Samvatsara: ಹಿಂದೂ ಪಂಚಾಂಗದ ಪ್ರಕಾರ ಎಷ್ಟು ಸಂವತ್ಸರಗಳಿವೆ; ಈ ಯುಗಾದಿಯಿಂದ ಚಾಲ್ತಿಗೆ ಬರುವ ಸಂವತ್ಸರ ಯಾವುದು? ಇಲ್ಲಿದೆ ಸಂಪೂರ್ಣ ಮಾಹಿತಿ
Samvatsara: ಹಿಂದೂ ಪಂಚಾಗದ ಪ್ರಕಾರ 60 ಸಂವತ್ಸರಗಳಿವೆ. ಒಂದು ಚಾಂದ್ರಮಾನ ವರ್ಷವನ್ನು ಸಂವತ್ಸರ ಎಂದು ಕರೆಯಲಾಗುತ್ತದೆ. 2024ರ ಯುಗಾದಿಯಿಂದ 2025 ಯುಗಾದಿವರೆಗೆ ಕ್ರೋಧಿನಾಮ ಸಂವತ್ಸರ ಚಾಲ್ತಿಯಲ್ಲಿರುತ್ತದೆ. ನಂತರ ವಿಶ್ವಾವಸು ಸಂವತ್ಸರ ಆರಂಭವಾಗುತ್ತದೆ.
ಸಂವತ್ಸರಗಳು: ವಾರ, ತಿಂಗಳು, ಮಾಸಗಳು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಆದರೆ ಸಂವತ್ಸರಗಳ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿಲ್ಲ. ಸಂವತ್ಸರ ಎಂಬುದು ಸಂಸ್ಕತ ಪದ. ಸಂವತ್ಸರ ಎಂದರೆ ವರ್ಷಗಳು ಎಂದು ಅರ್ಥ. ಒಂದು ಚಾಂದ್ರಮಾನ ವರ್ಷವನ್ನು ಸಂವತ್ಸರ ಎಂದು ಕರೆಯಲಾಗುತ್ತದೆ. ಪ್ರತಿಯೊಂದು ಸಂವತ್ಸರಕ್ಕೂ ಒಂದೊದು ಹೆಸರಿದೆ. ಚೈತ್ರ ಮಾಸದ ಮೊದಲ ದಿನ, ಸೂರ್ಯೋದಯದಂದು ಬ್ರಹ್ಮನು ಈ ಸೃಷ್ಟಿಯನ್ನು ರಚಿಸುತ್ತಾನೆ. ಅಂದಿನಿಂದ ಸಂವತ್ಸವರಗಳು ಆರಂಭವಾಯಿತು ಎಂದು ಬ್ರಹ್ಮಪುರಾಣದಲ್ಲಿ ತಿಳಿಸಲಾಗಿದೆ.
ಬ್ರಾಹಸ್ಪತ್ಯ ಯುಗ ಎಂದರೇನು?
ಗುರು ಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸಲು ತೆಗೆದುಕೊಳ್ಳುವ ಕಾಲವನ್ನು ಸಂವತ್ಸರ ಎಂದು ಕರೆಯಲಾಗುತ್ತದೆ. ಇದನ್ನು ಬ್ರಾಹಸ್ಪತ್ಯ ಯುಗ ಎಂದು ಕರೆಯಲಾಗುತ್ತದೆ. ಇಂತಹ 5 ಬ್ರಾಹಸ್ಪತ್ಯ ಯುಗಗಳ ಒಟ್ಟು ಕಾಲಾವಧಿಯನ್ನು 60 ವರ್ಷಗಳು ಎಂದು ಪರಿಗಣಿಸಲಾಗುತ್ತದೆ. ಅದೇ ರೀತಿ ಗುರುವು ಸೂರ್ಯನ ಸುತ್ತ ಪ್ರದಕ್ಷಿಣಿ ಹಾಕಲು 12 ಸಂವತ್ಸರಗಳನ್ನು ತೆಗೆದುಕೊಂಡರೆ ಸನಿಯು ಸೂರ್ಯನನ್ನು ಸುತ್ತಲು 30 ಸಂವತ್ಸರಗಳನ್ನು ತೆಗೆದುಕೊಳ್ಳುತ್ತದೆ. ಯುಗ ಆರಂಭವಾದ ಸಮಯದಲ್ಲಿ ಗುರು ಹಾಗೂ ಶನಿ ಗ್ರಹಗಳು ದ್ವಾದಶ ರಾಶಿಯ ಮೊದಲ ಮೇಷ ರಾಶಿಯನ್ನು ಪ್ರವೇಶಿದ್ದವು. ಹಾಗೇ 60 ಸಂವತ್ಸರಗಳ ನಂತರ ಮತ್ತೆ ಮೇಷ ರಾಶಿಯನ್ನು ಪ್ರವೇಶಿಸುತ್ತವೆ. ಅದರ ಪ್ರಕಾರ ಒಂದು ಚಕ್ರ ಪೂರ್ಣವಾಗಿ ಮತ್ತೊಂದು ಹೊಸ ಚಕ್ರ ಆರಂಭವಾಗುತ್ತದೆ ಎಂದು ಅರ್ಥ.
ಪ್ರಸ್ತುತ ನಾವು ಯಾವ ಸಂವತ್ಸರದಲ್ಲಿದ್ದೇವೆ?
2023 ರ ಯುಗಾದಿಯಿಂದ ಶೋಭನನಾಮ ಸಂವತ್ಸರ ಆರಂಭವಾಗಿತ್ತು. 2024 ರ ಯುಗಾದಿಯಿಂದ ಕ್ರೋಧಿನಾಮ ಸಂವತ್ಸರ ಶುರುವಾಗುತ್ತದೆ. ಇದು ಒಟ್ಟು 60 ಸಂವತ್ಸರಗಳಲ್ಲಿ 38ನೆಯದು. ಮುಂದಿನ ವರ್ಷ, ಅಂದರೆ 2025ರಲ್ಲಿ ವಿಶ್ವಾವಸು ಸಂವತ್ಸರ ಆರಂಭವಾಗುತ್ತದೆ.
60 ಸಂವತ್ಸರಗಳ ಹೆಸರು
1) ಪ್ರಭವ
2) ವಿಭವ
3) ಶುಕ್ಲ
4) ಪ್ರಮೋದೂತ
5) ಪ್ರಜೋತ್ಪತ್ತಿ
6) ಆಂಗೀರಸ
7) ಶ್ರೀಮುಖ
8) ಭಾವ
9) ಯುವ
10) ಧಾತ್ರಿ
11) ಈಶ್ವರ
12) ಬಹುಧಾನ್ಯ
13) ಪ್ರಮಾಥಿ
14) ವಿಕ್ರಮ
15) ವೃಷ/ ವಿಷು
16) ಚಿತ್ರಭಾನು
17) ಸ್ವಭಾನು
18) ತಾರಣ
19) ಪಾರ್ಥಿವ
20) ವ್ಯಯ
21) ಸರ್ವಜಿತ್
22) ಸರ್ವಧಾರಿ
23) ವಿರೋಧಿ
24) ವಿಕೃತ
25) ಖರ
26) ನಂದನ
27) ವಿಜಯ
28) ಜಯ
29) ಮನ್ಮಥ
30) ದುರ್ಮುಖಿ
31) ಹೇವಿಳಂಬಿ
32) ವಿಳಂಬಿ
33) ವಿಕಾರಿ
34) ಶಾರ್ವರಿ
35) ಪ್ಲವ
36) ಶುಭಕೃತ್
37) ಶೋಭಾಕೃತ್
38) ಕ್ರೋಧಿ
39) ವಿಶ್ವಾವಸು
40) ಪರಾಭವ
41) ಪ್ಲವಂಗ
42) ಕೀಲಕ
43) ಸೌಮ್ಯ
44) ಸಾಧಾರಣ
45) ವಿರೋಧಿಕೃತ್
46) ಪರಿಧಾವಿ
47) ಪ್ರಮಾದೀ
48) ಆನಂದ
49) ರಾಕ್ಷಸ
50) ನಳ
51) ಪಿಂಗಳ
52) ಕಾಳಯುಕ್ತಿ
53) ಸಿದ್ಧಾರ್ಥಿ
54) ರುದ್ರ / ರೌದ್ರಿ
55) ದುರ್ಮತಿ
56) ದುಂದುಭಿ
57) ರುಧಿರೋದ್ಗಾರಿ
58) ರಕ್ತಾಕ್ಷಿ
59) ಕ್ರೋಧನ
60) ಅಕ್ಷಯ/ಕ್ಷಯ