ಕಟಕ ರಾಶಿಗೆ ಕುಜ: ಕುದಿಯುತ್ತಿರುವ ಇಸ್ರೇಲ್-ಇರಾನ್ ವೈಷಮ್ಯದ ಕಾವು ಇನ್ನಷ್ಟು ಹೆಚ್ಚುವ ಅಪಾಯ, ಭಾರತಕ್ಕೂ ಅಂಥ ಒಳ್ಳೇಯದಲ್ಲ ಈ ಬೆಳವಣಿಗೆ
ಗ್ರಹಗಳ ಸಂಚಾರದಿಂದ ದ್ವಾದಶ ರಾಶಿಗಳ ಮೇಲೆ ಮಾತ್ರವಲ್ಲ, ಪ್ರಪಂಚದ ವಿವಿಧ ಅಂಶಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಇದೀಗ ಕುಜನು ಕಟಕ ರಾಶಿಯನ್ನು ಪ್ರವೇಶ ಮಾಡಲಿದ್ದು ಇದರಿಂದ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಏನೆಲ್ಲಾ ಬದಲಾವಣೆಗಳಾಗಲಿವೆ ಎಂಬುದರ ವಿವರಣೆ ಇಲ್ಲಿದೆ. (ಬರಹ: ಎಚ್. ಸತೀಶ್, ಜ್ಯೋತಿಷಿ).
ಜ್ಯೋತಿಷ್ಯದಲ್ಲಿ ಗ್ರಹಗಳ ಸಂಚಾರಕ್ಕೆ ಬಹಳ ಮಹತ್ವವಿದೆ. ಗ್ರಹಗಳು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶ ಮಾಡುವ ಪ್ರಕ್ರಿಯೆ ಹಾಗೂ ನಂತರ ಅದೇ ನಿರ್ದಿಷ್ಟ ರಾಶಿಯಲ್ಲಿ ಸಂಚಾರ ಮಾಡುವುದು ಹಲವು ಬದಲಾವಣೆಗಳಿಗೆ ಕಾರಣವಾಗುತ್ತದೆ. ಅಕ್ಟೋಬರ್ 20ರಂದು ಕುಜನು ಮಿಥುನದಿಂದ ಕಟಕ ರಾಶಿಯನ್ನು ಪ್ರವೇಶಿಸುತ್ತಾನೆ. ಜನವರಿ 12ನೇರಂದು ಕುಜನು ವಕ್ರಿಯಾಗುತ್ತಾನೆ. ಅದೇ ತಿಂಗಳ ಅಂದರೆ ಜನವರಿ 21ರಂದು ಮಿಥುನ ರಾಶಿಗೆ ಮರಳುತ್ತಾನೆ. ಜನವರಿ 21ರವರೆಗೂ ಕುಜನು ತನ್ನ ಪ್ರಭಾವ ಬೀರುತ್ತಾನೆ. ಈ ಸಮಯದಲ್ಲಿ ಅಶುಭ ಫಲಗಳನ್ನು ಪಡೆಯುವ ಸಾಧ್ಯತೆಗಳು ಇರುತ್ತವೆ. ಜನ್ಮ ಕುಂಡಲಿಯಲ್ಲಿ ಕುಜನು ಸಶಕ್ತನಾಗಿದ್ದಲ್ಲಿ ಮಧ್ಯಮಗತಿಯ ಫಲಗಳು ದೊರೆಯುತ್ತವೆ. ಅಕ್ಟೋಬರ್ 17ರಿಂದ ನವೆಂಬರ್ 16ರ ರವರೆಗೂ ಸೂರ್ಯನು ತುಲಾ ರಾಶಿಯಲ್ಲಿ ಸಂಚರಿಸುತ್ತಾನೆ. ಈ ಅವಧಿಯಲ್ಲಿ ಅಶುಭ ಫಲಗಳು ಹೆಚ್ಚಾಗಿಯೇ ಇರುತ್ತವೆ. ಕಾರಣ ರವಿ ಮತ್ತು ಕುಜರು ನೀಚ ರಾಶಿಯಲ್ಲಿ ಇರುತ್ತಾರೆ. ಇವರಿಬ್ಬರೂ ಆತ್ಮವಿಶ್ವಾಸ ಮತ್ತು ಧೈರ್ಯ ಸಾಹಸಗಳಿಗೆ ಪ್ರಮುಖರಾಗಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಹೀಗೆಲ್ಲಾ ನಡೆಯುತ್ತೆ
ಭೌಗೋಳಿಕವಾಗಿ ಉತ್ತರ ದಿಕ್ಕಿನಲ್ಲಿ ಇರುವ ದೇಶಗಳು ನಾನಾ ವಿಧದ ತೊಂದರೆಗೆ ಒಳಗಾಗುತ್ತವೆ. ಇದೇ ರೀತಿಯಲ್ಲಿ ಪಶ್ಚಿಮಾತ್ಯ ದೇಶಗಳು ಸಹ ಅನಿರೀಕ್ಷಿತವಾಗಿ ತೊಂದರೆಯನ್ನು ಎದುರಿಸಬೇಕಾಗುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ವ್ಯಾಪಾರ ವ್ಯವಹಾರಗಳು ನಷ್ಟವನ್ನು ಅನುಭವಿಸುತ್ತವೆ. ಇಡೀ ಪ್ರಪಂಚದಲ್ಲಿ ಬಲಾಢ್ಯವಾದ ದೇಶವೊಂದು ಅತಿ ಚಿಕ್ಕದಾದ ದೇಶದ ಮುಂದೆ ತಲೆಬಾಗಿ ನಿಲ್ಲುತ್ತದೆ. ವಿದೇಶವೊಂದರ ಮೇಲೆ ಭಾರತೀಯ ಜನರು ಪ್ರಾಬಲ್ಯ ಸಾಧಿಸುತ್ತಾರೆ. ಭಾರತೀಯರಿಲ್ಲದೆ ಅಮೆರಿಕದಂತಹ ದೇಶಗಳು ಯಾವುದೇ ಕೆಲಸವನ್ನು ಮಾಡಲಾಗದು. ತಂತ್ರಜ್ಞಾನಕ್ಕೆ ಸಂಬಂಧಿಸಿದ ದೊಡ್ಡ ಮಟ್ಟದ ಆವಿಷ್ಕಾರವು ನಿರಾಸೆಯನ್ನು ಮೂಡಿಸುತ್ತದೆ. ಸಮರ್ಪಕ ಕಾರಣವೇ ಇಲ್ಲದೆ ದೇಶಗಳು ಯುದ್ಧದಲ್ಲಿ ತೊಡಗುತ್ತವೆ. ಆದರೆ ಯಾರಿಗೂ ಪೂರ್ಣ ಪ್ರಮಾಣದ ಜಯ ಲಭಿಸುವುದಿಲ್ಲ. ಮೂರು ಅಥವಾ ನಾಲ್ಕು ಚಿಕ್ಕ ರಾಷ್ಟ್ರಗಳು ಒಂದು ರೀತಿಯಲ್ಲಿ ತಮ್ಮ ಅಸ್ಥಿತ್ವವನ್ನೇ ಕಳೆದುಕೊಳ್ಳುತ್ತವೆ. ಎರಡು ಬಲಾಢ್ಯ ರಾಷ್ಟ್ರಗಳ ನಡುವೆ ಭಾರತವು ತನ್ನ ಪ್ರತಿಷ್ಠೆಯನ್ನು ಉಳಿಸಿಕೊಳ್ಳಲು ಸಣ್ಣ ಮಟ್ಟದ ಹೋರಾಟವನ್ನು ಮಾಡಬೇಕಾಗುತ್ತದೆ. ಪಾಕಿಸ್ತಾನದಂತಹ ರಾಷ್ಟ್ರಗಳಲ್ಲಿ ಮತ್ತೊಮ್ಮೆ ಅಜಾಗರೂಕತೆ ತಲೆದೋರುತ್ತದೆ. ಗಡಿಯ ವಿಚಾರದಲ್ಲಿ ಸಣ್ಣಪುಟ್ಟ ಜಗಳಗಳಾದರೂ ಯಾವುದೇ ತೊಂದರೆಯಾಗದು. ಈ ಅವಧಿಯಲ್ಲಿ ಇಡೀ ಪ್ರಪಂಚವು ಅನೇಕ ಬದಲಾವಣೆಗಳನ್ನು ಕಾಣುತ್ತದೆ. ಆದರೆ ಅವುಗಳಿಂದ ಯಾವುದೇ ಉಪಯೋಗವಿಲ್ಲ. ಬಲವನ್ನು ಮರೆತು ಬುದ್ಧಿ ಬಲವನ್ನು ನಂಬಿರುವ ಬೆರಳೆಣಿಕೆಯ ದೇಶಗಳು ಮಾತ್ರ ಮತ್ತೊಮ್ಮೆ ತಮ್ಮ ಅವಶ್ಯಕತೆಯನ್ನು ಜಗತ್ತಿಗೆ ತೋರಿಸುತ್ತವೆ. ಯುದ್ಧಗಳಿಂದ ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು. ನೆರೆಯ ರಾಷ್ಟ್ರವೊಂದರಲ್ಲಿ ಅನಿರೀಕ್ಷಿತವಾಗಿ ರಾಜಕೀಯ ಮಟ್ಟದ ಬದಲಾವಣೆಗಳು ಭಾರತಕ್ಕೆ ತಲೆ ನೋವನ್ನು ಉಂಟುಮಾಡುತ್ತದೆ. ಬಾಂಗ್ಲಾದೇಶವು ದೊಡ್ಡ ಆತಂಕವನ್ನು ಎದುರಿಸುತ್ತದೆ.
ಭಾರತ ರಾಜಕಾರಣದಲ್ಲಿ ತಲ್ಲಣ
ಭಾರತದ ರಾಜಕೀಯ ಪಕ್ಷಗಳಲ್ಲಿ ಯಾವುದೇ ವಿಚಾರದಲ್ಲಿಯೂ ಒಮ್ಮತ ಉಂಟಾಗುವುದಿಲ್ಲ. ದೆಹಲಿ ಮತ್ತು ಮುಂಬೈ ನಗರಗಳಲ್ಲಿನ ಕಾನೂನು ಸುವ್ಯವಸ್ಥೆ ಹಾದಿ ತಪ್ಪುತ್ತದೆ. ಸಾಮಾನ್ಯ ಜನರ ಜೀವನವು ಕಷ್ಟಕರವಾಗುತ್ತದೆ. ದಿನನಿತ್ಯ ಬಳಸುವ ಆಹಾರ ಪದಾರ್ಥಗಳ ಕೊರತೆ ಉಂಟಾಗುವ ಸಾಧ್ಯತೆಗಳಿವೆ. ಮುಖ್ಯವಾಗಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ರಾಷ್ಟ್ರ ರಾಜಕೀಯದಲ್ಲಿ ದೊಡ್ಡಮಟ್ಟದ ಬದಲಾವಣೆಗಳು ಸಂಭವಿಸುತ್ತವೆ. ಹಿರಿಯ ನಾಗರೀಕರೊಬ್ಬರ ಆರೋಗ್ಯದಲ್ಲಿ ಧಿಢೀರ್ ಕುಸಿತ ಕಾಣಲಿದೆ. ರಾಷ್ಟ್ರೀಯ ವರಮಾನದಲ್ಲಿ ಸ್ಥಿರತೆ ಇರುವುದಿಲ್ಲ. ವಿದೇಶಗಳ ಜೊತೆಯಲ್ಲಿ ಇದ್ದ ಸ್ನೇಹವು ಕೆಲವು ದಿನ ಮರೆಯಾಗಬಹುದು. ಜಾಗತಿಕ ಶತೃಗಳಿಗಿಂತ ಆಂತರಿಕ ಶತ್ರುಗಳ ತೊಂದರೆಯೇ ಭಾರತಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಕೇಂದ್ರ ಸರ್ಕಾರದ ಹೊಸತೊಂದು ಯೋಜನೆ ವಿರೋಧ ಪಕ್ಷಗಳ ವಿರೋಧವನ್ನು ಎದುರಿಸಬೇಕಾಗುತ್ತದೆ. ದೇಶದ ಉತ್ತರ ಭಾಗದಲ್ಲಿ ಇರುವ ರಾಜ್ಯಗಳು ತಮ್ಮದೇ ತಪ್ಪಿನಿಂದ ತೊಂದರೆಗೆ ಸಿಲುಕುತ್ತವೆ. ರಾಜ್ಯ ಸರ್ಕಾರಗಳ ಮೇಲೆ ಕೇಂದ್ರ ಸರ್ಕಾರದ ಹಿಡಿತವು ಕಡಿಮೆಯಾಗುವ ಸಾಧ್ಯತೆಗಳಿವೆ. ದೇಶದಲ್ಲಿ ಉಂಟಾಗುವ ರಾಜಕೀಯ ಬದಲಾವಣೆಗಳು ವಿದೇಶಗಳ ಗಮನ ಸೆಳೆಯುತ್ತವೆ. ಜಾತಿ ಮತ್ತು ಧರ್ಮದ ರಾಜಕೀಯ ಮತ್ತು ಗಲಭೆಗಳು ಹೆಚ್ಚಾಗಲಿವೆ.
ಕರ್ನಾಟಕದಲ್ಲಿ ನಡೆಯುವ ವಿದ್ಯಮಾನಗಳು
ಕರ್ನಾಟಕಕ್ಕೆ ನೆರೆ ರಾಜ್ಯಗಳಿಂದ ಯಾವುದೇ ಸಹಾಯ ಸಹಕಾರ ಇರುವುದಿಲ್ಲ. ರಾಜಕೀಯ ಕ್ಷೇತ್ರದಲ್ಲಿ ಪ್ರತಿಯೊಂದು ಪಕ್ಷಗಳಲ್ಲಿ ಒಳ ಜಗಳಗಳು ಹೆಚ್ಚುತ್ತವೆ. ಹಿರಿಯ ಅಧಿಕಾರಿಗಳು ತೆಗೆದುಕೊಳ್ಳುವ ನಿರ್ಧಾರಗಳನ್ನು ಒತ್ತಡಕ್ಕೆ ಮಣಿದು ಬದಲಿಸಲೇಬೇಕಾಗುತ್ತದೆ. ರಾಜ್ಯದಲ್ಲಿನ ಸಣ್ಣಮಟ್ಟದ ರಾಜಕೀಯ ಪಕ್ಷವೊಂದು ಹೊಸ ನಾಯಕನ ಅನ್ವೇಷಣೆಯಲ್ಲಿ ತೊಡಗುತ್ತದೆ. ರಾಜ್ಯದ ನಾಯಕರೊಬ್ಬರು ಅನಿರೀಕ್ಷಿತವಾಗಿ ತನ್ನ ಅಧಿಕಾರವನ್ನು ಬೇರೆಯವರಿಗೆ ವಹಿಸುತ್ತಾರೆ. ರಾಜ್ಯದ ಹೊಸ ಕಾನೂನು ಜನರ ವಿರೋಧಕ್ಕೆ ಗುರಿಯಾಗುತ್ತದೆ. ಖ್ಯಾತ ವ್ಯಕ್ತಿಯೊಬ್ಬರು ಕೇವಲ ತಾತ್ಕಾಲಿಕವಾಗಿ ಎದುರಾಗಿರುವ ತೊಂದರೆಯಿಂದ ಹೊರಬರುತ್ತಾರೆ. ದಿನನಿತ್ಯದ ಜೀವನವು ಕಷ್ಟಕರವಾಗುತ್ತದೆ. ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆಗಳ ಉದ್ಯೋಗದಲ್ಲಿ ತೊಂದರೆ ಎದುರಾಗುತ್ತದೆ. ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಸಂಸ್ಥೆಯೊಂದರ ಆದಾಯವು ಕುಂಠಿತಗೊಳ್ಳುತ್ತದೆ. ಪ್ರಾಕೃತಿಕ ವೈಪರೀತ್ಯದಿಂದ ಉಂಟಾಗುವ ದೊಡ್ಡ ಅವಾಂತರದಿಂದ ರಾಜ್ಯವು ಪಾರಾಗುತ್ತದೆ. ಮಾಹಿತಿ ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರ ಸಂತಸಕ್ಕೆ ಕಾರಣವಾಗುತ್ತದೆ.
ಬರಹ: ಎಚ್. ಸತೀಶ್, ಜ್ಯೋತಿಷಿ
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)