Birth Date: ಸಂಗಾತಿಯನ್ನು ಮನಸಾರೆ ಪ್ರೀತಿಸುವಿರಿ, ದುಬಾರಿ ವಸ್ತುಗಳನ್ನು ಇಷ್ಟಪಡುವಿರಿ; 8ನೇ ತಾರೀಕು ಹುಟ್ಟಿದವರ ಸ್ವಭಾವ ಹೀಗಿರತ್ತೆ
Birth Date Astrology: 8ನೇ ತಾರೀಕು ಹುಟ್ಟಿದವರ ಗುಣ-ಜೀವನದ ಕುರಿತು ಜ್ಯೋತಿಷಿ ಎಚ್. ಸತೀಶ್ ಅವರು ನೀಡಿದ ಮಾಹಿತಿ ಇಲ್ಲಿದೆ.
ಯಾವುದೇ ತಿಂಗಳ 8ನೇ ತಾರೀಕು ಹುಟ್ಟಿದವರಲ್ಲಿ ವಿಶೇಷವಾದಂತಹ ಬುದ್ಧಿಶಕ್ತಿ ಇರುತ್ತದೆ. ಆದರೆ ತೆಗೆದುಕೊಳ್ಳುವ ತೀರ್ಮಾನಗಳು ಅತಿ ನಿಧಾನ. ಇಷ್ಟಲ್ಲದೆ ಬೇರೆಯವರು ಆಡುವ ಮಾತುಗಳನ್ನು ಅರ್ಥ ಮಾಡಿಕೊಳ್ಳುವುದು ವಿರಳ. ಕುಟುಂಬದವರ ಮತ್ತು ಆತ್ಮೀಯರ ಸಲಹೆ ಸೂಚನೆಗಳನ್ನು ಪಾಲಿಸಿದರೆ ನಿಮ್ಮ ಜೀವನವು ಅನೇಕ ವಿಶೇಷತೆಗಳಿಂದ ಕೂಡಿರುತ್ತದೆ. ನಿಮ್ಮ ಆಕಾಂಕ್ಷೆಗಳೇ ವಿಶೇಷವಾದದ್ದು. ಕೆಲವೊಮ್ಮೆ ನಿಮ್ಮ ಪ್ರೀತಿ-ನೀತಿಗಳು ಹಾಸ್ಯಸ್ಪದವಾಗುತ್ತದೆ. ಅತಿ ಸುಂದರವಾದ ಮತ್ತು ದುಬಾರಿ ಬೆಲೆಯ ವಸ್ತುಗಳನ್ನು ಇಷ್ಟಪಡುವಿರಿ. ಹೆತ್ತವರ ಮೇಲಾಗಲಿ ಅಥವಾ ನಿಮ್ಮ ಮಕ್ಕಳ ಮೇಲಾಗಲಿ ವಿಶೇಷವಾದಂತಹ ಪ್ರೀತಿ, ವಿಶ್ವಾಸ, ವಾತ್ಸಲ್ಯವಿರುತ್ತದೆ. ತಂದೆ ತಾಯಿಗಳನ್ನು ಸಹ ಮಕ್ಕಳಂತೆ ನೋಡಿಕೊಳ್ಳುವಿರಿ. ಆತುರವಿಲ್ಲದೆ ನಿಮಗೆ ಇಷ್ಟ ಎನಿಸುವ ಎಲ್ಲವನ್ನು ಪಡೆಯುವಿರಿ. ದೇವರಲ್ಲಿ ವಿಶೇಷವಾದ ಭಕ್ತಿ ಮತ್ತು ನಂಬಿಕೆ ಇರುತ್ತದೆ. ಆದರೆ ದೇವರ ಮೇಲೆ ಅವಲಂಬಿತರಾಗುವುದಿಲ್ಲ. ನಿಮ್ಮ ಪಾಲಿನ ಕರ್ತವ್ಯವನ್ನು ನಿರ್ವಂಚನೆಯಿಂದ ಮಾಡುವಿರಿ. ತಪ್ಪು ಕೆಲಸಗಳನ್ನು ಮಾಡುವುದು ಬಹಳ ಕಡಿಮೆ. ಹಾಗೆಯೇ ತಪ್ಪು ಮಾಡಿದವರನ್ನು ಕ್ಷಮಿಸುವುದೂ ಇಲ್ಲ. ಕೆಲವೊಮ್ಮೆ ಅತಿಯಾದ ಆತುರದಿಂದ ತೊಂದರೆಯನ್ನು ಅನುಭವಿಸುವಿರಿ. ಸುಲಭವಾಗಿ ಹಣವನ್ನು ಖರ್ಚು ಮಾಡುವುದಿಲ್ಲ. ಕಷ್ಟದಲ್ಲಿ ಇರುವವರಿಗೆ ಹಣದ ಸಹಾಯ ಮಾಡುವಿರಿ. ಆದರೆ ಸಹಾಯದ ಮೊದಲು ನಿಜಾಂಶವನ್ನು ತಿಳಿದುಕೊಳ್ಳುವಿರಿ.
ಸಂಗಾತಿಯನ್ನು ಮನಸಾರೆ ಪ್ರೀತಿಸುವಿರಿ. ಆದರೆ ಯಾವುದೇ ವಿಚಾರದಲ್ಲಿ ರಾಜಿಯಾಗುವುದಿಲ್ಲ. ಅನಾವಶ್ಯಕವಾದ ಖರ್ಚು ವೆಚ್ಚಗಳು ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ. ರುಚಿಕರವಾದ ಊಟ ಮತ್ತು ಸುಖಕರವಾದ ನಿದ್ದೆಯನ್ನು ಎಂದಿಗೂ ತಪ್ಪಿಸಿಕೊಳ್ಳುವುದಿಲ್ಲ. ಸ್ತ್ರೀಯರಿಗೆ ಆರೋಗ್ಯದಲ್ಲಿ ಏರಿಳಿತ ಇರಲಿದೆ. ಕುಟುಂಬದ ಸುಖ ಸಂತೋಷಕ್ಕಾಗಿ ಯಾವುದೇ ತ್ಯಾಗವನ್ನು ಮಾಡುವಿರಿ. ಸ್ತ್ರೀಯರ ಮೇಲೆ ವಿಶೇಷ ಗೌರವವಿರುತ್ತದೆ. ಕ್ಷಮಾ ಗುಣವಿದ್ದರೆ ಸಾಂಸಾರಿಕ ಜೀವನ ಸುಖಮಯವಾಗಿರುತ್ತದೆ. ಬೇರೆಯವರಿಗೆ ಕಷ್ಟವೆನಿಸುವ ಕೆಲಸ ಕಾರ್ಯಗಳು ನಿಮಗೆ ಸುಲಭದ ತುತ್ತಾಗುತ್ತದೆ. ನಿಮ್ಮಲ್ಲಿರುವ ಆತ್ಮಸಾಕ್ಷಿಯು ಅಪಾಯದ ಕೆಲಸಗಳನ್ನುಮಾಡುವಂತೆ ಪ್ರೇರೇಪಿಸುತ್ತದೆ. ಕೈಕಾಲುಗಳಲ್ಲಿ ನಿತ್ರಾಣ ಇರಲಿದೆ. ಉತ್ತಮ ಆಹಾರ ಸೇವನೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಕುಟುಂಬದ ಮೇಲಿನ ಅಕ್ಕರೆಯಿಂದ ವಿದೇಶಕ್ಕೆ ತೆರಳುವ ಅವಕಾಶವನ್ನು ಕಳೆದುಕೊಳ್ಳುವಿರಿ.
ಸ್ವಂತ ಮನೆ ಕಟ್ಟುವ ಅಥವಾ ಕೊಳ್ಳುವ ಆಸೆ ಸುಲಭವಾಗಿ ಈಡೇರುತ್ತದೆ. ಆದರೆ ನಿಮ್ಮ ಬಳಿ ಕೇವಲ ಒಂದು ಮನೆ ಅಥವಾ ಒಂದು ಸ್ಥಿರಾಸ್ತಿ ಮಾತ್ರ ಇರುತ್ತದೆ. ಕೈಯಲ್ಲಿ ಎಷ್ಟೇ ಹಣವಿದ್ದರೂ ಆಸ್ತಿ ವಿಸ್ತರಣೆ ಮಾಡಲು ಸಾಧ್ಯವಾಗುವುದಿಲ್ಲ. ಹಣದ ಕೊರತೆಯನ್ನು ನೀಗಿಸಲು ಸಣ್ಣ ಬಂಡವಾಳದ ವ್ಯಾಪಾರವನ್ನು ಆರಂಭಿಸುವಿರಿ. ಉತ್ತಮ ಹೊಂದಾಣಿಕೆಯ ಗುಣ ನಿಮ್ಮಲ್ಲಿ ಇರುತ್ತದೆ. ಸ್ತ್ರೀಯರು ಹಣಕಾಸಿನ ವಿಚಾರದಲ್ಲಿ ಸುಲಭವಾಗಿ ಮೋಸ ಹೋಗುತ್ತಾರೆ. ಕಷ್ಟಕ್ಕೆಂದು ಸಂಪಾದಿಸಿದ ಹಣವನ್ನು ಮನೆಯ ಖರ್ಚು ವೆಚ್ಚಗಳಿಗೆ ಮೀಸಲಿಡುವಿರಿ.
ವಾಹನ ಚಾಲನೆ ಮಾಡುವವರೇ ಎಚ್ಚರಿಕೆಯಿಂದ ಇರಬೇಕು. ಅನಾರೋಗ್ಯದ ತೊಂದರೆಯಿಂದ ಬಳಲುವಿರಿ. ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪರಿಶ್ರಮವನ್ನು ತೋರಬೇಕು. ಸಹಜವಾಗಿ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿಯೂ ನೇರವಾಗಿ ಅಥವಾ ಪರೋಕ್ಷವಾಗಿ ಬೇರೆಯವರನ್ನು ಆಶ್ರಯಿಸುವಿರಿ. ನಿಮ್ಮ ಸುತ್ತಮುತ್ತಲಿನ ಜನ ನಿಮ್ಮಲ್ಲಿನ ಒಳ್ಳೆಯತನವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಬಹುದು. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆಯಿಂದ ಇರಬೇಕು. ಕುಟುಂಬದ ಸದಸ್ಯರಿಂದ ಉತ್ತಮ ಸಹಾಯ ಮತ್ತು ಸಹಕಾರ ದೊರೆಯುತ್ತದೆ. ಯಾವುದೇ ಕೆಲಸವನ್ನು ಮಾಡಬಲ್ಲರಿ. ಚಿಕ್ಕ ಮಕ್ಕಳ ಜೀವನದಲ್ಲಿ ಅನಾವಶ್ಯಕವಾದ ಅಡ್ಡಿ ಆತಂಕಗಳು ಎದುರಾಗಲಿವೆ. ಆದರೆ ಕ್ರಮೇಣವಾಗಿ ಸುಖ ಜೀವನ ನಡೆಸುವರು. ನರಕ್ಕೆ ಸಂಬಂಧಪಟ್ಟ ದೋಷಗಳು ಅಥವಾ ಉಸಿರಾಟಕ್ಕೆ ಸಂಬಂಧಪಟ್ಟ ದೋಷಗಳು ಕಾಣಬಹುದು. ವೈದ್ಯಕೀಯ ಚಿಕಿತ್ಸೆಯ ಜೊತೆಗೆ ದೈಹಿಕ ವ್ಯಾಯಾಮದ ಅವಶ್ಯಕತೆ ಇರುತ್ತದೆ.
ಪ್ರಾಣಿ ಪಕ್ಷಿಗಳನ್ನು ಕಾಪಾಡುವುದು ಮತ್ತು ಸಲಹುವುದು ಎಂದರೆ ನಿಮಗೆ ಹೆಚ್ಚು ಪ್ರೀತಿ. ಪ್ರಕೃತಿಯನ್ನು ಇಷ್ಟಪಡುವ ಕಾರಣ ನೈಸರ್ಗಿಕ ಸೊಬಗನ್ನು ಸವಿಯಲು ಹಳ್ಳಿಯ ಪ್ರವಾಸ ಕೈಗೊಳ್ಳುವಿರಿ. ಸಮಯ ಕಳೆಯಲು ಆರಂಭಿಸುವ ವ್ಯವಸಾಯ ಜೀವನಕ್ಕೆ ಆಧಾರವಾಗುತ್ತದೆ. ನೆನಪಿನ ಶಕ್ತಿಯು ಕಡಿಮೆ ಇರುವ ಕಾರಣ ಆರಂಭಿಸುವ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವುದು ಒಳ್ಳೆಯದು. ನಿಮ್ಮಿಂದ ಸಹಾಯ ಪಡೆದವರೆ ನಿಮ್ಮಿಂದ ದೂರವಾಗಬಹುದು. ಯಾವುದೇ ಕೆಲಸವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ನಂತರ ಕೆಲಸದಲ್ಲಿ ಮುಂದುವರೆಯಿರಿ. ದುಡುಕುತನದಿಂದ ಹಣ ಸಮಯ ಸಂಬಂಧಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.
ಜ್ಯೋತಿಷಿ: ಎಚ್. ಸತೀಶ್, ಬೆಂಗಳೂರು
ಮೊಬೈಲ್: 8546865832
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)
ವಿಭಾಗ