Bhagavad Gita: ಭಗವಂತನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ವ್ಯಕ್ತಿಯ ಜ್ಞಾನ ಹೆಚ್ಚಾಗುತ್ತೆ; ಗೀತೆಯ ಅರ್ಥ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಭಗವಂತನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ವ್ಯಕ್ತಿಯ ಜ್ಞಾನ ಹೆಚ್ಚಾಗುತ್ತೆ; ಗೀತೆಯ ಅರ್ಥ ತಿಳಿಯಿರಿ

Bhagavad Gita: ಭಗವಂತನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ವ್ಯಕ್ತಿಯ ಜ್ಞಾನ ಹೆಚ್ಚಾಗುತ್ತೆ; ಗೀತೆಯ ಅರ್ಥ ತಿಳಿಯಿರಿ

Bhagavad Gita Updesh: ಭಗವಂತನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ವ್ಯಕ್ತಿಯ ಜ್ಞಾನ ಹೆಚ್ಚಾಗುತ್ತೆ ಎಂಬುದರ ಅರ್ಥವನ್ನು ಭಗವದ್ಗೀತೆಯ 7ನೇ ಅಧ್ಯಾಯದ 2 ಮತ್ತು 6ನೇ ಶ್ಲೋಕ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ - 7 ಪರಾತ್ಪರ ಜ್ಞಾನ: ಶ್ಲೋಕ - 2

ಜ್ಞಾನಂ ತೇಹಂ ಸವಿಜ್ಞಾನಮಿದಂ ವಕ್ಷ್ಯಾಮ್ಯಶೇಷತಃ |

ಯಜ್ ಜ್ಞಾನತ್ವಾನೇಹ ಭೂಯೋನ್ಯಜ್‌ಜ್ಞಾತವ್ಯಮವಶಿಷ್ಯತೇ ||2||

ಅನುವಾದ: ಈಗ ನಾನು ನಿನಗೆ ಇಂದ್ರಿಯಗೋಚರವಾದ ಜ್ಞಾನವನ್ನೂ ಆಧ್ಯಾತ್ಮಿಕ ಜ್ಞಾನವನ್ನೂ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ. ಇದನ್ನು ತಿಳಿದುಕೊಂಡಮೇಲೆ ನೀನು ತಿಳಿದುಕೊಳ್ಳಬೇಕಾದದ್ದು ಏನೂ ಇರುವುದಿಲ್ಲ.

ಭಾವಾರ್ಥ: ಸಂಪೂರ್ಣ ಜ್ಞಾನದಲ್ಲಿ ಇಂದ್ರಿಯಗ್ರಾಹ್ಯ ಪ್ರಪಂಚ, ಅದರ ಹಿಂದೆ ಇರುವ ಚೇತನ ಮತ್ತು ಇವೆರಡರ ಮೂಲ - ಇವುಗಳ ತಿಳುವಳಿಕೆಯೂ ಸೇರಿದೆ. ಇದೇ ಅಧ್ಯಾತ್ಮಿಕ ಜ್ಞಾನ. ಅರ್ಜುನನು ಕೃಷ್ಣನ ಅಂತರಂಗ ಭಕ್ತ ಮತ್ತು ಸ್ನೇಹಿತ. ಆದುದರಿಂದ ಭಗವಂತನು ಮೇಲಿನ ಜ್ಞಾನ ವಿಧಾನವನ್ನು ವಿವರಿಸಲು ಬಯಸುತ್ತಾನೆ. ನಾಲ್ಕನೆಯ ಅಧ್ಯಾಯದ ಪ್ರಾರಂಭದಲ್ಲಿ ಈ ವಿವರಣೆಯನ್ನು ಕೊಟ್ಟಿದ್ದಾನೆ. ಅದನ್ನು ಇಲ್ಲಿ ಮತ್ತೆ ದೃಢಪಡಿಸಿದೆ. ಭಗವಂತನಿಂದ ನೇರವಾಗಿ ಬಂದ ಗುರುಶಿಷ್ಯ ಪರಂಪರೆಯಲ್ಲಿರುವ ಭಗವದ್ಭಕ್ತನು ಮಾತ್ರ ಸಂಪೂರ್ಣಜ್ಞಾನವನ್ನು ಪಡೆದುಕೊಳ್ಳಬಲ್ಲ. ಆದುದದರಿಂದ ಎಲ್ಲ ಕಾರಣಗಳ ಕಾರಣನಾದ ಮತ್ತು ಎಲ್ಲ ಯೋಗಾಭ್ಯಾಸ ರೀತಿಗಳಲ್ಲಿಯೂ ಧ್ಯಾನದ ಗುರಿಯಾದ ಎಲ್ಲ ಜ್ಞಾನದ ಮೂಲವನ್ನು ಅರ್ಥಮಾಡಿಕೊಳ್ಳವಷ್ಟು ಬುದ್ದಿಯೂ ಮನುಷ್ಯನಿಗಿರಬೇಕು. ಎಲ್ಲ ಕಾರಣಗಳ ಕಾರಣವು ತಿಳಿದಾಗ ತಿಳಿದುಕೊಳ್ಳಬಹುದಾದದ್ದೆಲ್ಲ ತಿಳಿಯುತ್ತದೆ ಮತ್ತು ಯಾವುದೂ ತಿಳಿಯದೆ ಉಳಿಯುವುದಿಲ್ಲ. ವೇದಗಳು (ಮುಂಡಕ ಉಪನಿಷತ್ತು: 13) ಕಸ್ಮಿನ್ ಭಗವೋ ವಿಜ್ಞಾತೇ ಸರ್ವಮ್ ಇದಂ ವಿಜಾತಂ ಭವತಿ ಎಂದು ಹೇಳುತ್ತವೆ.

ಅಧ್ಯಾಯ - 7 ಪರಾತ್ಪರ ಜ್ಞಾನ: ಶ್ಲೋಕ - 6

ಏತದ್ಯೋನೀನಿ ಭೂತಾನಿ ಸರ್ವಾಣೀತ್ಯುಪಧಾರಯ |

ಅಹಂ ಕೃತ್ಸ್ನಸ್ಯ ಜಗತಃ ಪ್ರಭವಃ ಪ್ರಲಯಸ್ತಥಾ ||6||

ಅನುವಾದ: ಸೃಷ್ಟಿಯಾದ ಎಲ್ಲ ಜೀವಿಗಳಿಗೂ ಈ ಎರಡು ಪ್ರಕೃತಿಗಳೇ ಮೂಲ. ಈ ಜಗತ್ತಿನಲ್ಲಿ ಭೌತಿಕವಾದ ಮತ್ತು ಆಧ್ಯಾತ್ಮಿಕವಾದ ಎಲ್ಲದರ ಮೂಲವು ಅಂತ್ಯವೂ ನಾವೇ ಎಂದು ತಿಳಿದುಕೊ.

ಭಾವಾರ್ಥ: ಅಸ್ತಿತ್ವದಲ್ಲಿರುವುದೆಲ್ಲ ಜಡ ಮತ್ತು ಚೇತನಗಳಿಂದ ಉತ್ಪನ್ನವಾದದ್ದು. ಚೇತನವು ಸೃಷ್ಟಿಯ ಮೂಲ ಕ್ಷೇತ್ರ. ಚೇತನವು ಜಡವಸ್ತುವನ್ನು ಸೃಷ್ಟಿಸುತ್ತದೆ. ಚೇತನವು ಜಡವಸ್ತುವಿನ ಬೆಳವಣಿಗೆಯ ಒಂದು ನಿರ್ದಿಷ್ಟ ಘಟ್ಟದಲ್ಲಿ ಸೃಷ್ಟಿಯಾದದ್ದಲ್ಲ. ಈ ಐಹಿಕ ಜಗತ್ತು ಅಧ್ಯಾತ್ಮಿಕ ಚೈತನ್ಯದ ಆಧಾರದ ಮೇಲೆಯೇ ವ್ಯಕ್ತವಾದದ್ದಲ್ಲ. ಈ ಐಹಿಕ ಜಗತ್ತು ಅಧ್ಯಾತ್ಮಿಕ ಚೈನತ್ಯದ ಆಧಾರದ ಮೇಲೆಯೇ ವ್ಯಕ್ತವಾದದ್ದು. ಜಡವಸ್ತುವಿನಿಂದಾದ ದೇಹವು ಬೆಳೆಯುವುದಕ್ಕೆ ಕಾರಣ ಜಡವಸ್ತುವಿನಲ್ಲಿ ಚೇತನವಿರುವುದೇ. ಮಗುವು ಕ್ರಮಕ್ರಮವಾಗಿ ಬಾಲ್ಯ ಮತ್ತು ಯೌವನಗಳಿಗೆ ಬೆಳೆಯುತ್ತದೆ. ಇದಕ್ಕೆ ಕಾರಣ ಶ್ರೇಷ್ಠಶಕ್ತಿಯಾದ ಆತ್ಮವು ಇರುವುದೇ.

ಇದೇ ರೀತಿಯಲ್ಲಿ ಈ ಬೃಹತ್ ವಿಶ್ವದ ಅಭಿವ್ಯಕ್ತಿಯು ಬೆಳೆಯುವುದು ಪರಮಾತ್ಮನಾದ ವಿಷ್ಣುವು ಇರುವುದರಿಂದ. ಆದುದರಿಂದ ಈ ಬೃಹದಾಕಾರದ ವಿಶ್ವದ ಆವಿರ್ಭಾವಕ್ಕೆ ಒಂದುಗೂಡುವ ಚೇತನವೂ ಜಡವಸ್ತುವೂ ಮೂಲತಃ ಭಗವಂತನ ಎರಡು ಶಕ್ತಿಗಳು. ಆದುದರಿಂದ ಎಲ್ಲ ವಸ್ತುಗಳ ಮೂಲ ಕಾರಣನು ಭಗವಂತನೇ. ಭಗವಂತನ ವಿಭಿನ್ನಾಂಶವಾದ ಜೀವಿಯು ದೊಡ್ಡ ಗಗನ ಚುಂಬಿಕಟ್ಟಡ, ದೊಡ್ಡ ಕಾರ್ಖಾನೆ ಮತ್ತು ದೊಡ್ಡ ನಗರ ಎಲ್ಲಕ್ಕೂ ಕಾರಣನಾಗಬಹುದು. ಆದರೆ ಅವನು ದೊಡ್ಡ ವಿಶ್ವದ ಕಾರಣನಾಗಲಾರನು. ಬೃಹತ್ತಾದ ವಿಶ್ವಕ್ಕೆ ಕಾರಣ ಬೃಹತ್ತಾದ ಆತ್ಮ ಅಥವಾ ಪರಮಾತ್ಮ. ಪರಮೋನ್ನತನಾದ ಕೃಷ್ಣನು ದೊಡ್ಡ ಮತ್ತು ಸಣ್ಣ ಆತ್ಮಗಳೆರಡಕ್ಕೂ ಕಾರಣನು. ಆದುದರಿಂದ ಪರಮೋನ್ನತನಾದ ಕೃಷ್ಣನೇ ಎಲ್ಲ ಕಾರಣಗಳ ಮೂಲಕಾರಣನು. ಇದನ್ನು ಕಠ ಉಪನಿಷತ್ತು (2.2.13) ಹೀಗೆ ದೃಢಪಡಿಸಿದೆ - ನಿತ್ಯೋ ನಿತ್ಯಾನಾಂ ಚೇತನಶ್ಚೇತನಾನಾಮ್.

(This copy first appeared in Hindustan Times Kannada website. To read more like this please logon to kannada.hindustantimes.com )

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.