ಬೆಂಗಳೂರು: ನಟಿ ದೀಪಿಕಾ ದಾಸ್ ಮತ್ತು ಆಕೆಯ ತಾಯಿ ಪದ್ಮಲತಾಗೆ ಬೆದರಿಕೆ ಕರೆ, ಹಣ ನೀಡುವಂತೆ ಒತ್ತಾಯ
ಬೆಂಗಳೂರು: ನಟಿ ದೀಪಿಕಾ ದಾಸ್ ಮತ್ತು ಆಕೆಯ ತಾಯಿ ಪದ್ಮಲತಾಗೆ ಬೆದರಿಕೆ ಕರೆ, ಹಣ ನೀಡುವಂತೆ ಒತ್ತಾಯ ಮಾಡಿದ್ದು, ಈ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ. ದೆಹಲಿ ಮೂಲದ 24 ವರ್ಷದ ಸ್ಪಾ ಉದ್ಯೋಗಿ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. (ವರದಿ -ಎಚ್.ಮಾರುತಿ, ಬೆಂಗಳೂರು)
ಬೆಂಗಳೂರು: ಯಶವಂತ ಎಂಬ ವ್ಯಕ್ತಿ ನಡುರಾತ್ರಿಯಲ್ಲಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕುತ್ತಿದ್ದಾನೆ ಎಂದು ಕಿರುತೆರೆ ನಟಿ ದೀಪಿಕಾ ದಾಸ್ ಅವರ ತಾಯಿ ಪದ್ಮಲತಾ ತುಮಕೂರು ರಸ್ತೆಯ ಮಾದನಾಯಕನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ. ಪ್ರತ್ಯೇಕ ಪ್ರಕರಣದಲ್ಲಿ ಸ್ಪಾ ಉದ್ಯೋಗಿ, ದೆಹಲಿ ಮೂಲದ ಯುವತಿಯೊಬ್ಬರು ತಮ್ಮ ಮನೆಯಲ್ಲೇ ಶವವಾಗಿ ಪತ್ತೆಯಾಗಿದ್ದಾರೆ. ಹೆಸರಘಟ್ಟ ರಸ್ತೆಯ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ನಟಿ ದೀಪಿಕಾ ದಾಸ್ ಮತ್ತು ಆಕೆಯ ತಾಯಿ ಪದ್ಮಲತಾಗೆ ಬೆದರಿಕೆ ಕರೆ
ಚಲನಚಿತ್ರ ಮತ್ತು ಕಿರುತೆರೆ ನಟಿಯಾಗಿರುವ ನನ್ನ ಮಗಳು ದೀಪಿಕಾ ದಾಸ್, ಎಂಟು ತಿಂಗಳ ಹಿಂದೆ ದೀಪಕ್ ಕುಮಾರ್ ಎಂಬುವರ ಜತೆ ವಿವಾಹವಾಗಿದೆ. ಮಗಳು ಮತ್ತು ಅಳಿಯ ತಿಂಗಳ ಹಿಂದೆ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ್ದಾರೆ. ಈಗ ಅಪರಿಚಿತ ವ್ಯಕ್ತಿಯೊಬ್ಬ ನನಗೆ ಫೋನ್ ಮಾಡಿ ನಿಮ್ಮ ಮಗಳಿಗೆ ಮದುವೆ ಮಾಡಿದ್ದು ಏಕೆ? ಅಳಿಯ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿ ಜನರಿಗೆ ಮೋಸ ಮಾಡಿದ್ದಾರೆ ಎಂದು ಬೆದರಿಕೆ ಹಾಕಿದ್ದ. ಒಂದುವೇಳೆ ನನ್ನ ಅಳಿಯ ಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೆ ದೂರು ನೀಡಬಹುದು ಎಂದು ನಾನು ಹೇಳಿದ್ದೆ ಎಂದು ಪದ್ಮಾಲತಾ ದೂರಿನಲ್ಲಿ ತಿಳಿಸಿದ್ದಾರೆ.
ಕೆಲವು ದಿನಗಳ ನಂತರ ದೀಪಿಕಾಗೆ ಕರೆ ಮಾಡಿದ್ದ ಇದೇ ವ್ಯಕ್ತಿ ನಿಮ್ಮ ಪತಿ ಮೋಸ ಮಾಡಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವೆ ಎಂದು ಪ್ರಶ್ನಿಸಿ ಪುನೀತ್ ರಾಜ್ ಕುಮಾರ್ ಸಮಾಧಿ ಬಳಿ ಬಂದು ಆಣೆ ಮಾಡಬೇಕು ಎಂದು ಆಗ್ರಹಪಡಿಸಿದ್ದ. ಕಾನೂನು ರೀತಿ ದೂರು ನೀಡುವಂತೆಯೂ ನನ್ನ ಮಗಳು ಹೇಳಿದ್ದಳು. ಹಣ ನೀಡದೆ ಇದ್ದರೆ ನಿಮ್ಮ ಹೆಸರು ಬರೆದು ಅತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ವ್ಯಕ್ತಿ ನನ್ನ ಮಗಳು ಮತ್ತು ಅಳಿಯನ ಗೌರವಕ್ಕೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾನೆ. ಪದೇ ಪದೇ ಫೋನ್ ಹಣಕ್ಕೆ ಬೇಡಿಕೆ ಇಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೆದರಿಸುತ್ತಿದ್ದಾನೆ. ಆದ್ದರಿಂದ ಯಶವಂತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.
ದೆಹಲಿ ಮೂಲದ ಸ್ಪಾ ಉದ್ಯೋಗಿ ಆತ್ಮಹತ್ಯೆ
ದೆಹಲಿ ಮೂಲದ 24 ವರ್ಷದ ಯುವತಿಯೊಬ್ಬರು ಹೆಸರಘಟ್ಟ ರಸ್ತೆಯ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸೋನಿಯಾ ಮೃತ ಯುವತಿ. ಬಾಗಲಗುಂಟೆ ಠಾಣಾ ವ್ಯಾಪ್ತಿಯ 8ನೇ ಮೈಲಿಯಲ್ಲಿರುವ ಸ್ಪಾ ಒಂದರಲ್ಲಿ ಒಂದೂವರೆ ತಿಂಗಳ ಹಿಂದೆಯಷ್ಟೇ ಸೋನಿಯಾ ಕೆಲಸಕ್ಕೆ ಸೇರಿದ್ದರು. ಕೆಲಸಕ್ಕೆ ಬಂದಿಲ್ಲ ಎಂದು ಸ್ಪಾ ಮಾಲೀಕ ಕರೆ ಮಾಡಿದಾಗ ಸೋನಿಯಾ ಸ್ವೀಕರಿಸಿರಲಿಲ್ಲ. ಅನುಮಾನಗೊಂಡ ಸ್ಪಾ ಮಾಲೀಕ ಸೋನಿಯಾ ಅವರ ಮನೆ ಬಳಿ ಬಂದು ಬಾಗಿಲು ತಟ್ಟಿದಾಗ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಆಗ ಅವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಗಿಲು ಒಡೆದು ನೋಡಿದಾಗ ಸೋನಿಯಾ ಮೃತದೇಹ ಪತ್ತೆಯಾಗಿದೆ. ಸೋನಿಯಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಕಳೆದ ಸೋಮವಾರ ರಾತ್ರಿ ಕೊನೆಯದಾಗಿ ತನ್ನ ತಾಯಿಯೊಂದಿಗೆ ಸೋನಿಯಾ ಮಾತನಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ದೆಹಲಿಯಲ್ಲಿರುವ ಸೋನಿಯಾ ಪೋಷಕರಿಗೆ ವಿಷಯ ತಿಳಿಸಿದ್ದು, ಅವರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಸ್ಥಳ ಪರಿಶೀಲನೆ ಮಾಡಿದ್ದು, ಮೊಬೈಲ್ ಸೇರಿದಂತೆ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಮನೆ ಮಾಲೀಕರು ಹಾಗೂ ಸ್ಪಾದ ಸಿಬ್ಬಂದಿಯನ್ನು ವಿಚಾರಣೆ ಮಾಡಲಾಗುವುದು ಎಂದು ಬಾಗಲಗುಂಟೆ ಠಾಣೆ ಪೊಲೀಸರು ತಿಳಿಸಿದ್ದಾರೆ.
ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.
(ವರದಿ -ಎಚ್.ಮಾರುತಿ, ಬೆಂಗಳೂರು)