ಯುಗಾದಿ ಭವಿಷ್ಯ: ಕ್ರೋಧಿನಾಮ ಸಂವತ್ಸರದಲ್ಲಿ ಯಾರಿಗೆ ಬೇವು, ಯಾರಿಗೆ ಬೆಲ್ಲ; ಮೇಷದಿಂದ ಮೀನ ರಾಶಿಯವರೆಗಿನ ಎಲ್ಲ 12 ರಾಶಿಗಳ ವರ್ಷ ಭವಿಷ್ಯ-ugadi horoscope predictions for all zodiac signs rashi bhavishya of krodhi nama samvatsara lucky signs mgb ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಯುಗಾದಿ ಭವಿಷ್ಯ: ಕ್ರೋಧಿನಾಮ ಸಂವತ್ಸರದಲ್ಲಿ ಯಾರಿಗೆ ಬೇವು, ಯಾರಿಗೆ ಬೆಲ್ಲ; ಮೇಷದಿಂದ ಮೀನ ರಾಶಿಯವರೆಗಿನ ಎಲ್ಲ 12 ರಾಶಿಗಳ ವರ್ಷ ಭವಿಷ್ಯ

ಯುಗಾದಿ ಭವಿಷ್ಯ: ಕ್ರೋಧಿನಾಮ ಸಂವತ್ಸರದಲ್ಲಿ ಯಾರಿಗೆ ಬೇವು, ಯಾರಿಗೆ ಬೆಲ್ಲ; ಮೇಷದಿಂದ ಮೀನ ರಾಶಿಯವರೆಗಿನ ಎಲ್ಲ 12 ರಾಶಿಗಳ ವರ್ಷ ಭವಿಷ್ಯ

Ugadi Horoscope: ಯುಗಾದಿಯಂದು ಸಂವತ್ಸರ ಬದಲಾಗುತ್ತದೆ. ಈ ಬಾರಿ ಶ್ರೀ ಕ್ರೋಧಿನಾಮ ಸಂವತ್ಸರ ಅಸ್ತಿತ್ವಕ್ಕೆ ಬರಲಿದೆ. ನೂತನ ಸಂವತ್ಸರದ ರಾಶಿ ಭವಿಷ್ಯ ಇಲ್ಲಿದೆ. ಎಲ್ಲ 12 ರಾಶಿಗಳಿಗೆ ಸೇರಿದವರು ಮುಂದಿನ ವರ್ಷದ ಯುಗಾದಿಯವರೆಗಿನ ಭವಿಷ್ಯವನ್ನು ಇಲ್ಲಿ ತಿಳಿಯಬಹುದು. ಹೊಸ ಸಂವತ್ಸರದಲ್ಲಿ ಸರ್ವರಿಗೂ ಒಳಿತಾಗಲಿ ಎಂದು ನಾವು ಹಾರೈಸುತ್ತೇವೆ. (ಬರಹ: ಎಚ್‌.ಸತೀಶ್)

ಯುಗಾದಿ ರಾಶಿ ಭವಿಷ್ಯ (ಸಾಂದರ್ಭಿಕ ಚಿತ್ರ)
ಯುಗಾದಿ ರಾಶಿ ಭವಿಷ್ಯ (ಸಾಂದರ್ಭಿಕ ಚಿತ್ರ)

ಯುಗಾದಿ ಹಬ್ಬ 2024: ಹಿಂದೂಗಳಿಗೆ ಯುಗಾದಿಯು ಹೊಸ ವರ್ಷ. ವಸಂತ ಋತು, ಚೈತ್ರ ಮಾಸದ ಮೊದಲ ದಿನವಾದ ಪಾಡ್ಯದಿಂದ ಹೊಸ ಪಂಚಾಂಗವೂ ಅಸ್ತಿತ್ವಕ್ಕೆ ಬರುತ್ತದೆ. ಅಂದಿನಿಂದ ಸಂಕಲ್ಪಗಳಲ್ಲಿ ಹೊಸ ಸಂವತ್ಸರದ ಹೆಸರು ಹೇಳಲಾಗುತ್ತದೆ. ನಮ್ಮೆಲ್ಲ ಓದುಗರಿಗೆ ಶ್ರೀ ಕ್ರೋಧಿನಾಮ ಸಂವತ್ಸರವು ಸಕಲ ಸನ್ಮಂಗಳಗಳನ್ನೂ ಉಂಟು ಮಾಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾ ವರ್ಷ ಭವಿಷ್ಯ ತಿಳಿಸುವ ಪ್ರಯತ್ನ ಮಾಡಿದ್ದೇನೆ. ವರ್ಷ ಭವಿಷ್ಯದಲ್ಲಿ ಗುರು, ಶನಿ, ರಾಹು ಮತ್ತು ಕೇತು ಗ್ರಹಗಳ ಸಂಚಾರವು ಅತಿ ಮುಖ್ಯವಾಗುತ್ತದೆ. ಕ್ರೋಧಿನಾಮ ಸಂವತ್ಸರವು ಏಪ್ರಿಲ್ 9, 2024 ರಂದು ಆರಂಭವಾಗುತ್ತದೆ. ಮೇ 1, 2024 ರಂದು ಗುರುವು ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ಸಂವತ್ಸರ ಪೂರ್ತಿ ಗುರು ಇದೇ ರಾಶಿಯಲ್ಲಿ ಸಂಚರಿಸುತ್ತಾನೆ. ಕುಂಭ ರಾಶಿಯಲ್ಲಿರುವ ಶನಿಯು 2025ರ ಮಾರ್ಚ್ ತಿಂಗಳ 29ರಂದು ಮೀನ ರಾಶಿಯನ್ನು ಪ್ರವೇಶ ಮಾಡುತ್ತಾನೆ. ಇದೇ ರೀತಿಯಲ್ಲಿ ಮೀನದಲ್ಲಿ ರಾಹು, ಕನ್ಯಾ ರಾಶಿಯಲ್ಲಿ ಕೇತು ಸಂಚರಿಸುತ್ತಾರೆ. ಈ ಗ್ರಹಗಳ ನಡೆಯ ಅನ್ವಯ ವರ್ಷ ಭವಿಷ್ಯವನ್ನು ನಿರ್ಧರಿಸಬೇಕಾಗುತ್ತದೆ ನಕ್ಷತ್ರವನ್ನು ತಿಳಿಯದೆ ಇರುವವರು ರವಿಯನ್ನು ಆಧರಿಸಿ ವರ್ಷ ಭವಿಷ್ಯವನ್ನು ಅನ್ವಯಿಸಿಕೊಳ್ಳಬಹುದು. ವ್ಯಕ್ತಿ ನೆಲೆಯಲ್ಲಿ ಭವಿಷ್ಯವನ್ನು ಖಚಿತವಾಗಿ ಹೇಳಲು, ಸರಿಯಾದ ನಿರ್ಣಯಕ್ಕೆ ಬರಲು ಜನ್ಮ ಜಾತಕ ಫಲವನ್ನೂ ಪರಿಶೀಲಿಸಬೇಕಾಗುತ್ತದೆ. ಕ್ರೋಧಿನಾಮ ಸಂವತ್ಸವರವು ಮಾರ್ಚ್ 29, 2025 ರವರೆಗೂ ಅಸ್ತಿತ್ವದಲ್ಲಿರುತ್ತದೆ. ಮಾರ್ಚ್ 30, 2025 ರಂದು ಬರುವ ಯುಗಾದಿ ಹಬ್ಬದಿಂದ ವಿಶ್ವಾವಸು ಸಂವತ್ಸರ ಚಾಲ್ತಿಗೆ ಬರಲಿದೆ. ಇಲ್ಲಿರುವ ರಾಶಿ ಭವಿಷ್ಯವನ್ನು ಒಂದು ವರ್ಷದ ಗ್ರಹ ಸಂಚಾರವನ್ನು ಲೆಕ್ಕ ಹಾಕಿ ನೀಡಲಾಗಿದೆ.

ಮೇಷ ರಾಶಿ: ಆತ್ಮೀಯರ ಸಹಕಾರ ಅತ್ಯಗತ್ಯ

ಮೇ ತಿಂಗಳು ಆರಂಭವಾಗುವವರೆಗೂ ಕೆಲಸ ಕಾರ್ಯಗಳಲ್ಲಿ ವಿಳಂಬವಾಗುವ ಕಾರಣ ಮನಸ್ಸಿನಲ್ಲಿ ಚಿಂತೆ ಇರುತ್ತದೆ. ನಿಮಗೆ ಈಗಾಗಲೇ ಇರಬಹುದಾದ ಆರೋಗ್ಯ ದೋಷಗಳನ್ನು ಯಾವುದೇ ಕಾರಣಕ್ಕೆ ಕಡೆಗಣಿಸಬೇಡಿ. ಒಂದು ವೇಳೆ ಕಡೆಗಣಿಸಿದರೆ ಸಣ್ಣಪುಟ್ಟ ದೋಷವು ದೊಡ್ಡದಾಗುತ್ತದೆ. ಕುಟುಂಬದಲ್ಲಿ ಉಂಟಾಗುವ ಭಿನಾಭಿಪ್ರಾಯವು ಕುಟುಂಬದ ಸದಸ್ಯರ ನಡುವೆ ಪರಸ್ಪರ ಅವಿಶ್ವಾಸ ತುಂಬುತ್ತದೆ. ಉತ್ತಮ ಆದಾಯವಿದ್ದರೂ ಹಣಕಾಸಿನ ಕೊರತೆ ಕಂಡು ಬರುತ್ತದೆ. ಹಣಕಾಸಿನ ಉಳಿತಾಯದ ಯೋಜನೆ ರೂಪಿಸಿದರೂ ಸಾಕಾರಗೊಳ್ಳುವುದು ಕಷ್ಟ. ಪರಿಶ್ರಮದಿಂದ ಮಾತ್ರ ಹಣಕಾಸು ಯೋಜನೆಗಳು ಜಾರಿಯಾಗಬಹುದು. ಕುಟುಂಬದಲ್ಲಿ ಮಂಗಳ ಕಾರ್ಯಗಳು ನಡೆಯಲಿವೆ. ಆದರೆ ಪ್ರತಿಯೊಂದು ಕೆಲಸ ಕಾರ್ಯಗಳಿಗೂ ಆತ್ಮೀಯರ ಸಹಾಯ, ಸಹಕಾರ ಅತಿ ಮುಖ್ಯವಾಗುತ್ತದೆ. ಉದ್ಯೋಗದಲ್ಲಿ ನಿಮ್ಮ ಅಧೀನದಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕ ವರ್ಗದವರ ಸಹಕಾರ ದೊರೆಯಲಿದೆ. ಜನಸೇವೆಯಲ್ಲಿ ತೊಡಗಿರುವವರು ಉನ್ನತ ಸ್ಥಾನಮಾನವನ್ನು ಗಳಿಸುತ್ತಾರೆ. ಪ್ರಯಾಸದಿಂದ ಮಾತ್ರ ಭೂವಿವಾದವು ಕೊನೆಗೊಳ್ಳುತ್ತದೆ. ಒಟ್ಟಾರೆ ಏಪ್ರಿಲ್ ತಿಂಗಳ ನಂತರ ಉತ್ತಮ ಬದಲಾವಣೆಗಳು ಕಂಡುಬರುತ್ತದೆ. ಕೋಪಕ್ಕೆ ಒಳಗಾಗದೆ, ಆತುರ ಪಡದೆ, ಶಾಂತಿ, ಸಂಯಮದಿಂದ ವರ್ತಿಸಿದಷ್ಟೂ ಶುಭಫಲಗಳು ದೊರೆಯುತ್ತವೆ.

ವೃಷಭ ರಾಶಿ: ಉತ್ತಮ ಫಲದ ನಿರೀಕ್ಷೆ

ಶನಿ ಮತ್ತು ರಾಹುಗಳು ಶುಭ ಸ್ಥಾನದಲ್ಲಿವೆ. ಆದ್ದರಿಂದ ಉತ್ತಮ ಫಲಗಳನ್ನು ನಿರೀಕ್ಷಿಸಬಹುದು. ಆದರೆ ಗುರು ಅಶುಭ ಸ್ಥಾನದಲ್ಲಿರುವ ಕಾರಣ ಅನವಶ್ಯಕ ಅಡ್ಡಿ ಆತಂಕಗಳು ಎದುರಾಗುತ್ತದೆ. ಮೇ ತಿಂಗಳು ಆರಂಭವಾಗುವವರೆಗೂ ಖರ್ಚು ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಆರೋಗ್ಯದಲ್ಲಿ ಏರುಪೇರು ಕಂಡು ಬರುತ್ತದೆ. ಉತ್ತಮ ಆದಾಯವಿದ್ದರೂ ಗಳಿಸಿದ ಹಣದಲ್ಲಿ ಬಹುಪಾಲು ಬೇಡದ ವಿಚಾರಗಳಿಗೆ ಖರ್ಚಾಗುತ್ತದೆ. ಹಟದ ಬುದ್ಧಿಯ ಕಾರಣ ಕುಟುಂಬದಲ್ಲಿ ಶಾಂತಿ ನೆಮ್ಮದಿಯ ಕೊರತೆ ಇರುತ್ತದೆ. ಮೌನವೊಂದೇ ಎಲ್ಲಾ ತೊಂದರೆಗಳಿಗೆ ಪರಿಹಾರ. ಬಂಧು-ಬಳಗದವರ ಜೊತೆಯಲ್ಲಿ ಉತ್ತಮ ಬಾಂಧವ್ಯ ಇರುವುದಿಲ್ಲ. ಉದ್ಯೋಗದಲ್ಲಿ ನಿಮ್ಮ ಕಷ್ಟದ ಪ್ರಯತ್ನಗಳಿಗೆ ಉತ್ತಮ ಫಲಿತಾಂಶಗಳು ಇರುತ್ತವೆ. ಆದರೆ ಇದರಿಂದ ಒದಗುವ ಲಾಭವು ಬೇರೆಯವರ ಪಾಲಾಗುತ್ತದೆ. ಆತ್ಮೀಯರ ಸಹಾಯದಿಂದ ಮಾತ್ರ ಶುಭ ಕಾರ್ಯಗಳನ್ನು ಮಾಡಲು ಸಾಧ್ಯ. ಸ್ವಂತ ಮನೆ ಇದ್ದರೂ ಬೇರೆಡೆ ವಾಸಿಸಬೇಕಾದ ಪ್ರಸಂಗ ಉಂಟಾಗುತ್ತದೆ. ಚಿಕ್ಕ ಕೆಲಸ ಕಾರ್ಯಗಳಿಗೂ ಹೆಚ್ಚಿನ ಪರಿಶ್ರಮದ ಅವಶ್ಯಕತೆ ಇರುತ್ತದೆ. ಎಚ್ಚರದಿಂದ ಕಾರ್ಯ ಯೋಜನೆಗಳನ್ನು ರೂಪಿಸಿ.

ಮಿಥುನ ರಾಶಿ: ಉತ್ತಮ ಆದಾಯವಿದ್ದರೂ ಹಣದ ಕೊರತೆ

ಏಪ್ರಿಲ್ ಅಂತ್ಯದವರೆಗೂ ಗುರುವು ಶುಭದಾಯಕನಾಗಿರುತ್ತಾನೆ. ರಾಹುವು ಮಧ್ಯಮ ಗತಿಯ ಫಲಗಳನ್ನು ನೀಡಲಿದ್ದಾನೆ. ಆದರೆ ಶನಿಯು ಕುಂಭದಲ್ಲಿ ಇರುವ ಕಾರಣ ನಿಧಾನವಾಗಿ ಶುಭಫಲಗಳು ದೊರೆಯಲಿವೆ. ಕುಟುಂಬದಲ್ಲಿ ಕೆಲವು ಧಾರ್ಮಿಕ ಕಾರ್ಯ ವಿಧಿಗಳನ್ನು ಆಚರಿಸುವಿರಿ. ಉತ್ತಮ ಆದಾಯವಿದ್ದರೂ ಹಣದ ಕೊರತೆ ಉಂಟಾಗಬಹುದು. ನಿಧಾನಗತಿಯಲ್ಲಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಕುಟುಂಬದಲ್ಲಿ ಪರಸ್ಪರ ಇರುವ ಹೊಂದಾಣಿಕೆಯ ಗುಣ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಕೇವಲ ಹೆಚ್ಚಿನ ಪರಿಶ್ರಮದಿಂದ ಮಾತ್ರ ಕೆಲಸ ಕಾರ್ಯಗಳಲ್ಲಿ ಯಶಸ್ಸು ಗಳಿಸಲು ಸಾಧ್ಯ. ನಿಮ್ಮ ಅಧೀನದಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರು ನಿಮ್ಮ ಜೀವನವನ್ನು ರೂಪಿಸುತ್ತಾರೆ. ಅವರ ಸಹಾಯ, ಸಹಕಾರವಿಲ್ಲದೆ ಯಾವುದೇ ಕೆಲಸವನ್ನು ಸಾಧಿಸಲಾರಿರಿ. ನಿಮ್ಮಿಂದ ಸಹಾಯ ಪಡೆದ ಬಂದು ವರ್ಗದವರು ನಿಮ್ಮಿಂದ ದೂರ ಉಳಿಯುತ್ತಾರೆ. ಯೋಜಿತ ರೀತಿಯಲ್ಲಿ ಪ್ರಯಾಣ ಮಾಡಲು ಸಾಧ್ಯವಾಗುವುದಿಲ್ಲ. ಉತ್ತಮ ಕಾರ್ಯ ಯೋಜನೆಯಿಂದ ಪ್ರವಾಸಗಳಿಗೆ ತೆರಳಬಹುದು. ಆದರೂ ದೀರ್ಘ ಕಾಲದ ಪ್ರವಾಸ ಸಾಧ್ಯವಾಗದು. ದುಡುಕಿ ಹಣವನ್ನು ಖರ್ಚು ಮಾಡುವ ಕಾರಣ ಹಣದ ಕೊರತೆ ಕಂಡುಬರುತ್ತದೆ. ಒಟ್ಟಾರೆ ನಿಮ್ಮ ಜೀವನಕ್ಕೆ ನೀವೇ ಶಿಲ್ಪಿಗಳಾಗಬೇಕು. ಯಾರಿಂದಲೂ ಹಣದ ವಿಚಾರದಲ್ಲಿ ಸಹಕಾರ ನಿರೀಕ್ಷಿಸದಿರಿ.

ಕಟಕ ರಾಶಿ: ಪ್ರಯತ್ನಕ್ಕೆ ತಕ್ಕ ಪ್ರತಿಫಲ

ಮೇ 1ರಿಂದ ಗುರುವು ಕಟಕ ರಾಶಿಗೆ ಶುಭದಾಯಕನಾಗುತ್ತಾನೆ. ಆದರೆ ಶನಿ ಮತ್ತು ರಾಹು ಗ್ರಹಗಳು ಅಶುಭ ಫಲಗಳನ್ನು ನೀಡುತ್ತಾರೆ. ಮೂರರಲ್ಲಿರುವ ಕೇತುವು ಪ್ರಯತ್ನಕ್ಕೆ ತಕ್ಕಂತಹ ಫಲಗಳನ್ನು ನೀಡುತ್ತಾನೆ. ಈ ಕಾರಣದಿಂದ ಗೆಲುವಿಗಾಗಿ ಹೋರಾಡಬೇಕಾದ ಪರಿಸ್ಥಿತಿ ಬರಬಹುದು. ಅನವಶ್ಯಕ ಖರ್ಚುಗಳಿಂದ ಮನದ ಶಾಂತಿಯು ಕಡಿಮೆಯಾಗುತ್ತದೆ. ಉತ್ತಮ ಆದಾಯವಿರುತ್ತದೆ. ಆದರೆ ಉಳಿಸಬೇಕೆಂಬ ಮನಸ್ಸು ಇರುವುದಿಲ್ಲ. ಕುಟುಂಬದವರಿಂದ ಉತ್ತಮ ಸಹಕಾರ ದೊರೆಯುವುದಿಲ್ಲ. ಇದರಿಂದಾಗಿ ಸ್ವಪ್ರಯತ್ನದಿಂದ ಮಾತ್ರ ಕೆಲಸ ಕಾರ್ಯಗಳಲ್ಲಿ ಯಶಸ್ಸು ಗಳಿಸುವಿರಿ. ಪ್ರಯೋಜನವಿಲ್ಲದ ಓಡಾಟ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಉತ್ತಮ ಆದಾಯವಿದ್ದರೂ ಹಣದ ಕೊರತೆ ಕಂಡು ಬರುತ್ತದೆ. ನೆರೆಹೊರೆಯವರೊಂದಿಗೆ ಮನಸ್ತಾಪ ಉಂಟಾಗುತ್ತದೆ. ಮನೆಯಲ್ಲಿರುವ ದುಗುಡದಿಂದ ಹೊರಬರಲು ಪುಣ್ಯ ಸ್ಥಳಗಳಿಗೆ ಭೇಟಿ ನೀಡುವಿರಿ. ಮೇ ತಿಂಗಳ ನಂತರ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ಹಣಕಾಸಿನ ಪರಿಸ್ಥಿತಿಯು ಕ್ರಮೇಣವಾಗಿ ಸುಧಾರಿಸುತ್ತದೆ. ವಾಹನಗಳಿಂದ ತೊಂದರೆ ಉಂಟಾಗುವ ಸಾಧ್ಯತೆಗಳಿವೆ. ಕಬ್ಬಿಣ ಅಥವಾ ಇತರ ಲೋಹಗಳ ಜೊತೆಯಲ್ಲಿ ಕೆಲಸ ಮಾಡುವ ವೇಳೆ ಎಚ್ಚರಿಕೆ ವಹಿಸಿ. ಸೋಂಕಿನ ಬಗ್ಗೆ ಎಚ್ಚರಿಕೆ. ಇರಲಿ ಕುಟುಂಬದ ಹಿರಿಯರ ಆರೋಗ್ಯದಲ್ಲಿ ಸ್ಥಿರತೆ ಇರುವುದಿಲ್ಲ.

ಸಿಂಹ ರಾಶಿ: ವಾಹನ ಚಾಲನೆ ವೇಳೆ ಎಚ್ಚರಿಕೆ ಇರಲಿ

ಏಪ್ರಿಲ್ ಅಂತ್ಯದವರೆಗೂ ಗುರುವು ಶುಭ ಫಲಗಳನ್ನು ನೀಡುತ್ತಾನೆ. ಶನಿಯು ಸಪ್ತಮದಲ್ಲಿದ್ದರೂ ತೊಂದರೆ ಇರುವುದಿಲ್ಲ. ಆದರೆ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗಲಿವೆ. ರಾಹು ಮತ್ತು ಕೇತು ಗ್ರಹಗಳು ಅಶುಭ ಸ್ಥಾನದಲ್ಲಿ ಸಂಚರಿಸುತ್ತವೆ. ಇದರಿಂದ ಕೇವಲ ಮಿಶ್ರಫಲಗಳು ದೊರೆಯುತ್ತವೆ. ದುಡುಕುತನದಿಂದ ಮಾತನಾಡುವ ಕಾರಣ ತೊಂದರೆಗೆ ಸಿಲುಕುವಿರಿ. ದಿಢೀರನೆ ಆರೋಗ್ಯದಲ್ಲಿ ತೊಂದರೆ ಕಂಡುಬರಬಹುದು. ಮುಂಜಾಗರೂಕತೆಯಿಂದ ಇರುವುದು ಬಹು ಮುಖ್ಯ. ಕುಟುಂಬದಲ್ಲಿ ಒಳ್ಳೆಯ ವಾತಾವರಣವಿರುತ್ತದೆ. ಉತ್ತಮ ಸಹಕಾರ ದೊರೆಯದ ಕಾರಣ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ಕುಟುಂಬದಲ್ಲಿನ ಹಿರಿಯ ಮಗ ಅಥವಾ ಹಿರಿಯ ಮಗಳಿಂದ ಎದುರಾಗುವ ಕಷ್ಟನಷ್ಟಗಳು ಕಡಿಮೆಯಾಗಲಿವೆ. ಸಹನೆಯಿಂದ ವರ್ತಿಸಿದರೆ ಮಾತ್ರ ಮಾಡಿದ ಪ್ರಯತ್ನಕ್ಕೆ ತಕ್ಕಂತೆ ಉತ್ತಮ ಫಲಗಳನ್ನು ಪಡೆಯುವಿರಿ. ಹಣಕಾಸಿನ ಕೊರತೆ ಕಂಡು ಬರುವುದಿಲ್ಲ. ಹಿರಿಯ ಅಧಿಕಾರಿಗಳು ಅನವಶ್ಯಕರಿಗೆ ಕಿರಿಕಿರಿಗೆ ಉಂಟು ಮಾಡುತ್ತಾರೆ. ಕಾನೂನು ಪತ್ರಿಕೆಯಲ್ಲಿ ಭಾಗಶಃ ಉತ್ತಮ ಫಲಿತಾಂಶಗಳನ್ನು ಪಡೆಯವಿರಿ. ಚಿಕ್ಕಮಕ್ಕಳಿಗೆ ತಲೆಗೆ ಪೆಟ್ಟು ಬೀಳುವ ಸಾಧ್ಯತೆ ಇದೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ವಹಿಸಬೇಕು.

ಕನ್ಯಾ ರಾಶಿ: ದೂರದ ಸಂಬಂಧಿಕರ ಸಹಕಾರ

ಏಪ್ರಿಲ್ ತಿಂಗಳವರೆಗೂ ಗುರುವಿನಿಂದ ಶುಭ ಫಲಗಳು ದೊರೆಯುವುದಿಲ್ಲ. ಶನಿಯು ಆರನೇ ಭಾವದಲ್ಲಿ ಇದ್ದರೂ ಶುಭ ಫಲಗಳನ್ನು ನೀಡಲಿದ್ದಾನೆ. ಲಗ್ನದಲ್ಲಿರುವ ಕೇತುವು ಅಶುಭನಾದರೂ ಸಪ್ತಮದಲ್ಲಿರುವ ರಾಹುವು ಶುಭಕಾರಕನಾಗುತ್ತಾನೆ. ಆದ್ದರಿಂದ ಆರಂಭದಲ್ಲಿ ಮಿಶ್ರಫಲಗಳಿದ್ದರೂ ಕ್ರಮೇಣವಾಗಿ ಶುಭ ಫಲಗಳು ದೊರೆಯಲಿವೆ. ಉದ್ಯೋಗದಲ್ಲಿ ನಿರೀಕ್ಷಿತ ಮಟ್ಟದ ಪ್ರಗತಿ ಕಂಡುಬರುತ್ತದೆ. ಹಿರಿಯ ಅಧಿಕಾರಿಗಳ ಜೊತೆಯಲ್ಲಿ ಉತ್ತಮ ಒಡನಾಟವಿರುತ್ತದೆ. ಇದರಿಂದ ನಿಮ್ಮ ನಿರೀಕ್ಷೆಗಳೆಲ್ಲ ಕಾರ್ಯರೂಪಕ್ಕೆ ಬರಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ದೂರದ ಸಂಬಂಧಿಕರ ಸಹಕಾರ ದೊರೆಯುವ ಕಾರಣ ಉತ್ತಮ ಆದಾಯವಿರುತ್ತದೆ. ಹೆಚ್ಚಿನ ಪರಿಶ್ರಮವಿಲ್ಲದೆ ತಮ್ಮ ಗುರಿ ತಲುಪಬಹುದು. ಸ್ವಂತ ಉದ್ಯಮ ಇದ್ದಲ್ಲಿ ಹೆಚ್ಚಿನ ಆದಾಯವಿರುತ್ತದೆ. ಅನವಶ್ಯಕವಾಗಿ ತೆಗೆದುಕೊಂಡ ತೀರ್ಮಾನಗಳನ್ನು ಬದಲಾಯಿಸುವಿರಿ. ಈ ಕಾರಣದಿಂದ ಹಿನ್ನಡೆ ಉಂಟಾಗಬಹುದು. ಎಚ್ಚರಿಕೆಯಿಂದ ಮುಖ್ಯ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಅನವಶ್ಯಕವಾಗಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಬೇರೆಯವರ ಸಹಾಯ ಸಹಕಾರವಿಲ್ಲದೆ ಯಾವುದೇ ಕೆಲಸವನ್ನು ಮಾಡಲಾರಿರಿ. ಕಾನೂನು ಪ್ರಕ್ರಿಯೆಯಲ್ಲಿ ಮಾತ್ರ ನಿಮಗೆ ಸುಲಭದ ಯಶಸ್ಸು ದೊರೆಯಲಿದೆ. ಪರಸ್ಪರ ಮಾತುಕತೆಯಿಂದ ಬಹುದಿನದ ಹಿಂದಿನ ಹಣಕಾಸಿನ ವಿವಾದವು ಕೊನೆಗೊಳ್ಳಲಿದೆ. ಬೇರೆಯವರನ್ನು ದೂಷಿಸದೆ ಬುದ್ದಿವಂತಿಕೆಯಿಂದ ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳುವಿರಿ.

ತುಲಾ ರಾಶಿ: ಅನವಶ್ಯಕ ಖರ್ಚುಗಳಿಗೆ ಕಡಿವಾಣ ಇರಲಿ

ಗುರು ಸಪ್ತಮದಲ್ಲಿ ಏಪ್ರಿಲ್ ಅಂತ್ಯದವರೆಗೂ ಸಂಚರಿಸುತ್ತಾನೆ. ಈ ಅವಧಿಯಲ್ಲಿ ಶುಭಫಲಗಳು ಅಧಿಕವಾಗಿರುತ್ತವೆ. ಪಂಚಮದಲ್ಲಿರುವ ಶನಿ, ಆರನೇ ಭಾವದಲ್ಲಿರುವ ರಾಹು ಉತ್ತಮ ಫಲಗಳನ್ನು ನೀಡಲಿದ್ದಾರೆ. ಆದರೆ ಕೇತುವು ಅನವಶ್ಯಕ ಖರ್ಚು ವೆಚ್ಚಗಳಿಗೆ ಕಾರಣನಾಗುತ್ತಾನೆ. ಅವಸರದ ನಿರ್ಧಾರದಿಂದ ತೊಂದರೆಯನ್ನು ಬರಮಾಡಿಕೊಳ್ಳುವಿರಿ. ಮೇ ತಿಂಗಳ ಆರಂಭದವರೆಗೂ ಉತ್ತಮ ಆದಾಯವಿರುತ್ತದೆ. ಆನಂತರ ಕೇವಲ ಹೆಚ್ಚಿನ ಪರಿಶ್ರಮದಿಂದ ಹಣ ಗಳಿಸುವಿರಿ. ಕುಟುಂಬದಲ್ಲಿನ ಮಂಗಳ ಕಾರ್ಯವನ್ನು ಮುಂದೂಡೂವಿರಿ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಕಾಣಬಹುದು. ನಿಮ್ಮ ಮನಸ್ಸಿಗೆ ಒಪ್ಪುವ ಒಡವೆ ವಸ್ತುಗಳನ್ನು ಕೊಳ್ಳುವಿರಿ. ಬಂಧು ವರ್ಗದವರು ಮತ್ತು ಸ್ನೇಹಿತರು ಉತ್ತಮ ಸಹಾಯ ಸಹಕಾರ ನೀಡುತ್ತಾರೆ. ಪ್ರವಾಸ ಮಾಡುವುದಂದರೆ ಬಲು ಪ್ರೀತಿ. ಸ್ವಂತ ಕೆಲಸ ಕಾರ್ಯಾಗಳಿಗಾಗಿ ಹೆಚ್ಚಿನ ಓಡಾಟವಿರುತ್ತದೆ. ವೆಚ್ಚಗಳು ಮಿತಿಮೀರಬಹುದು. ಕೇವಲ ಕುಟುಂಬದಲ್ಲಿ ಮಾತ್ರವಲ್ಲದೆ ಹೊರಗಿನ ಸಮಾಜದಲ್ಲಿಯೂ ಗೌರವ ಸ್ಥಾನಮಾನ ಗಳಿಸುವಿರಿ. ಮನದಲ್ಲಿರುವ ಚಿಂತೆಯನ್ನು ಮರೆತು ವ್ಯಾಪಾರ ವ್ಯವಹಾರಗಳಲ್ಲಿ ಲಾಭ ಗಳಿಸುವಿರಿ. ಆತ್ಮೀಯರೊಬ್ಬರು ನಿಮ್ಮ ವಿರೋಧಿಯಾಗಿ ಮಾರ್ಪಡುತ್ತಾರೆ. ಸುಲಭವಾಗಿ ಯಾರನ್ನು ನಂಬುವುದಿಲ್ಲ. ಸಮಯದ ಅಭಾವದಿಂದ ಸ್ವಂತ ಕೆಲಸ ಕಾಯಗಳು ಅಪೂರ್ಣಗೊಳ್ಳಬಹುದು.

ವೃಶ್ಚಿಕ ರಾಶಿ: ಬಗೆಹರಿಯಲಿದೆ ವಿವಾದ, ದೊರಕಲಿದೆ ನೆರವು

ವೃಶ್ಚಿಕ ರಾಶಿಯವರಿಗೆ ಮೇ 1ರಿಂದ ಗುರುವು ಉತ್ತಮ ಸ್ಥಾನಕ್ಕೆ ಬರಲಿದ್ದಾನೆ. ಅಲ್ಲಿಯವರೆಗೂ ಇದ್ದ ಕಷ್ಟನಷ್ಟಗಳು ಅಡ್ಡಿಆತಂಕಗಳು, ಕ್ಷಣಾರ್ಧದಲ್ಲಿ ಮರೆಯಾಗುತ್ತವೆ. ಮಕ್ಕಳ ವಿಚಾರವಾಗಿ ಅನವಶ್ಯಕ ಗೊಂದಲಗಳು ಇರುತ್ತವೆ. ಕೆಲವೊಮ್ಮೆ ನಿಮ್ಮ ನಿರೀಕ್ಷೆಯನ್ನು ಹುಸಿ ಮಾಡುತ್ತಾರೆ. ಕುಟುಂಬದಲ್ಲಿನ ವಿವಾದವೊಂದು ಮರೆಯಾಗುತ್ತದೆ. ಹಿರಿಯರ ಸಹಾಯ ಸಹಕಾರ ಹೊಸ ಜೀವನಕ್ಕೆ ನಾಂದಿಯಾಗಲಿದೆ. ಬಲು ಸುಲಭವಾಗಿ ಬೇರೆಯವರ ಪ್ರಭಾವಕ್ಕೆ ಒಳಪಡುವಿರಿ. ಅನವಶ್ಯಕವಾಗಿ ಮಾನಸಿಕ ಒತ್ತಡವಿರುತ್ತದೆ. ಸೋದರಿ ಮತ್ತು ಹೆಣ್ಣು ಮಕ್ಕಳ ನಡುವೆ ಅನಾವಶ್ಯಕ ಮನಸ್ತಾಪ ಮೂಡಲಿದೆ. ನಡೆಯದೆ ಹೋಗಿದ್ದ ಶುಭ ಕಾರ್ಯವನ್ನು ಮೇ ನಂತರ ಯಶಸ್ವಿಯಾಗಿ ನಡೆಸಿಕೊಡುವಿರಿ. ನಿಮ್ಮ ಮಾತಿಗೆ ಕುಟುಂಬ ಮತ್ತು ಸಮಾಜದಲ್ಲಿ ಉನ್ನತ ಗೌರವ ಲಭಿಸಲಿದೆ. ವಿದ್ಯಾಭ್ಯಾಸಕ್ಕೆಂದು ವಿದೇಶಕ್ಕೆ ತೆರಳುವ ಆಸೆ ಇದ್ದರೆ ಉತ್ತಮ ಅವಕಾಶವನ್ನು ದೊರೆಯಲಿದೆ. ನಿಮ್ಮದಲ್ಲದ ತಪ್ಪಿಗೆ ದಂಡ ತೆರಬೇಕಾಗಬಹುದು. ಆರೋಗ್ಯದಲ್ಲಿ ಕ್ರಮೇಣ ಚೇತರಿಕೆ ಕಂಡು ಬರುತ್ತದೆ. ದಿನ ಕಳೆದಂತೆ ಉದ್ಯೋಗದಲ್ಲಿದ್ದ ತೊಂದರೆಯೂ ಮರೆಯಾಗಲಿದೆ. ನಿಮ್ಮಿಂದ ದೂರವಾಗಿದ್ದ ಅಧಿಕಾರಿಯೊಬ್ಬರು ಭಿನ್ನಾಭಿಪ್ರಾಯ ಮರೆತು ನಿಮಗೆ ಸಹಾಯ ಮಾಡುತ್ತಾರೆ.

ಧನಸ್ಸು ರಾಶಿ: ನಿಧಾನಗತಿಯ ಪ್ರಗತಿಯಿದ್ದರೂ ಉಂಟಾಗದು ಹಿನ್ನಡೆ

ಗುರುವು ಪಂಚಮ ಭಾವದಲ್ಲಿ ಏಪ್ರಿಲ್ ತಿಂಗಳವರೆಗೂ ಸಂಚರಿಸುತ್ತಾನೆ. ಶನಿಯು ಮೂರನೆಯ ಮನೆಯಲ್ಲಿ ಸಬಲನಾಗಿದ್ದಾನೆ. ಆದರೆ ರಾಹು ಕೇತುಗಳು ಮಾತ್ರ ನಿಮಗೆ ಅಶುಭ ಫಲಗಳನ್ನು ನೀಡುತ್ತಾರೆ. ಏಪ್ರಿಲ್ ತಿಂಗಳವರೆಗೂ ಕೈ ಹಾಕಿದ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿಯೂ ಸುಲಭದ ರೀತಿಯಲ್ಲಿ ಯಶಸ್ಸನ್ನು ಗಳಿಸುವಿರಿ. ಮೇ ತಿಂಗಳ ಒಂದರಿಂದ ಗುರು ಅಶುಭನಾದರು ಯಾವುದೇ ರೀತಿಯ ಹಿನ್ನಡೆ ಉಂಟಾಗುವುದಿಲ್ಲ. ಆದರೆ ಪ್ರತಿಯೊಂದು ಕೆಲಸ ಕಾರ್ಯಗಳಿಗೂ ಕುಟುಂಬದ ಸದಸ್ಯರ ಸಹಾಯ ಸಹಕಾರ ಬೇಕಾಗುತ್ತದೆ. ಸತತ ಪರಿಶ್ರಮವಿದ್ದರೂ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತವೆ. ಕುಟುಂಬದಲ್ಲಿನ ಎಲ್ಲರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ತೆಗೆದುಕೊಂಡ ತೀರ್ಮಾನಗಳನ್ನು ಅನವಶ್ಯಕವಾಗಿ ಬದಲಾಯಿಸಿದರೆ ತೊಂದರೆ ಖಚಿತ. ಸ್ನೇಹಿತರು ಮತ್ತು ಹತ್ತಿರದ ಬಂಧುಗಳಿಂದ ಪ್ರತಿಯೊಂದು ವಿಚಾರದಲ್ಲಿಯೂ ಉತ್ತಮ ಸಹಾಯ ಸಹಕಾರ ದೊರೆಯುತ್ತದೆ. ಶನಿಯು ಶಕ್ತನಾಗಿ ಇರುವ ಕಾರಣ ಯಾವುದೇ ಕೆಲಸವಾದರೂ ಗೆಲ್ಲುವವರೆಗೂ ವಿಶ್ರಮಿಸುವುದಿಲ್ಲ. ಸ್ವಂತ ಬಳಕೆಗಾಗಿ ಹೊಸ ವಾಹನಗಳನ್ನು ಕೊಳ್ಳುವಿರಿ. ಎಲ್ಲರೊಂದಿಗೆ ಯಾತ್ರಾ ಸ್ಥಳಕ್ಕೆ ಪ್ರವಾಸಕ್ಕೆ ತೆರಳುವಿರಿ. ಮಕ್ಕಳೊಂದಿಗೆ ಮನಸ್ತಾಪ ಉಂಟಾದರೂ ಮಾತುಕತೆಯಿಂದ ಪರಿಹಾರಗೊಳ್ಳಲಿದೆ. ಮನಸೆಳೆಯುವ ಮಾತುಕತೆಯಿಂದ ನಿಮ್ಮ ನೆಚ್ಚಿನ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ.

ಮಕರ ರಾಶಿ: ಪೂರ್ಣಗೊಳ್ಳಲಿವೆ ಬಹುದಿನದಿಂದ ಬಾಕಿಯಿದ್ದ ಕೆಲಸ

ಗುರುವು ನಾಲ್ಕನೇ ಮನೆಯಲ್ಲಿ ಸಂಚರಿಸುತ್ತಿದ್ದಾನೆ. ಶನಿಯು ದ್ವಿತೀಯ ಭಾಗದಲ್ಲಿ ಶಕ್ತಿಶಾಲಿಯಾಗಿದ್ದಾನೆ. ರಾಹುವು ಮೂರನೇ ಮನೆಯಲ್ಲಿದ್ದು ಶುಭ ಫಲಗಳನ್ನು ನೀಡಲಿದ್ದಾನೆ. ಆದರೆ ಕೇತುವು ಕೆಲಸ ಕಾರ್ಯಗಳಲ್ಲಿ ನಿರ್ದಿಷ್ಟ ಮಟ್ಟದ ಫಲಿತಾಂಶ ದೊರೆಯಲು ಬಿಡುವುದಿಲ್ಲ. ಆದರೂ ಯಾವುದೇ ತೊಂದರೆ ಕಂಡುಬರುವುದಿಲ್ಲ. ಮೇ ಒಂದರಂದು ಗುರುವು ಪಂಚಮ ಭಾವಕ್ಕೆ ಬಂದ ನಂತರ ಎಲ್ಲಾ ರೀತಿಯ ಅನುಕೂಲಗಳು ಕಂಡುಬರುತ್ತವೆ. ಗೆಲ್ಲಲೇಬೇಕಂಬ ಛಲದಿಂದ ಮುಂದುವರೆಯುವಿರಿ. ಆದರೆ ಅತಿಯಾದ ಆತ್ಮವಿಶ್ವಾಸದಿಂದ ತಪ್ಪು ಮಾಡಬಹುದಾದ ಸಂಭವವಿದೆ. ಆದ್ದರಿಂದ ಶಾಂತಿ ಸಂಯಮದಿಂದ ವರ್ತಿಸುವುದು ಮುಖ್ಯ. ಅಪೂರ್ಣವಾಗಿದ್ದ ಕೆಲಸ ಕಾರ್ಯಗಳನ್ನು ಸುಲಭವಾಗಿ ಪೂರ್ಣಗೊಳಿಸುವಿರಿ. ಉದ್ಯೋಗದಲ್ಲಿ ನಿಮ್ಮ ನಿರೀಕ್ಷೆಯಂತೆ ಗೌರವಯುತ ಸ್ಥಾನಮಾನ ದೊರೆಯಲಿದೆ. ಖರ್ಚುಗಳು ಕ್ರಮೇಣ ಕಡಿಮೆಯಾಗುತ್ತದೆ. ಬಹುದಿನದಿಂದ ನಿಂತಿದ್ದ ಕೆಲಸಗಳು ಸಂಪೂರ್ಣಗೊಳ್ಳಲಿವೆ. ಆದರೆ ತಂದೆಯ ಆದಾಯದಲ್ಲಿ ತೊಂದರೆ ಇರುತ್ತದೆ. ಕುಟುಂಬದ ಹಿರಿಯರ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಧಾರ್ಮಿಕ ಕಾರ್ಯಗಳ ಮುಂದಾಳತ್ವ ವಹಿಸುವಿರಿ. ಜನಸೇವೆ ಮಾಡುವ ಆಶಯವಿದ್ದಲ್ಲಿ ಅಪರೂಪದ ಅವಕಾಶ ದೊರೆಯಲಿದೆ. ಎಚ್ಚರ ತಪ್ಪಿ ನಡೆದರೆ ಕೆಲಸಗಳಲ್ಲಿ ತೊಂದರೆ ಉಂಟಾಗಲಿದೆ.

ಕುಂಭ ರಾಶಿ: ಸಹಾಯ ಮಾಡಲು ಬಂದವರನ್ನು ಅನುಮಾನದಲ್ಲಿ ನೋಡದಿರಿ

ಶನಿಯು ನಿಮ್ಮದೇ ರಾಶಿಯಲ್ಲಿದ್ದರೂ ಯಾವುದೇ ತೊಂದರೆ ನೀಡುವುದಿಲ್ಲ. ರಾಹು ದ್ವಿತೀಯದಲ್ಲಿ ಇದ್ದರೂ ತೊಂದರೆಬಾರದು. ಆದರೆ ಮಾತಿನ ಮೇಲೆ ಹಿಡಿತವಿರಬೇಕು. ಗುರು ತೃತೀಯದಲ್ಲಿ ಇದ್ದು ಮೇ ಒಂದರಂದು ಚತುರ್ಥ ಭಾವದಲ್ಲಿ ಸಂಚರಿಸಲು ಆರಂಭಿಸುತ್ತಾನೆ. ಆದರೆ ಎಂಟನೇ ಮನೆಯಲ್ಲಿರುವ ಕೇತು ಅಲ್ಪ ಪ್ರಮಾಣದ ತೊಂದರೆಗೆ ಕಾರಣನಾಗುತ್ತಾನೆ. ಮನ ಬಿಚ್ಚಿ ನಿಮ್ಮ ಮನದ ಭಾವನೆಗಳನ್ನು ಹಂಚಿಕೊಂಡರೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ನಿಮಗೆ ಸಹಾಯ ಮಾಡಲು ಬಂದವರನ್ನು ಅನುಮಾನದ ದೃಷ್ಟಿಯಿಂದ ನೋಡುವಿರಿ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಇದ್ದರೆ ಅಸಾಧ್ಯ ಎಂಬ ವಿಚಾರವೇ ಇರುವುದಿಲ್ಲ. ಬಂಧು-ಬಳಗದವರ ಜೊತೆ ಅನವಶ್ಯಕವಾಗಿ ವಾದ ವಿವಾದದಲ್ಲಿ ತೊಡಗುವಿರಿ. ಆರೋಗ್ಯದಲ್ಲಿ ತೊಂದರೆ ಇರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯ ದೊರೆಯಲಿದೆ. ಆದರೆ ಹಣವನ್ನು ಉಳಿಸಲು ವಿಫಲರಾಗುವಿರಿ. ಉದ್ಯೋಗದಲ್ಲಿ ಅನವಶ್ಯಕ ಬದಲಾವಣೆಗಳು ಎದುರಾಗಿ ಉದ್ಯೋಗ ಬದಲಾಯಿಸುವಿರಿ. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಬಲ್ಲರು. ಮಾತಿನಿಂದ ಎಲ್ಲರ ಮನಸ್ಸನ್ನು ಗೆಲ್ಲಲು ಪ್ರಯತ್ನಿಸಿ. ಉದ್ಯೋಗ ಅಥವಾ ವ್ಯಾಪಾರದ ಸಲುವಾಗಿ ವಿದೇಶಕ್ಕೆ ತೆರಳಬಹುದು. ಸುಳ್ಳು ಹೇಳುವ ಜನರಿಂದ ದೂರವಿರುವುದು ಲೇಸು.

ಮೀನ ರಾಶಿ: ಈ ವರ್ಷ ಹಣಕಾಸು ಅರಾಮು

ಗುರುವು ಕೊನೆಯವರೆಗೂ ದ್ವಿತೀಯ ಭಾವದಲ್ಲಿ ಸಂಚರಿಸುತ್ತಾನೆ. ಆದ್ದರಿಂದ ನಿಮ್ಮ ಮಾತಿಗೆ ಉತ್ತಮ ಗೌರವ ಲಭ್ಯವಾಗುತ್ತದೆ. ಹಣಕಾಸಿನ ತೊಂದರೆ ಕಂಡುಬರುವುದಿಲ್ಲ. ಮೇ ತಿಂಗಳಲ್ಲಿ ಗುರು ದ್ವಿತಿಯ ಭಾವಕ್ಕೆ ಪ್ರವೇಶಿಸುತ್ತಾನೆ. ಆದ್ದರಿಂದ ಸಣ್ಣ ವಿಚಾರಗಳಿಗೂ ಹೆಚ್ಚಿನ ಪ್ರಯತ್ನ ಬೇಕಾಗಲಿದೆ. ರಾಶಿಯಲ್ಲಿಯೇ ರಾಹು ಇರುವ ಕಾರಣ ಪ್ರತಿ ವಿಚಾರಗಳಿಗೆ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಶನಿಯು ದ್ವಾದಶ ಭಾವದಲ್ಲಿ ಇರುವ ಕಾರಣ ಅನಾವಶ್ಯಕ ಖರ್ಚು ವೆಚ್ಚಗಳು ಎದುರಾಗಲಿವೆ. ಕುಟುಂಬದಲ್ಲಿ ಸೌಹಾರ್ದಯುತ ವಾತಾವರಣವಿರುತ್ತದೆ. ಕೆಲಸ ಕಾರ್ಯಗಳಲ್ಲಿ ಉತ್ತಮ ಪ್ರಯತ್ನ ಹೆಚ್ಚಿನ ಶುಭಫಲಗಳಿಗೆ ಕಾರಣವಾಗುತ್ತದೆ. ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಬದಲಾಯಿಸದಿರಿ. ವಿಶ್ವಾಸದಿಂದ ಮಾತ್ರ ಯಶಸ್ಸನ್ನು ಗಳಿಸಲು ಸಾಧ್ಯ. ಸೋದರ ಅಥವಾ ಸೋದರಿಯ ಸಹಾಯದಿಂದ ಸಾಲದ ಬಾಧೆಯಿಂದ ದೂರವಾಗುವಿರಿ. ಉದ್ಯೋಗದಲ್ಲಿ ಆತ್ಮೀಯರ ಸಹಾಯದಿಂದ ಯಶಸ್ಸು ಗಳಿಸುವಿರಿ. ಅನವಶ್ಯಕ ತಿರುಗಾಟ ಬೇಸರ ಮೂಡಿಸುತ್ತದೆ. ಮನೆಯಲ್ಲಿ ನಿಶ್ಚಯವಾದ ಮಂಗಳಕಾರ್ಯವು ನಡೆಯಬೇಕೆಂದರೆ ಧೈರ್ಯದ ಗುಣವನ್ನು ಬೆಳೆಸಿಕೊಳ್ಳಬೇಕು. ಒಟ್ಟಾರೆ ನಿಮಗೆ ದೊರೆಯುವ ಫಲಿತಾಂಶಗಳು ನೀವು ತೆಗೆದುಕೊಳ್ಳುವ ನಿರ್ಧಾರವನ್ನು ಅವಲಂಬಿಸುತ್ತದೆ. ನೀವು ಅತಿಯಾಗಿ ಪ್ರೀತಿಸುವ ವ್ಯಕ್ತಿ ಒಬ್ಬರು ನಿಮ್ಮನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಮನೆಯಲ್ಲಿರುವ ಸ್ತ್ರೀಯರ ಆರೋಗ್ಯದಲ್ಲಿ ಏರಿಳಿತ ಉಂಟಾಗಬಹುದು.

ಸರ್ವೇ ಜನಾಃ ಸುಖಿನೋ ಭವಂತು

ಎಲ್ಲರಿಗೂ ಸುಖ ಸಿಗಲಿ ಎನ್ನುವುದು ಭಾರತೀಯ ಪರಂಪರೆಯ ಅತಿದೊಡ್ಡ ಪ್ರಾರ್ಥನೆ. ಸುಖ ಬಂದಾಗ ಹಿಗ್ಗದೆ, ದುಃಖ ಬಂದಾಗ ಕುಗ್ಗದೆ ನಾವೆಲ್ಲರೂ ಬದುಕು ಎದುರಿಸೋಣ. ನಮಗೆ ಇಂಥ ಶಕ್ತಿಯು ಅಧ್ಯಾತ್ಮದಿಂದ, ದೇವರ ದಯೆಯಿಂದ ಬರುತ್ತದೆ. ಎಲ್ಲರ ಸುಖದಲ್ಲಿ ನಮ್ಮ ಸುಖವೂ ಇದೆ ಎನ್ನುವುದನ್ನು ಅರಿತುಕೊಂಡು ಸಮಾಜಕ್ಕೆ ಒಳಿತಾಗಲಿ ಎಂದು ಚಿಂತನೆ ಮಾಡೋಣ. ಭಾರತೀಯ ಪರಂಪರೆಯಲ್ಲಿ ಯುಗಾದಿಗೆ ತನ್ನದೇ ಆದ ಮಹತ್ವವಿದೆ. ಹಲವು ಒಳಿತುಗಳಿಗೆ ಇದು ಶುಭಾರಂಭವಾಗಲಿ. ಕ್ರೋಧಿನಾಮ ಸಂವತ್ಸರದಲ್ಲಿ ನಿಮ್ಮ ಎಲ್ಲ ಒಳ್ಳೆಯ ಸಂಕಲ್ಪಗಳು ಈಡೇರಲಿ. ಎಲ್ಲರೂ ಇನ್ನಷ್ಟು ಧಾರ್ಮಿಕ ಕಾರ್ಯಗಳನ್ನು ಮಾಡುವಂತಾಗಲಿ, ಮನಸ್ಸಿಗೆ ನೆಮ್ಮದಿ, ಸುಖ ಮತ್ತು ಶಾಂತಿ ಸಿಗಲಿ ಎಂದು ದೇವರಲ್ಲಿ ಯುಗಾದಿ ಹಬ್ಬದ ಶುಭ ಸಂದರ್ಭದಲ್ಲಿ ಪ್ರಾರ್ಥಿಸುತ್ತೇನೆ. ಒಳಿತಿನ ಸಂಕಲ್ಪಕ್ಕೆ, ಮತ್ತೊಬ್ಬರಿಗೆ ಮನಃಪೂರ್ವಕ ಶುಭ ಹಾರೈಸಲು ಯಾವುದೇ ಹಿಂಜರಿಕೆ ಬೇಡ. ಯಾವುದೇ ಕಾರ್ಯ ಕೈಗೂಡಲು ಮನುಷ್ಯ ಪ್ರಯತ್ನವೂ ಬಹಳ ಮುಖ್ಯವಾಗುತ್ತದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ,

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

(Ugadi horoscope 2024 Yugadi Varsha Bhavishya in Kannada. To read more Ugadi related stories please visit kannada.hindustantimes.com )

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.