ಕನ್ನಡ ಸುದ್ದಿ  /  Lifestyle  /  Hindu Festival Ugadi 2024 Date Time How To Celebrate Ugadi History And Importance Of Ugadi Bevu Bella Mgb

Ugadi 2024: ಯುಗಾದಿ ಹಬ್ಬದ ದಿನಾಂಕ-ಮುಹೂರ್ತ ಇಲ್ಲಿದೆ; ಐತಿಹ್ಯ, ಮಹತ್ವ, ಆಚರಣೆ ಕುರಿತು ತಿಳಿಯಬೇಕಾದ ಅಂಶಗಳಿವು

Ugadi Festival 2024: ಯುಗಾದಿ ಹಬ್ಬ ಸಮೀಪಿಸುತ್ತಿದೆ. ಹಿಂದೂ ಕ್ಯಾಲೆಂಡರ್​ ಪ್ರಕಾರ ಇದುವೇ ಹೊಸ ವರ್ಷದ ಆರಂಭ. ಯುಗಾದಿ ಹಬ್ಬದ ದಿನಾಂಕ-ಮುಹೂರ್ತ, ಐತಿಹ್ಯ-ಮಹತ್ವ ಹಾಗೂ ಆಚರಣೆ ಕುರಿತು ಇಲ್ಲಿದೆ ಒಂದಿಷ್ಟು ಮಾಹಿತಿ.

ಯುಗಾದಿ ಹಬ್ಬ 2024
ಯುಗಾದಿ ಹಬ್ಬ 2024

ಪ್ರಪಂಚದಾದ್ಯಂತ ಜನವರಿ 1 ರಂದು ಹೊಸ ವರ್ಷವನ್ನು ಆಚರಿಸಲಾಗುತ್ತದೆ. ಆದರೆ ಹಿಂದೂ ಚಾಂದ್ರಮಾನ ಕ್ಯಾಲೆಂಡರ್ ಅಥವಾ ಹಿಂದೂ ಪಂಚಾಂಗದ ಪ್ರಕಾರ ಯುಗಾದಿ ಹಬ್ಬವನ್ನು ಆಚರಿಸುವ ದಿನವೇ ಹೊಸ ವರ್ಷದ ಮೊದಲ ದಿನ. ಯುಗಾದಿ ಅಂದರೆ 'ಯುಗದ ಆದಿ' ಅಂದರೆ ಹೊಸ ಯುಗದ ಆರಂಭ ಎಂದರ್ಥ. ಚೈತ್ರ ಮಾಸದ ಮೊದಲ ದಿನದಂದು ಯುಗಾದಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಏಪ್ರಿಲ್ 9 ರಂದು (ಮಂಗಳವಾರ) ಯುಗಾದಿ ಹಬ್ಬ ಆಚರಿಸಲಾಗುವುದು.

ಈ ಹಬ್ಬವನ್ನು ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಇದೇ ದಿನ ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯಗಳಲ್ಲಿ, ದಾದ್ರಾ ಮತ್ತು ನಗರ ಹವೇಲಿ ಮತ್ತು ದಿಯು ಮತ್ತು ದಮನ್​ ಕೇಂದ್ರಾಡಳಿತ ಪ್ರದೇಶಗಳಲ್ಲಿ 'ಗುಡಿ ಪಾಡ್ವಾ' ಎಂಬ ಹೆಸರಿನಿಂದ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ. ಪಂಜಾಬ್‌ನಲ್ಲಿ 'ಬೈಸಾಖಿ' ತಮಿಳುನಾಡಿನಲ್ಲಿ 'ಪುತಾಂಡು' ಮತ್ತು ರಾಜಸ್ಥಾನದಲ್ಲಿ 'ಥಾಪನಾ' ಎಂಬ ಹೆಸರಿನಿಂದ ಆಚರಿಸಲಾಗುತ್ತದೆ.

2024ರ ಯುಗಾದಿ ತಿಥಿ ಮತ್ತು ಮುಹೂರ್ತ

ಚೈತ್ರ ಮಾಸ ಶುಕ್ಲ ಪಕ್ಷದ ಪ್ರತಿಪದ ತಿಥಿ ಆರಂಭ: ಏಪ್ರಿಲ್​ 08 ಮಧ್ಯಾಹ್ನ 3:20

ಚೈತ್ರ ಮಾಸ ಶುಕ್ಲ ಪಕ್ಷದ ಪ್ರತಿಪದ ತಿಥಿ ಅಂತ್ಯ: ಏಪ್ರಿಲ್​ 09 ಮಧ್ಯಾಹ್ನ 12:00

ಯುಗಾದಿ ಹಬ್ಬದ ಇತಿಹಾಸ

ಹಿಂದೂ ಧರ್ಮಗ್ರಂಥಗಳು ಮತ್ತು ಪುರಾಣಗಳ ಪ್ರಕಾರ, ಯುಗಾದಿ ದಿನದಂದು ಬ್ರಹ್ಮ ದೇವರು ಬ್ರಹ್ಮಾಂಡವನ್ನು (ವಿಶ್ವವನ್ನು) ಸೃಷ್ಟಿಸಲು ಪ್ರಾರಂಭಿಸಿದನು ಎಂದು ಹೇಳಲಾಗುತ್ತದೆ. ಅದಾದ ಬಳಿಕ ಬ್ರಹ್ಮನು ಸಮಯ ತಿಳಿಯಲು ವರ್ಷಗಳು, ತಿಂಗಳುಗಳು, ವಾರಗಳು ಮತ್ತು ದಿನಗಳನ್ನು ಸೃಷ್ಟಿಸಿದನು. ಆದ್ದರಿಂದ ಯುಗಾದಿಯ ದಿನವನ್ನು ಬ್ರಹ್ಮಾಂಡ ಸೃಷ್ಟಿಯ ಮೊದಲ ದಿನವೆಂದು ನಂಬಲಾಗಿದೆ.

ಯುಗಾದಿ ಹಬ್ಬದ ಆಚರಣೆ ಮತ್ತು ಮಹತ್ವ

ಯುಗಾದಿ ಆರಂಭಕ್ಕೂ ಕೆಲದಿನಗಳ ಮುನ್ನವೇ ಜನರು ಮನೆಯನ್ನು ಸ್ವಚ್ಛಗೊಳಿಸಲು ಪ್ರಾರಂಭಿಸುತ್ತಾರೆ. ಮನೆ ಮುಂದೆ ಸಗಣಿ ಹಾಕಿ ಅಂಗಳ ಬಳಿದು, ರಂಗೋಲಿ ಬಿಡಿಸಿ, ಬಾಗಿಲಿಗೆ ಮಾವಿನ ಎಲೆಗಳಿಂದ ತೋರಣ ಕಟ್ಟುತ್ತಾರೆ. ಹೊಸ ಬಟ್ಟೆಯನ್ನು ಧರಿಸಿ ಬೇವು-ಬೆಲ್ಲವನ್ನು ಸವಿಯುತ್ತಾರೆ. ಜೀವನದಲ್ಲಿ ಕಹಿ-ಸಿಹಿ ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂಬರ್ಥದಲ್ಲಿ ಬೇವು-ಬೆಲ್ಲವನ್ನು ತಿನ್ನಲಾಗುತ್ತದೆ. ದೇಗುಲಗಳಿಗೆ ಭೇಟಿ ನೀಡಿ ಪ್ರಾರ್ಥನೆ ಮಾಡುತ್ತಾರೆ. ಸೂರ್ಯೋದಯಕ್ಕೂ ಮುನ್ನ ಎದ್ದು ಎಣ್ಣೆ ಸ್ನಾನ ಮಾಡಿ ನಂತರ ಸೂರ್ಯ ನಮಸ್ಕಾರ ಮಾಡಿ ಹಬ್ಬವನ್ನು ಆರಂಭಿಸುವ ಪದ್ಧತಿಯೂ ಕೆಲವೆಡೆ ಇದೆ.

ಮಲೆನಾಡಿನ ಭಾಗದಲ್ಲಿ ಪುಟಾಣಿ-ಕಹಿಬೇವು-ಬೆಲ್ಲ-ಎಳ್ಳು ಸೇರಿಸಿ ತಯಾರಿಸಿದ ಪುಡಿಯನ್ನು ಬೇವು-ಬೆಲ್ಲವೆಂದು ಸೇವಿಸಲಾಗುತ್ತದೆ. ಹೋಳಿಗೆ ಅಥವಾ ಒಬ್ಬಟ್ಟು ಸೇರಿದಂತೆ ಸಿಹಿ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಹೊಸದಾಗಿ ಬಿಡುತ್ತಿರುವ ಮಾವಿನಕಾಯಿಯಿಂದ ಉಪ್ಪಿನಕಾಯಿಯನ್ನು ತಯಾರಿಸುತ್ತಾರೆ. ಕೆಲವರು ಮಾವಿನಕಾಯಿಯ ಚಟ್ನಿ ಮಾಡುತ್ತಾರೆ.

ಯುಗಾದಿ ದಿನ ಸಂಜೆ ಚಂದ್ರನನ್ನು ನೋಡಿದರೆ ಒಳ್ಳೆಯದು ಎಂದು ನಂಬಲಾಗಿದೆ. ಚೌತಿ ಚಂದ್ರನನ್ನು ನೋಡಿದವರಂತೂ ಯುಗಾದಿ ಚಂದ್ರನನ್ನು ನೋಡಲು ಹರಸಾಹಸ ಪಡುತ್ತಾರೆ. ಚೌತಿಯಂದು ಬೇಡ ಎಂದರೂ ಕಾಣುವ ಚಂದ್ರನು ಯುಗಾದಿಯ ದಿನ ಕಾಣುವುದೇ ಅಪರೂಪ. ಹೊಸ ವರ್ಷವನ್ನು ಸೂಚಿಸುವ ಜೊತೆಗೆ ಹಾಗೂ ಬ್ರಹ್ಮಾಂಡ ಸೃಷ್ಟಿಯ ಮೊದಲ ದಿನವೆಂಬ ನಂಬಿಕೆಯ ಜೊತೆಗೆ ಯುಗಾದಿ ಹಬ್ಬವು, ಚಳಿಗಾಲದ ನಂತರ ವಸಂತ ಕಾಲದ ಆರಂಭವನ್ನು ಸೂಚಿಸುವ, ವಸಂತ ಋತುವನ್ನು ಸ್ವಾಗತಿಸಲು ಆಚರಿಸುವ ಹಬ್ಬವೂ ಹೌದು.