Cyber Fraud: ಒಟಿಪಿ ವಂಚನೆ ತಡೆಯುವುದು ಹೇಗೆ; ಬ್ಯಾಂಕ್ ಖಾತೆಯಲ್ಲಿ ಹಣ ಸುರಕ್ಷಿತವಾಗಿರಲು ಈ ಟಿಪ್ಸ್ ಅನುಸರಿಸಿ
ಇತ್ತೀಚಿನ ದಿನಗಳಲ್ಲಿ ಭದ್ರತೆಯ ದೃಷ್ಟಿಯಿಂದ ಡಿಜಿಟಲ್ ಹಣಕಾಸಿನ ವಹಿವಾಟುಗಳಿಗೆ ಬಳಸುವ ಒಟಿಪಿ ಜನಪ್ರಿಯವಾಗಿದೆ. ಆದರೆ ಇದನ್ನೇ ಬಂಡವಾಳನ್ನಾಗಿಸಿಕೊಳ್ಳುತ್ತಿರುವ ಸೈಬರ್ ವಂಚಕರು ಗ್ರಾಕರನ್ನು ವಂಚಿಸುತ್ತಿದ್ದಾರೆ. ಹಾಗಾದರೆ ಒಟಿಪಿ ವಂಚನೆಯನ್ನು ತಡೆಯುವುದು? ಯಾವ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು? ಇಲ್ಲಿದೆ ಮಾಹಿತಿ.
ಮೊಬೈಲ್ ರಿಂಗ್ ಆಯಿತು. ರಿಸೀವ್ ಮಾಡಿದಾಗ, ‘ನಾವು ಬ್ಯಾಂಕ್‌ನಿಂದ ಮಾತನಾಡುತ್ತಿದ್ದೇವೆ. ನಿಮ್ಮ ಹೆಸರು ರಾಧಮ್ಮ ಅಲ್ವಾ... ನಿಮ್ಮ ಡೆಬಿಟ್ ಕಾರ್ಡ್ ವ್ಯಾಲಿಡಿಟಿ ಮುಗಿದಿದೆ. ನಿಮ್ಮ ಡೆಬಿಡ್ ಕಾರ್ಡ್ ಅನ್ನು ಇಂದೇ ನವೀಕರಿಸಿಕೊಳ್ಳಬೇಕು, ಇಲ್ಲದಿದ್ದರೆ ನಿಮ್ಮ ಬ್ಯಾಂಕ್ ಖಾತೆ ರದ್ದಾಗುತ್ತದೆ. ನಿಮ್ಮ ಮೊಬೈಲ್‌ಗೆ ಒಂದು ಒಟಿಪಿ ಬರುತ್ತೆ ಆ ಒಟಿಪಿ ಸಂಖ್ಯೆಯನ್ನು ಹೇಳಿದರೆ ಸಾಕು ನಾವು ನಿಮ್ಮ ಡೆಬಿಟ್ ಕಾರ್ಡ್ ಅನ್ನು ರಿನ್ಯುವಲ್ ಮಾಡ್ತೇವೆ. ಆಗ ನಿಮ್ಮ ಬ್ಯಾಂಕ್ ಖಾತೆ ರದ್ದಾಗುವುದಿಲ್ಲ’ ಎಂಬ ಮಾತು ಕೇಳಿಸಿತು. ಯಾಮಾರಿದ ರಾಧಮ್ಮ ಒಟಿಪಿ ಹೇಳಿದ್ದೇ ತಡ, ಖಾತೆಯಲ್ಲಿದ್ದ ಹಣ ಮಾಯ! ಇದು ಸೈಬರ್ ವಂಚಕರು ಗ್ರಾಹಕರನ್ನು ಮೋಸ ಮಾಡುವ ಪರಿ.
ಬ್ಯಾಂಕಿಂಗ್ ವಲಯ ಡಿಜಿಟಲ್ ಆದ ಬಳಿಕ ತುಂಬಾ ಅನುಕೂಲವಾಗಿದೆ. ಆದರೆ ಅಷ್ಟೇ ಅನಾನುಕೂಲವೂ ಇದೆ ಎಂಬುದು ಸೈಬರ್ ವಂಚನೆಗಳಿಂದ ಗೊತ್ತಾಗುತ್ತದೆ. ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ ಎನ್ನುವ ಮಾತು ಇದೆ. ಅದರಂತೆ ತಂತ್ರಜ್ಞಾನ ಬದಲಾಗುತ್ತಿದ್ದಂತೆ ಅದಕ್ಕೆ ತಕ್ಕಂತೆ ವಂಚನೆ ಮಾಡುವವರು ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ.
ಸಾಮಾನ್ಯವಾಗಿ ಯಾವುದೇ ಡಿಜಿಟಲ್ ವ್ಯವಹಾರ ಮಾಡಬೇಕಾದರೆ ಒಟಿಪಿ (ಒನ್ ಟೈಮ್ ಪಾಸ್‌ವರ್ಡ್) ಕಡ್ಡಾಯವಾಗಿರುತ್ತದೆ. ವಹಿವಾಟುಗಳ ಭದ್ರತೆಯ ಕಾರಣಕ್ಕೆ ಅಭಿವೃದ್ಧಿಪಡಿಸಿರುವ ಈ ವ್ಯವಸ್ಥೆ ತುಂಬಾ ಜನಪ್ರಿಯವಾಗಿದೆ. ಈ ಒನ್ ಟೈಮ್ ಪಾಸ್ ವರ್ಡ್ ಮಾರ್ಗವನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ವಂಚಕರು ಗ್ರಾಹಕರಿಗೆ ಮೋಸ ಮಾಡಿ ಅವರ ಖಾತೆಗಳಲ್ಲಿ ಇರುವ ಹಣವನ್ನು ಎಗರಿಸುತ್ತಿದ್ದಾರೆ. ಸಾಮಾನ್ಯ ಜನರಷ್ಟೇ ಅಲ್ಲ ಉದ್ಯಮಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಜನರನ್ನು ವಂಚನೆಯ ಬಲೆಗೆ ಬೀಳಿಸಿರುವ ಅನೇಕ ಪ್ರಕರಣಗಳು ದಾಖಲಾಗಿರುವುದನ್ನು ಕಾಣುತ್ತೇವೆ.
ಒಟಿಪಿ ವಂಚನೆಯನ್ನು ತಪ್ಪಿಸುವುದು ಹೇಗೆ
ಜಗತ್ತು ಮುಂದುವರಿದಂತೆ ಬ್ಯಾಂಕಿಂಗ್ ಕ್ಷೇತ್ರವು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಹೀಗಾಗಿ ಇತ್ತೀಚೆಗೆ ಎಲ್ಲೆಡೆ ಡಿಜಿಟಲ್ ಬ್ಯಾಕಿಂಗ್ ವ್ಯವಸ್ಥೆ ಲಭ್ಯವಿದೆ. ಆದರೆ ಈ ಡಿಜಿಟಲ್ ಬ್ಯಾಂಕಿಂಗ್ ವಹಿವಾಟುಗಳಲ್ಲಿ ನಡೆಯುವ ವಂಚನೆಗಳಲ್ಲಿ ಒಟಿಪಿ ಪ್ರಮುಖ ಅಸ್ತ್ರವಾಗಿದೆ. ಈ ಒಟಿಪಿ ವಂಚನೆಯಿಂದ ಪಾರಾಗಬೇಕಾದರೆ ಮೊದಲು ಗ್ರಾಹಕರಾದ ನಾವುಗಳು ಜಾಗೃತರಾಗಬೇಕು. ಒಟಿಪಿ ಎಂದರೇನು, ಇದನ್ನು ಯಾವ ಕಾರಣಕ್ಕೆ ಬಳಸಲಾಗುತ್ತದೆ, ಇದರ ಪ್ರಯೋಜನೆಗಳೇನು ಎಂಬಿತ್ಯಾದಿಗಳನ್ನು ತಿಳಿದುಕೊಂಡಿರಬೇಕು. ಒಟಿಪಿ ವಂಚನೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಕೆಲವು ಸಲಹೆಗಳನ್ನು ಪಾಲಿಸಲಬೇಕಾಗುತ್ತದೆ.
ಒಟಿಪಿ ವಂಚನೆಯಿಂದ ಪಾರಾಗಲು ಪಾಲಿಸಬೇಕಾದ ಸಲಹೆಗಳು
- ಒಟಿಪಿಯು ಇದು ನಿಮ್ಮ ಖಾಸಗಿ ಮಾಹಿತಿಯನ್ನು ಸುರಕ್ಷಿತವಾಗಿ ಇರಿಸುವ ವಿಧಾನ. ನಿಮ್ಮ ಬ್ಯಾಂಕ್ ವಹಿವಾಟುಗಳಿಗೆ ಸಂಬಂಧಿಸಿದ ಮಾಹಿತಿ ಬೇರೆಡೆ ಹೋಗದಂತೆ ಹಾಗೂ ನಿಮ್ಮ ಖಾಸಗಿ ಮಾಹಿತಿಯನ್ನು ಅನಧಿಕೃತ ಮಾಹಿತಿಯನ್ನು ಬೇರೆಯವರು ಪಡೆಯದಂತೆ ಇದು ಕಡಿವಾಣ ಹಾಕುತ್ತದೆ. ಬಿಲ್ ಪಾವತಿಗಳು, ಆನ್‌ಲೈನ್ ಶಾಪಿಂಗ್, ಹಣ ವರ್ಗಾವಣೆ ಇತ್ಯಾದಿ ವಹಿವಾಟುಗಳನ್ನು ನಮೂದಿಸುವಾಗ ಒಟಿಪಿ ಬಳಸಲಾಗುತ್ತದೆ.
- ನೀವು ಬ್ಯಾಂಕ್ ಖಾತೆ ತೆರೆಯುವಾಗ ನೀಡಿರುವ ಮೊಬೈಲ್ ಸಂಖ್ಯೆಗೆ ಈ ಒಟಿಪಿ ಬರುತ್ತದೆ. ಸೈಬರ್ ವಂಚಕರು ನಿಮ್ಮ ಒಟಿಪಿ ಸಂಖ್ಯೆಯನ್ನು ಪಡೆಯಲು ನಾನಾ ರೀತಿಯ ಮೋಸದ ತಂತ್ರಗಳನ್ನು ಅನುಸರಿಸುತ್ತಾರೆ. ಮೊದಲು ನಿಮ್ಮ ವೈಯಕ್ತಿಕ ಮಾಹಿತಿ ಹಾಗೂ ಮೊಬೈಲ್ ಸಂಖ್ಯೆಯನ್ನು ಸಂಗ್ರಹಿಸಿ ಆ ನಂತರ ನಿಮಗೆ ಕರೆ ಮಾಡಿ ಒಟಿಪಿ ಪಡೆಯಲು ಪ್ರಯತ್ನಿಸುತ್ತಾರೆ. ಯಾವುದೇ ಕಾರಣಕ್ಕೂ ಯಾರೊಂದಿಗೂ ಒಟಿಪಿ ಸಂಖ್ಯೆಯನ್ನು ಹಂಚಿಕೊಳ್ಳಬೇಡಿ. ಬ್ಯಾಂಕ್ ಸಿಬ್ಬಂದಿ ಎಂದಿಗೂ ಒಟಿಪಿಯನ್ನು ಫೋನ್ ಮಾಡಿ ಕೇಳುವುದಿಲ್ಲ.
- ನಿಮ್ಮ ಒಟಿಪಿಯನ್ನು ಪಡೆಯಲು ವಂಚಕರು ಸಾಮಾನ್ಯವಾಗಿ ಫೋನ್ ಕರೆ, ಎಸ್ಎಂಎಸ್ ಅಥವಾ ಇಮೇಲ್ ಮಾರ್ಗವನ್ನು ಅನುಸರಿಸುತ್ತಾರೆ. ಬ್ಯಾಂಕ್ ಪ್ರತಿನಿಧಿಗಳು, ಸಾಲ ನೀಡುವವರು, ಗ್ರಾಹಕ ಸೇವಾ ಕೇಂದ್ರದಿಂದ ಕರೆ ಮಾಡುತ್ತಿದ್ದೇವೆ ಎಂದು ಹೇಳಿ ಒಟಿಪಿ ಪಡೆಯಲು ಯತ್ನಿಸುತ್ತಾರೆ. ಒಟಿಪಿ ಪಡೆಯಲೆಂದೇ ಒಂದು ರೀತಿಯ ತುರ್ತು ಪರಿಸ್ಥಿತಿಯನ್ನು ಸೃಷ್ಟಿಸುತ್ತಾರೆ. ಅಂದರೆ ತುಂಬಾ ಎಮರ್ಜೆನ್ಸಿ ಬೇಗ ಕೊಡಿ ಕಾಯೋಕೆ ಟೈಮ್ ಇಲ್ಲ ಎಂದು ನಿಮ್ಮನ್ನು ಪುಸಲಾಯಿಸುತ್ತಾರೆ. ಯೋಚನೆ ಮಾಡುವುದಕ್ಕೂ ಬಿಡದೆ ಕಾಡುತ್ತಾರೆ. ಇಂಥವರ ಮಾತುಗಳಿಗೆ ಮರುಳಾಗದಿರಿ.
- ಡಿಜಿಟಲ್ ವಂಚಕರು ನಿಮ್ಮ ಮೊಬೈಲ್ ಸಂಖ್ಯೆಯನ್ನು ಸಂಗ್ರಹಿಸಿದ ಬಳಿಕ ಕೆಲವೊಂದು ಲಿಂಕ್‌ಗಳನ್ನು ಕಳಿಸುತ್ತಾರೆ. ಅನುಮಾನಾಸ್ಪದ ಲಿಂಕ್‌ಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಯಾವುದೇ ಕಾರಣಕ್ಕೂ ಇಂತಹ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬಾರದು.
- ಅಪರಿಚಿತ ಅಪ್ಲಿಕೇಶನ್‌ಗಳ ಬಳಕೆಯನ್ನು ತಪ್ಪಿಸಬೇಕು. ಕೆಲ ಅಪ್ಲಿಕೇಷನ್‌ಗಳು ಇನ್‌ಸ್ಟಾಲ್ ಆದ ನಂತರ ನಿಮ್ಮ ಕ್ಯಾಮೆರಾ, ಫೋಟೊ ಗ್ಯಾಲರಿ ಇತ್ಯಾದಿಗಳನ್ನು ಪ್ರವೇಶಿಸಲು ನೀವು ಅನುಮತಿ ಕೇಳುತ್ತವೆ. ಕೆಲವೊಮ್ಮೆ ಕೆವೈಸಿ ಪ್ರಕ್ರಿಯೆ, ಎಸ್ಎಂಎಸ್ ಸಂದೇಶ ಸ್ವಕರಿಸಲು ಅನುಮೋದನೆ ನೀಡಬೇಕಾದ ಅಗತ್ಯ ಇರುತ್ತದೆ. ನೀವು ಪೂರ್ವಾಪರ ಯೋಚಿಸದೆ ಅನುಮತಿ ಕೊಟ್ಟರೆ ಮುಗಿಯಿತು. ಇಲ್ಲಿಂದ ಒಟಿಪಿ ಮತ್ತು ಇತರೆ ಮಾಹಿತಿಯನ್ನು ಸುಲಭವಾಗಿ ಕದಿಯುತ್ತಾರೆ. ಹೀಗಾಗಿ ಅನಧಿಕೃತ ಆ್ಯಪ್ ಗಳನ್ನು ಬಳಸಬೇಡಿ.
- ಇತ್ತೀಚಿನ ದಿನಗಳಲ್ಲಿ ಎಲ್ಲ ಬ್ಯಾಂಕ್‌ಗಳೂ ತಮ್ಮದೇ ಆದ ಆ್ಯಪ್ ಹೊಂದಿವೆ. ಆ ಆ್ಯಪ್‌ಗಳ ಮೂಲಕವೇ ಡಿಜಿಟಲ್ ವಹಿವಾಟು ನಡೆಸಲು ಅವಕಾಶವಿದೆ. ಸಾರ್ವಜನಿಕ ವೈ-ಫೈ ನೆಟ್‌ವರ್ಕ್ ಬಳಸುವಾಗಲೂ ಎಚ್ಚರವಿರಲಿ. ನಿಮ್ಮ ಆನ್‌ಲೈನ್ ಚಟುವಟಿಕೆಗಳ ಮೇಲೆ ಕಣ್ಣಿಡಲು, ಒಟಿಪಿ ಸೇರಿದಂತೆ ಸೂಕ್ಷ್ಮ ಮಾಹಿತಿಯನ್ನು ಕದಿಯಲು ವಂಚಕರು ಈ ರೀತಿಯ ತಂತ್ರಗಳನ್ನು ಬಳಸುವ ಸಾಧ್ಯತೆ ಇರುತ್ತದೆ. ಹೀಗಾಗಿ ವಿಶ್ವಾಸಾರ್ಹ ವರ್ಚುವಲ್ ಪ್ರೈವೇಟ್ ನೆಟ್ ವರ್ಕ್ (ಪಿಪಿಎನ್) ನಂತಹ ಸುರಕ್ಷಿತ ನೆಟ್‌ವರ್ಕ್‌ಗಳ ಮೂಲಕ ಮಾತ್ರ ವಹಿವಾಟು ನಡೆಸಬೇಕು.
- ಆಗಾಗ ನಿಮ್ಮ ಇಮೇಲ್ ಹಾಗೂ ಇತರೆ ಖಾತೆಗಳಿಗೆ ನೀಡಿರುವ ಪಾಸ್‌ವರ್ಡ್‌ಗಳನ್ನು ಬದಲಾಯಿಸುತ್ತಿರಿ. ‘12345678’ - ಈ ರೀತಿ ಹೀಗೆ ಸುಲಭವಾಗಿ ಗುರುತಿಸಬಹುದಾದ ಪಾಸ್‌ವರ್ಡ್‌ಗಳನ್ನು ಎಂದಿಗೂ ನೀಡಬೇಡಿ. ಸ್ಟ್ರಾಂಗ್ ಪಾಸ್‌ವರ್ಡ್ ಕೊಡುವುದು ಸುರಕ್ಷಿತ ಆಯ್ಕೆಯಾಗಿರುತ್ತದೆ. ಆಗಾಗ ನಿಮ್ಮ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸುತ್ತಿರಿ. ಬ್ಯಾಂಕ್‌ನವರೊಂದಿಗೆ ಸಂಪರ್ಕದಲ್ಲಿ ಇರಿ. ವಹಿವಾಟಿಗೆ ಸಂಬಂಧಿಸಿದ ಯಾವುದೇ ರೀತಿಯ ಪಾಸ್‌ವರ್ಡ್, ಒಟಿಪಿಗಳನ್ನು ಯಾರೊಂದಿಗೂ ಹಂಚಿಕೊಳ್ಳುವಂತಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಂಡಿರಿ.