Akshaya Tritiya 2024: ಅನ್ನಪೂರ್ಣೇಶ್ವರಿ ಜನಿಸಿದ, ಸುಧಾಮನ ಬಡತನ ನಿವಾರಣೆಯಾದ ದಿನವೇ ಅಕ್ಷಯ ತೃತೀಯ; ಈ ದಿನ ಏನು ಮಾಡಬೇಕು?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Akshaya Tritiya 2024: ಅನ್ನಪೂರ್ಣೇಶ್ವರಿ ಜನಿಸಿದ, ಸುಧಾಮನ ಬಡತನ ನಿವಾರಣೆಯಾದ ದಿನವೇ ಅಕ್ಷಯ ತೃತೀಯ; ಈ ದಿನ ಏನು ಮಾಡಬೇಕು?

Akshaya Tritiya 2024: ಅನ್ನಪೂರ್ಣೇಶ್ವರಿ ಜನಿಸಿದ, ಸುಧಾಮನ ಬಡತನ ನಿವಾರಣೆಯಾದ ದಿನವೇ ಅಕ್ಷಯ ತೃತೀಯ; ಈ ದಿನ ಏನು ಮಾಡಬೇಕು?

Akshaya Tritiya 2024: ಪ್ರತಿ ವರ್ಷದಂತೆ ಈ ಬಾರಿ ಕೂಡಾ ಅಕ್ಷಯ ತೃತೀಯ ಆಚರಿಸಲಾಗುತ್ತಿದೆ. ಮೇ 10ರಂದು ಅಕ್ಷಯ ತದಿಗೆ ಇದೆ. ಅನ್ನಪೂರ್ಣೇಶ್ವರಿ ಜನಿಸಿದ, ಸುಧಾಮನ ಬಡತನ ನಿವಾರಣೆಯಾದ ದಿನವೇ ಅಕ್ಷಯ ತೃತೀಯ ಎಂದು ನಂಬಲಾಗಿದೆ. ಜೊತೆಗೆ ಈ ವಿಶೇಷ ದಿನಕ್ಕೆ ಸಂಬಂಧಿಸಿದಂತೆ ಅನೇಕ ಪುರಾಣ ಕಥೆಗಳಿವೆ.

 ಅನ್ನಪೂರ್ಣೇಶ್ವರಿ ಜನಿಸಿದ, ಸುಧಾಮನ ಬಡತನ ನಿವಾರಣೆಯಾದ ದಿನವೇ ಅಕ್ಷಯ ತೃತೀಯ
ಅನ್ನಪೂರ್ಣೇಶ್ವರಿ ಜನಿಸಿದ, ಸುಧಾಮನ ಬಡತನ ನಿವಾರಣೆಯಾದ ದಿನವೇ ಅಕ್ಷಯ ತೃತೀಯ

ಅಕ್ಷಯ ತೃತೀಯ: 10 ಮೇ 2024 ಶುಕ್ರವಾರದಂದು ಅಕ್ಷಯ ತದಿಗೆ ಆಚರಿಸಲಾಗುತ್ತಿದೆ. ಕೆಲವರು ಇದನ್ನು ಅಕ್ಷಯ ತೃತೀಯ ಎಂದು ಕರೆಯುತ್ತಾರೆ. ಇದೇ ದಿನದಂದು ಪರಶುರಾಮ ಜಯಂತಿ ಸಹ ಆಚರಿಸಲಾಗುತ್ತದೆ. ಪರಶುರಾಮ ಮತ್ತು ಅಕ್ಷಯ ತದಿಗೆಗೆ ಪರಸ್ಪರ ಸಂಬಂಧವಿದೆ. ಈ ದಿನವು ಭಗವಾನ್ ವಿಷ್ಣುವಿಗೆ ಸಂಬಂಧಿಸಿದ ಹಬ್ಬವಾಗಿದೆ. ದಶಾವತಾರದಲ್ಲಿ ಪರಶುರಾಮನ ಅವತಾರವು ಒಂದು.

ಪುರಾಣ ಪುಣ್ಯ ಕಥೆಗಳ ಪ್ರಕಾರ ಜಮದಗ್ನಿ ಮತ್ತು ರೇಣುಕಳ ಮಗನಾಗಿ ಪರಶುರಾಮ ಜನಿಸುತ್ತಾನೆ. ಕಾರಣಾಂತರಗಳಿಂದ ಪರಶುರಾಮನು ಕ್ಷತ್ರಿಯ ಕುಲವನ್ನು ನಾಶ ಮಾಡುವ ಸಂಕಲ್ಪ ಹೊಂದುತ್ತಾನೆ. ಹಿಂಸೆ ಮಾಡುವುದು ರಕ್ತ ಹರಿಸುವುದು ತಪ್ಪು ಎಂದು ತಿಳಿದಿದ್ದರೂ ಪರಶುರಾಮನು ಕ್ಷತ್ರಿಯರನ್ನು ಸಂಹರಿಸಲು ಆರಂಭಿಸುತ್ತಾನೆ. ರಾಮಾವತಾರದಲ್ಲಿ ರಾಮನನ್ನು ಸಂಧಿಸುವವರೆಗೂ ಇವನನ್ನು ತಡೆಯಲು ಸಾಧ್ಯವಾಗುವುದಿಲ್ಲ. ಪರಶುರಾಮನು ಈಗಿನ ಕೇರಳದಲ್ಲಿ ಜನಿಸಿ ಅಲ್ಲಿಯೇ ನೆಲೆಸಿದ್ದ ಎಂಬುದಕ್ಕೆ ಪುರಾವೆಗಳು ದೊರೆಯುತ್ತವೆ.

ಅನ್ನಪೂರ್ಣೇಶ್ವರಿ ಜನಿಸಿದ ದಿನ

ಇದೇ ದಿನ ಶ್ರೀ ಅನ್ನಪೂರ್ಣೇಶ್ವರಿಯ ಜನನವಾಯಿತು ಎಂದು ಕೆಲವು ಧರ್ಮಗ್ರಂಥಗಳಲ್ಲಿ ಸೂಚಿಸಲಾಗಿದೆ. ಈ ದಿನ ಕುಬೇರ ಲಕ್ಷ್ಮಿಯ ಪೂಜೆ ಮಾಡಿದರೆ ಎಲ್ಲಾ ರೀತಿಯ ಅನುಕೂಲಗಳು ದೊರೆಯುತ್ತವೆ. ಆಹಾರಾದಿಗಳಿಗೂ ಹಣಕ್ಕೂ ಜೀವಮಾನವಿಡೀ ಕೊರತೆ ಇರುವುದಿಲ್ಲ.

ಈ ದಿನ ಅಡುಗೆ ಮನೆಯನ್ನು ಸ್ವಚ್ಛ ಮಾಡಿ ಒಲೆಗೆ ರಂಗೋಲಿ ಇಟ್ಟು ಹಾಲನ್ನು ಕಾಯಿಸಿ ಎಲ್ಲರೂ ಕುಡಿಯಬೇಕು. ಈ ದಿನ ಹಬ್ಬದ ಅಡುಗೆಯನ್ನು ಮಾಡಿ ಸಂತೋಷದಿಂದ ದಿನ ಕಳೆಯಬೇಕು. ಮನೆಗೆ ಆಗಮಿಸುವ ದಂಪತಿಗಳಿಗೆ ಭೋಜನವನ್ನು ಬಡಿಸಿ ದಕ್ಷಿಣೆ ಸಮೇತ ತಾಂಬೂಲವನ್ನು ನೀಡಿ ಆಶೀರ್ವಾದ ಪಡೆಯಬೇಕು. ಈ ರೀತಿ ಮಾಡಿದರೆ ಜನ್ಮ ಜನ್ಮಕೂ ತಿನ್ನುವ ಅನ್ನಕ್ಕೆ ಕೊರತೆ ಬರುವುದಿಲ್ಲ .

ಮೊದಲು ವಿಷ್ಣು ಸಮೇತ ಲಕ್ಷ್ಮಿಯನ್ನು ಪೂಜಿಸಬೇಕು ನಂತರ ಕುಬೇರನ ಪೂಜೆಯನ್ನು ಮಾಡಬೇಕು. ಹೀಗೆ ಮಾಡುವುದರಿಂದ ಐಶ್ವರ್ಯ ಮತ್ತು ಸಂಪತ್ತಿಗೆ ಕೊರತೆ ಇರುವುದಿಲ್ಲ. ಹಾಗೆಯೇ ಯಾವುದೇ ರೀತಿಯ ತೊಂದರೆಯೂ ಆಗುವುದಿಲ್ಲ. ಕುಬೇರನು ಈ ದಿನ ಲಕ್ಷ್ಮೀನಾರಾಯಣರ ಪೂಜೆ ಮಾಡಿದ ಕಾರಣ ದೇವಾನು ದೇವತೆಗಳಿಗೆ ಸಾಲ ನೀಡುವಂಥ ಸಿರಿವಂತನಾಗುತ್ತಾನೆ. ಈ ದಿನ ಯಾವುದೇ ಕಾರಣಕ್ಕೂ ಹಣವನ್ನು ಹೇಗೆಂದರೆ ಹಾಗೆ ಬಳಸಬಾರದು. ಅದನ್ನು ಜೂಜಿಗೆ ಬಳಸಬಾರದು. ಒಂದು ವೇಳೆ ಹೀಗೆ ಮಾಡಿದಲ್ಲಿ ಬಡತನದಿಂದ ಬಳಲಬೇಕಾಗುತ್ತದೆ. ಈ ದಿನ 11 ಲಕ್ಷ್ಮಿ ಕವಡೆಗಳನ್ನು ಒಂದು ಬಟ್ಟಲಿನಲ್ಲಿ ಹಾಕಿ ದೇವರ ಬಳಿ ಇಟ್ಟು ಪೂಜಿಸಬೇಕು. ನಂತರ ಅದನ್ನು ದೇವರ ಗೂಡಿನಲ್ಲಿ ಅಥವಾ ಪ್ರತಿದಿನ ಬಳಸುವ ಹಣದ ಜೊತೆ ಇಟ್ಟಲ್ಲಿ ಹಣದ ಕೊರತೆ ಉಂಟಾಗುವುದಿಲ್ಲ. ಅಕ್ಷಯ ತೃತೀಯದಂದೇ ಮಹರ್ಷಿ ವೇದವ್ಯಾಸರು ಮಹಾ ಭಾರತವನ್ನು ಬರೆಯುವುದನ್ನು ಆರಂಭಿಸಿದ್ದು. ಯುಧಿಷ್ಟಿರನಿಗೆ ಅಕ್ಷಯ ಪಾತ್ರೆ ದೊರೆತಿದ್ದು ಕೂಡಾ ಇದೇ ದಿನ.

ದ್ರೌಪದಿಯನ್ನು ಶ್ರೀಕೃಷ್ಣ ಕಾಪಾಡಿದ ದಿನವೇ ಅಕ್ಷಯ ತೃತೀಯ

ದುಶ್ಯಾಸನನಿಂದ ದ್ರೌಪದಿಯು ವಸ್ತ್ರಾಪಹರಣಕ್ಕೆ ಒಳಗಾದದ್ದು ಇದೇ ಅಕ್ಷಯ ತದಿಗೆಯಂದು. ಸ್ವಯಂ ಕೃಷ್ಣನೇ ದ್ರೌಪದಿ ಎದುರು ಪ್ರತ್ಯಕ್ಷವಾಗಿ ಮಿತಿ ಇಲ್ಲದ ವಸ್ತ್ರವನ್ನು ದಯಪಾಲಿಸಿ ದ್ರೌಪದಿಯನ್ನು ಕಾಪಾಡುತ್ತಾನೆ. ಮುಖ್ಯವಾದ ವಿಚಾರವೆಂದರೆ ದ್ರೌಪತಿಯು ತನ್ನನ್ನು ಕಾಪಾಡಲು ಎಲ್ಲರನ್ನೂ ಬೇಡಿಕೊಳ್ಳುತ್ತಾಳೆ. ಆದರೆ ಸಾಧ್ಯವಾಗುವುದಿಲ್ಲ. ಕೊನೆಗೆ ಶ್ರೀ ಕೃಷ್ಣ ಮಾತ್ರ ಆಕೆಯ ನೆರವಿಗೆ ಬರುತ್ತಾನೆ. ಕೃಷ್ಣನ ಗೆಳೆಯ ಸುಧಾಮನ ಬಡತನ ಕೂಡಾ ಇದೇ ದಿನ ನಿವಾರಣೆಯಾಯಿತು ಎಂದು ಶಾಸ್ತ್ರ ಗ್ರಂಥಗಳು ಹೇಳುತ್ತವೆ. ದ್ರೌಪದಿ ಮತ್ತು ಅಕ್ಷಯ ಪಾತ್ರೆಯ ವಿಚಾರಗಳು ಧರ್ಮ ಆಚರಣೆ ಮತ್ತು ದಾನವನ್ನು ಸೂಚಿಸುತ್ತದೆ. ಆದ್ದರಿಂದ ಈ ದಿನವು ದಾನ ಧರ್ಮಗಳಿಗೆ ವಿಶೇಷವಾದ ದಿನವಾಗಿದೆ.

ಚಿನ್ನ ಬೆಳ್ಳಿ ಕೊಳ್ಳುವವರು ಒಡವೆಯನ್ನು ಮೊದಲು ಕುಲದೇವರ ಪಾದದಲ್ಲಿ ಇರಿಸಬೇಕು. ಅನಂತರ ಅದನ್ನು ಬಳಸುವುದು ಒಳ್ಳೆಯದು. ಇದೇ ರೀತಿ ಹೊಸ ವ್ಯಾಪಾರ ವ್ಯವಹಾರಗಳನ್ನು ಆರಂಭಿಸಲು ಈ ದಿನ ಒಳ್ಳೆಯದು. ಆದ್ದರಿಂದ ದೇವರಿಗೆ ಪೂಜೆ ಸಲ್ಲಿಸುವುದರ ಜೊತೆಗೆ, ಒಡವೆಗಳನ್ನು ಕೊಳ್ಳುವುದರ ಜೊತೆ ದಾನವನ್ನು ಮಾಡಬೇಕು. ದಾನವಾಗಿ ಯಾವುದೇ ವಸ್ತುವನ್ನು ನೀಡಬಹುದು. ಒಟ್ಟಾರೆ, ಈ ದಿನ ಮಾಡುವ ಒಳ್ಳೆಯ ಕೆಲಸಗಳಲ್ಲಿ ಒಳ್ಳೆಯ ಫಲಗಳೇ ಇರುತ್ತವೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.