ಮಂಗಳೂರು ಪಿಲಿಕುಳ ನಿಸರ್ಗಧಾಮ ಸಮಗ್ರ ಅಭಿವೃದ್ಧಿ ವಿಜ್ಞಾನ ಇಲಾಖೆ ಒತ್ತು; ಮುಂದಿನ ಬಜೆಟ್‌ನಲ್ಲಿ ವಿಶೇಷ ಅನುದಾನದ ನಿರೀಕ್ಷೆ
ಕನ್ನಡ ಸುದ್ದಿ  /  ಕರ್ನಾಟಕ  /  ಮಂಗಳೂರು ಪಿಲಿಕುಳ ನಿಸರ್ಗಧಾಮ ಸಮಗ್ರ ಅಭಿವೃದ್ಧಿ ವಿಜ್ಞಾನ ಇಲಾಖೆ ಒತ್ತು; ಮುಂದಿನ ಬಜೆಟ್‌ನಲ್ಲಿ ವಿಶೇಷ ಅನುದಾನದ ನಿರೀಕ್ಷೆ

ಮಂಗಳೂರು ಪಿಲಿಕುಳ ನಿಸರ್ಗಧಾಮ ಸಮಗ್ರ ಅಭಿವೃದ್ಧಿ ವಿಜ್ಞಾನ ಇಲಾಖೆ ಒತ್ತು; ಮುಂದಿನ ಬಜೆಟ್‌ನಲ್ಲಿ ವಿಶೇಷ ಅನುದಾನದ ನಿರೀಕ್ಷೆ

Mangalore Pilikula Nisargadhama: ಮಂಗಳೂರಿನ ಹೊರ ವಲಯದಲ್ಲಿರುವ ಪಿಲಿಕುಳ ಜೈವಿಕ ಉದ್ಯಾನವನ ಅಭಿವೃದ್ದಿಗೆ ಒತ್ತು ನೀಡಲಾಗುತ್ತಿದೆ.ವರದಿ: ಹರೀಶ ಮಾಂಬಾಡಿ. ಮಂಗಳೂರು

ಮಂಗಳೂರಿನ ಪ್ರಮುಖ ಪ್ರವಾಸಿ ತಾಣ ಪಿಲಿಕುಳ ಜೈವಿಕ ಉದ್ಯಾನವನ ಅಭಿವೃದ್ದಿಗೆ ಅನುದಾನ ದೊರೆಯಲಿದೆ.
ಮಂಗಳೂರಿನ ಪ್ರಮುಖ ಪ್ರವಾಸಿ ತಾಣ ಪಿಲಿಕುಳ ಜೈವಿಕ ಉದ್ಯಾನವನ ಅಭಿವೃದ್ದಿಗೆ ಅನುದಾನ ದೊರೆಯಲಿದೆ.

ಮಂಗಳೂರು: ಮಂಗಳೂರಿನ ಹೊರವಲಯದಲ್ಲಿರುವ ಪಿಲಿಕುಳ ನಿಸರ್ಗಧಾಮದ ಸಮಗ್ರ ಅಭಿವೃದ್ಧಿಗೆ ಸರಕಾರ ಚಿಂತನೆ ನಡೆಸುತ್ತಿದ್ದು, ಈ ಕುರಿತು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಲಾಗುತ್ತದೆ. ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಎನ್.ಎಸ್.ಭೋಸರಾಜು ಬೆಂಗಳೂರಿನಲ್ಲಿ ನಡೆದ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು 2018ರಲ್ಲಿ ಉದ್ಘಾಟಿಸಿದ ಪಿಲಿಕುಳ ನಿಸರ್ಗಧಾಮವನ್ನು ಜನಾಕರ್ಷಣೆಯ ಕೇಂದ್ರವಾಗುವಂತೆ ಸಮಗ್ರ ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ. ಇದನ್ನು ರಾಜ್ಯದ ಪ್ರಮುಖ ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ದಿಗೊಳಿಸಲು ಅವಕಾಶಗಳಿವೆ. ಇಲ್ಲಿ ವಿಫುಲ ಜಾಗವಿದ್ದು ಅಂತಾರಾಷ್ಟ್ರೀಯ ಮಟ್ಟದ ಜನಾಕರ್ಷಣೆಯ ಕೇಂದ್ರವಾಗಿ ಅಭಿವೃದ್ದಿ ಪಡಿಸಬಹುದು.

2018ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ ಪಿಲಿಕುಳ ಅಭಿವೃದ್ದಿ ಪ್ರಾಧಿಕಾರ ಸಮಿತಿಗೆ ಅನುಮೋದನೆ ನೀಡಿದ್ದಾರೆ. ಪ್ರಾಧಿಕಾರದ ಮುಂದಿನ ಮೊದಲ ಸಭೆಯಲ್ಲಿ ಪಿಲಿಕುಳ ನಿಸರ್ಗಧಾಮದ ಸಮಗ್ರ ಅಭಿವೃದ್ದಿಗೆ ಅಗತ್ಯವಿರುವ ನೀಲನಕ್ಷೆಯ ಬಗ್ಗೆ ಚರ್ಚಿಸಲಾಗುವುದು. ನಂತರ ಮುಂದಿನ ಬಜೆಟ್‌ನಲ್ಲಿ ಅಗತ್ಯ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು. ಇದಕ್ಕೆ ಅಗತ್ಯವಿರುವ ಕನ್ಸಲ್ಟೆಂಟ್‌ ಏಜನ್ಸಿ ನೇಮಕದ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಡಳಿತ ಸುಪರ್ದಿಯಲ್ಲಿರುವ ಪಿಲಿಕುಳ ನಿಸರ್ಗಧಾಮವೂ ಮಂಗಳೂರಿನ ಹೊರ ವಲಯದಲ್ಲಿದೆ. ಇಲ್ಲಿ ಪ್ರಾಣಿಗಳ ಜತೆಗೆ ನೈಸರ್ಗಿಕ ಉದ್ಯಾನವು ಪ್ರವಾಸಿಗರನ್ನು ಆಕರ್ಷಿಸುತ್ತದೆ. ವಿಜ್ಞಾನ ಕೇಂದ್ರವೂ ಇಲ್ಲಿನ ಆಕರ್ಷಣೆ. ಇದಕ್ಕೆ ಇನ್ನಷ್ಟು ಹೊಸ ರೂಪ ನೀಡುವ ಪ್ರಯತ್ನವೂ ಶುರುವಾಗಿದೆ.

2025 ಜುಲೈ ನಲ್ಲಿ ಕ್ವಾಂಟಮ್‌ ಸಮಾವೇಶ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ಆಯೋಜಿಸಲಾಗುತ್ತಿರುವ ನ್ಯಾನೋ ಸಮಾವೇಶಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇದೇ ರೀತಿಯಲ್ಲಿ ಮುಂಬರುವ 2025 ಜುಲೈ ತಿಂಗಳಲ್ಲಿ ಎರಡು ದಿನಗಳ ಕಾಲ ಕ್ವಾಂಟಮ್‌ ಸಮಾವೇಶ ಆಯೋಜಿಸಲು ತೀರ್ಮಾನಿಸಲಾಗಿದೆ. ಕ್ವಾಂಟಮ್‌ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ ದೇಶಗಳೊಂದಿಗೆ ಸಂಪರ್ಕದಲ್ಲಿದ್ದು, ಜ್ಞಾನ ವಿನಿಮಯಕ್ಕೆ ಸಭೆಗೆ ಸಮಯಕ್ಕೆ ಮನವಿ ಮಾಡಲಾಗಿದೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ನಿರ್ದೇಶನದಂತೆ ನಮ್ಮ ರಾಜ್ಯ ಕ್ವಾಂಟಮ್‌ ಕ್ಷೇತ್ರದಲ್ಲಿ ಹೊಸ ಸಾಧನೆಗೆ ಉತ್ತೇಜಿಸುವುದು ಈ ಸಮಾವೇಶದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ತಯಾರಿಗಳನ್ನು ಪ್ರಾರಂಭಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸೈನ್ಸ್ ಸಿಟಿಗೆ ಭೂಮಿ

ರಾಯಚೂರು, ಚಿಕ್ಕಮಗಳೂರು ಹಾಗೂ ಯಾದಗಿರಿಯಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಗಳ ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ಸಚಿವರು ಸೂಚನೆ ನೀಡಿದರು. ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಿಸಲು ಯೋಜಿಸಲಾಗಿರುವ ಸೈನ್ಸ್‌ ಸಿಟಿಗೆ ಅಗತ್ಯ ಭೂಮಿಯನ್ನು ಈಗಾಗಲೇ ಕೆಐಎಡಿಬಿ ನೀಡಿದೆ. ಇದರ ಸರ್ವೆ ಕಾರ್ಯವು ಮುಗಿದಿದ್ದು ಡಿಪಿಆರ್‌ ರಚನೆಗೆ ಕ್ರಮ ಕೈಗೊಳ್ಳುವಂತೆ ಸಚಿವರು ಸೂಚನೆ ನೀಡಿದರು. ಸಭೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಗಳಾದ ಏಕ್‌ರೂಪ್‌ ಕೌರ್‌, ಕೆಸ್ಪೆಪ್ಸ್‌ ವ್ಯವಸ್ಥಾಪಕ ನಿರ್ದೇಶಕರಾದ ಸದಾಶಿವ ಪ್ರಭು ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

(ವರದಿ: ಹರೀಶ ಮಾಂಬಾಡಿ. ಮಂಗಳೂರು)

Whats_app_banner