ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ, 3 ಆರೋಪಿಗಳ ಬಂಧನ, ಪತ್ನಿ, ಅತ್ತೆ ಗುರುಗ್ರಾಮದಲ್ಲಿ ಪೊಲೀಸ್ ಬಲೆಗೆ, 10 ಮುಖ್ಯ ಅಂಶಗಳು
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ, 3 ಆರೋಪಿಗಳ ಬಂಧನ, ಪತ್ನಿ, ಅತ್ತೆ ಗುರುಗ್ರಾಮದಲ್ಲಿ ಪೊಲೀಸ್ ಬಲೆಗೆ, 10 ಮುಖ್ಯ ಅಂಶಗಳು

ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ, 3 ಆರೋಪಿಗಳ ಬಂಧನ, ಪತ್ನಿ, ಅತ್ತೆ ಗುರುಗ್ರಾಮದಲ್ಲಿ ಪೊಲೀಸ್ ಬಲೆಗೆ, 10 ಮುಖ್ಯ ಅಂಶಗಳು

Atul Subhash Suicide Case: ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ಬಿಗಿಯಾಗುತ್ತಿದ್ದು, ಈ ಪ್ರಕರಣದ ಮೂವರು ಆರೋಪಿಗಳ ಬಂಧನವಾಗಿದೆ. ಆರೋಪಿಗಳಾದ ಪತ್ನಿ, ಅತ್ತೆ ಗುರುಗ್ರಾಮದಲ್ಲಿ ಪೊಲೀಸ್ ಬಲೆಗೆ ಬಿದ್ದರೆ, ಬಾಮೈದನನ್ನು ಅಲಹಾಬಾದ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ (ಎಡ ಚಿತ್ರ) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳಾದ ಅತ್ತೆ ನಿಶಾ ಸಿಂಘಾನಿಯಾ, ಪತ್ನಿ ನಿಖಿತಾ ಸಿಂಘಾನಿಯಾ, ಬಾಮೈದ ಅನುರಾಗ್‌  ಸಿಂಘಾನಿಯಾ (ಬಲ ಚಿತ್ರ) ಬಂಧನವಾಗಿದೆ.
ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ (ಎಡ ಚಿತ್ರ) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳಾದ ಅತ್ತೆ ನಿಶಾ ಸಿಂಘಾನಿಯಾ, ಪತ್ನಿ ನಿಖಿತಾ ಸಿಂಘಾನಿಯಾ, ಬಾಮೈದ ಅನುರಾಗ್‌ ಸಿಂಘಾನಿಯಾ (ಬಲ ಚಿತ್ರ) ಬಂಧನವಾಗಿದೆ.

Atul Subhash Suicide Case: ಉತ್ತರ ಪ್ರದೇಶ ಮೂಲದ ಬೆಂಗಳೂರು ಟೆಕ್ಕಿ ಅತುಲ್ ಸುಬಾಷ್ ಆತ್ಮಹತ್ಯೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅತುಲ್ ಸುಭಾಷ್ ಪತ್ನಿ ನಿಖಿತಾ ಸಿಂಘಾನಿಯಾ, ಅತ್ತೆ ನಿಶಾ ಸಿಂಘಾನಿಯಾ, ಬಾಮೈದ ಅನುರಾಗ್ ಸಿಂಘಾನಿಯಾ ಬಂಧಿತ ಆರೋಪಿಗಳು ಎಂದು ನ್ಯೂಸ್ 18 ವರದಿ ಮಾಡಿದೆ. ನಿಕಿತಾ ಅವರನ್ನು ಹರಿಯಾಣದ ಗುರುಗ್ರಾಮ್‌ನಲ್ಲಿ ಮತ್ತು ಆಕೆಯ ತಾಯಿ ನಿಶಾ ಮತ್ತು ಸಹೋದರ ಅನುರಾಗ್ ಅವರನ್ನು ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ಬಂಧಿಸಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಆರೋಪಿಗಳನ್ನು ಬೆಂಗಳೂರಿನ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅತುಲ್ ಸುಭಾಷ್ ವಿಚ್ಛೇದನ ಮತ್ತು ಮಕ್ಕಳ ಪಾಲನೆಗೆ ಸಂಬಂಧಿಸಿ ವಿವಾದಾತ್ಮಕ ಕಾನೂನು ಹೋರಾಟದಲ್ಲಿ ತೊಡಗಿದ್ದರು. ಇದು ಅವರ ಭಾವನಾತ್ಮಕ ಯಾತನೆಗೆ ಕಾರಣವಾಗಿದೆ ಎಂಬ ಅಂಶ ಪೊಲೀಸ್ ತನಿಖೆಯ ವೇಳೆ ತಿಳಿದುಬಂದಿದೆ.

ಏನಿದು ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ

ಉತ್ತರಪ್ರದೇಶ ಮೂಲದ 34 ವರ್ಷದ ಟೆಕ್ಕಿ ಅತುಲ್ ಸುಭಾಷ್‌ ಡಿಸೆಂಬರ್ 8 ರಂದು ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದು ಮಾರನೇ ದಿನ ಬೆಳಗ್ಗೆ ಬೆಳಕಿಗೆ ಬಂದಿತ್ತು.ಕೂಡಲೇ ಸ್ಥಳೀಯರು 112 ಪೊಲೀಸ್‌ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತತ್‌ಕ್ಷಣ ಸ್ಥಳಕ್ಕೆ ಬಂದ ಪೊಲೀಸರು, ಸ್ಥಳ ಪರಿಶೀಲಿಸಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದು, ಕೇಸ್ ದಾಖಲಿಸಿಕೊಂಡಿದ್ಧಾರೆ. ಅವರು ಬರೆದಿಟ್ಟ 26 ಪುಟಗಳ ಮರಣ ಪತ್ರದಲ್ಲಿ ಪತ್ನಿ ಮತ್ತು ಆಕೆಯ ಕುಟುಂಬ ಸದಸ್ಯರ ವಿರುದ್ಧ ಸಾಕಷ್ಟು ಆರೋಪಗಳನ್ನು ಮಾಡಿದ್ದರು. ಪತ್ನಿ ಮತ್ತು ಆಕೆಯ ಕುಟುಂಬದವರು ಅತುಲ್ ಸುಭಾಷ್ ಮತ್ತು ಕುಟುಂಬದವರ ವಿರುದ್ಧ 10ಕ್ಕೂ ಹೆಚ್ಚು ದೂರು ದಾಖಲಿಸಿದ್ದರು. ಬೆಂಗಳೂರಿನ ಮಂಜುನಾಥ್‌ ಲೇ ಔಟ್‌ನ ಖಾಸಗಿ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ಅವರು ವಾಸವಿದ್ದರು. ಅತುಲ್ ಸುಭಾಷ್‌ ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದರು. 5 ವರ್ಷ ಹಿಂದೆ ಉತ್ತರ ಪ್ರದೇಶದಲ್ಲೇ ವಿವಾಹವಾಗಿದ್ದು, ಎರಡು ವರ್ಷದ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದರು. ಈ ನಡುವೆ ದಂಪತಿ ನಡುವೆ ಗಲಾಟೆ ನಡೆದಿದ್ದು, ಅತುಲ್ ಪತ್ನಿ ಉತ್ತರ ಪ್ರದೇಶದ ತವರು ಮನೆಗೆ ತೆರಳಿದ್ದರು. ಅತುಲ್ ಸುಭಾಷ್ ಮನೆಯಲ್ಲಿ ಒಂಟಿಯಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ; ಗಮನಸೆಳೆದ 10 ಅಂಶಗಳು

1) ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದಲ್ಲಿ ಸಿಕ್ಕಿದ 26 ಪುಟಗಳ ಮರಣ ಪತ್ರದಲ್ಲಿ ಉಲ್ಲೇಖವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಅತುಲ್ ಸುಭಾಷ್ ಪತ್ನಿ ನಿಖಿತಾ ಸಿಂಘಾನಿಯಾ, ಅತ್ತೆ ನಿಶಾ ಸಿಂಘಾನಿಯಾ, ಬಾಮೈದ ಅನುರಾಗ್ ಸಿಂಘಾನಿಯಾ ಸೇರಿ ಕುಟುಂಬ ಸದಸ್ಯರ ವಿರುದ್ಧ ಡಿಸೆಂಬರ್ 10 ರಂದು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ನಂತರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಆದರೆ ಅವರು ತಲೆಮರೆಸಿಕೊಂಡಿದ್ದರು.

2) ಅತುಲ್ ಸುಭಾಷ್‌ ಅವರು ತಮ್ಮ ಡೆತ್‌ನೋಟ್‌ನಲ್ಲಿ ಪತ್ನಿ, ಆಕೆಯ ಸಂಬಂಧಿಕರು, ಉತ್ತರ ಪ್ರದೇಶದ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧ ಮಾನಸಿಕ ಕಿರುಕುಳದ ಆರೋಪ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಮಂಜುನಾಥ್ ಲೇಔಟ್ ಪ್ರದೇಶದಲ್ಲಿ ಸಂಭವಿಸಿದೆ, ಇದು ಮಂಜುನಾಥ್ ಲೇಔಟ್ ಪ್ರದೇಶದಲ್ಲಿ ನಡೆದಿದೆ. ಮಾರತ್ತಹಳ್ಳಿ ಪೊಲೀಸ್ ಠಾಣಾಯಲ್ಲಿ ಕೇಸ್ ದಾಖಲಾಗಿದೆ.

3) ಅತುಲ್ ಸುಭಾಷ್ ಅವರಿದ್ದ ಬೆಂಗಳೂರಿನ ಮನೆಯಲ್ಲಿ 26 ಪುಟಗಳ ಸುದೀರ್ಘ ಮರಣ ಪತ್ರ ಸಿಕ್ಕಿದೆ. ಮೃತ ದೇಹದ ಎದೆಯ ಮೇಲೆ 'ಜಸ್ಟೀಸ್ ಈಸ್ ಡ್ಯೂ' ಎಂಬ ಪೋಸ್ಟರ್ ಕೂಡ ಇತ್ತು. ಎರಡನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಮರಣ ಪತ್ರ ಪ್ರತಿಯನ್ನು ಅತುಲ್‌ ಸುಭಾಷ್ ಅವರು ಸೇವ್ ಇಂಡಿಯಾ ಫ್ಯಾಮಿಲಿ ಫೌಂಡೇಶನ್‌ಗೆ ವಾಟ್ಸ್‌ಆಪ್ ಮೂಲಕ ಕಳುಹಿಸಿದ್ದಾರೆ. ಬಳಿಕ, ಸುಪ್ರೀಂ ಕೋರ್ಟ್‌, ಹೈಕೋರ್ಟ್ ಮತ್ತು ಕುಟುಂಬದ ಕೆಲ ಸದಸ್ಯರು ಹಾಗೂ ತಮ್ಮ ಕಂಪನಿ ಇಮೇಲ್ ವಿಳಾಸಕ್ಕೆ ಕಳುಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

4) ಅತುಲ್ ಸುಭಾಷ್ ಮತ್ತು ನಿಖಿತಾ ಸಿಂಘಾನಿಯಾ ನಡುವೆ ವಿಚ್ಛೇದನ ಕೇಸ್ ನಡೆಯುತ್ತಿತ್ತು. ಈ ದಂಪತಿಗೆ ಒಬ್ಬ ಮಗು ಇದ್ದು, ಅದು ಯಾರ ಬಳಿ ಇರಬೇಕು ಎಂಬುದು ಕೂಡ ನಿರ್ಧಾರವಾಗಬೇಕಿತ್ತು. ಮಗು ನಿಖಿತಾ ಜತೆಗೆ ಇರುವ ಕಾರಣ ಅದನ್ನು ನೋಡಲು ಅತುಲ್ ಸುಭಾಷ್‌ಗೆ ಬಿಡುತ್ತಿರಲಿಲ್ಲ. ಅದಕ್ಕಾಗಿ ಹಣ ಕೇಳುತ್ತಿದ್ದರು ಎಂದು ಆರೋಪಿಸಲಾಗಿದೆ.

5) ಅತುಲ್ ಸುಭಾಷ್‌ ಆತ್ಮಹತ್ಯೆ ಬಳಿಕ ಅವರ ಸಹೋದರ ಬಿಕಾಸ್ ಕುಮಾರ್‌ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ನಿಖಿತಾ ಸಿಂಘಾನಿಯಾ, ಅವರ ತಾಯಿ ನಿಶಾ ಸಿಂಘಾನಿಯಾ, ಸಹೋದರ ಅನುರಾಗ್‌ ಸಿಂಘಾನಿಯಾ, ಸುಶಿಲ್ ಸಿಂಘಾನಿಯಾ ವಿರುದ್ಧ ದೂರು ದಾಖಲಿಸಿದ್ದರು. ಅತುಲ್ ಸುಭಾಷ್ ಆತ್ಮಹತ್ಯೆಗೆ ಅವರೇ ಕಾರಣ ಎಂದು ದೂರಿದ್ದರು.

6) ಅತುಲ್ ಸುಭಾಷ್ ಅವರ ಪತ್ನಿ ನಿಖಿತಾ ಸಿಂಘಾನಿಯಾರನ್ನು ಉದ್ಯೋಗದಿಂದ ವಜಾಗೊಳಿಸಬೇಕು ಎಂಬ ಆಗ್ರಹ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿತ್ತು. ಆಕೆ ಉದ್ಯೋಗ ಮಾಡುತ್ತಿದ್ದ ಆಕ್ಸೆಂಚರ್ ಕಂಪನಿಯ ಸಿಇಒ ಅವರನ್ನು ಎಲ್ಲರೂ ಟ್ಯಾಗ್ ಮಾಡುತ್ತಿದ್ದ ಕಾರಣ ಅವು ಎಕ್ಸ್ ಖಾತೆಯನ್ನು ಲಾಕ್ ಮಾಡಿಟ್ಟುಕೊಂಡರು.

7) ನಿಕಿತಾ ಸಿಂಘಾನಿಯಾ 2022 ರಲ್ಲಿ ಅತುಲ್ ಸುಭಾಷ್ ಮತ್ತು ಅವರ ಕುಟುಂಬದವರ ವರದಕ್ಷಿಣೆ ಕೇಸ್ ಸೇರಿ 10ಕ್ಕೂ ಹೆಚ್ಚು ದೂರು ದಾಖಲಿಸಿದರು. ಅವರ ವರದಕ್ಷಿಣೆ ಬೇಡಿಕೆ ಕಾರಣ ತನ್ನ ತಂದೆ ಪಾರ್ಶ್ವವಾಯು ಪೀಡಿತರಾದರು. ಬಳಿಕ ಮೃತಪಟ್ಟರು ಎಂದು ಆರೋಪಿಸಿದ್ದರು. ಇದಾದ ಬಳಿಕ ಸಿಂಘಾನಿಯಾ ಕುಟುಂಬವು ಅತುಲ್ ಸುಭಾಷ್ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಲು 3 ಕೋಟಿ ರೂಪಾಯಿ ಮತ್ತು ಅವರ ಮಗನನ್ನು ನೋಡಲು ಭೇಟಿ ಹಕ್ಕುಗಳಿಗಾಗಿ 30 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

8) ನಿಕಿತಾ ಸಿಂಘಾನಿಯಾ ಮತ್ತು ಅವರ ಕುಟುಂಬ ಸದಸ್ಯರು ಅಲಹಾಬಾದ್ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಸಲ್ಲಿಸಿ, ಬಂಧನವನ್ನು ತಪ್ಪಿಸಲು ಕೋರಿದ್ದರು. ಆದರೆ, ಅಷ್ಟರಲ್ಲಾಗಲೇ ಪೊಲೀಸರು ಅವರನ್ನು ಪತ್ತೆ ಹಚ್ಚಿ ಬಂಧಿಸಿ ಬೆಂಗಳೂರಿನ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ಪೊಲೀಸ್ ತನಿಖೆ ತೀವ್ರಗೊಂಡಿದೆ.

9) “ಬಹಳಷ್ಟು ಭ್ರಷ್ಟಾಚಾರವಿದೆ. ಆದರೆ ಅವನು ಸತ್ಯದ ಹಾದಿಯಲ್ಲಿರುವಂತೆ ಹೋರಾಡುತ್ತೇನೆ ಎಂದು ನನ್ನ ಮಗ ಹೇಳುತ್ತಿದ್ದನು ... ಅವನು ಯಾರಿಗೂ ಏನನ್ನೂ ಹೇಳದಿದ್ದರೂ ಅವನು ಬಹಳ ನೊಂದಿದ್ದ. ಸುಭಾಷ್ ಪತ್ನಿ 2021ರ ಜನವರಿಯಲ್ಲಿ ತಮ್ಮ ವಿರುದ್ಧ ಪ್ರಕರಣಗಳನ್ನು ದಾಖಲಿಸಲು ಆರಂಭಿಸಿದರು. ಕರೋನಾ ನಂತರ ಆಕೆ ಒಂದು ವರ್ಷದ ಮಗನ ಜತೆಗೆ ಮನೆ ತೊರೆದರು. ಅದಾಗಿ ನಮ್ಮ ಇಡೀ ಕುಟುಂಬದ ವಿರುದ್ಧ ಪ್ರಕರಣಗಳನ್ನು ದಾಖಲಿಸಲು ಪ್ರಾರಂಭಿಸಿದಳು” ಎಂದು ಸುಭಾಷ್ ತಂದೆ ಪವನ್ ಕುಮಾರ್ ಎಎನ್‌ಐಗೆ ತಿಳಿಸಿದ್ದಾರೆ. ಇವರು ಬಿಹಾರದ ಸಮಸ್ಟಿಪುರದಲ್ಲಿದ್ದಾರೆ.

10) ಅತುಲ್ ಆತ್ಮಹತ್ಯೆ ಪ್ರಕರಣದ ಬೆನ್ನಿಗೆ ವರ ದಕ್ಷಿಣೆ ಕಿರುಕುಳ ಕೇಸ್‌ನ 498 ಎ ಸೆಕ್ಷನ್ ಚರ್ಚೆಗೆ ಒಳಗಾಗಿದೆ. ಅದರ ದುರುಪಯೋಗದ ವಿಚಾರ ವ್ಯಾಪಕವಾಗಿ ಟೀಕೆಗೆ ಒಳಗಾಗಿದೆ. ವಿವರ ಓದಿಗೆ - ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಕಾರಣ ಕಾನೂನು ದುರ್ಬಳಕೆ ವಿಚಾರ ಚರ್ಚೆಗೆ; ಸೆಕ್ಷನ್ 498ಎ ಎಂದರೇನು

ಗಮನಿಸಿ: ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ನಿಮ್ಮನ್ನು ಪ್ರೀತಿಸುವ, ಬೆಂಬಲಿಸುವ ಆಪ್ತರು ಇದ್ದೇ ಇರುತ್ತಾರೆ. ನಿಮ್ಮ ಸಮಸ್ಯೆಗಳನ್ನು ಅಂಥವರೊಂದಿಗೆ ಹಂಚಿಕೊಂಡು ನೆರವು ಪಡೆಯಿರಿ. ಮಾನಸಿಕ ಆರೋಗ್ಯದ ಕಡೆಗೂ ಗಮನಕೊಡಿ. ಆತ್ಮಹತ್ಯೆಯ ಆಲೋಚನೆಗಳು ಮನಸ್ಸಿಗೆ ಪದೇಪದೆ ಬರುತ್ತಿದ್ದರೆ ಹಿಂಜರಿಕೆಯಿಲ್ಲದೆ ಆಪ್ತಸಮಾಲೋಚಕರ ಮಾರ್ಗದರ್ಶನ ಪಡೆದುಕೊಳ್ಳಿ. ಮಾನಸಿಕ ಆರೋಗ್ಯದ ಕಡೆಗೆ ಗಮನಕೊಡಿ. ತುರ್ತು ಸಂದರ್ಭದಲ್ಲಿ ಬೆಂಗಳೂರಿನ SAHAI ಸಹಾಯವಾಣಿ (080 - 25497777) ಅಥವಾ ನಿಮ್ಹಾನ್ಸ್‌ ಸಹಾಯವಾಣಿಯ (080 – 4611 0007) ನೆರವು ಪಡೆಯಿರಿ.

Whats_app_banner