ಮಕರ ರಾಶಿಯಲ್ಲಿ ಶುಕ್ರನ ಪ್ರಯಾಣ; ಕುಂಭ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಭಿನ್ನಾಭಿಪ್ರಾಯ, ಮೀನ ರಾಶಿಯವರಿಗೆ ವಾಹನ ಲಾಭ
Venus Transit: ಗ್ರಹಗಳು ಆಗ್ಗಾಗ್ಗೆ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸುತ್ತವೆ. ಡಿಸೆಂಬರ್ 2 ರಿಂದ ಶುಕ್ರನು ಮಕರ ರಾಶಿಗೆ ಸಂಚರಿಸುತ್ತಾನೆ. ಇದರಿಂದ ದ್ವಾದಶ ರಾಶಿಗಳಿಗೆ ವಿವಿಧ ಫಲಗಳು ದೊರೆಯುತ್ತದೆ. ಶುಕ್ರ ಸಂಕ್ರಮಣದಿಂದ ಕುಂಭ ಹಾಗೂ ಮೀನ ರಾಶಿಯವರಿಗೆ ಏನು ಫಲ ದೊರೆಯುತ್ತದೆ? ಇಲ್ಲಿದೆ ವಿವರ.
Venus Transit: ಶುಕ್ರನು ಡಿಸೆಂಬರ್ 2 ರಿಂದ 28 ರವರೆಗೂ ಮಕರ ರಾಶಿಯಲ್ಲಿ ಸಂಚರಿಸುತ್ತಾನೆ. ಈ ಅವಧಿಯಲ್ಲಿ ಪ್ರತಿಯೊಂದು ರಾಶಿಯವರ ಜೀವನದಲ್ಲಿ ವಿವಿಧ ಬದಲಾವಣೆಗಳಾಗುತ್ತವೆ. ಕುಂಭ ಹಾಗೂ ಮೀನ ರಾಶಿಯವರಿಗೆ ಶುಕ್ರನ ಸಂಚಾರ ಯಾವ ರೀತಿ ಫಲ ನೀಡಲಿದೆ ನೋಡೋಣ.
ಗೊತ್ತಿಲ್ಲದೆ ಮಾಡುವ ತಪ್ಪಿನಿಂದ ಸಮಸ್ಯೆಗೆ ಸಿಲುಕುವ ಕುಂಭ ರಾಶಿಯವರು
ಅರಿಯದೆ ಮಾಡುವ ತಪ್ಪಿನಿಂದಾಗಿ ತೊಂದರೆಗೆ ಸಿಲುಕುವಿರಿ. ಮುಂದಿನ ಯೋಚನೆ ಇಲ್ಲದೆ ಅನಾವಶ್ಯಕವಾಗಿ, ಕೂಡಿಟ್ಟ ಹಣವನ್ನು ಖರ್ಚು ಮಾಡುವಿರಿ. ಇದರಿಂದಾಗಿ ಹಣದ ಕೊರತೆ ಉಂಟಾಗಬಹುದು ಎಚ್ಚರಿಕೆ ಇರಲಿ. ಕುಟುಂಬದ ಹಿರಿಯರ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡುವಿರಿ. ಅನಿರೀಕ್ಷಿತ ಖರ್ಚು ವೆಚ್ಚಗಳು ಆತಂಕವನ್ನು ಉಂಟುಮಾಡುತ್ತವೆ. ದಂಪತಿಗಳ ನಡುವೆ ಉತ್ತಮ ಹೊಂದಾಣಿಕೆ ಕಂಡುಬರುತ್ತದೆ. ತಾಯಿಯ ಜೊತೆಯಲ್ಲಿ ಹಣಕಾಸಿನ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗುತ್ತದೆ.
ಮನಸ್ಸಿನ ಬೇಸರ ನೀಗಲು ದೂರದ ಊರಿಗೆ ಪ್ರವಾಸಕ್ಕೆ ತೆರಳುವಿರಿ. ಹಳೆಯ ಮನೆಯನ್ನು ನವೀಕರಣಗೊಳಿಸುವಿರಿ. ಸತತ ಪ್ರಯಾಣಗಳಿಂದಾಗಿ ದೈಹಿಕವಾಗಿ ಬಳಲುವಿರಿ. ಸರಳವಾದ ದೈಹಿಕ ವ್ಯಾಯಾಮವು ಉತ್ತಮ ಆರೋಗ್ಯವನ್ನು ನೀಡುತ್ತದೆ. ಕಣ್ಣಿಗೆ ಪೆಟ್ಟು ಬೀಳುವ ಸಾಧ್ಯತೆಗಳಿವೆ ಎಚ್ಚರಿಕೆ ಇರಲಿ. ಮಕ್ಕಳೊಂದಿಗೆ ಸಂತಸದಿಂದ ಇರುವ ಕಾರಣ ಮನದ ಯೋಚನೆ ಕಡಿಮೆಯಾಗುತ್ತದೆ. ಇರುವ ವಾಹನವನ್ನು ಮಾರಾಟ ಮಾಡುವಿರಿ. ಉದ್ಯೋಗದಲ್ಲಿ ಅನಿರೀಕ್ಷಿತವಾದ ಬದಲಾವಣೆಗಳು ಕಂಡುಬರುತ್ತವೆ. ನಿಮಗೆ ದೊರೆಯಬೇಕಾದ ಅವಕಾಶವೊಂದು ಪರರ ಪಾಲಾಗಬಹುದು.
ಸೋದರರು ನಿಮ್ಮೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುತ್ತಾರೆ. ಹಣ ಸಂಪಾದಿಸುವ ಚತುರತೆ ನಿಮ್ಮಲ್ಲಿರುತ್ತದೆ. ಬೇರೆಯವರಿಗೆ ಹಣದ ಸಹಾಯ ಮಾಡುವುದಿಲ್ಲ. ದಾಂಪತ್ಯ ಜೀವನದಲ್ಲಿ ಇದ್ದ ಬೇಸರ ದೂರವಾಗುತ್ತದೆ. ಮಧುಮೇಹದಂಥ ತೊಂದರೆ ಇದ್ದಲ್ಲಿ ಎಚ್ಚರಿಕೆ ಇರಲಿ. ನಿಮ್ಮ ಸಂಗಾತಿಯ ತಾಳ್ಮೆಯ ಗುಣವು ನಿಮ್ಮನ್ನು ಕಷ್ಟಗಳಿಂದ ಪಾರು ಮಾಡುತ್ತದೆ. ಸಾಕು ಪ್ರಾಣಿಗಳ ಮೇಲೆ ಕನಿಕರವಿರುತ್ತದೆ ಆದರೂ ಅವುಗಳ ಜೊತೆಗೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಸೋಲಿನ ವೇಳೆ ದುಡುಕಿನಿಂದ ಮಾತನಾಡುವಿರಿ. ಮಾತಿನ ಮೇಲೆ ಹತೋಟಿ ಇರಲಿ. ನಿಮ್ಮ ರೀತಿ ನೀತಿಗಳನ್ನು ಸಹೋದ್ಯೋಗಿಗಳು ಒಪ್ಪುವುದಿಲ್ಲ. ಇದರಿಂದಾಗಿ ಉದ್ಯೋಗವನ್ನು ಬದಲಿಸುವ ಸೂಚನೆಗಳಿವೆ. ಸಣ್ಣ ಬಂಡವಾಳದ ವ್ಯಾಪಾರವನ್ನು ಆರಂಭಿಸುವಿರಿ.
ಕುಟುಂಬದ ಹಿರಿಯರಿಂದ ಮೀನ ರಾಶಿಯವರಿಗೆ ಸಹಾಯ ದೊರೆಯಲಿದೆ
ಮನಸ್ಸಿನಲ್ಲಿ ಆತಂಕವಿರುತ್ತದೆ. ಆತ್ಮವಿಶ್ವಾಸದ ಕೊರತೆ ಇರುವ ಕಾರಣ ಯಾವುದೇ ಕೆಲಸದಲ್ಲಿ ದೃಢವಾದ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಬೇರೆಯವರ ಮೇಲೆ ಅವಲಂಬಿತರಾಗುವುದಿಲ್ಲ. ಸ್ವಂತ ನಿರ್ಧಾರಗಳಿಗೆ ಸದಾ ಕಾಲ ಬದ್ಧರಾಗುವಿರಿ. ಆದರೆ ಕೆಲಸ ಕಾರ್ಯಗಳನ್ನು ವಿಳಂಬವಾಗಿ ಆರಂಭಿಸುವಿರಿ. ಇದರಿಂದ ದಿನನಿತ್ಯದ ಕೆಲಸದಲ್ಲಿ ಹಿನ್ನಡೆ ಲಭಿಸುತ್ತದೆ. ಸ್ವಂತ ಆದಾಯದ ಮೇಲೆ ನಂಬಿಕೆ ಇರುತ್ತದೆ. ಯಾವುದೇ ಸಂದರ್ಭದಲ್ಲಿ ಬೇರೆಯವರಿಂದ ಹಣದ ಸಹಾಯ ನಿರೀಕ್ಷಿಸುವುದಿಲ್ಲ. ಆರೋಗ್ಯದಲ್ಲಿ ತೊಂದರೆ ಇರುತ್ತದೆ. ಬೇರೆಯವರ ಮಾತಿಗೆ ಮಣಿದು ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಬದಲಾಯಿಸುವಿರಿ. ಇದರಿಂದ ಜೀವನದಲ್ಲಿ ಸಮಸ್ಯೆಗಳು ಉದ್ಭವಿಸಬಹುದು.
ಒತ್ತಡಕ್ಕೆ ಮಣಿದು ಸ್ವಂತ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಬೇರೆಯವರಿಗೆ ಸಹಾಯ ಮಾಡಬೇಕಾಗುತ್ತದೆ. ಉದ್ಯೋಗದಲ್ಲಿ ನಿಮ್ಮ ಸ್ವಂತ ಜವಾಬ್ದಾರಿಗಳನ್ನು ಪೂರೈಸಲು ಸಹೋದ್ಯೋಗಿಗಳು ಅವಕಾಶ ನೀಡುವುದಿಲ್ಲ. ಆತ್ಮವಿಶ್ವಾಸ ಬೆಳೆಸಿಕೊಳ್ಳುವುದು ಒಳ್ಳೆಯದು. ಹಿರಿಯ ಅಧಿಕಾರಿಗಳು ನಿಮ್ಮ ಪರವಾಗಿರುವ ಕಾರಣ ಉದ್ಯೋಗಕ್ಕೆ ತೊಂದರೆ ಆಗದು. ಕುಟುಂಬದ ಹಿರಿಯರಿಂದ ನಿಮಗೆ ಹಣಕಾಸಿನ ಸಹಾಯ ದೊರೆಯುತ್ತದೆ. ಅನಿರೀಕ್ಷಿತ ಧನ ಲಾಭವಿರುತ್ತದೆ. ಸಂಘ ಸಂಸ್ಥೆಗಳನ್ನು ಆರಂಭಿಸುವ ಅಥವಾ ನಿರ್ವಹಿಸುವ ಅವಕಾಶ ದೊರೆಯುತ್ತದೆ. ಸಮಾಜದಲ್ಲಿ ಗೌರವಾನ್ವಿತ ಸ್ಥಾನ ನಿಮ್ಮದಾಗಲಿದೆ. ಧಾರ್ಮಿಕ ಗುರುಗಳನ್ನು ಭೇಟಿ ಮಾಡುವಿರಿ. ಬಾಳಸಂಗಾತಿಯಿಂದ ಸಹಾಯ ದೊರೆಯುತ್ತವೆ.
ಮಹಿಳಾ ಉದ್ಯಮಿಗಳಿಗೆ ಉತ್ತಮ ಆದಾಯ ದೊರೆಯುತ್ತದೆ. ಭೂಲಾಭವಿದೆ. ಹೊಸ ವಾಹನ ಕೊಳ್ಳುವಿರಿ. ಕುಟುಂಬದಲ್ಲಿ ನಡೆಯಬೇಕಿದ್ದ ಮಂಗಳ ಕಾರ್ಯ ಮುಂದೆ ಹೋಗಲಿದೆ. ಪತ್ನಿಯ ಹೆಸರಿನಲ್ಲಿ ಮಾಡುವ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭವಿರುತ್ತದೆ. ಕುಟುಂಬದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಮುಖ್ಯತೆ ದೊರೆಯುತ್ತದೆ. ಶಾಂತಿ ನೆಮ್ಮದಿಯಿಂದ ಜೀವನ ನಡೆಸುವಿರಿ. ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಲಿದ್ದಾರೆ. ಯಾತ್ರಾ ಸ್ಥಳಕ್ಕೆ ಪ್ರವಾಸಕ್ಕೆ ತೆರಳುವಿರಿ.