ಕಲ್ಕಿ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ನಿರ್ವಹಿಸುತ್ತಿರುವ ಅಶ್ವತ್ಥಾಮ ಯಾರು, ಮಹಾಭಾರತದಲ್ಲಿ ಆತನ ಪಾತ್ರವೇನು: ಶ್ರೀಕೃಷ್ಣ ಶಾಪ ನೀಡಿದ್ದೇಕೆ?
ವೈಜಯಂತಿ ಮೂವೀಸ್ ಬ್ಯಾನರ್‌ನಲ್ಲಿ ನಾಗ್ ಅಶ್ವಿನ್ ನಿರ್ದೇಶಿಸುತ್ತಿರುವ ಕಲ್ಕಿ 2898 AD ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಅಶ್ವತ್ಥಾಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಅಶ್ವತ್ಥಾಮ ಯಾರು? ಮಹಾಭಾರತದಲ್ಲಿ ಆತನ ಪಾತ್ರ ಯಾವುದು? ಶ್ರೀ ಕೃಷ್ಣ ಕಲ್ಕಿಗೆ ನೀಡಿದ ಶಾಪವೇನು? ಕಲ್ಕಿ ಇನ್ನೂ ಏಕೆ ಬದುಕಿದ್ದಾನೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ.
ಮಹಾಭಾರತದ ಅಶ್ವತ್ಥಾಮ: ಪ್ರಭಾಸ್, ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಕಲ್ಕಿ 2898 AD ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಬಿಗ್ ಬಜೆಟ್‌ನ ಈ ಸಿನಿಮಾ ಅಪ್‌ಡೇಟ್ ಪಡೆಯಲು ಅಭಿಮಾನಿಗಳಂತೂ ತುದಿಗಾಲಿನಲ್ಲಿ ನಿಂತಿದ್ದಾರೆ. ಸಿನಿಮಾದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಕಲ್ಕಿ 2898 AD ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಅಶ್ವತ್ಥಾಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರತಂಡ ಅಮಿತಾಬ್ ಬಚ್ಚನ್ ಕ್ಯಾರೆಕ್ಟರ್ ಟೀಸರ್ ರಿಲೀಸ್ ಮಾಡಿದ್ದು ಬಿಗ್ ಬಿ ಅವತಾರ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಟೀಸರ್ ಇಷ್ಟರ ಮಟ್ಟಿಗೆ ಇದೆ. ಇನ್ನು ಸಿನಿಮಾ ಹೇಗಿರಬಹುದು ಎಂದು ಊಹಿಸಿಕೊಂಡು ಎಕ್ಸೈಟ್ ಆಗಿದ್ಧಾರೆ. ಅಂದ ಹಾಗೆ ಅಮಿತಾಬ್ ಬಚ್ಚನ್ ಪಾತ್ರ ನಿಭಾಯಿಸುತ್ತಿರುವ ಅಶ್ವತ್ಥಾಮ ಯಾರು? ಮಹಾಭಾರತದಲ್ಲಿ ಆತ ಯಾವ ರೀತಿ ಖ್ಯಾತಿ ಗಳಿಸಿದ್ದ ಎಂಬುದನ್ನು ತಿಳಿದುಕೊಳ್ಳಲು ಬಹಳಷ್ಟು ಜನರು ಕಾತರದಿಂದ ಹುಡುಕಾಡುತ್ತಿದ್ದಾರೆ. ಅಶ್ವತ್ಥಾಮನ ಬಗ್ಗೆ ಒಂದಿಷ್ಟು ವಿವರ ಇಲ್ಲಿದೆ.
ದ್ರೋಣಾಚಾರ್ಯರ ಪುತ್ರ
ಅಶ್ವತ್ಥಾಮನು ಪಾಂಡವರು ಮತ್ತು ಕೌರವರಿಗೆ ಗುರುವಾಗಿದ್ದ ದ್ರೋಣಾಚಾರ್ಯರ ಪುತ್ರ. ಕುರುಕ್ಷೇತ್ರ ಯುದ್ಧದಲ್ಲಿ ಅಶ್ವತ್ಥಾಮನ ಶೌರ್ಯವನ್ನು ವಿವರಿಸಲಾಗಿದೆ. 64 ಕಲೆಗಳಲ್ಲಿ ಪ್ರವೀಣನಾಗಿದ್ದ ಅಶ್ವತ್ಥಾಮನು ಆ ಯುದ್ಧದಲ್ಲಿ ಕೌರವರ ಪರ ನಿಂತು ಪಾಂಡವರ ವಿರುದ್ಧ ಹೋರಾಡಿದನು. ಆದರೆ ಪಾಂಡವರು ಯುದ್ಧವನ್ನು ಗೆದ್ದ ನಂತರ ಅಶ್ವತ್ಥಾಮನು ಕೋಪದಿಂದ ಪಾಂಡವರ ಮಕ್ಕಳಾದ ಉಪ-ಪಾಂಡವರನ್ನು ಕತ್ತು ಹಿಸುಕಿ ಕೊಲ್ಲುತ್ತಾನೆ. ಈ ತಪ್ಪು ಮಾಡಿದ್ದಕ್ಕೆ ಶ್ರೀಕೃಷ್ಣನು ಅಶ್ವತ್ಥಾಮನನ್ನು ಶಪಿಸುತ್ತಾನೆ.
ಅಶ್ವತ್ಥಾಮನಿಗೆ ಶ್ರೀಕೃಷ್ಣ ನೀಡಿದ ಶಾಪವೇನು?
ಅಶ್ವತ್ಥಾಮ, ನಿನಗೆ ಮೃತ್ಯು ಎಂದರೆ ಭಯವಿಲ್ಲ ತಾನೇ? ಮೃತ್ಯುವನ್ನು ನಿನ್ನಿಂದ ನಾನು ಹಿಂತೆಗೆದುಕೊಳ್ಳುತ್ತೇನೆ. ನೀನು ಸಾವೇ ಇಲ್ಲದೆ ಅಮರತ್ವನ್ನು ಹೊಂದುವಂತೆ ನಾನು ಶಪಿಸುತ್ತಿದ್ದೇನೆ. ಕಾಲ ಕ್ರಮೇಣ ನಿನ್ನ ಶರೀರದ ಪ್ರತಿಯೊಂದು ಅಣುವೂ ನಿನಗೆ ನೋವುನ್ನುಂಟು ಮಾಡುತ್ತದೆ. ಕೀವು ಮತ್ತು ರಕ್ತ ಸೋರುತ್ತದೆ. ನಿನ್ನ ಬಳಿ ಬರುವ ಸಾಹಸವನ್ನು ಯಾರೂ ಮಾಡಲಾರರು. ಜಗತ್ತು ಇರುವವರೆಗೂ ನೀನು ಈ ಪ್ರಪಂಚದಲ್ಲೇ ನರಳುತ್ತೀಯ. ಸಾವಿಗಾಗಿ ಪರಿತಪಿಸುತ್ತೀಯ. ಆದರೆ ನಿನಗೆ ಎಂದಿಗೂ ಸಾವು ಬರುವುದೇ ಇಲ್ಲ ಎಂದು ಕೃಷ್ಣನು ಅಶ್ವತ್ಥಾಮನನ್ನು ಶಪಿಸುತ್ತಾನೆ. ಆದ್ದರಿಂದಲೇ, ಪುರಾಣಗಳ ಪ್ರಕಾರ ಶ್ರೀ ಕೃಷ್ಣ ನೀಡಿದ ಶಾಪದಂತೆ ಅಶ್ವತ್ಥಾಮನು ಇನ್ನೂ ಈ ಭೂಮಿಯಲ್ಲಿ ಬದುಕಿದ್ದಾನೆ. ಕಾಡು ಮೇಡುಗಳಲ್ಲಿ ಸಂಚರಿಸುತ್ತಿದ್ದಾನೆ ಎಂದು ನಂಬಲಾಗಿದೆ.
ಕಲ್ಕಿಗೂ ಅಶ್ವತ್ಥಾಮನಿಗೂ ಏನು ಸಂಬಂಧ?
ಕಲ್ಕಿಗೂ ಅಶ್ವತ್ಥಾಮನಿಗೂ ಇರುವ ಸಂಬಂಧದ ಬಗ್ಗೆ ಕಲ್ಕಿ ಪುರಾಣದಲ್ಲಿ ಉಲ್ಲೇಖವಿದೆ. ಅಶ್ವತ್ಥಾಮ ಸೇರಿದಂತೆ ಈ ಭೂಮಿಯಲ್ಲಿ 7 ಮಂದಿ ಅಮರರಿದ್ದಾರೆ. ಪರಶುರಾಮ, ಕೃಪಾಚಾರ್ಯ, ವೇದವ್ಯಾಸ, ವಿಭೀಷಣ, ಬಲಿ ಚಕ್ರವರ್ತಿ, ಹನುಮಂತ ಕೂಡಾ ಇದ್ದಾರೆ. ಇವರೆಲ್ಲಾ ಕಲ್ಕಿಯನ್ನು ನೋಡಲು ಹಿಮಾಲಯದಲ್ಲಿರುವ ದೇವತೆಗಳ ನಗರಕ್ಕೆ ಹೋಗುತ್ತಾರೆ. ಅಶ್ವತ್ಥಾಮ, ಕೃಪಾಚಾರ್ಯ, ವೇದವ್ಯಾಸ, ಪರಶುರಾಮ ನಾಲ್ವರೂ ಕಲ್ಕಿ ಧರ್ಮವನ್ನು ಸ್ಥಾಪಿಸಲು ಸಹಾಯ ಮಾಡುತ್ತಾರೆ. ಇವರೆಲ್ಲರೂ ಸೇರಿ ಕಲ್ಕಿಗೆ ಆ ಹೆಸರು ಇಡುತ್ತಾರೆ. ಅಷ್ಟೇ ಅಲ್ಲ ಪರಶುರಾಮನೇ ಸ್ವತ: ಕಲ್ಕಿಗೆ ಎಲ್ಲಾ ವಿದ್ಯೆಯನ್ನೂ ಕಲಿಸಿ ಗುರು ಸ್ಥಾನದಲ್ಲಿ ಇದ್ದಾನೆ. ಕಲಿಯುಗದ ಅಂತ್ಯದಲ್ಲಿ ಅಥವಾ ಧರ್ಮವು ದಾರಿ ತಪ್ಪಿದ ಸಂದರ್ಭದಲ್ಲಿ ಕಲ್ಕಿಯು ಮತ್ತೆ ಧರ್ಮವನ್ನು ಸಂಸ್ಥಾಪಿಸಲು ಬರುತ್ತಾನೆ ಎಂದು ನಂಬಲಾಗಿದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.