ಬೆಂಗಳೂರಲ್ಲಿ ಮೈ ನಡುಕದ ಚಳಿ, ಹಗುರ ಮಳೆ, ಕರ್ನಾಟಕದ ಉತ್ತರ ಒಳನಾಡು ಭಾಗದಲ್ಲಿ ಮೈ ಕೊರೆವ ಚಳಿ, ಹೀಗಿರಲಿದೆ ಕರ್ನಾಟಕ ಹವಾಮಾನ ಇಂದು
Bengaluru Weather: ಕರ್ನಾಟಕದ ದಕ್ಷಿಣ ಒಳನಾಡು ಭಾಗದಲ್ಲಿ ಇಂದು ಚಳಿ ಮತ್ತು ಮಳೆಯ ದಿನ, ಉತ್ತರ ಒಳನಾಡು ಭಾಗದಲ್ಲಿ ಚಳಿ, ಒಣಹವೆ. ಬೆಂಗಳೂರಲ್ಲಿ ಮೈ ನಡುಕದ ಚಳಿ, ಹಗುರ ಮಳೆ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಪ್ರಕಟಿಸಿರುವ ಹವಾಮಾನ ಮುನ್ಸೂಚನೆ ವಿವರ ಹೇಳಿದೆ.
Bengaluru Weather: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಉಂಟಾಗಿರುವ ಚಂಡಮಾರುತ ತಮಿಳು ನಾಡು, ಕೇರಳ ಮತ್ತು ಕರ್ನಾಟಕದ ದಕ್ಷಿಣ ಭಾಗದಲ್ಲಿ ಮಳೆಗೆ ಕಾರಣವಾಗಿದೆ. ಕರ್ನಾಟಕದ ದಕ್ಷಿಣ ಒಳನಾಡಲ್ಲಿ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ಸುತ್ತಮುತ್ತ ಅಂದರೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಮಂಡ್ಯ, ಮೈಸೂರು ಭಾಗದಲ್ಲಿ ಮಳೆಯಾಗಬಹುದು. ಉಳಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಮೈ ನಡುಕದ ಚಳಿ ಮತ್ತು ಒಣ ಹವೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನಾ ವರದಿ ಹೇಳಿದೆ.
ಕರ್ನಾಟಕ ಹವಾಮಾನ ಇಂದು; ಎಲ್ಲೆಲ್ಲಿ ಮಳೆ, ಚಳಿ, ಒಣಹವೆ, ತೇವಾಂಶ ಕುಸಿತ
ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳ ಒಂದೆರೆಡು ಕಡೆಗಳಲ್ಲಿ ಹಗುರ / ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಒಂದೆರೆಡು ಕಡೆಗಳಲ್ಲಿ ಮುಂಜಾನೆ ಮಂಜು/ ಇಬ್ಬನಿ ಇರುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಒಂದೆರೆಡು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 1-3 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇರುತ್ತದೆ ಎಂದು ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರದ ವಿಜ್ಞಾನಿ ಡಾ ಎನ್ ಪುವಿಯರಸನ್ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಹಂಚಿಕೊಂಡಿರುವ ಮಾಹಿತಿ ಪ್ರಕಾರ, ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಕಂಡುಬಂದಿರುವ ವಾಯುಭಾರ ಕುಸಿತದ ಪರಿಣಾಮ, ಕಳೆದ 6 ಗಂಟೆಗಳಲ್ಲಿ ಗಾಳಿಯ ವೇಗ ಪ್ರತಿ ಗಂಟೆಗೆ 2 ಕಿ.ಮೀ ನಷ್ಟಿದ್ದು, ಉತ್ತರ ದಿಕ್ಕಿಗೆ ಬೀಸುತ್ತಿದೆ. ಗುರುವಾರ (ನವೆಂಬರ್ 28) ವಾಯುಭಾರ ಕುಸಿತವು ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಕೇಂದ್ರೀಕೃತಗೊಂಡಿದ್ದು, ಉತ್ತರ-ವಾಯುವ್ಯದ ದಿಕ್ಕಿನಿಂದ ಟ್ರಿಂಕೋಮಲಿಯ ಪೂರ್ವ-ಈಶಾನ್ಯಕ್ಕೆ ದಿಂದ 110 ಕಿ.ಮೀ, ನಾಗಪಟ್ಟಿನಂನಿಂದ ಆಗ್ನೇಯಕ್ಕೆ 310 ಕಿಮೀ, ಪುದುಚೇರಿನಿಂದ ಆಗ್ನೇಯಕ್ಕೆ 410 ಕಿಮೀ ಹಾಗೂ ಚೆನ್ನೈನಿಂದ ದಕ್ಷಿಣ-ಆಗ್ನೇಯಕ್ಕೆ 480 ಕಿ.ಮೀ. ದೂರದಲ್ಲಿತ್ತು. ನಂತರದ 12 ಗಂಟೆಗಳಲ್ಲಿ ಉತ್ತರ-ವಾಯವ್ಯ ದಿಕ್ಕಿನೆಡೆ ಚಲಿಸಲಿದ್ದು, ತೀವ್ರ ವಾಯುಭಾರ ಕುಸಿತವುಂಟಾಗುವ ಸಾಧ್ಯತೆಗಳಿದೆ. ನಂತರ, ಉತ್ತರ-ವಾಯುವ್ಯ-ಪಶ್ಚಿಮವಾಗಿ ಚಲಿಸುತ್ತ ಮತ್ತು ನವೆಂಬರ್ 30 ರ ಬೆಳಿಗ್ಗೆ ಕಾರೈಕಲ್ ಮತ್ತು ಮಹಾಬಲಿಪುರಂ ನಡುವೆ ಉತ್ತರ ತಮಿಳುನಾಡು ಪುದುಚೇರಿ ಕರಾವಳಿಯನ್ನು ದಾಟುತ್ತದೆ ಮತ್ತು ಗಾಳಿಯ ವೇಗ ಗಂಟೆಗೆ 50-60 ಕಿಮೀ, ಇದು ಗಂಟೆಗೆ 70 ಕಿಮೀ ವರೆಗೆ ತಲುಪುವ ಸಾಧ್ಯತೆಗಳಿದೆ. 28 ನವೆಂಬರ್ 2024 ರ ಸಂಜೆಯಿಂದ 29 ನವೆಂಬರ್ 2024 ರ ಬೆಳಿಗ್ಗೆ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಗಾಳಿಯ ವೇಗ ಗಂಟೆಗೆ 65-75 ಕಿಮೀ, ಇದು ಗಂಟೆಗೆ 85 ಕಿಮೀ ವರೆಗೆ ತಲುಪುವ ಗಾಳಿಯ ವೇಗ ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆಯಿದೆ.
ಈ ಹವಾಮಾನ ಪರಿಸ್ಥಿತಿಗಳ ಪರಿಣಾಮ ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು ಸಿಡಿಲಿನಿಂದ ಕೂಡಿದ್ದು ನವೆಂಬರ್ 29 ರಿಂದ ಡಿಸೆಂಬರ್ 5 ರವರೆಗೆ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆ. ಉತ್ತರ ಒಳನಾಡು, ಕರಾವಳಿ ಮತ್ತು ಮಳೆನಾಡು ಜಿಲ್ಲೆಗಳಲ್ಲಿ ಡಿಸೆಂಬರ್ 1 ರಿಂದ ಡಿಸೆಂಬರ್ 4 ರವರೆಗೆ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆಯಾಗುವ ಸಾಧ್ಯತೆಗಳಿದೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ನವೆಂಬರ್ 30 ಮತ್ತು ಡಿಸೆಂಬರ್ 1 ರಂದು ಅಲ್ಲಲ್ಲಿ ಚದುರಿದಂತೆ ಭಾರಿ ಮಳೆಯಾಗುವ ನಿರೀಕ್ಷೆಯಿದೆ.
ಬೆಂಗಳೂರು ಹವಾಮಾನ ಇಂದು; ಬೆಂಗಳೂರು ನಗರ, ಗ್ರಾಮಾಂತರಗಳಲ್ಲಿ ಹಗುರ ಮಳೆ, ಮೈ ನಡುಕದ ಚಳಿ
ನಾಳೆ (ನವೆಂಬರ್ 30) ಬೆಳಗ್ಗೆ ತನಕ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ ಪ್ರಕಾರ, ಇಂದು ಕೆಲವು ಕಡೆಗಳಲ್ಲಿ ಮುಂಜಾನೆ ಮಂಜು, ಮೈ ನಡುಕದ ಚಳಿ ಅನುಭವಕ್ಕೆ ಬರಬಹುದು. ಅಪರಾಹ್ನ ತನಕ ಮೋಡ ಕವಿದ ವಾತಾವರಣ ಇರಲಿದ್ದು, ಹಗುರ ಮಳೆಯ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ ಸುಮಾರು 26 ಮತ್ತು 17 ಡಿಗ್ರಿ ಸೆಲ್ಸಿಯಸ್ ಆಗಿರಬಹುದು. ಆ ನಂತರ ನಾಳೆ ಬೆಳಗ್ಗೆ ತನಕ ಭಾಗಶಃ ಮೋಡ ಕವಿದ ವಾತಾವರಣ ಕಾಣಬಹುದು. ಕೆಲವು ಕಡೆ ಹಗುರ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 26 ಮತ್ತು ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಆಗುವ ಸಾಧ್ಯತೆಯಿದೆ ಎಂದು ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರ ನೀಡಿರುವ ಹವಾಮಾನ ಮುನ್ಸೂಚನೆ ವರದಿ ಹೇಳಿದೆ.