Lord Ganesha Faq: ಗಣೇಶನಿಗೆ ಒಂದೇ ದಂತ ಏಕೆ, ಚೌತಿಯಂದು ಚಂದ್ರನ ಏಕೆ ನೋಡಬಾರದು, ವಿನಾಯಕನ ಕುರಿತಾದ 8 ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Lord Ganesha Faq: ಗಣೇಶನಿಗೆ ಒಂದೇ ದಂತ ಏಕೆ, ಚೌತಿಯಂದು ಚಂದ್ರನ ಏಕೆ ನೋಡಬಾರದು, ವಿನಾಯಕನ ಕುರಿತಾದ 8 ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

Lord Ganesha Faq: ಗಣೇಶನಿಗೆ ಒಂದೇ ದಂತ ಏಕೆ, ಚೌತಿಯಂದು ಚಂದ್ರನ ಏಕೆ ನೋಡಬಾರದು, ವಿನಾಯಕನ ಕುರಿತಾದ 8 ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

Why Ganesha has one tusk: ಗಣೇಶ ಹಬ್ಬದ ಸಮಯದಲ್ಲಿ ವಿಘ್ನ ನಿವಾರಕ ವಿನಾಯಕನ ಕುರಿತು ಹಲವು ಪ್ರಶ್ನೆಗಳು ಇರಬಹುದು. ಗಣಪತಿಗೆ ಏಕೆ ಒಂದೇ ದಂತ ಇದೆ, ಗಣೇಶ ಚತುರ್ಥಿಯಂದು ಚಂದ್ರನ ಏಕೆ ನೋಡಬಾರದು, ಗಣಪತಿಗೆ ಆನೆಯ ಮುಖ ಹೇಗೆ ಬಂತು ಇತ್ಯಾದಿ ಪ್ರಶ್ನೆಗಳಿಗೆ ಸಂಕ್ಷಿಪ್ತ ಉತ್ತರ ಇಲ್ಲಿದೆ.

ವಿನಾಯಕನ ಕುರಿತಾದ 8 ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
ವಿನಾಯಕನ ಕುರಿತಾದ 8 ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ಸಾಮಾನ್ಯವಾಗಿ ಗಣೇಶ ಹಬ್ಬದ ಸಮಯದಲ್ಲಿ ಮನೆಯಲ್ಲಿ ಮಕ್ಕಳು ಹಲವು ಪ್ರಶ್ನೆಗಳನ್ನು ಕೇಳಬಹುದು. ಅಮ್ಮಾ ಗಣಪತಿಗೆ ಒಂದೇ ದಂತ ಏಕಿದೆ, ಗಣೇಶನ ದಂತ ಮುರಿದ್ದು ಹೇಗಮ್ಮ, ಗಣೇಶನಿಗೆ ಆನೆ ಮುಖ ಏಕೆ ಬಂತು, ಗಣಪತಿಗೆ ಮದುವೆಯಾಗಿದೆಯೇ, ಗಣಪತಿಯ ವಾಹನ ಇಲಿ ಏಕೆ, ಗಣೇಶ ಚತುರ್ಥಿಯಂದು ಚಂದ್ರನ ಏಕೆ ನೋಡಬಾರದು ಹೀಗೆ ಮಕ್ಕಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಹಿಂಜರಿಯಬೇಡಿ. ಏಕೆಂದರೆ, ಇಲ್ಲಿ ಗಣೇಶನ ಕುರಿತು ಸಾಮಾನ್ಯವಾಗಿ ಮಕ್ಕಳು ಅಥವಾ ದೊಡ್ಡವರಲ್ಲಿ ಇರಬಹುದಾದ ಹತ್ತು ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ.

ಗಣೇಶ ಹೆಸರಿನ ಅರ್ಥವೇನು?

ಸಂಸ್ಕೃತದಲ್ಲಿ ಗಣ ಎಂದರೆ ಬಹುಸಂಖ್ಯೆ. ಈಶ ಎಂದರೆ ಭಗವಂತ. ಗಣಗಳ ಈಶ ಗಣೇಶ. ಎಲ್ಲಾ ಜೀವಿಗಳಿಗ ಭಗವಂತ.

ಗಣಪತಿಯಲ್ಲಿ ಬುದ್ಧಿ, ಉನ್ನತ ಜ್ಞಾನ, ಸಮೃದ್ಧಿಯ ದೇವರೆಂದು ಏಕೆ ಕರೆಯುತ್ತಾರೆ.

ಗಣೇಶನು ತನ್ನ ಬುದ್ಧಿವಂತಿಕೆಗೆ ಹೆಸರುವಾಸಿ. ಗಣೇಶ ಮತ್ತು ಸಹೋದರ ಕಾರ್ತಿಕೇಯ ನಡುವೆ ಒಂದು ಸ್ಪರ್ಧೆ ನಡೆಯುತ್ತದೆ. ಈ ಜಗತ್ತಿಗೆ ಮೂರು ಸುತ್ತು ಬನ್ನಿ ಎಂಬ ಸವಾಲು ಅದು. ಕಾರ್ತಿಕೇಯನಿಗೆ ನವಿಲು ವಾಹನ. ವೇಗ ಮತ್ತು ತನ್ನ ಶಕ್ತಿಯ ಬಗ್ಗೆ ಸಾಕಷ್ಟು ಹೆಮ್ಮೆ ಇರುವವನು. ಓಟ ಆರಂಭವಾದಗ ಕಾರ್ತಿಕೇಯನು ಅತ್ಯಧಿಕ ವೇಗದಲ್ಲಿ ಜಗತ್ತು ಸುತ್ತಲು ಹೋದನು. ಗಣಪತಿ ನಗುತ್ತ ತನ್ನ ಅಪ್ಪ ಅಮ್ಮನಾದ ಶಿವ ಮತ್ತು ಪಾರ್ವತಿಗೆ ಮೂರು ಸುತ್ತು ಬರುತ್ತಾನೆ. ಕಾರ್ತಿಕೇಯನು ಇಡೀ ಜಗತ್ತು ಸುತ್ತು ಹಾಕಿ ಕೈಲಾಸ ಪರ್ವತಕ್ಕೆ ಬಂದಾಗ ಗಣೇಶ ಗೆದ್ದು ಆಗಿತ್ತು. ಶಿವ ಪಾರ್ವತಿಯೇ ಈ ಜಗತ್ತು. ಅವರಿಗೆ ಸುತ್ತು ಬಂದರೆ ಈ ಜಗತ್ತಿಗೆ ಸುತ್ತಬಂದಂತೆ ಎಂದು ಬುದ್ಧಿವಂತಿಕೆ ತೋರಿದ್ದ ಬಾಲ ಗಣಪ.

ಗಣಪತಿಯ ದೇಹದ ಆಕಾರ ಏನು ಸೂಚಿಸುತ್ತದೆ?

ಜ್ಞಾನ ಮತ್ತು ಬುದ್ಧಿವಂತಿಕೆಯ ಸಂಕೇತ ಗಣಪತಿ. ಗಣೇಶನ ಕಿವಿ, ಮೂಗು, ಸಣ್ಣ ಕಣ್ಣುಗಳು, ದೊಡ್ಡ ಹೊಟ್ಟೆ ಇತ್ಯಾದಿಗಳು ಅನೇಕ ವಿಷಯಗಳನ್ನು ಸೂಚಿಸುತ್ತದೆ. ದೊಡ್ಡ ತಲೆಯು ಮಹಾ ಜ್ಞಾನದ ಸಂಕೇತ. ದೊಡ್ಡ ಕಿವಿಯು ಒಳ್ಳೆಯ ವಿಚಾರಗಳನ್ನು ಕೇಳುವಂತಹ ಗುಣವನ್ನು ಸೂಚಿಸುತ್ತದೆ. ಅತ್ಯುತ್ತಮ ಕೇಳುಗರಾಗಬೇಕು ಎಂದು ಹೇಳುವುದು ಇದಕ್ಕೆ. ಸಣ್ಣ ಕಣ್ಣುಗಳು ಭವಿಷ್ಯವನ್ನು ಸೂಕ್ಷ್ಮವಾಗಿ ನೋಡುವುದರ ಸಂಕೇತ. ದೊಡ್ಡ ಸೊಂಡಿಲು ವ್ಯಕ್ತಿಯಲ್ಲಿರುವ ಒಳ್ಳೆಯ ಅಂಶಗಳನ್ನು ಪಡೆಯುವ ಸಂಕೇತ. ದೊಡ್ಡ ಹೊಟ್ಟೆಯು ತನ್ನ ಜೀವನದ ಅನುಭವವನ್ನು ಜೀರ್ಣ ಮಾಡುವ ಶಕ್ತಿಯನ್ನು ಹೊಂದಿರುವುದನ್ನು ಮತ್ತು ಮನುಷ್ಯ ಹೆಚ್ಚು ಪರ್ಫೆಕ್ಷನ್‌ ಹೊಂದಿರಬೇಕು ಎನ್ನುವುದನ್ನು ಸೂಚಿಸುತ್ತದೆ.

ಗಣೇಶ ಬ್ರಹ್ಮಚಾರಿಯೇಕೆ?

ಗಣೇಶನು ಎಲ್ಲಾ ಸ್ತ್ರೀಯರಲ್ಲಿ ತಾಯಿ ಪಾರ್ವತಿಯನ್ನು ನೋಡುತ್ತಾನೆ. ಹೀಗಾಗಿ, ಬ್ರಹ್ಮಚಾರಿಯಾಗಿ ಉಳಿದನು.

ಗಣೇಶನ ಅರ್ಧ ತುಂಡಾದ ದಂತ ಏನು ಸೂಚಿಸುತ್ತದೆ?

ಗಣೇಶನನ್ನು ವಕ್ರತುಂಡ ಎಂದೂ ಕರೆಯಲಾಗುತ್ತದೆ. ಮಹಾಭಾರತ ಬರೆಯುವ ಸಮಯದಲ್ಲಿ ವೇದವ್ಯಾಸರಿಗೆ ಬರೆಯಲು ಗಣೇಶನು ಸಹಾಯ ಮಾಡುತ್ತಾನೆ. ನಾನು ವೇಗವಾಗಿ ಹೇಳುತ್ತ ಹೋಗುತ್ತೇನೆ, ನಾನು ಹೇಳಿದಾಗ ನೀನು ಬರೆಯುತ್ತಿರಬೇಕು, ನಿಲ್ಲಿಸಬಾರದು. ನಿಲ್ಲಿಸಿದರೆ ಈ ಮಹಾಭಾರತ ಕಾವ್ಯ ಪೂರ್ಣವಾಗದು ಎಂದು ಹೇಳುತ್ತಾನೆ. ಗಣೇಶನು ಬರೆಯುತ್ತ ಹೋಗುತ್ತಾನೆ. ಈ ರೀತಿ ಬರೆಯುವ ಸಂದರ್ಭದಲ್ಲಿ ಗಣಪತಿಯು ತನ್ನ ದಂತವನ್ನೇ ಮುರಿದು ಅದನ್ನೇ ಪೆನ್‌ ಆಗಿ ಬಳಸಿ ಬರೆದಿದ್ದಾನೆ.

ಚೌತಿಯಂದು ಚಂದಿರನ ಏಕೆ ನೋಡಬಾರದು?

ಭಾದ್ರಪದ ಶುಕ್ಲದ ಚೌತಿಯಂದು ಚಂದಿರನ ನೋಡಿದರೆ ಅಪವಾದ ತಪ್ಪದು ಎಂಬ ಹಾಡು ಕೇಳಿರುವಿರಿ. ಗಣೇಶನಿಗೆ ಸಿಹಿ ಕಡುಬು ತುಂಬಾ ಇಷ್ಟ. ತನ್ನ ಜನ್ಮದಿನದಂದು ಪ್ರತಿ ಮನೆಮನೆಗೆ ಹೋಗಿ ಸಿಹಿ ಕಡುಬು ನೈವೇದ್ಯ ಸ್ವೀಕರಿಸುತ್ತಿದ್ದನು. ಪರಿಣಾಮ ಹೊಟ್ಟೆ ಫುಲ್‌ ಆಗಿತ್ತು. ರಾತ್ರಿ ತನ್ನ ವಾಹನ ಮೂಷಿಕದ ಮೇಲೆ ಹೋಗುವಾಗ ಇಲಿಯು ಹಾವನ್ನು ಕಂಡು ಎಡವಿತು. ಗಣಪತಿ ಕೆಳಕ್ಕೆ ಬಿದ್ದಾಗ ಬಾನಲ್ಲಿದ್ದ ಚಂದ್ರನು ನಕ್ಕನು. ಇದನ್ನು ನೋಡಿ ಗಣೇಶನಿಗೆ ಕೋಪ ಬಂತು. ಚೌತಿಯಂದು ಯಾರೂ ಚಂದ್ರನನ್ನು ನೋಡಬಾರದು ಎಂದು ಶಾಪ ನೀಡಿದನು.

ಗಣೇಶನಿಗೆ ಗರಿಕೆ ಹುಲ್ಲು ಅರ್ಪಿಸುವುದೇಕೆ?

ಇದರ ಹಿಂದೆ ಅನಲಾಸುರನೆಂಬ ರಾಕ್ಷಸನ ಕತೆಯಿದೆ. ಈ ರಾಕ್ಷಸ ಸ್ವರ್ಗದಲ್ಲಿ ತೊಂದರೆ ಉಂಟು ಮಾಡುತ್ತಿದ್ದನು. ದೇವತೆಗಳು ಗಣೇಶನ ಸಹಾಯ ಕೇಳಿದರು. ಗಣೇಶ ಮತ್ತು ಅನಲಾಸುರನ ನಡುವೆ ಘೋರ ಯುದ್ಧ ನಡೆಯುತ್ತದೆ. ಗಣೇಶನು ವಿರಾಟ್‌ ರೂಪ ತಾಳಿ ಅನಲಾಸುರನ್ನು ನುಂಗುತ್ತಾನೆ. ಬೆಂಕಿಯುಡೆ ಉಗುಳುವ ರಾಕ್ಷಸನಿಂದ ಗಣೇಶದ ಹೊಟ್ಟೆಯಲ್ಲಿ ಶಾಖ ಉಂಟಾಗುತ್ತದೆ. ಗಣೇಶನ ನೋವು ಕಡಿಮೆ ಮಾಡಲು ಋಷಿಮುನಿಗಳು 21 ಗರಿಕೆಯನ್ನು ಗಣೇಶನಿಗೆ ನೀಡುತ್ತಾರೆ. ಗಣೇಶನ ಬಿಸಿ ಕಡಿಮೆಯಾಗುತ್ತದೆ. ಅಂದಿನಿಂದ ಗರಿಕೆ ಗಣೇಶನಿಗೆ ಪ್ರಿಯವಾಗುತ್ತದೆ. ನನಗೆ ಯಾರು ಗರಿಕೆಯಿಂದ ಪೂಜೆ ಸಲ್ಲಿಸುತ್ತಾರೋ ಅವರಿಗೆ ನನ್ನ ಆಶೀರ್ವಾದ ಇರುತ್ತದೆ ಎಂದು ಗಣೇಶ ಆ ಸಂದರ್ಭದಲ್ಲಿ ಹೇಳಿದ್ದಾನೆ ಎನ್ನುವ ನಂಬಿಕೆಯಿದೆ.

ಮೂಷಿಕ ವಾಹನ: ಗಣೇಶನಿಗೆ ಇಲಿ ವಾಹನವಾದದ್ದು ಹೇಗೆ?

ಜಮುಖಾಸುರನೆಂಬ ರಾಕ್ಷಸ ದೇವತೆಗಳಿಗೆ ತೊಂದರೆ ಕೊಡುತ್ತಿದ್ದನು. ದೇವತೆಗಳ ಮನವಿಯಂತೆ ಗಣೇಶನು ಈ ರಾಕ್ಷಸನ ವಿರುದ್ಧ ಯುದ್ಧ ಸಾರಿದನು. ಇಬ್ಬರ ನಡುವೆ ಘೋರ ಯುದ್ಧ ನಡೆಯಿತು. ಯುದ್ಧದಲ್ಲಿ ತನ್ನ ಒಂದು ದಂತಕ್ಕೆ ಹಾನಿಯಾದ ಕೋಪದಲ್ಲಿ ಗಣೇಶನು ಈ ರಾಕ್ಷಸನನ್ನು ಸಾಯಿಸಲು ಮುಂದಾದನು. ಆ ರಾಕ್ಷಸ ಪ್ರಾಣಭಯದಿಂದ ಅಂಗಲಾಚಿದಾಗ ಆತನನ್ನು ಇಲಿಯಾಗಿಸಿ ತನ್ನ ವಾಹನ ಮಾಡಿಕೊಂಡನು. ಇನ್ನೊಂದು ಕತೆಯ ಪ್ರಕಾರ ಸ್ವರ್ಗದಲ್ಲಿ ಒಬ್ಬ ಗಂದರ್ಭವನಿಗೆ ಇಂದ್ರನು ಇಲಿಯಾಗುವಂತೆ ಶಾಪ ನೀಡಿದ್ದ. ಈ ಇಲಿಯೇ ಗಣೇಶನ ವಾಹನವಾಯಿತು ಎಂಬ ಕತೆಯೂ ಇದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.