Maha Shivaratri 2024: ಶಿವರಾತ್ರಿಗೆ ಆರತಿ ಬೆಳಗಲು ತಂಬಿಟ್ಟು ತಯಾರಿಸುವ ವಿಧಾನ ಇಲ್ಲಿದೆ; ಶಿವಪೂಜೆ ವೇಳೆ ಈ ಶ್ಲೋಕಗಳನ್ನ ಪಠಿಸಿ-festival maha shivaratri 2024 aarti to lord shiva thambittu aarti shiva sloka mantra thambittu recipe in kannada mgb ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Maha Shivaratri 2024: ಶಿವರಾತ್ರಿಗೆ ಆರತಿ ಬೆಳಗಲು ತಂಬಿಟ್ಟು ತಯಾರಿಸುವ ವಿಧಾನ ಇಲ್ಲಿದೆ; ಶಿವಪೂಜೆ ವೇಳೆ ಈ ಶ್ಲೋಕಗಳನ್ನ ಪಠಿಸಿ

Maha Shivaratri 2024: ಶಿವರಾತ್ರಿಗೆ ಆರತಿ ಬೆಳಗಲು ತಂಬಿಟ್ಟು ತಯಾರಿಸುವ ವಿಧಾನ ಇಲ್ಲಿದೆ; ಶಿವಪೂಜೆ ವೇಳೆ ಈ ಶ್ಲೋಕಗಳನ್ನ ಪಠಿಸಿ

Thambittu Aarti On Shivaratri: ಶಿವರಾತ್ರಿಯಂದು ಆರತಿ ಬೆಳಗಲು ತಂಬಿಟ್ಟು ಮಾಡುವ ವಿಧಾನ ಹಾಗೂ ಶಿವನ ಪೂಜೆ ವೇಳೆ ಪಠಿಸಬೇಕಾದ ಶ್ಲೋಕ ಹಾಗೂ ಮಂತ್ರಗಳು ಇಲ್ಲಿವೆ..

ಶಿವರಾತ್ರಿಗೆ ತಂಬಿಟ್ಟು ಆರತಿ (twitter/@shubhavaagali-ಬಲಚಿತ್ರ)
ಶಿವರಾತ್ರಿಗೆ ತಂಬಿಟ್ಟು ಆರತಿ (twitter/@shubhavaagali-ಬಲಚಿತ್ರ)

ಪ್ರತಿ ವರ್ಷ ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶಿಯಂದು ಮಹಾ ಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಮಾರ್ಚ್​ 8 ರಂದು ಮಹಾ ಶಿವರಾತ್ರಿ ಹಬ್ಬ ಬಂದಿದೆ. ಶಿವರಾತ್ರಿ ಹಬ್ಬಕ್ಕೆ ತಂಬಿಟ್ಟು ತಯಾರಿಸುವ ಸಂಪ್ರದಾಯವಿದೆ. ಕೆಲವರು ಸಿಹಿ ನೈವೇದ್ಯವಾಗಿ ತಂಬಿಟ್ಟು ತಯಾರಿಸಿದರೆ, ಇನ್ನು ಕೆಲವರು ಶಿವನಿಗೆ ತಂಬಿಟ್ಟಿನ ಆರತಿ ಬೆಳಗುತ್ತಾರೆ. ತಂಬಿಟ್ಟು ಮಾಡುವ ವಿಧಾನ ಹಾಗೂ ಶಿವರಾತ್ರಿಯಂದು ಶಿವನ ಪೂಜೆ ವೇಳೆ ಪಠಿಸಬೇಕಾದ ಶ್ಲೋಕ ಹಾಗೂ ಮಂತ್ರಗಳು ಇಲ್ಲಿವೆ.. ಮೊದಲು ತಂಬಿಟ್ಟು ಮಾಡುವುದು ಹೇಗೆ ಎಂದು ನೋಡೋಣ..

ತಂಬಿಟ್ಟು ಮಾಡಲು ಬೇಕಾಗುವ ಪದಾರ್ಥಗಳು

ಕಡಲೆ/ಶೇಂಗಾ ಬೀಜ, ಎಳ್ಳು, ಪುಟಾಣಿ, ಬೆಲ್ಲ, ಏಲಕ್ಕಿ, ಶುಂಠಿ, ಕೊಬ್ಬರಿ ಹಾಗೂ ತುಪ್ಪ

ತಂಬಿಟ್ಟು ಮಾಡುವ ವಿಧಾನ

ಒಂದು ಪ್ಯಾನ್​ನಲ್ಲಿ ಒಂದು ಕಪ್​ ಕಡಲೆ ಬೀಜ ಹುರಿಯರಿ. ಅದನ್ನು ಬೇರೆ ಪಾತ್ರೆಗೆ ಹಾಕಿ. ಅದೇ ಪ್ಯಾನ್​​ನಲ್ಲಿ 2 ಚಮಚ ಕಪ್ಪು​ ಎಳ್ಳು ಹುರಿಯಿರಿ. ಬಿಳಿ ಎಳ್ಳು ಕೂಡ ಬಳಸಬಹುದು. ಒಂದು ಕಪ್​ ಪುಟಾಣಿಯನ್ನು ಮಿಕ್ಸಿ ಜಾರ್​ಗೆ ಹಾಕಿ ಪುಡಿ ಮಾಡಿಕೊಳ್ಳಿ. ಪುಟಾಣಿ ಪುಡಿಯನ್ನು ಬೇರೆ ಪಾತ್ರೆಗೆ ಸುರಿದು, ಅದೇ ಮಿಕ್ಸಿ ಜಾರ್​ಗೆ ಹುರಿದ ಕಡಲೆ ಬೀಜ ಹಾಕಿ ಪುಡಿ ಮಾಡಿಕೊಳ್ಳಿ. ನಂತರ ಪುಟಾಣಿ ಪುಡಿಗೆ ಕಡಲೆ ಬೀಜದ ಪುಡಿ ಹಾಗೂ ಹುರಿದ ಎಳ್ಳು ಸೇರಿಸಿ. ಇದಕ್ಕೆ 2 ಚಮಚ ತುರಿದ ಒಣ ಕೊಬ್ಬರಿ, ಚಿಟಿಕೆ ಏಲಕ್ಕಿ ಪುಡಿ ಹಾಗೂ ಚಿಟಿಕೆ ಶುಂಠಿ ಪುಡಿ ಸೇರಿಸಿ.

ಒಂದು ಪ್ಯಾನ್​​ಗೆ ಮುಕ್ಕಾಲು ಕಪ್​ ಬೆಲ್ಲ ಹಾಗೂ ಕಾಲು ಕಪ್​ ನೀರು ಹಾಕಿ ಅಂಟು ಪಾಕ ಮಾಡಿಕೊಳ್ಳಿ. ಈ ಪಾಕಕ್ಕೆ ಮೇಲಿನ ಎಲ್ಲಾ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಕಲಸಿ. ನಂತರ ಕೈಗೆ ತುಪ್ಪ ಸವರಿಕೊಳ್ಳುತ್ತಾ ಕಪ್ ಆಕಾರದಲ್ಲಿ ಉಂಡೆಗಳನ್ನು ಕಟ್ಟಿ. ಉಂಡೆಯ ಮೇಲ್ಭಾಗವನ್ನು ಪ್ರೆಸ್​ ಮಾಡಿ ರಂಧ್ರದಂತೆ ಮಾಡಿ. ಆ ರಂಧ್ರದೊಳಗೆ ತುಪ್ಪ ಹಾಕಿ ಬತ್ತಿ ಇರಿಸಿ. ಇದೀಗ ಆರತಿ ಬೆಳಗಲು ತಂಬಿಟ್ಟು ರೆಡಿಯಾಯ್ತು. ಎಲ್ಲಾ ಉಂಡೆಗಳನ್ನು ಆರತಿ ತಟ್ಟೆಯಲ್ಲಿ ಇರಿಸಿ ಶಿವನಿಗೆ ಬೆಳಗಿ.

ಶಿವರಾತ್ರಿಯಂದು ಪಠಿಸಲು ಶ್ಲೋಕಗಳು/ಮಂತ್ರಗಳು

1) "ಓಂ ನಮಃ ಶಿವಾಯ"

2) "ಓಂ ಈಶಾನಾಯ ನಮಃ"

3) "ದೇವದೇವ ಮಹಾದೇವ ನೀಲಕಂಠ ನಮೋಸ್ತುತೇ

ಕರ್ತುಮಿಚ್ಛಾಮ್ಯಹಂ ದೇವ ಶಿವರಾತ್ರಿ ವ್ರತಂ ತವ

ತವ ಪ್ರಸಾದದ್ದೇವೇಶ ನಿರ್ವಿಘ್ನೇನ ಭವೇದಿತಿ

ಕಾಮಾಶಃ ಶತ್ರವೋ ಮಾಂ ವೈ ಪೀಡಾಂ ಕುರ್ವಂತು ನೈವ ಹಿ"

4) ಶಿವ ಗಾಯತ್ರಿ ಮಂತ್ರ: "ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ರುದ್ರ ಪ್ರಚೋದಯಾತ್"

5) ರುದ್ರ ಮಂತ್ರ: "ಓಂ ನಮೋ ಭಗವತೇ ರುದ್ರಾಯ".

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.