ಫೆಂಗ್‌ಶೂಯಿ ವಾಸ್ತು: ಪದೇ ಪದೇ ಆರ್ಥಿಕ ಸಂಕಷ್ಟ, ಆರೋಗ್ಯ ಸಮಸ್ಯೆ ಎದುರಾಗುತ್ತಿದ್ದರೆ ಈ ವಿಚಾರಗಳತ್ತ ನೀವು ಗಮನ ಹರಿಸಲೇಬೇಕು
ವಾಸ್ತುಶಾಸ್ತ್ರದ ಪ್ರಕಾರ ನಮ್ಮ ಬದುಕಿನಲ್ಲಿ ಎದುರಾಗುವ ಹಲವು ಸಂಕಷ್ಟಗಳಿಗೆ ನಾವೇ ಕಾರಣರು. ಮನೆಯಲ್ಲಿ ನಾವು ಅನುಸರಿಸುವ ಕೆಲವು ಕ್ರಮಗಳು ನಮ್ಮ ಬದುಕನ್ನ ಕಷ್ಟಕ್ಕೆ ತಳ್ಳಬಹುದು. ನಿಮಗೆ ಪದೇ ಪದೇ ಆರ್ಥಿಕ ಸಂಕಷ್ಟ ಹಾಗೂ ಆರೋಗ್ಯ ಸಮಸ್ಯೆಗಳು ಕಾಡುತ್ತಿದ್ದರೆ ನೀವು ಮನೆಯಲ್ಲಿ ಈ ವಿಚಾರಗಳತ್ತ ಗಮನ ಹರಿಸಲೇಬೇಕು.
ನಮ್ಮ ಮನೆಯಲ್ಲಿ ನಾವು ಅನುಸರಿಸುವ ಕೆಲವು ಕ್ರಮಗಳು ವಾಸ್ತುಶಾಸ್ತ್ರಕ್ಕೆ ವಿರುದ್ಧವಾಗಿರುತ್ತದೆ. ಆದರೆ ಇದರ ಬಗ್ಗೆ ನಮಗೆ ಅರಿವಿಲ್ಲದ ಕಾರಣ ನಾವು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗಿ ಬರಹುದು. ಆದರೆ ಈ ಬಗ್ಗೆ ನಿಮಗೆ ತಿಳಿದಿದ್ದರೆ ಹಣಕಾಸು, ಆರೋಗ್ಯ, ಕೌಟುಂಬಿಕ ಸಮಸ್ಯೆ ಈ ಎಲ್ಲದರಿಂದ ದೂರ ಇರಬಹುದು. ಹಾಗಾದರೆ ಮನೆಯಲ್ಲಿ ಸಂಕಷ್ಟಗಳು ದೂರಾಗಬೇಕು ಎಂದರೆ ಈ ವಿಚಾರಗಳು ನಿಮಗೆ ತಿಳಿದಿರಬೇಕು.
ಆರೋಗ್ಯ, ಕೌಟುಂಬಿಕ ಸಮಸ್ಯೆಗೆ ಕಾರಣ
ಮನೆಯ ರೂಂಗಳಲ್ಲಿ ಉಪಯೋಗಿಸದ ವಸ್ತುಗಳಿದ್ದಲ್ಲಿ ಅದನ್ನು ವಿಲೇವಾರಿ ಮಾಡಬೇಕು. ಮುಖ್ಯವಾಗಿ ಕೆಟ್ಟು ಹೋದ ರೇಡಿಯೋ, ದೂರದರ್ಶನ, ಬ್ಯಾಟರಿ ಮುಂತಾದ ವಸ್ತುಗಳನ್ನು ಮನೆಯ ಒಳಗೆ ಇಡಬಾರದು. ಇಲ್ಲವಾದಲ್ಲಿ ಕೋಣೆಯಲ್ಲಿ ಋಣಾತ್ಮಕ ಶಕ್ತಿಯು ಅಧಿಕವಾಗಿರುತ್ತದೆ. ಮುರಿದು ಹೋದ ಕನ್ನಡಿಯಲ್ಲಿ ಮುಖವನ್ನು ನೋಡಿಕೊಳ್ಳಬಾರದು. ಹಾಗೆಯೆ ಚೂರಾದ ಕನ್ನಡಿಯನ್ನು ಜೋಡಿಸುವ ಪ್ರಯತ್ನವನ್ನು ಮಾಡಬಾರದು. ಇಂಥಹ ಕನ್ನಡಿಗಳನ್ನು ಉಪಯೋಗಿಸುವುದರಿಂದ ಋಣಾತ್ಮಕ ಶಕ್ತಿಯು ಹೆಚ್ಚುತ್ತದೆ. ಇಂತಹ ಕನ್ನಡಿಗಳನ್ನು ಬಳಸಿದಲ್ಲಿ ತೊಂದರೆಯೆ ಅಧಿಕ. ದಂಪತಿಗಳ ನಡುವೆ ಉತ್ತಮ ಬಾಂದವ್ಯ ಮೂಡುವುದಿಲ್ಲ. ಕುಟುಂಬದ ಹಿರಿಯರು ಅಥವಾ ಕಿರಿಯರ ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ. ಹಾಗೆಯೆ ಸರಿ ಇಲ್ಲದ ಗಡಿಯಾರವನ್ನುಇಟ್ಟಿದ್ದಲ್ಲಿ ಅತಿ ಮುಖ್ಯವಾದ ಕೆಲಸ ಕಾರ್ಯಗಳು ಅಪೂರ್ಣಗೊಳ್ಳುತ್ತವೆ.
ದೇವರ ಕೋಣೆ ಹೇಗಿರಬೇಕು?
ಸಾಧ್ಯವಾದಷ್ಟೂ ರೂಂನ ಮಧ್ಯಭಾಗದಲ್ಲಿ ದಿನನಿತ್ಯ ಬಳಸುವ ಪದಾರ್ಥಗಳನ್ನು ಸಹ ಶೇಖರಿಸಿ ಇಡಬಾರದು. ನೆಲದ ಮೇಲೆ ಒದ್ದೆ ಬಟ್ಟೆಯಾಗಲಿ ಒಣಗಿದ ಬಟ್ಟೆಯಾಗಲಿ ಹಾಕಿ ಅದನ್ನು ದಾಟಬಾರದು. ಇದರಿಂದ ನಿತ್ಯ ಜೀವನದಲ್ಲಿ ಅನಾವಶ್ಯಕವಾದ ಅಡೆತಡೆಗಳು ಎದುರಾಗುತ್ತವೆ. ಮನೆಯ ಬಾಗಿಲಿನ ಮುಂದೆಯೇ ಶೌಚಾಲಯ ಇರಬಾರದು. ಮುಖ್ಯದ್ವಾರದ ಅಕ್ಕಪಕ್ಕದಲ್ಲಿಯೂ ಶೌಚಾಲಯವು ಇರಬಾರದು. ಮುಂಬಾಗಿಲ ಮುಂದೆ ಇದ್ದಲ್ಲಿ ಕುಟುಂಬದ ಎಲ್ಲರಿಗೂ ಆರೋಗ್ಯದ ತೊಂದರೆ ಉಂಟಾಗುತ್ತದೆ. ಮುಂಬಾಗಿಲ ಅಕ್ಕಪಕ್ಕದಲ್ಲಿ ಇದ್ದಲ್ಲಿ ಕುಟುಂಬದ ಹಿರಿಯರ ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ. ಶೌಚಾಲಯ ಮತ್ತು ದೇವರ ಮನೆಯ ಗೋಡೆಯು ಒಂದೇ ಆಗಿರಬಾರದು. ಇಲ್ಲವಾದಲ್ಲಿ ಕುಟುಂಬದಲ್ಲಿನ ಸದಸ್ಯರಿಗೆ ಉಸಿರಾಟಕ್ಕೆ ಸಂಬಂಧಿಸಿದ ತೊಂದರೆ ಇರುತ್ತದೆ. ಎಷ್ಟೇ ಕಷ್ಟಪಟ್ಟರೂ ಹಣದ ತೊಂದರೆ ಕಡಿಮೆ ಆಗುವುದಿಲ್ಲ. ಮನೆಯ ಒಳಗಿನ ಶೌಚಾಲವು ಅಡುಗೆ ಮನೆಯ ಎದುರು ಇದ್ದಲ್ಲಿ ಮನೆಯಲ್ಲಿರುವ ಗೃಹಿಣಿಯರ ಆರೋಗ್ಯದಲ್ಲಿ ಸಮಸ್ಯೆ ಕಂಡುಬರುತ್ತದೆ. ಮನೆಯ ಒಳಗಿನ ಶೌಚಾಯಲವು ಪೂಜಾಗೃಹದ ಎದುರು ಇದ್ದಲ್ಲಿ ಕುಟುಂಬದ ಒಟ್ಟಾರೆ ಅಭಿವೃದ್ಧಿಯಲ್ಲಿ ತೊಂದರೆ ಕಂಡುಬರುತ್ತದೆ.
ಅಲಂಕರಕ್ಕಾಗಿ ಮನೆಯ ಮಧ್ಯಭಾಗದಲ್ಲಿ ಅರ್ಧಕಟ್ಟಿದ ಗೋಡೆ ಇರಬಾರದು. ಒಂದು ವೇಳೆ ಇದ್ದಲ್ಲಿ ಕುಟುಂಬದಲ್ಲಿ ಒಗ್ಗಟ್ಟು ಬಹುದಿನ ಉಳಿಯದು. ಮನೆಯ ಬಾಗಿಲುಗಳು ಹೊರಗಿನಿಂದ ಬಲ ಭಾಗದಲ್ಲಿ ಬೀಗ ಹಾಕುವ ವ್ಯವಸ್ಥೆ ಇರಬೇಕು. ಮುಂಬಾಗಿಲನ್ನು ಒಳ ನೂಕುವಂತೆ ಇರಬಾರದು. ಪ್ರತಿಯೊಂದು ಮನೆಗೂ ಮುಂಬಾಗಿಲು ಅತಿ ಮುಖ್ಯವಾಗುತ್ತದೆ. ಮುಂಬಾಗಿಲಿಗೂ ಕಪ್ಪುಬಣ್ಣವನ್ನು ಬಳಿಯುವುದು ಅಶುಭವನ್ನು ಸೂಚಿಸುತ್ತದೆ. ಮುಂಬಾಗಿಲಿಗೆ ಒಂದೇ ಬಗೆಯ ಬಣ್ಣವನ್ನು ಬಳಿಯಬೇಕು. ಮಿಶ್ರಬಣ್ಣವನ್ನು ಬಳಿಯಬಾರದು.
ನೇಮ್ ಪ್ಲೇಟ್ ಹೇಗಿದ್ದರೆ ಉತ್ತಮ
ಸಾಮಾನ್ಯವಾಗಿ ಮನೆಯ ಮುಂಬಾಗಿಲಿಗೆ ಕುಲದೇವರ ಹೆಸರನ್ನು ಬರೆಸುತ್ತಾರೆ ಅಥವಾ ಇನ್ನಾವುದೋ ಮನಸ್ಸಿಗೆ ಇಷ್ಟವಾಗುವ ಹೆಸರನ್ನು ಬರೆಸುತ್ತಾರೆ. ಆದರೆ ಈ ಹೆಸರನ್ನು ಮನೆಯ ಮುಂಬಾಗಿಲ ಬಲಭಾಗದಲ್ಲಿ ಬರೆಸಬೇಕು. ಇಲ್ಲವೇ ನಾಮಫಲಕವನ್ನು ಹಾಕಬೇಕು. ಇದರಿಂದ ಕುಟುಂಬಕ್ಕೆ ಸಂಪೂರ್ಣ ರಕ್ಷಣೆ ದೊರೆಯುತ್ತದೆ. ಆದರೆ ಮನೆಯ ಮುಖ್ಯಸ್ಥನ ಹೆಸರಿನ ನಾಮಫಲಕವೂ ಬಹುಮುಖ್ಯ. ಕುಟುಂಬದ ಮುಖ್ಯಸ್ಥನ ಹೆಸರಿನ ಮನೆಯ ಮುಂಬಾಗಿನ ಮಧ್ಯೆ ಮೇಲ್ಬಾಗದಲ್ಲಿ ಅಳವಡಿಸಬೇಕು. ಇದರಿಂದ ಕುಟುಂಬದಲ್ಲಿ ಸೌಹಾರ್ದಯುತ ವಾತಾವರಣ ಇರುತ್ತದೆ. ಆದರೆ ನಾಮಫಲಕದಲ್ಲಿ ಕಪ್ಪು ಬಣ್ಣವನ್ನು ಉಪಯೋಗಿಸಬಾರದು. ದೀಪದ ಚಿತ್ರವೂ ಇರಬಾರದು. ಕೇಸರಿ ಅಥವಾ ನೀಲಿ ಬಣ್ಣದ ಮೇಲೆ ಬಿಳಿಯ ಅಕ್ಷರಗಳಿರುವುದು ಹೆಚ್ಚು ಪ್ರಯೋಜನಕಾರಿಯಾಗುತ್ತದೆ.
ಕೆಲಸ ಮಾಡುವ ಸ್ಥಳದಲ್ಲಿ ಇದೇ ಮಾದರಿಯನ್ನು ಅನುಸರಿಸಬೇಕು. ಕಚೇರಿಯ ಒಳಗೆ ಮೇಜಿನ ಮೇಲೆ ಇರುವ ನಾಮಫಲಕವನ್ನು ಸಹ ನೀಲಿ ಮತ್ತು ಬಿಳಿಯ ಬಣ್ಣದಿಂದ ಮಾಡಿಸಿರಬೇಕು. ವಿಸಿಟಿಂಗ್ ಕಾರ್ಡಿನಲ್ಲಿ ಉದ್ಯೋಗ ಮಾಡುವ ಸಂಸ್ಥೆ ಮತ್ತು ನಮ್ಮ ಹೆಸರು ಆ ಕಾರ್ಡಿನ ಮೇಲ್ಬಾಗದ ಎಡಮೂಲೆಯಲ್ಲಿ ಇರಬೇಕು. ಇದರಿಂದ ಜನಪ್ರಿಯತೆ ಮಾತ್ರವಲ್ಲದೆ ಸಹೋದ್ಯೋಗಿಗಳ ಸಹಾಯ ಸಹಕಾರ ದೊರೆಯುತ್ತದೆ.