ಭಗವದ್ಗೀತೆ: ಮಾನವ ಜೀವನದ ಗುರಿ ಶ್ರೀಕೃಷ್ಣನೊಂದಿಗೆ ನಿರಂತರ ಸಂಬಂಧದಲ್ಲಿ ಆಧ್ಯಾತ್ಮಿಕ ಜ್ಞಾನ ಬೆಳೆಸಿಕೊಳ್ಳುವುದು; ಗೀತೆಯ ಅರ್ಥ ತಿಳಿಯಿರಿ
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಜೀವನದ ಗುರಿ ದೇವರ ನಿರಂತರ ಸಂಬಂಧದಲ್ಲಿ ಆಧ್ಯಾತ್ಮಿಕ ಜ್ಞಾನ ಬೆಳೆಸಿಕೊಳ್ಳುವುದು ಎಂಬುದರ ಅರ್ಥ ತಿಳಿಯಿರಿ.
ಇಮಂ ವಿವಸ್ವತೇ ಯೋಗಂ ಪ್ರೋಕ್ತವಾನಹಮವ್ವಯಮ್ |
ವಿವಸ್ವಾನ್ಮನೇ ಪ್ರಾಹ ಮನುರಿಕ್ಷ್ವಾಕವೇಬ್ರವೀತ್ ||1||
ದೇವೋತ್ತಮ ಪರಮ ಪುರುಷನಾದ ಶ್ರೀಕೃಷ್ಣನು ಹೇಳಿದನು - ನಾಶವಿಲ್ಲದ ಈ ಯೋಗವಿಜ್ಞಾನವನ್ನು ನಾನು ವಿವಸ್ವಾನ್ ಎಂದರೆ ಸೂರ್ಯನಿಗೆ ಹೇಳಿದನು; ವಿವಸ್ವಾನನು ಅದನ್ನು ಮಾನವ ಕುಲದ ತಂದೆಯಾದ ಮನುವಿಗೆ ಹೇಳಿದನು; ಮನುವು ಇಕ್ಷಾಕುವಿಗೆ ಹೇಳಿದನು.
ಸೂರ್ಯಗ್ರಹದಿಂದ ಪ್ರಾರಂಭವಾಗಿ ಎಲ್ಲ ಗ್ರಹಗಳ ರಾಜವರ್ಗಕ್ಕೆ ಭಗವದ್ಗೀತೆಯನ್ನು ಉಪದೇಶಿಸಲಾಗಿತ್ತು. ಅಂತಹ ಪ್ರಾಚೀನ ಕಾಲದಿಂದ ಅದರ ಚರಿತ್ರೆಯ ನಿರೂಪಣೆಯನ್ನು ಇಲ್ಲಿ ನೋಡುತ್ತೇವೆ. ಎಲ್ಲ ಗ್ರಹಗಳ ರಾಜರೂ ಇರುವುದು ನಿವಾಸಿಗಳ ರಕ್ಷಣೆಗಾಗಿ. ರಾಜವರ್ಗದವರು ಪ್ರಜೆಗಳನ್ನು ಆಳಿ ಅವರನ್ನು ಕಾಮದ ಸಲುವಾಗಿರುವ ಐಹಿಕ ಬಂಧನದಿಂದ ರಕ್ಷಿಸಬೇಕಾದರೆ ಅವರಿಗೆ ಭಗವದ್ಗೀತಾಶಾಸ್ತ್ರವು ತಿಳಿದಿರಬೇಕು. ಮಾನವ ಜೀವನದ ಗುರಿ ದೇವೋತ್ತಮ ಪರಮ ಪುರುಷನೊಂದಿಗೆ ನಿರಂತರವಾದ ಸಂಬಂಧದಲ್ಲಿ ಆಧ್ಯಾತ್ಮಿಕ ಜ್ಞಾನವನ್ನು ಬೆಳೆಸಿಕೊಳ್ಳುವುದು.
ಈ ಪಾಠವನ್ನು ಶಿಕ್ಷಣ, ಸಂಸ್ಕೃತಿ ಮತ್ತು ಭಕ್ತಿಗಳ ಮೂಲಕ ಜನತೆಗೆ ತಿಳಿಸಿಕೊಡುವುದು ಎಲ್ಲ ರಾಜ್ಯಗಳ ಮತ್ತು ಎಲ್ಲ ಗ್ರಹಗಳ ಅಧಿಪತಿಗಳ ಕರ್ತವ್ಯ. ಇದನ್ನೇ ಬೇರೆ ಮಾತುಗಳಲ್ಲಿ ಹೇಳುವುದಾದರೆ ಮಾನವ ಜನ್ಮದ ಈ ಅವಕಾಶವನ್ನು ಉಪಯೋಗಿಸಿಕೊಂಡು ಜನರು ಈ ಶ್ರೇಷ್ಠ ಶಾಸ್ತ್ರದ ಸದುಪಯೋಗ ಮಾಡಿಕೊಂಡು ಯಶಸ್ವಿಯಾದ ಮಾರ್ಗದಲ್ಲಿ ಮುಂದುವರಿಯಬೇಕು. ಇದಕ್ಕಾಗಿ ಕೃಷ್ಣಪ್ರಜ್ಞೆಯ ಶಾಸ್ತ್ರವನ್ನು ಹರಡುವುದು ಎಲ್ಲ ರಾಜ್ಯಗಳ ಅಧಿಪತಿಗಳ ಕರ್ತವ್ಯ.
ಸೌರವ್ಯೂಹದ ಎಲ್ಲ ಗ್ರಹಗಳಿಗೆ ಮೂಲ ಸೂರ್ಯಲೋಕ: ಇದರ ರಾಜನಾದ ಸೂರ್ಯದೇವನಿಗೆ ಈ ಕಲ್ಪವಲ್ಲಿ ವಿವಸ್ವಾನ್ ಎಂದು ಹೆಸರು. ಬ್ರಹ್ಮ ಸಂಹಿತೆಯಲ್ಲಿ (5:52) ಹೀಗೆ ಹೇಳಿದೆ.
ಯಚ್ಚಕ್ಷುರೇಷ ಸವಿತಾ ಸಕಲಗ್ರಹಾಣಾಂ
ರಾಜಾ ಸಮಸ್ತಸುರಮೂರ್ತಿರಶೇಷತೇಜಾಃ |
ಯಸ್ಯಾಜ್ಞಯಾ ಭ್ರಮತಿ ಸಮ್ಬೃತಕಾಲಚಕ್ರೋ
ಗೋವಿನ್ದಮಾದಿಪುರುಷಂ ತಮಹಂ ಭಜಾಮಿ ||
ಬ್ರಹ್ಮದೇವನು ಹೇಳದ "ದೇವೋತ್ತಮ ಪರಮ ಪುರುಷನಾದ ಗೋವಿಂದನನ್ನು (ಕೃಷ್ಣನನ್ನು) ನಾನು ಪೂಜಿಸಬಯಸುತ್ತೇನೆ. ಅವನು ಆದಿಪುರುಷ. ಎಲ್ಲ ಗ್ರಹಗಳ ರಾಜನಾದ ಸೂರ್ಯನು ಅವನ ಅಜ್ಞೆಯಂತೆ ಅಗಾಧ ಶಕ್ತಿಯನ್ನೂ ಶಾಖವನ್ನೂ ಪಡೆದಿರುತ್ತಾನೆ. ಸೂರ್ಯನು ತನ್ನ ಪಥದಲ್ಲಿ ಚಲಿಸುತ್ತಾನೆ."
ಸೂರ್ಯನು ಗ್ರಹಗಳ ರಾಜ: (ಈಗ ವಿವಸ್ವಾನ್ ಎಂಬ ಹೆಸರಿನ) ಸೂರ್ಯದೇವನು ಸೂರ್ಯಗ್ರಹವನ್ನಾಳುತ್ತಾನೆ. ಶಾಖ ಮತ್ತು ಬೆಳಕನ್ನು ನೀಡಿ ಸೂರ್ಯಗ್ರಹವು ಎಳ್ಲ ಗ್ರಹಗಳನ್ನು ನಿಯಂತ್ರಿಸುತ್ತದೆ. ಕೃಷ್ಣನ ಅಪ್ಪಣೆಯಂತೆ ಸೂರ್ಯನು ಪರಿಭ್ರಮಿಸುತ್ತಾನೆ. ಆದಿಯಲ್ಲಿ ಶ್ರೀಕೃಷ್ಣನು ವಿವನಸ್ವಾನ್‌ನನ್ನು ಭಗವದ್ಗೀತಾಶಾಸ್ತ್ರವನ್ನು ತಿಳಿದುಕೊಳ್ಳುವ ಮೊದಲ ಶಿಷ್ಯನನ್ನಾಗಿ ಮಾಡಿಕೊಂಡನು. ಆದುದರಿಂದ ಭಗವದ್ಗೀತೆಯು ಇಹಲೋಕದ ಕ್ಷುದ್ರ ಪಂಡಿತನಿಗಾಗಿ ರಚಿವಾದ ಊಹಾತ್ಮಕ ಗ್ರಂಥವಲ್ಲ; ಅನಾದಿ ಕಾಲದಿಂದ ಬರುತ್ತಿರುವ ಜ್ಞಾನದ ಪ್ರಮಾಣಗ್ರಂಥ ಗೀತೆಯ ಚರಿತ್ರೆಯನ್ನು ಮಹಾಭಾರತದಲ್ಲಿ (ಶಾಂತಿ ಪರ್ವ, 348.51-52) ನಾವು ಹೀಗೆ ಗುರುತಿಸಬಹುದು.
ತ್ರೇತಾಯುಗಾದೌ ಚ ತತೋ ವಿವಸ್ವಾನ್ಮನವೇ ದದೌ |
ಮನುಶ್ಚ ಲೋಕ ಭೃತ್ಯರ್ಥಂ ಸುತಾಯೇಕ್ಷ್ವಾಕವೇ ದದೌ ||
ಇಕ್ಷ್ವಾಕುಣಾ ಚ ಕಥಿತೋ ವ್ಯಾಪ್ಯ ಲೋಕಾನವಸ್ಥಿತಃ ||
ಪರಮ ಪ್ರಭುವಿನೊಂದಿಗೆ ಸಂಬಂಧಿಸಿದ ಈ ಶಾಸ್ತ್ರವನ್ನು ವಿವಸ್ವಾನನು ಮನುವಿಗೆ ತ್ರೇತಾಯುಗದ ಪ್ರಾರಂಭದಲ್ಲಿ ಉಪದೇಶಿಸಿದ. ಮಾನವಕುಲದ ತಂದೆಯಾದ ಮನುವು ಅದನ್ನು ತನ್ನ ಮಗ ಇಕ್ಷ್ವಾಕು ಮಹಾರಾಜನಿಗೆ ಹೇಳಿಕೊಟ್ಟ. ಇಕ್ಷ್ವಾಕುವು ಭೂಗ್ರಹದ ರಾಜ ಮತ್ತು ರಘುವಂಶದ ಮೂಲಪುರುಷ. ಶ್ರೀರಾಮಚಂದ್ರನು ಈ ರಘುವಂಶದಲ್ಲಿ ಆತವರಿಸಿದ. ಆದುದರಿಂದ ಭಗವದ್ಗೀತೆಯು ಇಕ್ಷ್ವಾಕು ಮಹಾರಾಜನ ಕಾಲದಿಂದ ಮಾನವಕುಲದಲ್ಲಿ ಉಳಿದುಬಂದಿದೆ.
ಕಲಿಯುಗದ ಅವಧಿ 4,32,000 ವರ್ಷಗಳು. ಇದರಲ್ಲಿ ಈಗತಾನೆ ಇದು ಸಾವಿರ ವರ್ಷಗಳು ಕಳೆದಿವೆ. ಇದಕ್ಕೆ ಹಿಂದಿನದು ದ್ವಾಪರಯುಗ (8,00,000 ವರ್ಷಗಳು), ಅದಕ್ಕೆ ಮೊದಲ ತ್ರೇತಾಯುಗ (12,00,000) ಹೀಗೆ ಸುಮಾರು 20,05,000 ವರ್ಷಗಳ ಹಿಂದೆ ಮನುವು ಭಗವದ್ಗೀತೆಯನ್ನು ತನ್ನ ಮಗನೂ, ಶಿಷ್ಯನೂ, ಭೂಲೋಕದ ಅರಸನೂ ಆದ ಇಕ್ಷಾಕು ಮಹಾರಾಜನಿಗೆ ಉಪದೇಶಿಸಿದ. ಈಗಿನ ಮನುವಿನ ಯುಗವು ಸುಮಾರು 30,53,00,000 ವರ್ಷಗಳೆಂದು ಲೆಕ್ಕ. ಇದರಲ್ಲಿ 12,04,00,000 ವರ್ಷಗಳು ಮುಗಿದಿವೆ.
ಮನುವು ಹುಟ್ಟುವ ಮೊದಲೇ ಭಗವಂತನು ತನ್ನ ಶಿಷ್ಯನೂ ಸೂರ್ಯದೇವನೂ ಆದ ವಿವಸ್ವಾನನಿಗೆ ಇದನ್ನು ಉಪದೇಶಿಸಿದ ಎಂದು ಅಂಗೀಕರಿಸಿದರೆ ಸುಮಾರು ಅಂದಾಜಿನಲ್ಲಿ ಗೀತೆಯನ್ನು ಕಡೆಯ ಪಕ್ಷ 12,04,00,000 ವರ್ಷಗಳ ಹಿಂದಾದರೂ ಉಪದೇಶಿಸಿರಬೇಕು: ಮಾನವಕುಲದಲ್ಲಿ ಅದು ಇಪ್ಪತ್ತು ಲಕ್ಷ ವರ್ಷಗಳಿಂದ ಉಳಿದು ಬಂದಿದೆ. ಸುಮಾರು ಐದು ಸಾವಿರ ವರ್ಷಗಳ ಕೆಳಗೆ ಭಗವಂತನು ಮತ್ತೆ ಅರ್ಜುನನಿಗೆ ಉಪದೇಶ ಮಾಡಿದನು.
ಗೀತೆಯೇ ಹೇಳುವ ಪ್ರಕಾರ ಮತ್ತು ಉಪದೇಶ ಮಾಡುವ ಶ್ರೀಕೃಷ್ಣನ ಪ್ರಕಾರ ಇದು ಸುಮಾರಾಗಿ ಗೀತೆಯ ಚರಿತ್ರೆ, ಸೂರ್ಯದೇವನಾದ ವಿವಸ್ಥಾನನು ಒಬ್ಬ ಕ್ಷತ್ರಿಯ; ಅವನು ಸೂರ್ಯವಂಶ ಕ್ಷತ್ರಿಯರೆಲ್ಲರ ತಂದೆಯಾಗಿದ್ದಾನೆ. ಈ ಕಾರಣದಿಂದಲೇ ಭಗವದ್ಗೀತೆಯನ್ನು ವಿವಸ್ವಾನನಿಗೆ ಉಪದೇಶ ಮಾಡಲಾಯಿತು. ಭಗವದ್ಗೀತೆಯನ್ನು ದೇವೋತ್ತಮ ಪರಮ ಪುರುಷನು ನುಡಿದನು; ಅದು ವೇದಗಳಿಗೆ ಸಮಾನ. ಆದುದರಿಂದ ಈ ಜ್ಞಾನವು ಅಪೌರುಷೇಯ, ವೇದದ ಆದೇಶಗಳನ್ನು ಲೌಕಿಕ ವ್ಯಾಖ್ಯಾನಗಳಿಗೆ ಒಳಪಡಿಸದೆ ಅವು ಇರುವಂತೆಯೇ ಸ್ವೀಕರಿಸಲಾಗುತ್ತದೆ. ಆದುದರಿಂದ ಗೀತೆಯನ್ನು ಸಹ ಲೌಕಿಕ ವ್ಯಾಖ್ಯಾನಗಳಿಗೆ ಒಳಪಡಿಸದೆ ಸ್ವೀಕರಿಸಬೇಕು.
ಐಹಿಕ ವಿವಾದನಿರತರು ತಮಗೆ ತೋರಿದಂತೆ ಭಗವದ್ಗೀತೆಯನ್ನು ಕುರಿತು ಊಹಿಸಬಹುದು. ಆದರೆ ಅದು ಭಗವದ್ಗೀತೆಯ ಯಥಾರೂಪವಲ್ಲ, ಭಗವದ್ಗೀತೆಯನ್ನು ಅದರ ವಾಸ್ತವ ಸ್ವರೂಪದಲ್ಲಿ ಗುರು ಪರಂಪರೆಯಿಂದ ಸ್ವೀಕರಿಸಬೇಕು; ಅದನ್ನು ಇಲ್ಲಿ ಭಗವಂತನು ಸೂರ್ಯದೇವನಿಗೆ ಉಪದೇಶಿಸಿದನೆಂದೂ ಸೂರ್ಯದೇವನು ತನ್ನ ಮಗ ಮನುವಿಗೆ ಹೇಳಿದನೆಂದೂ ಮನುವು ತನ್ನ ಮಗ ಇಕ್ಷಾಕುವಿಗೆ ಹೇಳಿದನೆಂದೂ ವರ್ಣಿಸಿದೆ.