೀಗಿಸುವ ಅನ್ನಪೂರ್ಣೆಯನ್ನು ಈ ದಿನ ಸ್ಮರಿಸುವುದು, ಅವಳ ಪೂಜೆ ಮಾಡುವುದು ನಮ್ಮ ಕರ್ತವ್ಯ ಎಂದರೆ ತಪ್ಪಾಗುವುದಿಲ್ಲ.
ಅನ್ನಪೂರ್ಣ ಜಯಂತಿಯನ್ನು ಪ್ರತಿ ವರ್ಷ ಮಾರ್ಗಶೀರ್ಷ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಈ ದಿನ ತಾಯಿ ಅನ್ನಪೂರ್ಣೆಯ ಆರಾಧನೆಗೆ ವಿಶೇಷವಾಗಿ ಸಮರ್ಪಿಸಲಾಗಿದೆ. ತಾಯಿ ಅನ್ನಪೂರ್ಣ ಈ ದಿನ ಜನಿಸಿದಳು. ಅನ್ನಪೂರ್ಣೆಯನ್ನು ಆಹಾರ ಮತ್ತು ಸಂಪತ್ತಿನ ದೇವತೆಯಾಗಿ ಪೂಜಿಸಲಾಗುತ್ತದೆ. ಉಪವಾಸವಿದ್ದು, ಅನ್ನಪೂರ್ಣೆಯನ್ನು ಪೂಜಿಸಿ ಪ್ರಾರ್ಥಿಸುವುದರಿಂದ ಎಂದಿಗೂ ಆಹಾರದ ಕೊರತೆಯನ್ನು ಎದುರಾಗುವುದಿಲ್ಲ. ಜೊತೆಗೆ ಅನ್ನಪೂರ್ಣೆಯ ಆಶೀರ್ವಾದ ಸದಾ ನಮ್ಮ ಮೇಲಿರುತ್ತದೆ. ತಾಯಿ ಅನ್ನಪೂರ್ಣೆಯ ಆಶೀರ್ವಾದದಿಂದ ಭಕ್ತರ ಧಾನ್ಯ ಭಂಡಾರ ಹೆಚ್ಚುತ್ತದೆ. ಇಂದು ಅನ್ನಪೂರ್ಣ ಜಯಂತಿ ಆಚರಿಸಲು ಶುಭ ಮುಹೂರ್ತ, ಆಚರಿಸುವ ವಿಧಾನ ಹೇಗೆ ನೋಡೋಣ.
ಅನ್ನಪೂರ್ಣ ಜಯಂತಿ 2024 ರ ಶುಭ ಸಮಯ
ಪಂಚಾಂಗದ ಪ್ರಕಾರ ಪ್ರತಿ ವರ್ಷ ಮಾರ್ಗಶೀರ್ಷ ಹುಣ್ಣಿಮೆಯಂದು ಅನ್ನಪೂರ್ಣ ಜಯಂತಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಮಾರ್ಗಶೀರ್ಷ ಹುಣ್ಣಿಮೆ ಡಿಸೆಂಬರ್ 14, ಶನಿವಾರ ಸಂಜೆ 4:19 ಕ್ಕೆ ಪ್ರಾರಂಭವಾಗಿ ಮರುದಿನ, ಅಂದರೆ ಡಿಸೆಂಬರ್ 15, ಭಾನುವಾರ ಮಧ್ಯಾಹ್ನ 2:37 ವರೆಗೆ ಇರುತ್ತದೆ. ಸೂರ್ಯೋದಯ ತಿಥಿಯ ನಂತರ ಡಿಸೆಂಬರ್ 15 ರ ಭಾನುವಾರದಂದು ಅನ್ನಪೂರ್ಣ ಜಯಂತಿಯನ್ನು ಆಚರಿಸಬೇಕೆಂದು ಪಂಚಾಂಗಗಳು ಸೂಚಿಸುತ್ತವೆ. ಇಂದು ಮುಂಜಾನೆ 6 ರಿಂದ 11 ಗಂಟೆಯವರೆಗೆ ಪೂಜೆಗೆ ಶುಭ ಮುಹೂರ್ತವಿದೆ.
ಅನ್ನಪೂರ್ಣ ಜಯಂತಿ 2024 ರ ಮಹತ್ವ
ಸನಾತನ ಸಂಪ್ರದಾಯದಲ್ಲಿ ಅನ್ನಪೂರ್ಣ ಜಯಂತಿಯ ಉಪವಾಸಕ್ಕೆ ವಿಶೇಷ ಮಹತ್ವವಿದೆ. ಈ ದಿನ ತಾಯಿ ಅನ್ನಪೂರ್ಣೆಯನ್ನು ಪೂಜಿಸುವುದರಿಂದ ಮತ್ತು ಬಡವರಿಗೆ ಅನ್ನ ಮತ್ತು ಹಣವನ್ನು ದಾನ ಮಾಡುವುದರಿಂದ ಭಕ್ತರು ಶುಭ ಫಲವನ್ನು ಪಡೆಯುತ್ತಾರೆ. ಧಾರ್ಮಿಕ ನಂಬಿಕೆಯ ಪ್ರಕಾರ, ಅನ್ನಪೂರ್ಣ ಮಾತೆಯನ್ನು ಪೂಜಿಸುವುದರಿಂದ ಆಹಾರ ಮತ್ತು ಸಂಪತ್ತು ಬರುತ್ತದೆ. ಇದರೊಂದಿಗೆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಉಂಟಾಗುತ್ತದೆ.
ಅನ್ನಪೂರ್ಣ ಜಯಂತಿ 2024 ಪೂಜಾ ವಿಧಾನ
ಅನ್ನಪೂರ್ಣ ಜಯಂತಿಯಂದು ಬೆಳಗಿನ ಸ್ನಾನದ ನಂತರ ಶುಭ್ರವಾದ ಬಟ್ಟೆಯನ್ನು ಧರಿಸಿ ಮನೆ ಮಂದೆ ರಂಗೋಲಿ ಬಿಡಿಸಬೇಕು. ಪೂಜಾ ಕೋಣೆಯನ್ನು ಶುಚಿಗೊಳಿಸಿ ಅನ್ನಪೂರ್ಣ ಮಾತೆಯ ವಿಗ್ರಹವನ್ನು ಪ್ರತಿಷ್ಠಾಪಿಸಬೇಕು. ಬಳಿಕ ತಾಯಿ ಅನ್ನಪೂರ್ಣೆಯನ್ನು ಕ್ರಮಬದ್ಧವಾಗಿ ಪೂಜಿಸಿ. ಪೂಜೆಯಲ್ಲಿ ತಾಯಿಗೆ ಕುಂಕುಮ, ಅರಿಶಿನ, ಅಕ್ಷತೆ, ನೈವೇದ್ಯ, ತುಳಸಿ ಇತ್ಯಾದಿಗಳನ್ನು ಅರ್ಪಿಸಬೇಕು. ತಾಯಿಗೆ ನೈವೇದ್ಯ ಇಟ್ಟು ಪೂಜೆ ಮುಗಿದ ನಂತರ ಅನ್ನಪೂರ್ಣೆಯ ಮಂತ್ರವನ್ನು ಪಠಿಸಿ ಆರತಿ ಮಾಡಬೇಕು. ನಂತರ ಮನೆಯ ಸದಸ್ಯರಿಗೆ ನೆರೆಹೊರೆಯವರಿಗೆ ಪ್ರಸಾದ ಅರ್ಪಿಸಬೇಕು.
ಅನ್ನಪೂರ್ಣ ಮಂತ್ರ
ನಿತ್ಯಾನಂದಕರೀ ವರಾಭಯಕರೀ ಸೌಂದರ್ಯಾ ರತ್ನಕರೀ
ನಿರ್ಧೂತಾಖಿಲಾ ಘೋರಾ ಪಾವನಕರೀ ತರನ್ತಾ ಮಾಹೇಶ್ವರೀ ।
ಪ್ರಳಯಾಚಲ ವಂಶ ಪಾವನಕರೀ ಕಾಶೀಪುರಾಧೀಶ್ವರಿ
ಭಿಕ್ಷಂ ದೇಹಿ ಕೃಪಾವಲಂಬನಕರೀ ಮಾತನ್ನಪೂರ್ಣೇಶ್ವರಿ
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.