Mangalore News: ಮಂಗಳೂರಿನಲ್ಲಿ ಬಲು ಜೋರು ದಸರಾ ದರ್ಬಾರು; ಇಂದಿನಿಂದ ಆರಂಭ ಮಾರ್ನೇಮಿ ಸಂಭ್ರಮ
ಕರ್ನಾಟಕದಲ್ಲಿ ಮೈಸೂರಿನಷ್ಟೇ ಸಂಭ್ರಮದಿಂದ ಇನ್ನೊಂದು ಕಡೆ ದಸರಾವನ್ನು ಆಚರಿಸಲಾಗುತ್ತದೆ. ಅದುವೇ ಮಂಗಳೂರು ದಸರಾ. ಮಂಗಳೂರಿನ ದಸರಾವನ್ನು ಮಾರ್ನೇಮಿ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಇಲ್ಲಿ ನವರಾತ್ರಿಗೆ ಶಾರದಾದೇವಿಯನ್ನು ಪ್ರತಿಷ್ಠಾಪಿಸುವುದು ವಿಶೇಷ. ಮಂಗಳೂರು ದಸರಾ ಕುರಿತ ಲೇಖನ.
ದಸರಾ ಎಂದಾಕ್ಷಣ ನೆನಪಾಗುವುದು ಮೈಸೂರು. ಮೈಸೂರು ದಸರಾ ಜಗತ್‌ಪ್ರಸಿದ್ಧ. ಇಲ್ಲಿನ ದಸರಾಕ್ಕೆ ಹಲವು ವರ್ಷಗಳ ಇತಿಹಾಸವಿದೆ. ಆದರೆ ಕರ್ನಾಟಕದಲ್ಲಿ ಮೈಸೂರಿನಷ್ಟೇ ಸಂಭ್ರಮದಿಂದ ಇನ್ನೊಂದು ಕಡೆ ದಸರಾವನ್ನು ಆಚರಿಸಲಾಗುತ್ತದೆ. ಅದುವೇ ಮಂಗಳೂರು ದಸರಾ. ಕರ್ನಾಟಕ ಹಾಗೂ ಭಾರತ ದೇಶದಾದ್ಯಂತ ಮಂಗಳೂರು ದಸರಾವು ಸಾಕಷ್ಟು ಪ್ರಸಿದ್ಧಿ ಪಡೆಯುತ್ತಿದೆ. ಈ ವರ್ಷ ಮಂಗಳೂರಿನಲ್ಲಿ 34ನೇ ವರ್ಷದ ದಸರ ಮಹೋತ್ಸವ ನಡೆಯುತ್ತಿದೆ.
ಕಡಲತಡಿಯ ಊರಿನಲ್ಲಿ ದಸರಾ ಸಂಭ್ರಮವನ್ನು ಕಂಡೇ ಸವಿಯಬೇಕು. ಇಂದಿನಿಂದ (ಅ.15) ಕುಡ್ಲದಲ್ಲಿ ಹತ್ತು ದಿನಗಳ ಕಾಲ ದಸರಾ ಉತ್ಸವ ನಡೆಯಲಿದೆ. ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದ ವತಿಯಿಂದ ಮಂಗಳೂರು ದಸರಾ ಆಚರಣೆ ನಡೆಯುತ್ತದೆ. ಕಳೆದ 33 ವರ್ಷಗಳಿಂದ ಮಂಗಳೂರಿನಲ್ಲಿ ದಸರಾ ದರ್ಬಾರು ಬಲು ಜೋರು.
ಮಾರ್ನೇಮಿ
ಮಂಗಳೂರಿನ ದಸರಾವನ್ನು ಮಾರ್ನೇಮಿ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಬಿ.ಆರ್. ಕರ್ಕೇ ಅವರು ಮಾರ್ನೇಮಿ ಆಚರಣೆಗೆ ಕಾರಣೀಕರ್ತರು. ಇವರೇ ಮಂಗಳೂರು ದಸರಾ ಆಚರಣೆಯ ರೂವಾರಿ. ಮಾರ್ನೇಮಿಯಲ್ಲಿ ವಿಶೇಷ ಪೂಜೆ, ಪುನಸ್ಕಾರದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕರಾವಳಿಯ ಜಾನಪದ ಕಲೆಗಳು ಸಡಗರವನ್ನು ಹೆಚ್ಚಿಸುತ್ತವೆ. ಹುಲಿವೇಷ, ಕರಡಿ ವೇಷದ ಕುಣಿತಗಳನ್ನು ನೋಡಲು ಕಣ್ಣಿಗೆ ಹಬ್ಬ. ದಸರಾ ಸಮಯದಲ್ಲಿ ಇಲ್ಲಿನ ಬೀದಿಗಳು ಬಣ್ಣದ ಬೆಳಕಿನ ಅಲಂಕಾರದಲ್ಲಿ ಕಂಗೊಳಿಸುತ್ತವೆ. ನವರಾತ್ರಿ ಸಮಯದಲ್ಲಿ ಇಡೀ ಮಂಗಳೂರಿಗೆ ಮಂಗಳೂರೇ ದೀಪದ ಅಲಂಕಾರದಲ್ಲಿ ಮಿನುಗುವುದನ್ನು ಕಾಣಬಹುದು.
ಶಾರದಾದೇವಿ ಇಲ್ಲಿನ ವಿಶೇಷ
ಮೈಸೂರಿನಲ್ಲಿ ಜಂಬೂಸವಾರಿ ಸವಾರಿ ನಡೆದರೆ ಮಂಗಳೂರಿನಲ್ಲಿ ಶಾರದಾದೇವಿ ಮೆರವಣಿಗೆ ಮಾಡಲಾಗುತ್ತದೆ. ಇಲ್ಲಿ ನವರಾತ್ರಿಗೆ ಶಾರದಾದೇವಿಯನ್ನು ಪ್ರತಿಷ್ಠಾಪಿಸುವುದು ವಿಶೇಷ.
ಹುಲಿವೇಷ ಕುಣಿತದ ಆಕರ್ಷಣೆ
ಮಂಗಳೂರು ದಸರಾದಲ್ಲಿ ಕರಾವಳಿ ಭಾಗದ ಸಾಂಸ್ಕೃತಿಕ ಕುಣಿತಗಳು ಸಂಭ್ರಮವನ್ನು ಹೆಚ್ಚಿಸುತ್ತವೆ. ಹುಲಿವೇಷ ಕುಣಿತ ಇಲ್ಲಿನ ಪ್ರಮುಖ ಆಕರ್ಷಣೆ. ಹುಲಿವೇಷ ಧರಿಸಿ ನೃತ್ಯ ಮಾಡುವ ಮೂಲಕ ಶಾರದಾ ದೇವಿಗೆ ಗೌರವ ಸಲ್ಲಿಸಲಾಗುತ್ತದೆ.
ಶಾರದಾ ದೇವಿ ವಿಗ್ರಹದೊಂದಿಗೆ ಗಣಪತಿ ಹಾಗೂ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕುಶ್ಮಾಂಡಿನಿ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ, ಸಿದ್ಧಿದಾತ್ರಿ ನವದುರ್ಗೆಯರನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವುದು ಮಂಗಳೂರು ದಸರಾದ ವಿಶೇಷ. ನವರಾತ್ರಿಯ ಸಲುವಾಗಿ ಕುದ್ರೋಳಿ ದೇವಸ್ಥಾನದ ಟ್ರಸ್ಟಿಯವರು 9 ದಿನಗಳ ಕಾಲ 'ಗಂಗಾವತರಣ'ವನ್ನು ಆಯೋಜಿಸುತ್ತಾರೆ. ಈ ಚಿತ್ರಣದಲ್ಲಿ 13 ಅಡಿ ಎತ್ತರದ ಶಿವನ 4 ವರ್ಣರಂಜಿತ ವಿಗ್ರಹಗಳು ಇರುತ್ತದೆ.
ಮೆರವಣಿಗೆಯೇ ಇಲ್ಲಿ ಆಕರ್ಷಣೆ
ಮಂಗಳೂರು ದಸರಾವು ತನ್ನ ಭವ್ಯ ಮೆರವಣಿಗೆಯ ಮೂಲಕ ಹೆಚ್ಚು ಖ್ಯಾತಿ ಪಡೆದಿದೆ. ಇಲ್ಲಿನ ಶಾರದಾ ದೇವಿ ವಿರ್ಸಜನಾ ಮೆರವಣಿಗೆಯ ಸಂಭ್ರಮವನ್ನು ವಿವರಿಸಲು ಪದಗಳೇ ಸಾಲುವುದಿಲ್ಲ. ವಿಜಯದಶಮಿಯಂದು ಸಂಜೆ ಗೋಕರ್ಣನಾಥೇಶ್ವರ ದೇವಾಲಯದಿಂದ ಆರಂಭವಾಗುವ ಮೆರವಣಿಗೆ ಮರುದಿನ ಮುಂಜಾನೆ ದೇವಸ್ಥಾನದ ಆವರಣದಲ್ಲಿ ಇರುವ ಪುಷ್ಕರಿಣಿ ಕೊಳದಲ್ಲಿ ಪ್ರತಿಷ್ಠಾಪಿಸಲಾದ ವಿಗ್ರಹಗಳ ವಿರ್ಸಜನೆಯಿಂದ ಅಂತ್ಯಗೊಳುತ್ತದೆ. ನವದುರ್ಗೆಯರು, ಮಹಾಗಣಪತಿ ಹಾಗೂ ಶಾರದಾ ದೇವಿಯ ವಿಗ್ರಹಗಳನ್ನು ಹೊತ್ತು ಮೆರವಣಿಗೆ ಸಾಗುತ್ತದೆ. ಈ ಮೆರವಣಿಗೆಯಲ್ಲಿ ಡೋಲು, ಚಂಡೆ, ಜಾನಪದ ನೃತ್ಯ ತಂಡಗಳ ಕುಣಿತ, ಯಕ್ಷಗಾನ ಪಾತ್ರಗಳು, ಹುಲಿವೇಷಗಳು, ಕರಡಿ, ಜಿಂಕೆ ವೇಷ, ಡೊಳ್ಳು ಕುಣಿತ ಹೀಗೆ ಮೆರವಣಿಗೆ ಸಂಭ್ರಮವನ್ನು ಇನ್ನಷ್ಟು ಹೆಚ್ಚುಸುತ್ತವೆ.
ನಿಮಗೂ ಮಂಗಳೂರು ದಸರಾ ನೋಡಬೇಕು ಎನ್ನುವ ಆಸೆ ಇದ್ದರೆ ವಿಜಯದಶಮಿ ಸಮಯದಲ್ಲಿ ಮಂಗಳೂರಿಗೆ ಭೇಟಿ ನೀಡುವುದು ಉತ್ತಮ. ಮಂಗಳೂರಿಗೆ ಬಸ್, ರೈಲು ಹಾಗೂ ವಿಮಾನ ಸೌಲಭ್ಯವಿದೆ. ಇಲ್ಲಿ ಉಳಿದುಕೊಳ್ಳಲು ಸಾಕಷ್ಟು ಹೋಟೆಲ್‌ಗಳು ಲಭ್ಯವಿವೆ. ವಸತಿ ಗೃಹಗಳು ಇವೆ. ಇಲ್ಲಿಗೆ ಭೇಟಿ ನೀಡಿದರೆ ಸುತ್ತಲಿನ ಹಲವು ದೇವಾಲಯಗಳು ಬೀಚ್‌ಗಳ ಸೌಂದರ್ಯವನ್ನೂ ಸವಿಯಬಹುದು.