ಹಿಂಗಾರಿನಲ್ಲಿ 1,58,087 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ, ಬೆಳೆ ಕಳೆದುಕೊಂಡೋರ ಖಾತೆಗೆ ಒಂದು ವಾರದಲ್ಲಿ ಪರಿಹಾರ ನೇರ ವರ್ಗಾವಣೆ
ಹಿಂಗಾರು ಮಳೆಯಿಂದ ಚಿತ್ರದುರ್ಗ, ದಾವಣಗೆರೆ ಸಹಿತ ಹಲವು ಜಿಲ್ಲೆಗಳಲ್ಲಿ ಆದ ಬೆಳೆ ನಷ್ಟದ ಹಣವನ್ನು ರೈತರ ಖಾತೆಗಳಲ್ಲಿ ಮುಂದಿನ ವಾರದಲ್ಲಿ ವರ್ಗಾವಣೆ ಮಾಡಲು ಕಂದಾಯ ಇಲಾಖೆ ಮುಂದಾಗಿದೆ.
ಬೆಂಗಳೂರು: ಕರ್ನಾಟಕದಲ್ಲಿ 2024 ಸೆಪ್ಟಂಬರ್ ಹಾಗೂ ಅಕ್ಟೋಬರ್ನಲ್ಲಿ ಸುರಿದ ಹಿಂಗಾರು ಮಳೆಯಿಂದ ಬೆಳೆ ಕಳೆದುಕೊಂಡ ರೈತರು ಹಾಗೂ ಬೆಳೆಗಾರರಿಗೆ ಒಂದು ಸಮಾಧಾನದ ಸುದ್ದಿ. ಹಿಂಗಾರು ಮಳೆ ಅವಧಿಯಲ್ಲಿ ರಾಜ್ಯಾದ್ಯಂತ 1,58,087 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಮುಂದಿನ ಒಂದು ವಾರದಲ್ಲಿ ಎಲ್ಲಾ ರೈತರ ಬ್ಯಾಂಕ್ ಖಾತೆಗಳಿಗೂ ಪರಿಹಾರ ಹಣ ಜಮೆಯಾಗಲಿದೆ. ಹಿಂಗಾರು ಹಂಗಾಮಿನಲ್ಲಿ ಉಂಟಾಗಿರುವ ಬೆಳೆ ಹಾನಿ ಸಂಬಂಧಿಸಿದಂತೆ ಕಳೆದ ಒಂದು ತಿಂಗಳಿನಿಂದ ಜಂಟಿ ಸಮೀಕ್ಷೆ ನಡೆಸಲಾಗಿದ್ದು, ಡೇಟಾ ಎಂಟ್ರಿ ಕೆಲಸಗಳೂ ಮುಕ್ತಾಯದ ಹಂತದಲ್ಲಿದೆ. ರೂ. 120 ಕೋಟಿ ವರೆಗೆ ನಷ್ಟ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದ್ದು, ಮುಂದಿನ ಒಂದು ವಾರದಲ್ಲಿ ಎಲ್ಲಾ ರೈತರ ಖಾತೆಗಳಿಗೂ ಹಣ ಜಮೆ ಮಾಡಲು ಕಂದಾಯ ಇಲಾಖೆ ಸಿದ್ದತೆ ಮಾಡಿಕೊಂಡಿದೆ.
ಜಿಲ್ಲಾಧಿಕಾರಿಗಳ ಖಾತೆಯಲ್ಲೇ ರೂ. 642 ಕೋಟಿ ಹಣ ಲಭ್ಯವಿದ್ದು, ಈ ಹಣದಲ್ಲೇ ಪರಿಹಾರ ಶೀಘ್ರ ವಿತರಿಸಲಾಗುವುದು. ಮುಂಗಾರು ಹಂಗಾಮಿನಲ್ಲಿ ಸುಮಾರು 77,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿತ್ತು. ಕೆಲವಡೆ ಮನೆ ಕುಸಿದಿದ್ದವು, ಕೆಲವೆಡೆ ಪ್ರಾಣ ಹಾನಿಯಂತಹ ಘಟನೆಗಳೂ ಸಂಭವಿಸಿದ್ದವು. ಇದಕ್ಕೆ ಸಂಬಂಧಿಸಿದಂತೆ ಒಟ್ಟಾರೆ ರೂ.162 ಕೋಟಿ ಹಣವನ್ನು ಪರಿಹಾರವಾಗಿ ರೈತರ ಖಾತೆಗಳಿಗೆ ಈಗಾಗಲೇ ಜಮೆ ಮಾಡಲಾಗಿದೆ ಎನ್ನುವುದು ಸಚಿವ ಕೃಷ್ಣ ಬೈರೇಗೌಡ ವಿವರಣೆ. ವಿಕಾಸ ಸೌಧದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ಜಿಲ್ಲಾಧಿಕಾರಿಗಳ ಸಭೆ ನಡೆಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಡಿ.15ರ ಒಳಗೆ 5,000 ಜನರಿಗೆ ಸಾಗುವಳಿ ಚೀಟಿ
ಬಗರ್ ಹುಕುಂ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳ ಪೈಕಿ ಕನಿಷ್ಟ 5,000 ಜನರ ಅರ್ಜಿಗಳನ್ನಾದರೂ “ಬಗರ್ ಹುಕುಂ” ಕಮಿಟಿಯ ಎದುರು ಮಂಡಿಸಿ ಡಿ.15ರ ಒಳಗೆ ಸಾಗುವಳಿ ಚೀಟಿ ನೀಡಲಾಗುವುದು ಎಂಬುದು ಸಚಿವರ ಅಭಯ.
ರಾಜ್ಯಾದ್ಯಂತ ಲಕ್ಷಾಂತರ ಜನ ಬಗರ್ ಹುಕುಂ ಅಡಿಯಲ್ಲಿ ಜಮೀನು ಮಂಜೂರಾತಿಗೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈ ಪೈಕಿ 1,26,000 ಅರ್ಜಿಗಳನ್ನು ಮಾತ್ರ ಅರ್ಹ ಎಂದು ಪರಿಗಣಿಸಲಾಗಿದೆ. ಕೆಲ ಜಿಲ್ಲೆಗಳಲ್ಲಿ ಅರ್ಹ ಫಲಾನುಭವಿಗಳ ಅರ್ಜಿಗಳನ್ನು ಈಗಾಗಲೇ ಬಗರ್ ಹುಕುಂ ಕಮಿಟಿ ಎದುರು ಇಡಲಾಗಿದೆ. ಆದರೆ, ಆ ಸಂಖ್ಯೆ ಸಮಾಧಾನಕರವಾಗಿಲ್ಲ. ಹೀಗಾಗಿ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಗುರಿ ನಿಗದಿಪಡಿಸಲಾಗಿದೆ. ಡಿ.15ರ ಒಳಗೆ ರಾಜ್ಯಾದ್ಯಂತ ಕನಿಷ್ಟ 5,000 ಅರ್ಹ ಅರ್ಜಿಗಳನ್ನು ಕಮಿಟಿ ಎದುರು ಮಂಡಿಸಲು ಸೂಚಿಸಲಾಗಿದೆ. ಎನ್ನುತ್ತಾರೆ ಸಚಿವರು.
ಮೊದಲು ಗ್ರಾಮ ಆಡಳಿತ ಅಧಿಕಾರಿ ಅರ್ಜಿದಾರರ ಸ್ಥಳ ಪರಿಶೀಲಿಸಬೇಕು. ತದನಂತರ ಕಂದಾಯ ನಿರೀಕ್ಷಕರು ಹಾಗೂ ತಹಶೀಲ್ದಾರ್ ವರದಿ ಸಲ್ಲಿಸಬೇಕು. ಈ ಎಲ್ಲಾ ಪ್ರಕ್ರಿಯೆಗಳ ನಂತರವೇ ಅರ್ಹ ಅರ್ಜಿಗಳನ್ನು ಬಗರ್ ಹುಕುಂ ಕಮಿಟಿ ಎದುರು ಮಂಡಿಸಲು ಸಾಧ್ಯ. ಈ ಕೆಲಸಗಳು ಸಮಯಾವಕಾಶ ಬೇಡುವಂತದ್ದಾಗಿದ್ದು, ಅಧಿಕಾರಿಗಳಿಗೆ ಮೊದಲ ಹಂತದಲ್ಲಿ 5,000 ಅರ್ಜಿಗಳ ಗುರಿ ನೀಡಿದ್ದು, ಜನವರಿ ವೇಳೆಗೆ ಈ ಗುರಿ 15 ರಿಂದ 20 ಸಾವಿರಕ್ಕೆ ಏರಿಕೆಯಾಗುವ ನಿರೀಕ್ಷೆಯೂ ಇದೆ.
ಬಗರ್ ಹುಕುಂ ಡಿಜಿಟಲ್ ಸಾಗುವಳಿ ಚೀಟಿ
“ಬಗರ್ ಹುಕುಂ” ಯೋಜನೆಯ ಅಡಿ ಅರ್ಹ ಫಲಾನುಭವಿಗಳಿಗೆ ಡಿಜಿಟಲ್ ಸಾಗುವಳಿ ಚೀಟಿ ನೀಡಲಾಗುವುದು. ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ರೈತರಿಗೆ ಮಂಜೂರಾಗುವ ಜಮೀನಿಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಕಿಂಚಿತ್ತೂ ತಕರಾರು ಬರಬಾರದು, ಕಡತ ಕಳೆದು ಹೋಯ್ತು ಎಂದು ರೈತರು ಮತ್ತೆ ಸರ್ಕಾರಿ ಕಚೇರಿಗೆ ಅಲೆಯಬಾರದು ಎಂಬ ವಿಚಾರದಲ್ಲಿ ಸರ್ಕಾರ ಬದ್ದವಾಗಿದೆ. ಹೀಗಾಗಿ ಅರ್ಹ ಫಲಾನುಭವಿಗಳ ಅರ್ಜಿಗಳನ್ನು ಬಗರ್ ಹುಕುಂ ಕಮಿಟಿ ಎದುರು ಮಂಡಿಸಿ ಮಂಜೂರಾದ ಜಮೀನಿಗೆ ಪೋಡಿಯೂ ಮಾಡಿಸಿ, ಪಹಣಿಯಲ್ಲಿ ಹೆಸರನ್ನು ನಮೂದಿಸಿ ಸ್ವತಃ ತಹಶೀಲ್ದಾರರು ನೋಂದಣಿ ಕಚೇರಿಯಲ್ಲಿ ಜಮೀನಿನ ನೋಂದಣಿಯೂ ಮಾಡಿ ರೈತರಿಗೆ ಡಿಜಿಟಲ್ ಸಾಗುವಳಿ ಚೀಟಿ ನೀಡಲಾಗುವುದು” ಎಂದು ಅವರು ಮಾಹಿತಿ ನೀಡಿದರು.
ಅನರ್ಹ ಅರ್ಜಿಗಳೆಷ್ಟು?
“ಬಗರ್ ಹುಕುಂ ಯೋಜನೆಯ ಅಡಿ ಜಮೀನು ಮಂಜೂರಾತಿಗೆ ಕೋರಿ ಅರ್ಜಿ ಸಲ್ಲಿಸಿದವರ ಪೈಕಿ 5 ರಿಂದ 6 ಲಕ್ಷ ಅರ್ಜಿಗಳನ್ನು ಅನರ್ಹ ಎಂದು ಪರಿಗಣಿಸಲಾಗಿದೆ. ಕಾನೂನು ರೀತ್ಯಾ ಅರ್ಜಿ ಸಲ್ಲಿಸಬೇಕಾದ ದಿನಕ್ಕೆ 18 ವರ್ಷ ತುಂಬದ 26,051 ಜನ ಅರ್ಜಿ ಸಲ್ಲಿಸಿದ್ದಾರೆ. ಇದಲ್ಲದೆ, ಈಗಾಗಲೇ 4.38 ಎಕರೆ ಜಮೀನು ಹೊಂದಿರುವ 26,922 ಅರ್ಜಿಗಳು, ಕೆರೆ ರಸ್ತೆ ಸೇರಿ ಬಿ-ಖರಾಬು ಪ್ರದೇಶಗಳ ಮಂಜೂರಾತಿಗೆ ಕೋರಿ 40,799 ಅರ್ಜಿಗಳು, ಅರಣ್ಯ ಪ್ರದೇಶಗಳ ಮಂಜೂರಾತಿಗೆ 1,68,119 ಅರ್ಜಿಗಳು, ನಗರ ಪರಿಮಿತಿಯೊಳಗೆ ಮಂಜೂರಾತಿ ಕೋರಿ 68,561 ಅರ್ಜಿಗಳು, ತಾಲೂಕಿನಲ್ಲೇ ವಾಸ ಇಲ್ಲದ 8,665 ಅರ್ಜಿಗಳು ಹಾಗೂ ಕೃಷಿಕರಲ್ಲ 1,00,400 ಜನ ಅರ್ಜಿ ಸಲ್ಲಿಸಿದ್ದಾರೆ. ಈ ಎಲ್ಲಾ ಅರ್ಜಿಗಳನ್ನೂ ಅನರ್ಹ ಎಂದು ಪರಿಗಣಿಸಲಾಗಿದೆ” ಎಂದು ಅವರು ಮಾಹಿತಿ ನೀಡಿದರು.
“ಅನರ್ಹ ಅರ್ಜಿಗಳನ್ನು ಅಧಿಕಾರಿಗಳ ಮಟ್ಟದಲ್ಲೇ ಪರಿಶೀಲನೆ ವೇಳೆ ವಿಲೇವಾರಿ ಮಾಡಬೇಕು. ಇಂತಹ ಅರ್ಜಿಗಳನ್ನು ಬಗರ್ ಹುಕುಂ ಕಮಿಟಿ ಎದುರು ಮಂಡಿಸಿ ಸಮಯವನ್ನು ವ್ಯರ್ಥ ಮಾಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆದರೆ, ಈ ಪರಿಶೀಲನೆಯೇ ಅಂತಿಮವಲ್ಲ. ಒಂದು ವೇಳೆ ಅಧಿಕಾರಿಗಳ ತಪ್ಪಿನಿಂದ ಅರ್ಹ ಅರ್ಜಿಯನ್ನು ವಿಸರ್ಜಿಸಲಾಗಿದ್ದರೆ ಅಂತಹ ಅರ್ಜಿಗಳನ್ನು ಮತ್ತೆ ಮರು ಪರಿಶೀಲನೆ ಒಳಪಡಿಸಲಾಗುವುದು” ಎಂದೂ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಅಭಿಯಾನ ಮಾದರಿಯಲ್ಲಿ ಪೋಡಿ ದುರಸ್ಥಿ
ರಾಜ್ಯದಲ್ಲಿ ಒಟ್ಟು 1,96,000 ಸರ್ಕಾರಿ ಸರ್ವೇ ನಂಬರ್ ಇದ್ದು, ನಾನಾ ಸರ್ಕಾರಿ ಯೋಜನೆಗಳ ಅಡಿ ಕಳೆದ 30-40 ವರ್ಷಗಳಿಂದ ಲಕ್ಷಾಂತರ ಜನರಿಗೆ ಸರ್ಕಾರಿ ಜಮೀನು ಮಂಜೂರಾಗಿದೆ. ಆದರೆ, 30-40 ವರ್ಷ ಆಗಿದ್ದರೂ ಜಮೀನಿಗೆ ಪೋಡಿ ದುರಸ್ಥಿ ಆಗಿಲ್ಲ. ದಾಖಲೆ ಪಕ್ಕ ಆಗಿಲ್ಲ. ಇಂತಹ ಪ್ರಕರಣಗಳೇ ರಾಜ್ಯದಲ್ಲಿ ಕನಿಷ್ಟ 25 ಲಕ್ಷ ಇರಬಹುದು. ಪಕ್ಕ ಪೋಡಿ ದುರಸ್ಥಿ ಮಾಡಲು ನಮೂನೆ 1 ರಿಂದ 5 ಹಾಗೂ 5 ರಿಂದ 10 ದಾಖಲೆ ಲಭ್ಯವಿರಬೇಕು. ಆದರೆ, ಈ ದಾಖಲೆಗಳಿಲ್ಲದೆ ಲಕ್ಷಾಂತರ ರೈತರು ಸಂಕಷ್ಟಕ್ಕೆ ಒಳಗಾದ್ದಾರೆ. ಸರ್ಕಾರಿ ಕಚೇರಿಗಳಿಗೆ ದಶಕಗಳಿಂದ ಅಲೆಯುತ್ತಿದ್ದರೂ ಪರಿಹಾರ ಮಾತ್ರ ಲಭ್ಯವಾಗಿಲ್ಲ ಎಂಬುದು ಸಚಿವರ ಬೇಸರದ ನುಡಿ.
ಕಳೆದ ಒಂದು ವರ್ಷಗಳಿಂದ ಇಲಾಖೆ ಹಿರಿಯ ಅಧಿಕಾರಿಗಳ ಜೊತೆ ಸತತ ಸಭೆ ನಡೆಸಿ, ಚರ್ಚಿಸಿ ಕೊನೆಗೂ ನಮೂನೆ 1 ರಿಂದ 5 ಪೋಡಿ ದುರಸ್ಥಿ ಕೆಲಸವನ್ನು ಸರಳೀಕರಣಗೊಳಿಸಿ ಇದೀಗ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಆನ್ಲೈನ್ನಲ್ಲಿ ಡಿಜಿಟಲ್ ಪ್ರಕ್ರಿಯೆಗಾಗಿ ಆಪ್ ರೂಪಿಸಲಾಗಿದೆ. 1,96,000 ಸರ್ಕಾರಿ ಸರ್ವೇ ನಂಬರ್ಗಳನ್ನೂ ದುರಸ್ಥಿಗೊಳಿಸಬೇಕು ಎಂಬುದು ನಮ್ಮ ಗುರಿ. ಮೊದಲ ಹಂತದಲ್ಲಿ ಈಗಾಗಲೇ 27,107 ಫೈಲ್ ಸೃಷ್ಟಿಸಲಾಗಿದೆ. ಈ ಸಂಬಂಧ ಡಾಟಾ ಎಂಟ್ರಿ ಕೆಲಸವೂ ನಡೆಯುತ್ತಲೇ ಇದೆ. ಇದರ ಜೊತೆ ಜೊತೆಗೆ ನಮೂನೆ 6 ರಿಂದ 10 ರ ಸರ್ವೇ ಕೆಲಸಕ್ಕೆ ಶನಿವಾರದಿಂದಲೇ (ನವೆಂಬರ್ 30) ಹಾಸನದಿಂದ ವಿದ್ಯುಕ್ತ ಚಾಲನೆ ನೀಡಲಾಗುವುದು. ಸಮಾರಂಭದಲ್ಲಿ 200 ಜನಕ್ಕೆ ಪೋಡಿ ದುರಸ್ಥಿ ಮಾಡಿ ಹೊಸ ಸರ್ವೇ ನಂಬರ್ ನೀಡಲಿದ್ದೇವೆ. ನವೆಂಬರ್.30 ರಿಂದ ಪೋಡಿ ದುರಸ್ಥಿ ಅಭಿಯಾನ ಪೇಪರ್ನಿಂದ ಮಾತ್ರವಲ್ಲ ಫೀಲ್ಡಿನಿಂದಲೂ ಆರಂಭವಾಗಲಿದ್ದು, ಈ ಕೆಲಸ ಸಂಪೂರ್ಣವಾಗಿ ಮುಗಿದರೆ ಕನಿಷ್ಟ 20 ರಿಂದ 25 ಲಕ್ಷ ರೈತ ಕುಟುಂಬಗಳ ಹಲವು ದಶಕಗಳ ಸಮಸ್ಯೆ ಬಗೆಹರಿಯಲಿದೆ ಎನ್ನುವುದು ಸಚಿವ ಕೃಷ್ಣ ಬೈರೇಗೌಡ ಅವರ ವಿಶ್ವಾಸದ ನುಡಿ.
ವಿಭಾಗ