Birth Date: ತಪ್ಪು ಮಾಡಿದ್ರೂ ಒಪ್ಪಿಕೊಳ್ಳುವ ಮನಸ್ಸಿರಲ್ಲ, ನಂಬಿದವರ ಕೈ ಬಿಡಲ್ಲ: 7ನೇ ತಾರೀಕು ಹುಟ್ಟಿದವರ ಸ್ವಭಾವ ಹೀಗಿದೆ
Birth Date Astrology: 7ನೇ ತಾರೀಕು ಹುಟ್ಟಿದವರ ಗುಣ-ಜೀವನದ ಕುರಿತು ಜ್ಯೋತಿಷಿ: ಎಚ್. ಸತೀಶ್ ಅವರು ನೀಡಿದ ಮಾಹಿತಿ ಇಲ್ಲಿದೆ.
ಯಾವುದೇ ತಿಂಗಳ 7ನೇ ತಾರೀಕು ಹುಟ್ಟಿದವರು ನಿಮ್ಮ ಮನಸ್ಸಿನ ಮೇಲೆ ಹತೋಟಿಯನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಸಣ್ಣಪುಟ್ಟ ನಿರಾಸೆಗಳನ್ನು ಒಪ್ಪಿಕೊಳ್ಳದೆ ವೈರಾಗ್ಯದ ಭಾವನೆ ಬೆಳೆಸಿಕೊಳ್ಳುವಿರಿ. ನಿಮ್ಮಲ್ಲಿ ನೇರ ಮತ್ತು ಸ್ಥಿರವಾದ ಮನೋಭಾವನೆ ಇರುವುದಿಲ್ಲ. ಆದರೆ ಯಾವುದೇ ವ್ಯಕ್ತಿಯನ್ನಾಗಲಿ ಅಥವಾ ಯಾವುದೇ ವಿಚಾರವನ್ನಾಗಲಿ ಸರಿಯಾಗಿ ಅರ್ಥ ಮಾಡಿಕೊಳ್ಳುವುದಿಲ್ಲ. ಪ್ರತಿಯೊಂದು ವಿಚಾರಕ್ಕೂ ನಿಮ್ಮದೇ ಆದ ನ್ಯಾಯದ ಮಾರ್ಗವನ್ನು ರೂಪಿಸುವಿರಿ ಮತ್ತು ಅವಲಂಬಿಸುವಿರಿ. ಮನಸ್ಸಿನಲ್ಲಿ ಒಂದು ರೀತಿಯ ಅಳುಕುತನ ಇರುತ್ತದೆ. ಎದುರು ನಿಲ್ಲುವ ವ್ಯಕ್ತಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ವಿಫಲರಾಗುವಿರಿ. ಸಾಮಾನ್ಯವಾಗಿ ನೀವು ಸುಲಭವಾಗಿ ಯಶಸ್ಸು ಗಳಿಸಬಹುದಾದ ಕೆಲಸ ಕಾರ್ಯಗಳನ್ನು ಆಯ್ದುಕೊಳ್ಳುವಿರಿ. ಸುಖ ಮತ್ತು ಸಂತೃಪ್ತಿಯ ಜೀವನವನ್ನು ನಡೆಸುವಿರಿ.
ನಿಮಗೆ ಅತಿ ಉನ್ನತ ಮಟ್ಟದಲ್ಲಿರುವ ಅಧಿಕಾರಿಗಳು, ಸಮಾಜದ ಗಣ್ಯ ವ್ಯಕ್ತಿಗಳು, ಪ್ರಸಿದ್ಧ ಚಲನಚಿತ್ರ ನಟರು ಇಂತಹವರ ಜೊತೆ ಸ್ನೇಹ ಸಂಬಂಧ ಬೆಳೆಸಲು ಇಷ್ಟಪಡುವಿರಿ. ನಿಮಗೆ ಇಷ್ಟವಾಗುವ ದೇವರುಗಳು ಸಹ ಪಂಚಮುಖಿ ಗಣಪತಿ, ಪಂಚಮುಖಿ ಆಂಜನೇಯ, ನಂದಿ, ನಾಗದೇವತೆ ಇಂತಹ ವಿಶೇಷ ಆಕೃತಿಯುಳ್ಳ ದೇವತೆಗಳು. ಜೀವನದಲ್ಲಿ ಸಾಮಾನ್ಯವಾಗಿ ಬಾಳಲಿಚ್ಚಿಸದೆ ಸಮಾಜದ ಪ್ರಮುಖ ಸ್ಥಾನವನ್ನು ಅಲಂಕರಿಸಬೇಕೆಂಬ ಆಸೆ ಮತ್ತು ಗುರಿ ಇರುತ್ತದೆ.
ವಿದ್ಯಾರ್ಥಿಗಳು ತಮ್ಮ ವಿಶೇಷ ಗುಣದಿಂದ ಎಲ್ಲರ ಗಮನ ಸೆಳೆಯುತ್ತಾರೆ. ಆತುರ ಪಡೆದೆ ಪ್ರತಿಯೊಂದು ಕೆಲಸ ಕಾರ್ಯಗಳನ್ನು ನಿಧಾನ ಗತಿಯಲ್ಲಿ ಮಾಡಬಲ್ಲರು. ವಿದ್ಯಾರ್ಥಿಗಳು ಕೇವಲ ಪಠ್ಯವಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಪ್ರಥಮರಾಗುತ್ತಾರೆ. ಪ್ರತಿಯೊಂದು ವಿಚಾರವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ವಿದ್ಯಾರ್ಥಿ ಜೀವನದಲ್ಲಿಯೇ ಹಣ ಸಂಪಾದಿಸಬಲ್ಲರು. ಹಗಲಿನ ವೇಳೆ ಹೆಚ್ಚಾಗಿ ಕ್ರಿಯಾಶೀಲರಾಗುವ ಇವರು ದಿನ ಕಳೆದಂತೆ ಪ್ರತಿ ವಿಚಾರದಲ್ಲಿಯೂ ಆಸಕ್ತಿ ಕಳೆದುಕೊಳ್ಳುತ್ತಾರೆ. ಹಠ ಮತ್ತು ಆತ್ಮವಿಶ್ವಾಸದಿಂದ ಯಶಸ್ಸನ್ನು ಸಾಧಿಸುವಿರಿ. ಅಪರೂಪದ ವಿಚಾರಗಳ ಬಗ್ಗೆ ಆಸಕ್ತಿ ಹೆಚ್ಚು.
ತಾಯಿ ಮಕ್ಕಳಲ್ಲಿ ಪರಸ್ಪರ ಪ್ರೀತಿ ಮತ್ತು ಗೌರವ ಹೆಚ್ಚಾಗಿರುತ್ತದೆ. ಆದರೂ ಚಿಕ್ಕಮ್ಮ ಅಥವಾ ದೊಡ್ಡಮ್ಮರ ಆಶಯದಲ್ಲಿ ಬೆಳೆಯುತ್ತಾರೆ. ಸ್ತ್ರೀಯರಾದಲ್ಲಿ ಗರ್ಭಕೋಶದ ತೊಂದರೆ ಉಂಟಾಗಬಹುದು. ಎದುರಾಗುವ ತೊಂದರೆಗಳನ್ನು ಗೆಲ್ಲುವಿರಿ. ತಪ್ಪು ಮಾಡಿದರೂ ಒಪ್ಪಿಕೊಳ್ಳುವ ಮನಸ್ಸಿರುವುದಿಲ್ಲ. ಗಣಿತ ಮತ್ತು ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಶ್ರದ್ಧೆ ಮತ್ತು ನಂಬಿಕೆ ಇರುತ್ತದೆ. ಬೇರೆಯವರ ಮೇಲೆ ನಂಬಿಕೆ ಬರದೇ ಯಾರಿಗೂ ಹಣದ ಸಹಾಯ ಮಾಡುವುದಿಲ್ಲ. ಸುಲಭವಾಗಿ ಯಾರನ್ನು ನಂಬುವುದಿಲ್ಲ. ಆದರೆ ನಂಬಿದವರ ಕೈಬಿಡುವುದಿಲ್ಲ. ಕುಟುಂಬದಲ್ಲಿ ಪ್ರತಿಯೊಬ್ಬರ ಮನಸ್ಸು ಒಂದೇ ರೀತಿ ಇರದು. ಅನಾವಶ್ಯಕ ವಾದ ವಿವಾದಗಳು ಇರುತ್ತವೆ.
ಇವರ ವಿವಾಹವು ಸಾಮಾನ್ಯವಾಗಿ ಪರಿಚಯ ಇರುವವರ ಜೊತೆಯಲ್ಲಿ ನಡೆಯುತ್ತದೆ. ಕುಟುಂಬದಲ್ಲಿ ಅನಾವಶ್ಯಕ ಮನಸ್ತಾಪಗಳು ಉಂಟಾದರೂ ಸಾಂಸಾರಿಕ ಜೀವನದಲ್ಲಿ ತೊಂದರೆ ಇರುವುದಿಲ್ಲ. ತಂದೆ ತಾಯಿಯ ಮನಸ್ಸನ್ನು ಅರಿಯುವ ಮಕ್ಕಳಿರುತ್ತಾರೆ. ಮಕ್ಕಳಿಗೆ ಹಾಸ್ಯದ ಗುಣ ವಿಶೇಷವಾಗಿರುತ್ತದೆ. ಉದ್ಯೋಗದಲ್ಲಿ ಉನ್ನತ ಮಟ್ಟ ತಲುಪಲು ಯಾವುದೇ ಅಪಾಯದ ಸನ್ನಿವೇಶವನ್ನು ಎದುರಿಸಲು ಸಿದ್ಧರಾಗುವಿರಿ. ವಾಹನದಿಂದ ತೊಂದರೆ ಇರುತ್ತದೆ. ಯಂತ್ರೋಪಕರಣಗಳನ್ನು ಬಳಸುವ ವೇಳೆ ಎಚ್ಚರಿಕೆ ವಹಿಸಿ. ಸ್ವಂತ ಮನೆ ಕಟ್ಟುವ ಅಥವಾ ಕೊಳ್ಳುವ ಆಸೆ ಇರುತ್ತದೆ. ಅದು ಸಾಧ್ಯವೂ ಆಗುತ್ತದೆ. ಬಂಧು ಬಳಗದವರೊಂದಿಗೆ ದೂರ ಉಳಿಯಲು ಪ್ರಯತ್ನಿಸುವಿರಿ.
ರಾಜಕೀಯ ಕ್ಷೇತ್ರದಲ್ಲಿ ಅನಾವಶ್ಯಕವಾದ ವಾದ ವಿವಾದಗಳು ಎದುರಾಗುತ್ತವೆ. ಪ್ರಯೋಜನವಿಲ್ಲದ ಕೆಲಸ ಕಾರ್ಯಗಳಿಗೆ ಓಡಾಟ ಇರುತ್ತದೆ. ಪ್ರಯಾಣ ಮಾಡುವುದೆಂದರೆ ಭಯ. ವಾಹನದಲ್ಲಿ ಓಡಾಡುವ ಬದಲು ನಡೆದುಕೊಂಡೆ ಹೋಗುವುದು ನಿಮ್ಮ ಗುಣ. ಕೀರ್ತಿ ಪ್ರತಿಷ್ಠೆಗಳಿಗೆ ಮೊದಲ ಪ್ರಾಮುಖ್ಯತೆ ನೀಡುವಿರಿ. ನದಿ ಮತ್ತು ಸಮುದ್ರಗಳಿಗೆ ಭೇಟಿ ನೀಡುವ ಹಂಬಲವಿರುತ್ತದೆ. ಹಣದ ದುರಾಸೆ ಇಲ್ಲದೆ ನಿಧಾನಗತಿಯಲ್ಲಿ ಹಣವನ್ನು ಉಳಿತಾಯ ಮಾಡುವಿರಿ. ಹಣದ ತೊಂದರೆ ಬಾರದು. ವಾದ ವಿವಾದಗಳಿಗೆ ಮನ ಕೊಡದೆ ಶಾಂತಿ ಸಂಧಾನಗಳಿಂದ ಜೀವನದ ಸಮಸ್ಯೆಗಳನ್ನು ಗೆಲ್ಲುವಿರಿ.
ಲೇಖನ: ಎಚ್. ಸತೀಶ್, ಜ್ಯೋತಿಷಿ -ಬೆಂಗಳೂರು
ಮೊಬೈಲ್: 8546865832
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)
ವಿಭಾಗ