ನಿಮ್ಮ ರಾಶಿಗೆ ಅನುಗುಣವಾಗಿ ಬೆಳಗಿನ ದಿನಚರಿ ರೂಢಿಸಿಕೊಳ್ಳಿ; ಈ ಸಕ್ಸಸ್ ಮಂತ್ರ ನಿಮ್ಮದಾಗುತ್ತೆ
ದಿನದ ಆರಂಭ ಚೆನ್ನಾಗಿದ್ದರೆ ಮಾಡುವ ಪ್ರತಿ ಕೆಲಸದ ಗುರಿಯನ್ನು ಖಂಡಿತ ತಲುಪುತ್ತೆ. ಆದರೆ ರಾಶಿಗೆ ಅನುಗುಣವಾಗಿ ದಿನಚರಿ ರೂಢಿಸಿಕೊಂಡರೆ ಯಶಸ್ಸು ಸುಲಭವಾಗಿ ಸಿಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗಾದರೆ ಯಾವ ರಾಶಿಯವರು ಹೇಗೆ ದಿನಚರಿಯನ್ನು ಪ್ರಾರಂಭಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ. (ಬರಹ: ಅರ್ಚನಾ ವಿ. ಭಟ್)
ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ರಾಶಿಯು ವಿಭಿನ್ನ ಗುಣಲಕ್ಷಣಗಳನ್ನು ಹೊಂದಿದೆ. ರಾಶಿಗೆ ಅನುಗುಣವಾಗಿ ಬೆಳಗಿನ ದಿನಚರಿ ಪ್ರಾರಂಭಿಸುವುದರಿಂದ ದಿನಪೂರ್ತಿ ಉಲ್ಲಾಸ ಮತ್ತು ಶಾಂತಿಯಿಂದ ಕೂಡಿರುತ್ತದೆ. ಶಾಂತಚಿತ್ತದಿಂದ ಕೆಲಸ ನಿರ್ವಹಿಸಿದಾಗ ಯಶಸ್ಸು ನಿಮ್ಮ ಕೈ ಸೇರುತ್ತದೆ. ಹಾಗಾಗಿ ಉತ್ತಮ ದಿನಚರಿ ರೂಢಿಸಿಕೊಳ್ಳುವುದು ಅಗತ್ಯವಾಗಿದೆ. ದಿನದ ಪ್ರಾರಂಭ ಚೆನ್ನಾಗಿದ್ದರೆ ಮಾಡುವ ಪ್ರತಿ ಕೆಲಸವು ಗುರಿಯನ್ನು ತಲುಪುತ್ತದೆ ಎಂದು ಹೇಳುತ್ತಾರೆ. ರಾಶಿಗೆ ಅನುಗುಣವಾಗಿ ದಿನಚರಿಯನ್ನು ರೂಪಿಸಿಕೊಳ್ಳವುದರಿಂದ ಸಕ್ಸಸ್ ಅನ್ನು ಸುಲಭವಾಗಿ ಪಡೆಯಬಹುದು. ಹಾಗಾದರೆ ಯಾವ ರಾಶಿಯವರು ಹೇಗೆ ದಿನಚರಿಯನ್ನು ಪ್ರಾರಂಭಿಸಬೇಕು? ಈ ಪ್ರಶ್ನೆಗೆ ಇಲ್ಲಿದೆ ಉತ್ತರ.
ಮೇಷ ರಾಶಿ
ಮೇಷ ರಾಶಿಯ ಚಿಹ್ನೆ ಬೆಂಕಿ. ಹಾಗಾಗಿ ದೇಹದಲ್ಲಿ ಶಕ್ತಿ ಸಂಚಯವಾಗುವಂತೆ ನಿಮ್ಮ ದಿನಚರಿಯನ್ನು ಪ್ರಾರಂಭಿಸಿ. ನಿಮ್ಮ ದಿನವನ್ನು ವ್ಯಾಯಾಮದಿಂದ ಪ್ರಾರಂಭಿಸಿ. ಓಟ, ಕಿಕ್‌ಬಾಕ್ಸಿಂಗ್ ನಂತ ವೇಗದ ವ್ಯಾಯಾಮವಿರಲಿ. ಇದು ನಿಮ್ಮ ಸಾಹಸ ಮನೋಭಾವವನ್ನು ಉತ್ತೇಜಿಸುತ್ತದೆ. ಇದಕ್ಕೆ ಪೂರಕವಾಗಿ ಬೆಳಗಿನ ಉಪಹಾರವನ್ನು ಸೇವಿಸಿ. ಪ್ರೋಟೀನ್ ತುಂಬಿದ ಆಹಾರಗಳು ನಿಮಗೆ ಹೆಚ್ಚು ಶಕ್ತಿಯನ್ನು ನೀಡುತ್ತದೆ. ಬೆಳಗ್ಗೆ ವ್ಯಾಯಾಮದ ನಂತರ ಒಳ್ಳೆಯ ಸ್ನಾನ ಮಾಡಿ, ಪ್ರೋಟೀನ್ ಅಧಿಕವಿರುವ ಆಹಾರ ಸೇವಿಸಿ. ಇದು ಖಂಡಿತ ನಿಮ್ಮ ಗುರಿ ತಲುಪುವಂತೆ ಮಾಡುತ್ತದೆ.
ವೃಷಭ ರಾಶಿ
ಶುಕ್ರನಿಂದ ಆಳಲ್ಪಡುವ ಈ ರಾಶಿಯು ಜೀವನವನ್ನು ಪ್ರೀತಿಸುವ ಗುಣ ಹೊಂದಿದೆ. ಈ ರಾಶಿಯವರು ಜೀವನದಲ್ಲಿ ಬರುವ ಸಣ್ಣ ಸಣ್ಣ ವಿಷಯಗಳನ್ನು ಪ್ರೀತಿಸುತ್ತಾರೆ. ನೀವು ನಿಮ್ಮ ದಿನಚರಿಯನ್ನು ಐಷಾರಾಮಿಯಾಗಿ ಪ್ರಾರಂಭಿಸಬಹುದು. ನೀವು ಶಾಂತ ರೀತಿಯಲ್ಲಿ ಎಚ್ಚರಗೊಂಡು ನಿಮ್ಮಿಷ್ಟದ ಆಹಾರವನ್ನು ಸೇವಿಸುವುದರ ಮೂಲಕ ದಿನ ಪ್ರಾರಂಭಿಸಬಹುದು. ಬೇಯಿಸಿದ ಆಹಾರಗಳನ್ನು ಸೇವಿಸುವುದರ ಜೊತೆಗೆ ಕಾಫಿ ಅಥವಾ ಟೀ ಯನ್ನು ಆಸ್ವಾದಿಸಿ. ನೀವು ಬೆಳಗಿನ ಸಮಯದಲ್ಲಿ ದೀಪ ಹಚ್ಚುವುದು ಅಥವಾ ಪ್ರಶಾಂತವಾದ ಸಂಗೀತ ಕೇಳುವುದು ಮಾಡುವುದರಿಂದ ನಿಮ್ಮ ದಿನ ಪ್ರಶಾಂತತೆಯಿಂದ ಕೂಡಿರುತ್ತದೆ. ಅದು ನಿಮ್ಮ ಅನುಭವಕ್ಕೂ ಬರುತ್ತದೆ. ನೀವು ಲಘು ವ್ಯಾಯಾಮ ಅಥವಾ ಯೋಗಗಳನ್ನು ಖಂಡಿತ ರೂಢಿಸಿಕೊಳ್ಳಿ.
ಮಿಥುನ ರಾಶಿ
ಮಿಥುನ ರಾಶಿಯವರು ಮಾನಸಿಕವಾಗಿ ಸಂತೋಷ ನೀಡುವ ಹಾಗೂ ವೈವಿಧ್ಯಮಯದಿಂದ ಕೂಡಿದ ದಿನಚರಿ ರೂಢಿಸಿಕೊಳ್ಳುವುದರಿಂದ ಅವರ ದಿನ ಸುಂದರವಾಗಿರುತ್ತದೆ. ಏಕೆಂದರೆ ಈ ರಾಶಿಯವರಿಗೆ ಮನಸ್ಸು ಮತ್ತು ದೇಹ ಇವೆರಡನ್ನೂ ಎಚ್ಚರಗೊಳಿಸುವುದು ಅಗತ್ಯವಾಗಿದೆ. ನಿಮ್ಮ ಮೆದುಳಿಗೆ ಕೆಲಸ ನೀಡುವಂತಹ ಕಾರ್ಯಗಳನ್ನು ಮಾಡಿ. ನ್ಯೂಸ್ ಪೇಪರ್ ಓದುವುದು, ಉತ್ತಮ ಸಂಗೀತ ಅಥವಾ ಸ್ಪೂರ್ತಿದಾಯಕ ಮಾತುಗಳನ್ನು ಆಲಿಸಿ. ಇದು ನಿಮ್ಮ ಮನಸ್ಸು ಮತ್ತು ದೇಹ ಎರಡೂ ಸಮತೋಲನದಿಂದಿರುವಂತೆ ನೋಡಿಕೊಳ್ಳುತ್ತದೆ. ನೀವು ಚುರುಕಾದ ನಡಿಗೆ, ಲಘು ವ್ಯಾಯಾಮದಿಂದ ದಿನ ಪ್ರಾರಂಭಿಸಿ. ನಿಮ್ಮ ದಿನಚರಿಯಲ್ಲಿ ಏನು ಮಾಡಬೇಕು ಎಂಬುದನ್ನು ಸರಿಯಾಗಿ ಪ್ಲಾನ್ ಮಾಡಿಕೊಳ್ಳಿ.
ಕಟಕ ರಾಶಿ
ಈ ರಾಶಿಯ ಚಿಹ್ನೆ ನೀರು. ಕಟಕ ರಾಶಿಯವರಿಗೆ ಅವರ ದಿನವನ್ನು ಭಾವನಾತ್ಮಕವಾಗಿ ಪ್ರಾರಂಭಿಸುವ ಅಗತ್ಯವಿರುತ್ತದೆ. ಹಾಗೆ ಪ್ರಾರಂಭಿಸುವುದರಿಂದ ಆರಾಮದಾಯಕ ದಿನ ಅವರದ್ದಾಗಿರುತ್ತದೆ. ನಿಮ್ಮ ಭಾವನೆಗಳಿಗೆ ಹೊಂದಿಕೆಯಾಗುವಂತಹ ಧ್ಯಾನದಿಂದ ದಿನ ಪ್ರಾರಂಭಿಸಬಹುದು. ಪೋಷಕಾಂಶ ಭರಿತ ಉಪಹಾರವಾದ ಓಟ್‌ಮೀಲ್ ಅಥವಾ ಸ್ಮೂಥಿಯೊಂದಿಗೆ ದಿನ ಪ್ರಾರಂಭಿಸಿ. ಬೆಳಗಿನ ಒಂದಿಷ್ಟು ಸಮಯ ನಿಮ್ಮ ಪ್ರೀತಿಯ ಪುಸ್ತಕ ಓದಲು ಅಥವಾ ಸಂಗೀತ ಕೇಳಲು ಮೀಸಲಿಡಿ.
ಸಿಂಹ ರಾಶಿ
ಸಿಂಹ ರಾಶಿಯವರು ಆಕರ್ಷಕ ಹಾಗೂ ಆತ್ಮವಿಶ್ವಾಸವನ್ನು ಬಯಸುತ್ತಾರೆ. ಹಾಗಾಗಿ ನಿಮ್ಮ ಮೂಡ್ ಅನ್ನು ಉತ್ತೇಜಿಸುವಂತಹ ದಿನಚರಿಯಿಂದ ದಿನವನ್ನು ಪ್ರಾರಂಭಿಸಿ. ನೀವು ಸಕಾರಾತ್ಮಕ ರೀತಿಯಲ್ಲಿ ದಿನ ಪ್ರಾರಂಭಿಸಿದರೆ ಆ ದಿನ ನಿಮಗೆ ಅದ್ಭುತವೆನಿಸುತ್ತದೆ. ನಿಮ್ಮ ತ್ವಚೆ ಮತ್ತು ಕೂದಲಿನ ಬಗ್ಗೆ ಕಾಳಜಿವಹಿಸಲು ಬೆಳಗಿನ ಸ್ವಲ್ಪ ಸಮಯ ತೆಗೆದಿಡಿ. ಅದು ನಿಮ್ಮ ಆಕರ್ಷಕ ವ್ಯಕ್ತಿತ್ವಕ್ಕೆ ಸಹಾಯ ಮಾಡುತ್ತದೆ. ನಿಮ್ಮ ದಿನ ಉತ್ತಮವಾಗಿ ಸಾಗಲು ವಿಭಿನ್ನ ಉಪಹಾರಗಳನ್ನು ಸೇವಿಸಿ. ಅದು ಸ್ಪರ್ಧಾತ್ಮಕ ಜಗತ್ತನ್ನು ಎದುರಿಸಲು ನಿಮಗೆ ಬೇಕಾದ ಶಕ್ತಿಯನ್ನು ನೀಡುತ್ತದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರು ರಚನಾತ್ಮಕವಾದ ಪರಿಪೂರ್ಣ ಬೆಳಗಿನಿಂದ ದಿನ ಪ್ರಾರಂಭಿಸಿ. ಸ್ವಚ್ಛ ಮತ್ತು ಸುಂದರ ಸ್ಥಳದಿಂದ ನಿಮ್ಮ ದಿನ ಪ್ರಾರಂಭಿಸಿ. ದಿನವಿಡೀ ನೀವು ಮಾಡಬೇಕಾದ ಕೆಲಸಗಳ ಪೂರ್ಣ ಯೋಜನೆ ಮಾಡಿಕೊಳ್ಳಿ. ಅದು ನಿಮಗೆ ಗುರಿ ತಲುಪಲು ಸಹಾಯ ಮಾಡುತ್ತದೆ. ಪೌಷ್ಟಿಕವಾದ ಓಟ್ ಮೀಲ್ ಮತ್ತು ಸರಳ ಉಪಹಾರಗಳೊಂದಿಗೆ ದಿನ ಪ್ರಾರಂಭಿಸಿ. ನಿಮ್ಮ ಮನಸ್ಸು ಮತ್ತು ದೇಹಕ್ಕೆ ಅಗತ್ಯವಾದ ಯೋಗ ಅಥವಾ ಸ್ಟ್ರೆಚಿಂಗ್ ವ್ಯಾಯಾಮಗಳನ್ನು ಮಾಡಿ.
ತುಲಾ ರಾಶಿ
ಸಾಮರಸ್ಯ ಮತ್ತು ಸಮತೋಲನವನ್ನು ಬಯಸುವುದರಿಂದ ಕಲಾತ್ಮಕವಾದ ಹಾಗೂ ಶಾಂತಿಯುತವಾಗಿ ದಿನವನ್ನು ಆರಂಭಿಸುವುದು ಮುಖ್ಯವಾಗಿದೆ. ತಾಜಾ ಹೂವುಗಳು, ಅಂದವಾಗಿ ಜೋಡಿಸಿಟ್ಟ ಉಪಹಾರಗಳು ಬೆಳಗಿನ ದಿನಚರಿಯಲ್ಲಿರಲಿ. ಧ್ಯಾನ ಅಥವಾ ಯೋಗ ನಿಮ್ಮ ದಿನ ಸಂತೋಷದಿಂದ ಸಾಗಲು ನಿಮಗೆ ಸಹಾಯ ಮಾಡುತ್ತದೆ. ಸ್ವಾಭಾವಿಕವಾಗಿಯೇ ನೀವು ಎಲ್ಲರೊಂದಿಗೆ ಬೆರೆಯುವುದರಿಂದ ನಿಮ್ಮಿಷ್ಟದ ಜನರೊಂದಿಗೆ ಮಾತನಾಡುವುದರ ಮೂಲಕ ದಿನ ಪ್ರಾರಂಭಿಸಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಆತ್ಮಾವಲೋಕನ ಮಾಡಿಕೊಳ್ಳುವ ಸ್ವಭಾವ ಹೊಂದಿರುವುದರಿಂದ ನಿಮ್ಮ ಆಲೋಚನೆ ಮತ್ತು ಭಾವನೆಗಳಿಗೆ ಸರಿಹೊಂದುವಂತೆ ದಿನ ಪ್ರಾರಂಭಿಸಿ. ಧ್ಯಾನ ಇದಕ್ಕೆ ಉತ್ತಮವಾಗಿದೆ. ನಿಮ್ಮ ಆಳವಾದ ಚಿಂತನೆ ಮತ್ತು ಶಾಂತಿಗೆ ಅಗತ್ಯವಿರುವ ಓದು ಅಥವಾ ಸಂಗೀತ ಮುಂತಾದವುಗಳು ದಿನ ಪ್ರಾರಂಭದಲ್ಲಿರಲಿ. ನಿಮ್ಮ ದೇಹವನ್ನು ರಿಚಾರ್ಜ್ ಮಾಡಲು ಲಘು ವ್ಯಾಯಾಮ ಅಥವಾ ಯೋಗದ ಜೊತೆಗೆ ಪ್ರೋಟೀನ್‌ಯುಕ್ತ ಉಪಹಾರ ಸೇವಿಸಿ.
ಧನು ರಾಶಿ
ಸಾಹಸ ಮತ್ತು ಅನ್ವೇಷಣೆ ಇದು ಧನು ರಾಶಿಯವರ ಸ್ವಭಾವಾಗಿದೆ. ಹಾಗಾಗಿ ನಿಮ್ಮ ಪರಿಪೂರ್ಣ ದಿನಚರಿಯನ್ನು ಉಲ್ಲಾಸ ಹಾಗೂ ತಾಜಾತನದಿಂದ ಪ್ರಾರಂಭಿಸಿ. ನಿಮ್ಮ ಸಾಹಸ ಮನೋಭಾವನೆಯನ್ನು ಜಾಗೃತಗೊಳಿಸಲು ಚುರುಕು ನಡಿಗೆ, ಓಟಗಳಂತಹ ಹೊರಾಂಗಣ ವ್ಯಾಯಾಮ ಅಗತ್ಯವಾಗಿದೆ. ಹೊಸ ವಿಷಯಗಳನ್ನು ಕಲಿಯಲು ನೀವು ಆಸಕ್ತರಾಗಿರುವುದರಿಂದ ನಿಮ್ಮ ದಿನವನ್ನು ಸ್ಪೂರ್ತಿ ನೀಡುವ ಪುಸಕ್ತ ಓದುವುದು ಅಥವಾ ಆಡಿಯೋ ಕೇಳುವುದರಿಂದ ಪ್ರಾರಂಭಿಸಿ. ಸರಳವಾದ ಬೆಳಗಿನ ಉಪಹಾರ ದಿನವಿಡೀ ನಿಮ್ಮನ್ನು ಉತ್ಸಾಹದಿಂದಿರುವಂತೆ ಪ್ರೇರೇಪಿಸುತ್ತದೆ.
ಮಕರ ರಾಶಿ
ನಿಶ್ಚಿತ ಗುರಿ ಹಾಗೂ ಶಿಸ್ತುಬದ್ಧವಾಗಿರುವುದು ಮಕರ ರಾಶಿಯವರ ಗುಣ. ದಿನದಲ್ಲಿ ಮಾಡಬೇಕಾದ ಕೆಲಸಗಳ ಸ್ಪಷ್ಟ ವೇಳಾಪಟ್ಟಿ ರೂಪಿಸಿಕೊಳ್ಳುವುದರಿಂದ ನಿಮ್ಮ ಗುರಿಯನ್ನು ಸುಲಭವಾಗಿ ತಲುಪಬಹುದು. ಕಾಫಿ ಅಥವಾ ನಿಮ್ಮಿಷ್ಟದ ಉಪಹಾರದೊಂದಿಗೆ ದಿನ ಪ್ರಾರಂಭಿಸಿ. ಪೌಷ್ಟಿಕ ಆಹಾರಗಳು ನಿಮ್ಮ ಮನಸ್ಸನ್ನು ಗುರಿಯತ್ತ ಕೇಂದ್ರಿಕರಿಸಲು ಹಾಗೂ ನಿಮಗೆ ಶಕ್ತಿ ನೀಡಲು ಸಹಾಯ ಮಾಡುತ್ತವೆ.
ಕುಂಭ ರಾಶಿ
ಕುಂಭ ರಾಶಿಯವರು ರಚನಾತ್ಮಕವಾಗಿರಲು ಬಯಸುತ್ತಾರೆ. ಇದಕ್ಕೆ ಪೂರಕವಾಗಿರುವಂತೆ ನಿಮ್ಮ ದಿನಚರಿ ಪ್ರಾರಂಭಿಸಿ. ನಿಮಗೆ ಸ್ಪೂರ್ತಿ ನೀಡುವ ಕೆಲಸಗಳೊಂದಿಗೆ ದಿನವನ್ನು ಪ್ರಾರಂಭಿಸಿ. ಮಾನಸಿಕ ಉತ್ತೇಜನದ ಅಗತ್ಯವಿರುವುದರಿಂದ ಧನಾತ್ಮಕವಾಗಿ ಯೋಚಿಸಿ. ಜೊತೆಗೆ ಸ್ಪೂರ್ತಿ ನೀಡುವ ಆಡಿಯೋಗಳನ್ನು ಕೇಳಿ ಅಥವಾ ಸಮಾನ ಮನಸ್ಸಿನ ಜನರೊಂದಿಗೆ ಮಾತನಾಡುವುದರ ಮೂಲಕ ಪ್ರಾರಂಭಿಸಿ. ಸ್ಮೂಥಿ ಅಥವಾ ಮನೆಯಲ್ಲಿ ತಯಾರಿಸಿದ ತಿಂಡಿಗಳು ಬೆಳಗಿನ ಉಪಹಾರದಲ್ಲಿರಲಿ. ಅದು ನಿಮಗೆ ಸ್ಪೂರ್ತಿ ನೀಡುತ್ತದೆ.
ಮೀನ ರಾಶಿ
ಮೀನ ರಾಶಿಯವರು ಕನಸುಗಳಿಂದ ಕೂಡಿರುವ, ರಚನಾತ್ಮಕ ಹಾಗೂ ಶಾಂತಿಯುತ ದಿನವನ್ನು ಪ್ರೀತಿಸುತ್ತಾರೆ. ಹಾಗಾಗಿ ಧ್ಯಾನ, ಇಂಪಾದ ಸಂಗೀತ ಕೇಳುವುದು ಮುಂತಾದ ಚಟುವಟಿಕೆಗಳಿಂದ ದಿನ ಪ್ರಾರಂಭಿಸಿ. ನೀವು ಕ್ರಿಯೇಟಿವ್ ಆಗಿ ಥಿಂಕ್ ಮಾಡುವುದರಿಂದ ಬರವಣಿಗೆ ಅಥವಾ ಡ್ರಾಯಿಂಗ್ ಮೂಲಕವೂ ದಿನ ಪ್ರಾರಂಭಿಸಬಹುದು. ಇದಕ್ಕೆ ಸಹಾಯವಾಗುವಂತಹ ಹಿತವಾದ ಆಹಾರಗಳು ಬೆಳಗಿನ ಉಪಹಾರದಲ್ಲಿರಲಿ. ಇವೆಲ್ಲವೂ ಯಶಸ್ಸಿನ ದಿನ ನಿಮ್ಮದಾಗುವಂತೆ ಮಾಡುತ್ತದೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)