Bhagavad Gita: ಭಗವಂತನದಲ್ಲಿ ಆಸಕ್ತಿ ಇಲ್ಲದವರು ಈ ಸಾಮಾನ್ಯ ಪ್ರವೃತ್ತಿಗಳಲ್ಲಿ ತನ್ಮಯರಾಗಿರುತ್ತಾರೆ; ಗೀತೆಯ ಸಾರಾಂಶ ಹೀಗಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಭಗವಂತನದಲ್ಲಿ ಆಸಕ್ತಿ ಇಲ್ಲದವರು ಈ ಸಾಮಾನ್ಯ ಪ್ರವೃತ್ತಿಗಳಲ್ಲಿ ತನ್ಮಯರಾಗಿರುತ್ತಾರೆ; ಗೀತೆಯ ಸಾರಾಂಶ ಹೀಗಿದೆ

Bhagavad Gita: ಭಗವಂತನದಲ್ಲಿ ಆಸಕ್ತಿ ಇಲ್ಲದವರು ಈ ಸಾಮಾನ್ಯ ಪ್ರವೃತ್ತಿಗಳಲ್ಲಿ ತನ್ಮಯರಾಗಿರುತ್ತಾರೆ; ಗೀತೆಯ ಸಾರಾಂಶ ಹೀಗಿದೆ

Bhagavad Gita Updesh: ಭಗವಂತನದಲ್ಲಿ ಆಸಕ್ತಿ ಇಲ್ಲದವರು ಈ ಸಾಮಾನ್ಯ ಪ್ರವೃತ್ತಿಗಳಲ್ಲಿ ತನ್ಮಯರಾಗಿರುತ್ತಾರೆ ಎಂಬುದರ ಅರ್ಥವನ್ನು ಭಗವದ್ಗೀತೆಯ 7ನೇ ಅಧ್ಯಾಯ 3ನೇ ಶ್ಲೋಕದಲ್ಲಿ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ - 7 ಪರಾತ್ಪರ ಜ್ಞಾನ: ಶ್ಲೋಕ - 3

ಮನುಷ್ಯಾಣಾಂ ಸಹಸ್ರೇಷು ಕಶ್ಚಿದ್ ಯತತಿ ಸಿದ್ಧಯೇ |

ಯತತಾಮಪಿ ಸಿದ್ಧಾನಾಂ ಕಶ್ಚಿನ್ಮಾಂ ವೇತ್ತಿ ತತ್ತ್ವತಃ ||3||

ಅನುವಾದ: ಸಾವಿರಾರು ಜನರಲ್ಲಿ ಒಬ್ಬನು ಪರಿಪೂರ್ಣತೆಗಾಗಿ ಪ್ರಯತ್ನಿಸಬಹುದು. ಪರಿಪೂರ್ಣತೆಯನ್ನು ಸಾಧಿಸಿರುವವರಲ್ಲಿ ಒಬ್ಬನು ನನ್ನನ್ನು ನಿಜವಾಗಿ ಅರ್ಥಮಾಡಿಕೊಂಡಿದ್ದಾನೆ ಎಂದು ಹೇಳುವುದೂ ಕಷ್ಟ.

ಭಾವಾರ್ಥ: ಮನುಷ್ಯರಲ್ಲಿ ಬೇರೆ ಬೇರೆ ಮಟ್ಟಗಳಿವೆ. ಆತ್ಮವೆಂದರೇನು, ದೇಹವೆಂದರೇನು, ಪರಮ ಸತ್ಯವೆಂದರೇನು ಇವೆಲ್ಲವನ್ನೂ ತಿಳಿದುಕೊಳ್ಳಲು ದಿವ್ಯ ಸಾಕ್ಷಾತ್ಕಾರದಲ್ಲಿ ಸಾವಿರ ಜನರಲ್ಲಿ ಒಬ್ಬನಿಗೆ ತಕ್ಕಷ್ಟು ಆಸಕ್ತಿಯಿರಬಹುದು. ತಿನ್ನುವುದು, ನಿದ್ರೆ, ರಕ್ಷಣೆ ಮತ್ತು ಮೈಥುನ ಈ ಪಶುಪ್ರವೃತ್ರಿಗಳಲ್ಲೇ ಸಾಮಾನ್ಯವಾಗಿ ಮನುಷ್ಯರು ತನ್ಮಯರಾಗಿರುತ್ತಾರೆ. ಸಾಮಾನ್ಯವಾಗಿ ದಿವ್ಯಜ್ಞಾನದಲ್ಲಿ ಯಾರಿಗೂ ಆಸಕ್ತಿಯಿರುವುದಿಲ್ಲ.

Bhagavad Gita Updesh in Kannada: ಗೀತೆಯ ಮೊದಲ ಆರು ಅಧ್ಯಾಯಗಳನ್ನು ದಿವ್ಯಜ್ಞಾನದಲ್ಲಿ ವಿಶಿಷ್ಟವಾದ ಆಸಕ್ತಿ ಇರುವವರಿಗಾಗಿ ಹೇಳಿದೆ. ದಿವ್ಯಜ್ಞಾನ, ಆತ್ಮ, ಪರಮಾತ್ಮ, ಜ್ಞಾನಯೋಗ ಮತ್ತು ಧ್ಯಾನಯೋಗಗಳ ಮೂಲಕ ಸಾಕ್ಷಾತ್ಕಾರದ ಪ್ರಕ್ರಿಯೆ ಆತ್ಮನನ್ನು ಜಡವಸ್ತುವಿನಿಂದ ಪ್ರತ್ಯೇಕಿಸುವುದು - ಇದೇ ಆ ವಿಶಿಷ್ಟವಾದ ದಿವ್ಯ ಪಾನವಾಗಿದೆ. ಕೃಷ್ಣಪ್ರಜ್ಞೆ ಇರುವವರು ಮಾತ್ರ ಕೃಷ್ಣನನ್ನು ಆರಿಯಬಲ್ಲರು. ನಿರಾಕಾರ ಬ್ರಹ್ಮನ್ ಸಾಕ್ಷಾತ್ಕಾರವು ಕೃಷ್ಣನನ್ನು ಅರಿಯುವುದಕ್ಕಿಂತ ಸುಲಭ. ಆದುದರಿಂದ ಇತರ ಆಧ್ಯಾತ್ಮಿಕವಾದಿಗಳು ನಿರಾಕಾರ ಬ್ರಹ್ಮ ಸಾಕ್ಷಾತ್ಕಾರವನ್ನು ಸಾಧಿಸಬಹುದು. ಕೃಷ್ಣನು ಪರಮ ಪುರುಷ; ಆದರೆ ಅವನು ಬ್ರಹ್ಮನ್ ಮತ್ತು ಪರಮಾತ್ಮರ ಅರಿವನ್ನು ಮೀರಿದವನು. ಕೃಷ್ಣನನ್ನು ಅರಿಯುವ ಪ್ರಯತ್ನದಲ್ಲಿ ಯೋಗಿಗಳೂ ಜ್ಞಾನಿಗಳೂ ಗೊಂದಲಕ್ಕೆ ಒಳಗಾಗುತ್ತಾರೆ. ನಿರಾಕಾರವಾದಿಗಳಲ್ಲಿ ಅತ್ಯಂತ ಶ್ರೇಷ್ಠರಾದ ಶ್ರೀಪಾದ ಶಂಕರಾಚಾರ್ಯರು ತಮ್ಮ ಗೀತಾಭಾಷ್ಯದಲ್ಲಿ ಕೃಷ್ಣನು ದೇವೋತ್ತಮ ಪರಮ ಪುರುಷನೆಂದು ಒಪ್ಪಿಕೊಂಡರೂ ಅವರ ಅನುಯಾಯಿಗಳು ಕೃಷ್ಣನನ್ನು ಹೀಗೆ ಒಪ್ಪಿಕೊಳ್ಳುವುದಿಲ್ಲ, ಏಕೆಂದರೆ ನಿರಾಕಾರ ಬ್ರಹ್ಮನ್ ದಿವ್ಯ ಸಾಕ್ಷಾತ್ಕಾರವನ್ನು ಸಾಧಿಸಿದವರಿಗೂ ಕೃಷ್ಣನನ್ನು ಅರಿಯುವುದು ಬಹು ಕಠಿಣ.

ಕೃಷ್ಣನು ದೇವೋತ್ತಮ ಪರಮ ಪುರುಷ, ಎಲ್ಲ ಕಾರಣಗಳ ಕಾರಣ, ಆದಿಪುರುಷನಾದ ಶ್ರೀ ಗೋವಿಂದ. ಈಶ್ವರಃ ಪರಮಃ ಕೃಷ್ಣ: ಸಚ್ಚಿದಾನನ್ದ ವಿಗ್ರಹಃ / ಅನಾದಿರ್ ಅದಿರ್ ಗೋವಿನ್ದಃ ಸರ್ವಕಾರಣಕಾರಣಮ್. ಭಕ್ತರಲ್ಲದವರಿಗೆ ಕೃಷ್ಣನನ್ನು ಆರಿಯುವುದು ಕಷ್ಟ. ಭಕ್ತರಲ್ಲದವರು ಭಕ್ತಿ ಮಾರ್ಗವು ಬಹು ಸುಲಭ ಎಂದು ಹೇಳಿದರೂ ಅವರಿಗೆ ಅದನ್ನು ಅಭ್ಯಾಸಮಾಡುವುದು ಸಾಧ್ಯವಾಗುವುದಿಲ್ಲ. ಭಕ್ತಿಮಾರ್ಗವು ಭಕ್ತರಲ್ಲದವರು ಹೇಳುವಷ್ಟು ಸುಲಭವಾಗಿದ್ದರೆ ಅವರು ಕಷ್ಟವಾದ ಮಾರ್ಗವನ್ನೇಕೆ ಆರಿಸುತ್ತಾರೆ? ವಾಸ್ತವವಾಗಿ ಭಕ್ತಿಮಾರ್ಗವು ಸುಲಭವಲ್ಲ, ಭಕ್ತಿಯನ್ನು ತಿಳಿಯದ, ಅಧಿಕಾರವಿಲ್ಲದ ಜನ ಭಕ್ತಿಮಾರ್ಗ ಎಂದು ಕರೆದು ಅನುಸರಿಸುವ ಮಾರ್ಗವು ಸುಲಭವಾಗಿರಬಹುದು. ಆದರೆ ನಿಯಮ ನಿಬಂಧನೆಗಳಿಗನುಗುಣವಾಗಿ ಅದನ್ನು ಅನುಸರಿಸಿದಾಗ ಊಹಾತ್ಮಕ ಚಿಂತನೆಯಲ್ಲಿ ತೊಡಗುವ ಪಂಡಿತರೂ ತತ್ವಶಾಸ್ತ್ರಜ್ಞರೂ ಆ ಮಾರ್ಗದಿಂದ ದೂರವಾಗುವವರು. ಶ್ರೀಲ ರೂಪ ಗೋಸ್ವಾಮಿಯವರು ತಮ್ಮ ಭಕ್ತಿರಸಾಮೃತಸಿಂಧು (1.2.101) ವಿನಲ್ಲಿ ಹೀಗೆ ಬರೆಯುತ್ತಾರೆ -

ಶ್ರುತಿಸ್ಮೃತಿಪುರಾಣಾದಿ ಪಞ್ಚರಾತ್ರವಿಧಿಂ ವಿನಾ |

ಐಕಾನ್ತಿಕೀ ಹರೇರ್ ಭಕ್ತಿರ್ ಉತ್ಪಾತಾಯೈವ ಕಲ್ಪತೇ ||

"ಉಪನಿಷತ್ತುಗಳು, ಪುರಾಣಗಳು ಮತ್ತು ನಾರದ ಪಂಚರಾತ್ರಗಳಂತಹ ಅಧಿಕೃತ ವೇದ ಸಾಹಿತ್ಯವನ್ನು ಅಲಕ್ಷ್ಯ ಮಾಡುವ ಭಕ್ತಿಸೇವೆಯು ಸಮಾಜದಲ್ಲಿ ಅನಗತ್ಯವಾದ ಸದ್ದುಗದ್ದಲ."

ಬ್ರಹ್ಮನ್ ಸಾಕ್ಷಾತ್ಕಾರವನ್ನು ಪಡೆದ ನಿರಾಕಾರವಾದಿಗಾಗಲಿ ಪರಮಾತ್ಮ ಸಾಕ್ಷಾತ್ಕಾರವನ್ನು ಪಡೆದ ಯೋಗಿಗಾಗಲಿ ದೇವೋತ್ತಮ ಪರಮ ಪುರುಷನಾದ ಕೃಷ್ಣನನ್ನು ಯಶೋದೆಯ ಮಗನಾಗಿ ಅಥವಾ ಅರ್ಜುನನ ಸಾರಥಿಯಾಗಿ ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ, ಮಹಾನ್ ದೇವತೆಗಳಿಗೂ ಕೆಲವೊಮ್ಮೆ ಕೃಷ್ಣನ ವಿಷಯದಲ್ಲಿ ಗೊಂದಲವಾಗುತ್ತವೆ (ಮುಹ್ಯನ್ತಿ ಯತ್ ಸೂರಯಃ). ಭಗವಂತನು ಮಾಂ ತು ವೇದ ನ ಕಶ್ಚನ "ನಾನಿರುವಂತೆ ಯಾರೂ ನನ್ನನ್ನು

ಅರಿಯರು" ಎಂದು ಹೇಳುತ್ತಾನೆ. ಆತನನ್ನು ಅರಿತಿದ್ದರೆ ಆಗ ಸ ಮಹಾತ್ಮಾ ಸುದುರ್ಲಭಃ, ಅಂತಹ ಮಹಾತ್ಮನು ದೊರೆಯುವುದು ಬಹು ಕಷ್ಟ. ದೊಡ್ಡ ವಿದ್ವಾಂಸನೋ ತತ್ವಶಾಸ್ತ್ರಜ್ಞನೋ ಆಗಿರುವವನು ಸಹ, ಭಗವಂತನ ಪ್ರೇಮ ಪೂರ್ವಕ ಸೇವೆಯನ್ನು ಅಭ್ಯಾಸಮಾಡದಿದ್ದರೆ ಕೃಷ್ಣನು ಇರುವಂತೆ (ತತ್ತ್ವತಃ) ಅವನನ್ನು ಅರಿಯಲಾರ. ಕೃಷ್ಣನು ಎಲ್ಲ ಕಾರಣಗಳ ಕಾರಣನು. ಅವನು ಸರ್ವವ್ಯಾಪಿ ಮತ್ತು ಸಿರಿವಂತ.

ಅವನಲ್ಲಿ ಶ್ರೀಮಂತಿಕೆ, ಕೀರ್ತಿ, ಶಕ್ತಿ, ಸೌಂದರ್ಯ, ಜ್ಞಾನ ಮತ್ತು ವೈರಾಗ್ಯ ಈ ಎಲ್ಲ ಊಹಾತೀತ ದಿವ್ಯಗುಣಗಳಿವೆ. ಪರಿಶುದ್ಧ ಭಕ್ತರು ಮಾತ್ರ ಈ ಗುಣಗಳನ್ನು ಸ್ವಲ್ಪಮಟ್ಟಿಗೆ ಅರಿಯಬಲ್ಲರು. ಏಕೆಂದರೆ ಕೃಷ್ಣನು ಭಕ್ತರ ಬಗ್ಗೆ ದಯಾಳುವಾಗಿದ್ದಾನೆ. ಬ್ರಹ್ಮನ್ ಸಾಕ್ಷಾತ್ಕಾರದಲ್ಲಿ ಅವನೇ ಕಡೆಯ ಮಾತು. ಭಕ್ತರು ಮಾತ್ರ ಅವನು ಇರುವಂತೆ ಅವನ ಸಾಕ್ಷಾತ್ಕಾರವನ್ನು ಪಡೆಯಬಲ್ಲರು. ಆದ್ದರಿಂದ ಹೀಗೆ ಹೇಳಿದೆ

ಅತಃ ಶ್ರೀಕೃಷ್ಣನಾಮಾದಿ ನ ಭವೇದ್ದ್ರಾಹ್ಯಮಿನ್ದ್ರಿಯೈಃ |

ಸೇವೋನ್ಮುಖೇ ಹಿ ಜಿಹ್ವಾದೌ ಸ್ವಯಮೇವ ಸ್ಫುರತ್ಯದಃ ||

"ಜಡ ಭೌತಿಕ ಇಂದ್ರಿಯಗಳ ಮೂಲಕ ಯಾರೂ ಕೃಷ್ಣನು ಇರುವಂತೆ ಅವನನ್ನು ಗ್ರಹಿಸಲಾರರು. ಆದರೆ ಆತನು, ಭಕ್ತರು ತನಗೆ ಅರ್ಪಿಸುವ ಪ್ರೇಮಪೂರ್ವಕ ಸೇವೆಯಿಂದ ಸುಪ್ರೀತನಾಗಿ ಅವರಿಗೆ ಪ್ರತ್ಯಕ್ಷವಾಗುತ್ತಾನೆ (ಭಕ್ತಿರಸಾಮೃತ ಸಿಂಧು, 1.2.234).

(This copy first appeared in Hindustan Times Kannada website. To read more like this please logon to kannada.hindustantimes.com )

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.