Bhagavad Gita: ಈ ಕಾರಣದಿಂದ ಶ್ರೀಕೃಷ್ಣ ಪ್ರತಿಯೊಬ್ಬರ ಹೃದಯದಲ್ಲಿ ಪರಮಾತ್ಮನಾಗಿ ನೆಲೆಸಿದ್ದಾನೆ; ಗೀತೆಯ ಸಾರಾಂಶ ಹೀಗಿದೆ
Bhagavad Gita Updesh: ಈ ಕಾರಣದಿಂದ ಶ್ರೀಕೃಷ್ಣ ಪ್ರತಿಯೊಬ್ಬರ ಹೃದಯದಲ್ಲಿ ಪರಮಾತ್ಮನಾಗಿ ನೆಲೆಸಿದ್ದಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯ 11ನೇ ಅಧ್ಯಾಯದ 1ನೇ ಶ್ಲೋಕದಲ್ಲಿ ತಿಳಿಯಿರಿ.
ಅಧ್ಯಾಯ 11 - ವಿಶ್ವರೂಪ -ಶ್ಲೋಕ - 1
ಮದನುಗ್ರಹಾಯ ಪರಮಂ ಗುಹ್ಯಮಧ್ಯಾತ್ಮಸಂಜ್ಞಿತಮ್ |
ಯತ್ತ್ವಯೋಕ್ತಂ ವಚಸ್ತೇನ ಮೋಹೋಯಂ ವಿಗತೋ ಮಮ ||1||
ಅನುವಾದ: ಅರ್ಜುನನು ಹೀಗೆ ಹೇಳಿದನು - ನೀನು ಅನುಗ್ರಹ ಮಾಡಿ ಈ ರಹಸ್ಯವಾದ ಅಧ್ಯಾತ್ಮಿಕ ವಿಷಯಗಳನ್ನು ಕುರಿತು ಉಪದೇಶ ಮಾಡಿದೆ. ಇದರಿಂದ ನನ್ನ ಮೋಹವು ನಾಶವಾಗಿದೆ.
ಭಾವಾರ್ಥ: ಕೃಷ್ಣನು ಎಲ್ಲ ಕಾರಣಗಳ ಕಾರಣ ಎನ್ನುವುದನ್ನ ಈ ಅಧ್ಯಾಯವು ತೋರಿಸುತ್ತದೆ. ಭೌತಿಕ ಲೋಕಗಳು ಮಹಾ ವಿಷ್ಣುವಿನಿಂದ ಹೊರಸೂಸುತ್ತವೆ. ಮಹಾವಿಷ್ಣುವಿಗೆ ಸಹ ಕೃಷ್ಣನು ಕಾರಣನು. ಕೃಷ್ಣನು ಒಂದು ಅವತಾರವಲ್ಲ. ಅವನು ಎಲ್ಲ ಅವತಾರಗಳ ಮೂಲ. ಹಿಂದಿನ ಅಧ್ಯಾಯದಲ್ಲಿ ಇದನ್ನು ಸಂಪೂರಣವಾಗಿ ವಿವರಿಸಿದೆ. ಈಗ ಅರ್ಜುನನ ಮಟ್ಟಿಗೆ ಅವನು ತನ್ನ ಮೋಹವು ಕೊನೆಗಂಡಿತು ಎಂದು ಹೇಳುತ್ತಾನೆ. ಎಂದರೆ ಈಗ ಅರ್ಜುನನು ಕೃಷ್ಣನು ಕೇವಲ ಒಬ್ಬ ಮನುಷ್ಯ, ತನ್ನ ಸ್ನೇಹಿತ ಎಂದು ಯೋಚಿಸುವುದಿಲ್ಲ. ಅವನು ಎಲ್ಲ ವಸ್ತುಗಳ ಮೂಲ ಎಂದು ಕಾಣುತ್ತಾನೆ (Bhagavad Gita Updesh in Kannada).
ಅರ್ಜುನನಿಗೆ ಬಹುಮಟ್ಟಿಗೆ ಜ್ಞಾನೋದಯವಾಗಿದೆ. ತನಗೆ ಕೃಷ್ಣನಂತಹ ಮಹಾನ್ ಸ್ನೇಹಿತನಿದ್ದಾನೆ ಎಂದು ಅವನಿಗೆ ಸಂತೋಷ. ಆದರೆ ತಾನು ಕೃಷ್ಣನನ್ನು ಎಲ್ಲ ವಸ್ತುಗಳ ಮೂಲ ಎಂದು ಒಪ್ಪಿಕೊಂಡರೂ ಇತರರು ಒಪ್ಪಿಕೊಳ್ಳದೆ ಹೋಗಬಹುದು. ಆದುದರಿಂದ ಎಲ್ಲರಿಗೂ ಕೃಷ್ಣನ ದೈವತ್ವವು ಸ್ಪಷ್ಟವಾಗುವಂತೆ ಈ ಅಧ್ಯಾಯದಲ್ಲಿ ಅವನು ಕೃಷ್ಣನಿಗೆ ತನ್ನ ವಿಶ್ವರೂಪವನ್ನು ತೋರಿಸುವಂತೆ ಪ್ರಾರ್ಥಿಸುತ್ತಾನೆ. ವಾಸ್ತವವಾಗಿ ಕೃಷ್ಣನ ವಿಶ್ವರೂಪವನ್ನು ಕಂಡವನು ಅರ್ಜುನನಂತೆ ಹೆದರಿಕೊಳ್ಳುತ್ತಾನೆ. ಆದರೆ ಕೃಷ್ಣನು ಎಷ್ಟು ಕರುಣಾಳು ಎಂದರೆ ವಿಶ್ವರೂಪವನ್ನು ತೋರಿಸಿ ತನ್ನ ಮೂಲರೂಪಕ್ಕೆ ಹಿಂದಿರುಗುತ್ತಾನೆ.
ಕೃಷ್ಣನು ತಾನು ಮಾತನಾಡುತ್ತಿರುವುದು ಅರ್ಜನನ ಪ್ರಯೋಜನಕ್ಕಾಗಿ ಎಂದು ಹಲವು ಬಾರಿ ಹೇಳಿದ್ದಾನೆ. ಅರ್ಜುನನು ಇದನ್ನು ಒಪ್ಪುತ್ತಾನೆ. ತನಗೆ ಇದೆಲ್ಲ ಆಗುತ್ತಿರುವುದು ಕೃಷ್ಣನ ಕೃಪೆಯಿಂದ ಎಂದು ಅರ್ಜುನನು ಒಪ್ಪಿಕೊಳ್ಳುತ್ತಾನೆ. ಕೃಷ್ಣನು ಎಲ್ಲ ಕಾರಣಗಳ ಕಾರಣನು ಮತ್ತು ಪ್ರತಿಯೊಬ್ಬರ ಹೃದಯದಲ್ಲಿಯೂ ಪರಮಾತ್ಮನಾಗಿ ನೆಲೆಸಿದ್ದಾನೆ ಎನ್ನುವುದು ಈಗ ಅವನ ದೃಢ ನಂಬಿಕೆ.