ಮಧುರೆಯಲ್ಲಿನ ಮೀನಾಕ್ಷಿ ದೇಗುಲದಲ್ಲಿಂದು ವಿಶೇಷ ಪೂಜೆ; ಇಂದ್ರನಿಗೆ ಗುರುಶಾಪದಿಂದ ಮುಕ್ತಿ ನೀಡಿದ ಶಿವಲಿಂಗ ಇರುವ ಸ್ಥಳವಿದು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಧುರೆಯಲ್ಲಿನ ಮೀನಾಕ್ಷಿ ದೇಗುಲದಲ್ಲಿಂದು ವಿಶೇಷ ಪೂಜೆ; ಇಂದ್ರನಿಗೆ ಗುರುಶಾಪದಿಂದ ಮುಕ್ತಿ ನೀಡಿದ ಶಿವಲಿಂಗ ಇರುವ ಸ್ಥಳವಿದು

ಮಧುರೆಯಲ್ಲಿನ ಮೀನಾಕ್ಷಿ ದೇಗುಲದಲ್ಲಿಂದು ವಿಶೇಷ ಪೂಜೆ; ಇಂದ್ರನಿಗೆ ಗುರುಶಾಪದಿಂದ ಮುಕ್ತಿ ನೀಡಿದ ಶಿವಲಿಂಗ ಇರುವ ಸ್ಥಳವಿದು

Tamilnadu Temple: ಚೈತ್ರ ಹುಣ್ಣಿಮೆಯಾದ ಈ ದಿನ ಹನುಮ ಜಯಂತಿ ಕೂಡಾ ಇದ್ದು ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿದೆ. ತಮಿಳುನಾಡಿನ ಮಧುರೈನ ಮೀನಾಕ್ಷಿ ದೇವಾಲಯದಲ್ಲಿ ಕೂಡಾ ಇಂದು ಸಂಜೆ ವಿಶೇಷ ಪೂಜೆ ಏರ್ಪಡಿಸಲಾಗಿದೆ. ಇದು ಇಂದ್ರನಿಗೆ ಶಿವನು ಗುರುವಿನ ಶಾಪದಿಂದ ಮುಕ್ತಿ ಹೊಂದಲು ಸಹಾಯ ಮಾಡಿದ ಸ್ಥಳ ಎಂದು ನಂಬಲಾಗಿದೆ.

ಚೈತ್ರ ಪೂರ್ಣಿಮೆಯಂದು ಮಧುರೈ ಮೀನಾಕ್ಷಿ ದೇವಸ್ಥಾನದಲ್ಲಿ ವಿಶೇಷ ಪೂಜೆ
ಚೈತ್ರ ಪೂರ್ಣಿಮೆಯಂದು ಮಧುರೈ ಮೀನಾಕ್ಷಿ ದೇವಸ್ಥಾನದಲ್ಲಿ ವಿಶೇಷ ಪೂಜೆ (PC: Pixaby, RM @_hello_univers)

ಇಂದು ಚಿತ್ರಾ ಪೌರ್ಣಿಮ. ಇದನ್ನು ಚೈತ್ರ ಹುಣ್ಣಿಮೆ ಎಂದೂ ಕರೆಯುತ್ತಾರೆ. ಪ್ರತಿ ವರ್ಷವೂ ಚೈತ್ರ ಮಾಸದ ಹುಣ್ಣಿಮೆಯ ದಿನವನ್ನು ಬಹಳ ವಿಶೇಷವಾಗಿ ಆಚರಿಸಲಾಗುತ್ತಿದೆ. ಇದರ ಬಗ್ಗೆ ಕೇವಲ ಕೆಲವು ಧಾರ್ಮಿಕ ಗ್ರಂಥಗಳಲ್ಲಿ ಮಾತ್ರ ಉಲ್ಲೇಖಿಸಲಾಗಿದೆ. ಈ ಬಾರಿ ಚೈತ್ರ ಹುಣ್ಣಿಮೆಯಂದು ಹನುಮ ಜಯಂತಿ ಕೂಡಾ ಇರುವುದರಿಂದ ಈ ಬಾರಿ ಬಹಳ ವಿಶೇಷವಾಗಿದೆ.

ಈ ದಿನ ಬೆಳಗಿನ ವೇಳೆ ಕುಲದೇವರ ಪೂಜೆಯನ್ನು ಮಾಡಬೇಕು. ದೇವರಿಗೆ ಮೊಸರನ್ನ ಮತ್ತು ನಿಂಬೆಹಣ್ಣಿನ ಚಿತ್ರಾನ್ನವನ್ನು ನೇವೇದ್ಯವನ್ನಾಗಿ ಅರ್ಪಿಸಬೇಕು. ಮನೆಗೆ ಹಿರಿಯರನ್ನು ಆಹ್ವಾನಿಸಿ ಅವರಿಗೆ ಚಿತ್ರಾನ್ನ ಮತ್ತು ಮೊಸರನ್ನ ನೀಡಬೇಕು. ನಂತರ ಅವರಿಗೆ ಬೆಲ್ಲದಿಂದ ಮಾಡಿದ ಪಾನಕ ಮತ್ತು ನೀರು ಮಜ್ಜಿಗೆಯನ್ನು ಕುಡಿಯಲು ನೀಡಿ ಕುಟುಂಬದ ಸದಸ್ಯರೆಲ್ಲಾರೂ ಅವರ ಆಶೀರ್ವಾದ ಪಡೆಯಬೇಕು. ವಯೋವೃದ್ಧರು, ಒಂದು ಹೊಸ ಪುಸ್ತಕವನ್ನು ಕೊಂಡು ಅದರಲ್ಲಿ ಶ್ರೀಕಾರವನ್ನು ಬರೆದು ಲೇಖನಿಯನ್ನೂ ದಾನ ನೀಡಬೇಕು. ಇದರಿಂದಾಗಿ ಚಿತ್ರಗುಪ್ತನು ಈ ದಿನದಿಂದ ಹೊಸ ಲೆಕ್ಕವನ್ನು ಇಡುತ್ತಾನೆ ಎಂಬ ನಂಬಿಕೆ ಇದೆ. ಉತ್ತಮ ಆರೋಗ್ಯಕ್ಕೆ ರವಿ ಮತ್ತು ಗುರುಗ್ರಹಗಳು ಕಾರಣರಾಗುತ್ತಾರೆ. ಆದ್ದರಿಂದ ಈ ದಿನ ಗೋಧಿ, ಕಡ್ಲೆಬೇಳೆ ಮತ್ತು ಕೆಂಪು ಅಥವಾ ಕೇಸರಿ ಬಣ್ಣದ ಬಟ್ಟೆಯನ್ನು ದೇವಾಲಯಕ್ಕೆ ನೀಡಿದಲ್ಲಿ ಸ್ಥಿರವಾದ ಆರೋಗ್ಯ ಲಭ್ಯವಾಗುತ್ತದೆ ಎಂಬ ಮಾತು ಗ್ರಂಥಗಳಲ್ಲಿಇವೆ.

ಗುರುವಿನೊಂದಿಗೆ ವಾದದಲ್ಲಿ ಸೋತು ಕ್ಷಮೆ ಯಾಚಿಸುವ ಇಂದ್ರ

ಚೈತ್ರ ಹುಣ್ಣಿಮೆಯ ಕುರಿತು ಒಂದು ಕಥೆ ಪ್ರಚಲಿತದಲ್ಲಿದೆ. ಇಂದ್ರನು ದೇವತೆಗಳ ರಾಜ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹಾಗೆಯೆ ದೇವತೆಗಳ ಗುರು ಎಂದರೆ ಬೃಹಸ್ಪತಿ. ಇಂದ್ರನ ವಿದ್ಯಾಗುರು ಬೃಹಸ್ಪತಿ. ಒಮ್ಮೆ ಇಂದ್ರ ಮತ್ತು ಗುರುವಿನ ನಡುವೆ ವಾದ ಆರಂಭವಾಗುತ್ತದೆ. ವಾದದಲ್ಲಿ ಇಬ್ಬರೂ ಸೋಲುವುದಿಲ್ಲ. ಕೊನೆಗೆ ಇಂದ್ರನಿಗೆ ತನ್ನ ತಪ್ಪಿನ ಅರಿವು ಆಗುತ್ತದೆ. ಇಂದ್ರನು ಬೃಹಸ್ಪತಿಯನ್ನು ಕ್ಷಮೆ ಯಾಚಿಸಿ, ತನ್ನಿಂದಾದ ಈ ಪಾಪಕ್ಕೆ ಪ್ರಾಯಶ್ಚಿತವನ್ನು ಸೂಚಿಸಬೇಕೆಂದು ಕೇಳುತ್ತಾನೆ. ಆಗ ಶಿಷ್ಯನನ್ನು ಕ್ಷಮಿಸಿದ ಗುರುವು ಸಾಮಾನ್ಯ ಮಾನವನ ರೀತಿಯಲ್ಲಿ ಭೂಲೋಕದಲ್ಲಿ ತೀರ್ಥಯಾತ್ರೆ ಮಾಡಲು ತಿಳಿಸುತ್ತಾನೆ. ಇದನ್ನು ಒಪ್ಪಿದ ಇಂದ್ರನು ತನ್ನ ಸ್ಥಾನವನ್ನೂ ಮರೆತು ಸಾಮಾನ್ಯ ಮಾನವನಂತೆ ತೀರ್ಥಯಾತ್ರೆ ಆರಂಭಿಸುತ್ತಾನೆ.

ಭಕ್ತರು ಮಾಡುವ ತಪ್ಪುಗಳನ್ನು ಕ್ಷಮಿಸಿ, ಅವರು ಬೇಡುವ ವರಗಳನ್ನು ಕೊಡುವ ದೈವವೆಂದರೆ ಪರಮೇಶ್ವರ. ಇಲ್ಲಿಯೂ ಇಂದ್ರನಿಗೆ ಸಹಾಯ ಮಾಡುವುದು ಸಾಕ್ಷಾತ್ ಶ್ರೀ ಪರಶಿವನೇ. ಗುರುಗಳ ಆಶೀರ್ವಾದ ಮತ್ತು ಅನುಗ್ರಹ ಪಡೆದ ಇಂದ್ರನು ಹಗಲು ರಾತ್ರಿ ಎನ್ನದೆ ಹಲವು ಯಾತ್ರಾಸ್ಥಳಗಳಿಗೆ ಭೇಟಿ ನೀಡುತ್ತಾನೆ. ತನ್ನ ಪ್ರಯಾಣವನ್ನು ಮುಂದುವರಿಸಿದ ಇಂದ್ರನು ಆಯಾಸ ನೀಗಲು ದಾರಿಯ ಮಧ್ಯೆ ಇದ್ದ ಕದಂಬ ಮರದ ಕೆಳಗೆ ಕುಳಿತುಕೊಳ್ಳುತ್ತಾನೆ. ಅಲ್ಲೊಂದು ಶಿವಲಿಂಗ ಇರುತ್ತದೆ. ಇದನ್ನು ನೋಡಿದ ಮಾತ್ರಕ್ಕೆ ಇಂದ್ರನ ಆಯಾಸ ಕಡಿಮೆ ಆಗುತ್ತದೆ. ಇಂದ್ರನಿಗೆ ಅವನ ಅಂತರ್ಗತ ಭಕ್ತಿಯಿಂದ ತನ್ನನ್ನು ಕಾಪಾಡುತ್ತಿರುವು ಸಾಕ್ಷಾತ್ ಶಿವನೇ ಎಂಬ ಸತ್ಯವನ್ನು ಅರಿತುಕೊಳ್ಳುತ್ತಾನೆ. ಶಿವನಿಗೂ ಗುರುವಿಗೂ ಯಾವುದೇ ವ್ಯತ್ಯಾಸವಿಲ್ಲ. ಗುರುವನ್ನು ನಿಂದಿಸಿದರೆ ಅದು ಸಾಕ್ಷಾತ್ ಶಿವನನ್ನೇ ನಿಂದಿಸಿದಂತೆ ಎಂಬ ಮಾತುಗಳು ಕೆಲವು ಗ್ರಂಥಗಳಲ್ಲಿ ಕಾಣಸಿಗುತ್ತವೆ. ಆಗ ಇಂದ್ರನು ಅಲ್ಲಿಯೇ ದೊರೆಯುವ ಹೂ ಮತ್ತು ಪತ್ರೆಗಳನ್ನು ತಂದು ಲಿಂಗಕ್ಕೆ ಪೂಜೆ ಮಾಡುತ್ತಾನೆ ಇದರಿಂದ ಇಂದ್ರನು ಗುರುಶಾಪದಿಂದ ದೂರವಾಗುತ್ತಾನೆ ಎಂಬ ಮಾತಿದೆ.

ಮೀನಾಕ್ಷಿ ದೇಗುಲದಲ್ಲಿ ವಿಶೇಷ ಪೂಜೆ

ಇಂದ್ರನು ಪೂಜಿಸಿದ ಮತ್ತು ಗುರುಶಾಪದಿಂದ ಮುಕ್ತನಾದ ಈ ಶಿವಲಿಂಗವು ತಮಿಳುನಾಡಿನಲ್ಲಿ ಇರುವ ಮಧುರೈ ಎಂಬ ಸ್ಥಳದಲ್ಲಿ ಇದೆ. ಇಂದಿಗೂ ಮಧುರೆಯಲ್ಲಿನ ಮೀನಾಕ್ಷಿ ದೇಗುಲದಲ್ಲಿ ಶಿವನಿಗೆ ಚಿತ್ರಾಪೌರ್ಣಮಿಯ ದಿನ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ದೂರದ ಊರಿನಿಂದಲೂ ಜನರು ಇಲ್ಲಿಗೆ ಆಗಮಿಸುತ್ತಾರೆ. ಈ ದಿನ ಕುಟುಂಬದ ಎಲ್ಲರೂ ಒಗ್ಗೂಡಿ ಶಿವನ ಪೂಜೆ ಮಾಡುತ್ತಾರೆ. ರಾತ್ರಿ ವೇಳೆ ಚಂದ್ರನು ಕಾಣುವ ಸ್ಥಳದಲ್ಲಿ ಸಹಭೋಜನ ಮಾಡುತ್ತಾರೆ. ಇದರಿಂದ ಕುಟುಂಬದಲ್ಲಿನ ಯಾವುದೇ ವಿವಾದಗಳು ಇದ್ದರೂ ಮರೆಯಾಗುತ್ತದೆ ಎಂಬ ನಂಬಿಕೆ ಇದೆ. ನದಿ ಬಳಿ ಇದ್ದರೆ ದೀಪಗಳನ್ನು ಸಹ ಹಚ್ಚುವ ಸಂಪ್ರದಾಯವಿದೆ. ಇದರಿಂದ ಮಾನಸಿಕ ಸ್ಥಿತಿಗೆ ಕಾರಣವಾಗುವ ಚಂದ್ರನ ಅನುಗ್ರಹ ದೊರೆಯುತ್ತದೆ.

ಈ ಕಾರಣದಿಂದಲೇ ಹಿಂದಿನ ಕಾಲದ ಜನರು ಹುಣ್ಣಿಮೆಯ ಊಟವನ್ನು ಅಯೋಜಿಸುತ್ತಿದ್ದರು. ಕುಟುಂಬದ ಹಿರಿಯರು ಎಲ್ಲರಿಗೂ ಕೈತುತ್ತು ನೀಡುತ್ತಿದ್ದರು. ಇದರಿಂದ ಕುಟುಂಬದಲ್ಲಿ ಐಕ್ಯಮತ್ಯ ಉಂಟಾಗುತ್ತಿತ್ತು. ಹಬ್ಬದ ದಿನ ಅನೇಕ ಭಕ್ತರು ಕುಟುಂಬ ಮತ್ತು ಸ್ನೇಹಿತರೊಂದಿಗೆ ಊಟ ಮಾಡಲು ನದಿಗಳು ಅಥವಾ ಚಂದ್ರನ ಗೋಚರಿಸುವ ಸ್ಥಳಗಳ ಸುತ್ತಲೂ ಸೇರುತ್ತಾರೆ. ಹೀಗೆ ಮಾಡುವುದರಿಂದ ಅವರು ಚಂದ್ರನ ಆಶೀರ್ವಾದವನ್ನು ಪಡೆಯಬಹುದು ಮತ್ತು ತಮ್ಮ ಪ್ರೀತಿಪಾತ್ರರ ಜೊತೆ ಸಂತೋಷದಿಂದ ಸಮಯ ಕಳೆಯುತ್ತಾರೆ. ಎಲ್ಲರ ನಡುವೆ ಬಾಂಧವ್ಯ ಉಂಟಾಗುತ್ತದೆ ಎಂದು ನಂಬಲಾಗಿದೆ. ಚಂದ್ರನಿಗೆ ದೀಪವನ್ನು ಬೆಳಗಿಸುವ ಮೂಲಕ ಮನಸ್ಸಿನ ನಕಾರಾತ್ಮಕ ಸ್ಥಿತಿಗಳನ್ನು ನಿವಾರಿಸುತ್ತದೆ ಎಂದು ನಂಬಲಾಗಿದೆ. ಇದು ಭಾರತದ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಚಿತ್ರಾ ನದಿಯಲ್ಲಿ ವಿಶೇಷವಾಗಿ ಜನಪ್ರಿಯವಾಗಿದೆ. ಇದರಿಂದಾಗೆ ನಮ್ಮಲ್ಲಿರುವ ನಕಾರಾತ್ಮಕ ಶಕ್ತಿಗಳು ನಶಿಸುತ್ತವೆ. ಈ ದಿನ ಕೆಲವರು ಉಪವಾಸವ್ರತವನ್ನು ಆಚರಿಸುತ್ತಾರೆ. ಈ ಕಾರಣದಿಂದಾಗಿಯೇ ಮಾತಾ ಪಿತೃ ಗುರುಭ್ಯೋ ನಮ: ಎಂಬ ಮಾತು ಪ್ರಚಲಿತದಲ್ಲಿದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.