ಸಂಬಂಧಗಳಿಂದ ದೂರಾಗಿ ಎಲ್ಲವನ್ನೂ ಕಳ್ಕೊಂಡಾಗ ಇದ್ದಲ್ಲೇ ಕೊರಗುವ ಬದಲು ಹೊಸ ಜಗತ್ತನ್ನು ಬೆರಗುಗಣ್ಣಿನಿಂದ ನೋಡಿ; ಮಧು ವೈಎನ್‌ ಬರಹ
ಕನ್ನಡ ಸುದ್ದಿ  /  ಜೀವನಶೈಲಿ  /  ಸಂಬಂಧಗಳಿಂದ ದೂರಾಗಿ ಎಲ್ಲವನ್ನೂ ಕಳ್ಕೊಂಡಾಗ ಇದ್ದಲ್ಲೇ ಕೊರಗುವ ಬದಲು ಹೊಸ ಜಗತ್ತನ್ನು ಬೆರಗುಗಣ್ಣಿನಿಂದ ನೋಡಿ; ಮಧು ವೈಎನ್‌ ಬರಹ

ಸಂಬಂಧಗಳಿಂದ ದೂರಾಗಿ ಎಲ್ಲವನ್ನೂ ಕಳ್ಕೊಂಡಾಗ ಇದ್ದಲ್ಲೇ ಕೊರಗುವ ಬದಲು ಹೊಸ ಜಗತ್ತನ್ನು ಬೆರಗುಗಣ್ಣಿನಿಂದ ನೋಡಿ; ಮಧು ವೈಎನ್‌ ಬರಹ

ಮಧು ವೈಎನ್‌ ಬರಹ: ತಂದೆ–ತಾಯಿ, ಪ್ರೇಮಿ ಹೀಗೆ ಎಲ್ಲಾ ಸಂಬಂಧಗಳಿಂದ ದೂರಾಗಿ, ಬದುಕಿನಲ್ಲಿ ಎಲ್ಲವನ್ನೂ ಕಳ್ಕೊಂಡಾಗ ಇದ್ದಲ್ಲೇ ಕೊರಗುತ್ತ, ಕುಡಿಯುತ್ತ ಸ್ವ ನಾಶ ಮಾಡಿಕೊಳ್ಳುವ ಬದಲು ಜಗತ್ತನ್ನು ಹೊಸ ಕಣ್ಣಿನಿಂದ ಬೆರಗಿನಿಂದ ನೋಡುತ್ತ ಹಿಪ್ಪಿಯಾಗಿ(ಜಂಗಮ) ಹೊರಟಿದ್ದರೆ ಎಷ್ಟು ಚೆನ್ನಾಗಿರ್ತಿತ್ತು? ಇದೇ ಅಜ್ಞಾತತೆ ಸಿಗುತ್ತಿತ್ತು.

ಜೀವನಪಾಠ
ಜೀವನಪಾಠ

ಜಯನಗರದಲ್ಲಿ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯೊಬ್ಬ ಈಗ ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡ್ ಆಗಿದ್ದಾನೆ. ಇದಕ್ಕೆ ಕಾರಣ ಆತನ ಹಿನ್ನೆಲೆ, ಆತ ಆಡುವ ಮಾತು. ಇವನು ಮೈಂಡ್‌ ಟ್ರೀ ಕಂಪನಿಯಲ್ಲಿ ಟೆಕಿ ಆಗಿದ್ದ. ಆದರೆ ತಂದೆ–ತಾಯಿ, ಪ್ರೇಯಸಿ ದೂರಾದ ಮೇಲೆ ಸರ್ವಸ್ವವನ್ನೂ ಕಳೆದುಕೊಂಡವನಂತೆ ಹುಚ್ಚನಾಗಿದ್ದಾನೆ. ಅವರ ಬಗ್ಗೆ ಒಂದು ರೀಲ್ಸ್ ಮಾಡಿದ್ದು, ಆ ರೀಲ್ಸ್‌ನಿಂದಾಗಿ ಈಗ ಭಾರತದಾದ್ಯಂತ ಆತ ಫೇಮಸ್‌ ಆಗಿದ್ದಾನೆ. ಅವನ ಬದುಕಿನ ರೀಲ್ಸ್ ನೋಡಿದ ಮಧು ವೈಎನ್‌ ತಮ್ಮ ಬರಹದ ಮೂಲಕ ಎಲ್ಲಿರಗೂ ಜೀವನಪಾಠ ಹೇಳಿದ್ದಾರೆ. ಅವರ ಬರಹವನ್ನು ನೀವೂ ಓದಿ, ನಿಮಗೂ ಸ್ಫೂರ್ತಿಯಾಗಬಹುದು.

ಮಧು ವೈಎನ್‌ ಬರಹ

ಜಯನಗರದಲ್ಲಿ ಭಿಕ್ಷೆ ಬೇಡುತ್ತಿದ್ದ ಈ ವ್ಯಕ್ತಿ ಎರಡು ವಾರಗಳ ಹಿಂದೆ ಇನ್ಸಟಾಗ್ರಾಮಿನ ಒಬ್ಬ ಕನ್ನಡಿಗರ ಮೂಲಕ ರೀಲ್ ಆಗಿ ಈಗ ಭಾರತದಾದ್ಯಂತ ಸುದ್ದಿಯಾಗಿದ್ದಾನೆ. ಕಾರಣ ಈತ ಒಂದಾನೊಂದು ಕಾಲದಲ್ಲಿ ಮೈಂಡ್ ಟ್ರೀ ಕಂಪನಿಯಲ್ಲಿ ಐಟಿ ಉದ್ಯೋಗಿಯಾಗಿದ್ದು ಜರ್ಮನಿಯ ಫ್ರಾಂಕ್ಫ್ರಟ್‌ನಲ್ಲಿ ದುಡಿದಿದ್ದನಂತೆ. ಕೆಟ್ಟ ಗಳಿಗೆಯಲ್ಲಿ ಅಪ್ಪ ಅಮ್ಮನ್ನ ಕಳೆದುಕೊಂಡು ಅನಂತರ ಸಂಗಾತಿಯೂ ಬಿಟ್ಟುಹೋಗಿ ಕುಡಿತಕ್ಕೆ ಸಿಲುಕಿ ಹೀಗಾಗಿದ್ದಾನೆ.

ನಾನು ಚಿಕ್ಕವನಿದ್ದಾಗ ಒಬ್ಬಾತ ನಮ್ಮಲ್ಲಿ ಊಟಕ್ಕೆ ಬರುತ್ತಿದ್ದ. ಜೇಬಿನಲ್ಲಿ ಹತ್ತು ಪೈಸೆ ಇಪ್ಪತ್ತು ಪೈಸೆಗಳ ನಾಣ್ಯಗಳನ್ನು ತುಂಬಿಕೊಂಡು ನಮ್ಮೆದುರು ಜೇಬನ್ನು ಕುಲುಕುತ್ತ ಝಣಝಣ ಅನ್ನಿಸೋನು. ಅಂದ್ರೆ ನನ್ನತ್ರ ದುಡ್ಡಿದೆ ಊಟ ಕೊಡಿ ಎಂದು ಅವನ ವರಸೆ. ಒಂದು ಅನ್ನ ಸಾರಿಗೆ ತೃಪ್ತನಾಗುತ್ತಿದ್ದ. ಗಡ್ಡ ಬಿಟ್ಟಿದ್ದ. ಸಿಕ್ಕಾಪಟ್ಟೆ ಇಂಗ್ಲಿಷ್ ಹೊಡೆಯುತ್ತಿದ್ದ. ಯಾವುದೋ ಸ್ಥಿತಿವಂತ ಕುಟುಂಬದವನು. ಮಾನಸಿಕ ಸ್ಥಿಮಿತ ಕಳೆದುಕೊಂಡು ಮನೆ ತೊರೆದು ಹೀಗಾಗಿದ್ದಾನೆ ಎಂದು ಯಾರಾದರೂ ಊಹಿಸಬಹುದಾಗಿತ್ತು. ಅವನೂ ಇವನಂತೆಯೇ ದೊಡ್ಡ ದೊಡ್ಡ ಓದನ್ನು ನಿರರ್ಗಳವಾಗಿ ಹರಿಯಬಿಡುತ್ತಿದ್ದ.

ಈತನೂ ಹಾಗೆ. ಮಾತಿನ ನಡುವೆ ಸ್ಕಾಟ್ಲೆಂಡಿನ ಫಿಲಾಸಫರ್ ಡೇವಿಡ್ ಹ್ಯೂಮ್, ಜರ್ಮನಿಯ ಇಮ್ಯಾನುವಲ್ ಕಾಂಟ್, ವಿಜ್ಞಾನಿ ಐನ್‌ಸ್ಟೈನ್, ಆರ್ಕಿಮಿಡಿಸ್ ಮುಂತಾದವರನ್ನು ಕೋಟ್ ಮಾಡುತ್ತಾನೆ. ಆಧ್ಯಾತ್ಮ ಅನ್ನುತ್ತಾನೆ. ಈ ಜ್ಞಾನ, ವಿವೇಕ ಪ್ರತಿಭೆ ಅನ್ನೋದೆಲ್ಲ ಸುಳ್ಳು. ನಮ್ಮ ಮೆದುಳಲ್ಲಿ ಎರಡು ಅಂಗ ಇದಾವೆ. ಒಂದು ಹಿಪ್ಪೋಕಾಂಪಸ್ ಇನ್ನೊಂದು ಅಮೇಗ್ಡಾಲ. ಮೊದಲನೇದರಲ್ಲಿ ಮಾಹಿತಿ ಶೇಖರಣೆಯಾಗುತ್ತೆ. ಎರಡನೇಯದರಲ್ಲಿ ಭಾವನೆ ಉತ್ಪತ್ತಿಯಾಗುತ್ತೆ. ಮತ್ತು ಈ ಎರಡರಲ್ಲಿ ಪ್ಯಾರಲಲ್ ಜಗತ್ತು ಓಡ್ತಿರುತ್ತೆ ಅಂತಾನೆ! ಕೊನೆಗೆ 'ನೋಡಿ ಈ ಜಾತಿ ಈ ಧರ್ಮ ಇದೆಲ್ಲ ಎಷ್ಟು ನಿರರ್ಥಕ. ನಾನು ಇನ್ನೂ ಜಾಸ್ತಿ ಜಾಸ್ತಿ ಓದ್ಬೇಕು' ಅಂತಾನೆ.

ಈತ ಯಾಕೆ ಹೀಗಾದ ಎನ್ನುವುದಕ್ಕೆ ಸರಳ ಉತ್ತರ ಸಿಕ್ಕಿದೆ. ಹೆತ್ತವರ ಸಾವು ಮತ್ತು ಪ್ರಿಯತಮೆ ತೊರೆದದ್ದು. ಆದರೆ ಈತ ಏನು ಮಾಡಬಹುದಿತ್ತು? ಸಮಾಜ (ನೆಂಟರು, ಸ್ನೇಹಿತರು, ಸಹೋದ್ಯೋಗಿಗಳು) ಈತನಿಗೆ ಏನು ಮಾಡಬಹುದಿತ್ತು ಎಂಬುದನ್ನು ಯೋಚಿಸಬೇಕಾಗಿದೆ. ಅಥವಾ ಇದು ಅನಿವಾರ್ಯವಾಗಿತ್ತೇ ಎಂದೂ ಸಹ.

ಮನುಷ್ಯನಿಗೆ ಬದುಕಲ್ಲಿ ಆಪ್ತರ ನಷ್ಟ, ಸಂಬಂಧಗಳ ನಷ್ಟ ಅತ್ಯಂತ ಸಹಜವಾದ ಬಳುವಳಿ. ಆತ ಇಲ್ಲಿ ಬದುಕಬೇಕೆಂದರೆ ಮೊದಲು ಇದನ್ನು ಸ್ವೀಕರಿಸುವುದು ಕಲಿಯಬೇಕು. ನಮ್ಮ ತಂದೆತಾಯಿ, ಒಡಹುಟ್ಟಿದವರು, ಪತಿ/ಪತ್ನಿ, ಅಷ್ಟೇ ಯಾಕೆ ನಮ್ಮ ಮಕ್ಕಳನ್ನೇ- ನಮ್ಮಿಂದ ಯಾವ ಕ್ಷಣದಲ್ಲಾದರೂ ಸಾವು ಕಸಿದುಬಿಡಬಹುದು. ರೋಗ, ಅಪಘಾತ, ಮುಪ್ಪು ಯಾವುದೋ ಒಂದು ನೆಪ. ಮೊನ್ನೆ ಮೂರು ಹುಡುಗಿಯರು ಹೋಟೆಲಿನ ಐದಡಿ ಸ್ವಿಮ್ಮಿಂಗ್‌ ಪೂಲಿನಲ್ಲಿ ಮಡಿದಿದ್ದಾರೆ.

ಹಾಗೆ ಸಂಬಂಧಗಳೂ ಸಹ. ನಮ್ಮನ್ನು ನಮ್ಮ ಹೆತ್ತವರೇ ಬಿಟ್ಟುಹೋಗಿಬಿಡಬಹುದು ಅಥವಾ ನಮ್ಮ ಮಕ್ಕಳೇ ನಮ್ಮನ್ನು ತ್ಯಜಿಸಬಹುದು. ಇನ್ನು ನಡುವಲ್ಲಿ ಬಂದುಹೋಗುವ ಪತಿ/ಪತ್ನಿ ಯಾವ ಲೆಕ್ಕ. ಹೊಂದಾಣಿಕೆ ಆಗ್ತಿಲ್ಲಾಂದರೆ ಬಿಡಲೇಬೇಕಾಗುತ್ತದೆ.

ಕ್ಲೀಷೆಯಾದರೂ ಸರಿ ಮನುಷ್ಯ ಎಂದಿಗೂ ಏಕಾಂಗಿ. ಮತ್ತು ಇಲ್ಲಿನ ಯಾವುದೂ ತನ್ನದಲ್ಲ. ನನ್ನ ಮನೆ, ನನ್ನ ಸೈಟು, ನನ್ನ ಜನ, ಸುತ್ತಲಿನ ಜನರ ಈ ಪ್ರೀತಿ, ಸ್ನೇಹ, ವಿಶ್ವಾಸ- ಯಾವುದೂ ಸಹ. ಮೂಲದಲ್ಲಿ ನಾವಷ್ಟೇ. ಜಗತ್ತಿನಲ್ಲಿ ಸುಮಾರು ಧರ್ಮಗಳು ಬಂದಾಗಿದೆ. ಅಸಂಖ್ಯಾತ ಪಂಡಿತರು ಬರೆದಾಗಿದೆ. ದಾರ್ಶನಿಕರು ಹುಟ್ಟಿ ಸತ್ತಿದ್ದಾರೆ. ಈ ಒಗಟಿಗೆ ಯಾರಲ್ಲಿಯೂ ಸಾರ್ವಕಾಲಿಕ ಉತ್ತರವಿಲ್ಲ. ನಾವು ಯಾರು? ನಾವು ಯಾಕೆ ಇಲ್ಲಿದ್ದೇವೆ? ನಮ್ಮ ಅಸ್ತಿತ್ವದ ಉದ್ದೇಶವೇನು?

ಅನೇಕ ಸಮಾಧಾನಗಳಿದ್ದಾವೆ. ಅವುಗಳಲ್ಲಿಯೇ ಯಾವುದೋ ಒಂದನ್ನು ನೀವು ಆಯ್ಕೆ ಮಾಡಿಕೊಂಡು ಬದುಕಬೇಕು. ಆಸ್ತಿಕನೋ, ನಾಸ್ತಿಕನೋ, ಹಿಂದೂನೋ, ಕ್ರಿಶ್ಚಿಯನ್ನೋ ಏನೋ ಒಂದು ಆಗಿ. ಇವು ನಿಮಗೆ ಕೇವಲ ಸಮಾಧಾನ ಎಂದು ಗೊತ್ತಿರುತ್ತದೆ. ಗೊತ್ತಿರಬೇಕು. ಸಾಕುನಾಯಿಗೆ ಮಾತು ಬರಲ್ಲ ಅಂತ ಗೊತ್ತಿದ್ದರೂ ಅವುಗಳೊಂದಿಗೆ ಮಾತಾಡೋಲ್ಲವೇ? ಇದೂ ಹಾಗೆ.

ಈ ತರಹ ಬದುಕನ್ನು ಬಿಡಿಸಿಕೊಂಡಾಗ- ಬದುಕುವುದು ಸಹ್ಯವಾಗುತ್ತದೆ. ನೀವೇ ನಿಮಗಿಷ್ಟವಾದ ಒಂದು ಅರ್ಥ ಕಲ್ಪಿಸಿಕೊಂಡು ಜೀವಿಸುತ್ತೀರಿ. ಅದರಲ್ಲಿ ಯಶಸ್ವಿಯಾದರೂ ಆಗದಿದ್ದರೂ, ಯಾರು ಸತ್ತರೂ ಉಳಿದರೂ, ಯಾರು ಬಿಟ್ಟು ಹೋದರೂ ಇಲ್ಲದಿದ್ದರೂ- ನಿಮ್ಮ ಮೂಲ ಮನಸ್ಥಿತಿಯಲ್ಲಿ ವ್ಯತ್ಯಾಸವಾಗುವುದಿಲ್ಲ. ಅದನ್ನೇ ನಿರ್ಲಿಪ್ತ, ಸ್ಥಿತಪ್ರಜ್ಞತೆ ಅನ್ನುವುದು. ಒಂದು ರೀತಿ ಭಕ್ಷ್ಯ ಭೋಜನ ಸಿಕ್ಕಾದ ಅದನ್ನೇ ಸವಿಯುತ್ತೀರಿ. ಅನ್ನ ಸಾರು ಸಿಕ್ಕಾದ ಅದಕ್ಕೂ ತೃಪ್ತರಾಗುತ್ತೀರಿ. ಏನೂ ಸಿಗದಿದ್ದಾಗ ಒಂದು ಲೋಟ ನೀರು ಕುಡಿದು ಮಲಗುತ್ತೀರಿ.

ಈ ಐಟಿ ಉದ್ಯೋಗಿ ಎಷ್ಟೊಂದು ಓದಿದ್ದಾನೆ. ಅದರ ಬಗ್ಗೆಯೂ ಒಂದು ಎಚ್ಚರಿಕೆಯ ಮಾತು. ಓದು ಜ್ಞಾನದ ಸುಳಿಯಿದ್ದಂಗೆ. ಹೆಚ್ಚೆಚ್ಚು ತಿಳಕೊಳ್ತಾ ಹೋದಂಗೆ ಸುಳಿಯಲ್ಲಿ ಸಿಗಾಕ್ಕೊಂಡು ಬಿಡ್ತೀರ. ಆದ್ದರಿಂದ ಒಂದು ಹಂತದ ನಂತರ ಜ್ಞಾನದ ಹಾದಿಯಲ್ಲಿ ನೀವೇ ಕಮ್ಯಾಂಡರ್ ಆಗಬೇಕು. ಬರೆದವರು ಎಳಕೊಂಡು ಹೋದ ದಿಕ್ಕಿಗೆಲ್ಲಾ ಹೋಗಬಾರದು. ಆಗಷ್ಟೇ ಓದು ಸಾರ್ಥಕ ಅನಿಸುವುದು.

ಇನ್ನು ಈತನಿಗೆ ಯಾರಾದರೂ ಮಾನಸಿಕವಾಗಿ ಸಪೋರ್ಟ್ ಮಾಡಬಹುದಿತ್ತು ಅದು ಇದು ಅಂತೆಲ್ಲಾ ನೂರಾರು ಸಲಹೆಗಳು ಬರುತ್ತಿವೆ. ಇರಬಹುದು. ಆದರೆ ಎಲ್ಲರ ಬದುಕಲ್ಲಿಯೂ ಈ ಲಕ್ಷುರಿ ಇರಲಾರದು. ಅಥವಾ ಯಾರ ಸಹಾಯವನ್ನೂ ಸ್ವೀಕರಿಸಲಾಗದ ದುರ್ಬಲ ಸ್ಥಿತಿ ಅವನದಾಗಿರಬಹುದು. ಜಗತ್ತು ಹೆಚ್ಚೆಚ್ಚು ವ್ಯಕ್ತಿ ಕೇಂದ್ರಿತವಾಗುತ್ತಿದೆ. ಸಮುದಾಯಿಕ ಜೀವನ ನಶಿಸುತ್ತಿದೆ. ಮತ್ತು ಜಗತ್ತು ಯಾವತ್ತೂ ಹಿಂದೆ ಚಲಿಸಿದ್ದೇ ಇಲ್ಲ. ನಾವು ಹೆಚ್ಚೆಚ್ಚು ಒಳ್ಳೆ ಮಾತುಗಳನ್ನು ಆಡುತ್ತಿದ್ದೀವೇ ಹೊರತು ಒಳ್ಳೆಯವರಾಗಲು ಆಗ್ತಿಲ್ಲ. ಇನ್ನೊಬ್ಬರಿಗೆ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ನಮಗೆ ನಾವೇ ಹಣೆ ಚಚ್ಚಿಕೊಂಡು ದಂಡಿಸಿಕೊಳ್ಳುವುದೂ ವ್ಯರ್ಥವೇ.

ಇದಕ್ಕೆ ಇನ್ನೊಂದು ನಿರುಪದ್ರವಿ ಪರಿಹಾರವಿದೆ. ಎಲ್ಲವನ್ನೂ ಹಗುರವಾಗಿ ತಗೊಳ್ಳುವುದು. ಉಡಾಫೆಯಿಂದ ನೋಡುವುದು. ಯಾರಿಗೂ ಉಪದ್ರವ ಕೊಡದೇ ಅವತ್ತಿಂದವತ್ತು ನೋಡ್ಕೊಂಡು ಹೋಗುವುದು.

ಈತ ಎಲ್ಲವನ್ನೂ ಕಳ್ಕೊಂಡಾಗ ಇದ್ದಲ್ಲೇ ಕೊರಗುತ್ತ ಕುಡಿಯುತ್ತ ಸ್ವ ನಾಶ ಮಾಡಿಕೊಳ್ಳುವ ಬದಲು ಜಗತ್ತನ್ನು ಹೊಸ ಕಣ್ಣಿನಿಂದ ಬೆರಗಿನಿಂದ ನೋಡುತ್ತ ಹಿಪ್ಪಿಯಾಗಿ(ಜಂಗಮ) ಹೊರಟಿದ್ದರೆ ಎಷ್ಟು ಚನ್ನಾಗಿರ್ತಿತ್ತು? ಇದೇ ಅಜ್ಞಾತತೆ ಸಿಗುತ್ತಿತ್ತು. ಹೀಗೇ ಮನೆಯಿಂದ ಮನೆಗೆ ಊಟ ಕೇಳಿಕೊಂಡು ಬಸ್ಸಿಂದ ಬಸ್ಸಿಗೆ ಡ್ರಾಪ್ ತಗೊಂಡು ರಾಜ್ಯ ದೇಶ ಖಂಡಾಂತರ ಸುತ್ತಬಹುದಿತ್ತು. ದಾರಿಯಲ್ಲಿ ಸಿಕ್ಕವರ ಕತೆ ಕೇಳುತ್ತ ತಾನು ಕಂಡ ಕತೆಯನ್ನು ಎಲ್ಲರಿಗೂ ಹೇಳುತ್ತಾ.. ಇರುವಷ್ಟು ದಿವಸ ಅರ್ಥವಿಲ್ಲದ ಬದುಕನ್ನು ಅರ್ಥಪೂರ್ಣವಾಗಿ ದೂಡಬಹುದಿತ್ತು.

ತಾನು ಆ ಟೈಪ್ ಅಲ್ಲ ಅದೆಲ್ಲಾ ನಂಗೆ ಒಗ್ಗಲ್ಲ ಎಂದಿದ್ದಲ್ಲಿ ಹೊಸ ಹುಡುಗಿ ಹೊಸ ಪ್ರೇಮ, ಮದುವೆ, ಮಕ್ಕಳು, ಅವರ ಶಿಕ್ಷಣ.. ಬದುಕು ತಾನಾಗೇ ಬಗ್ಗಿಸುತ್ತಿತ್ತು.

ಇಂದು (ನವೆಂಬರ್ 28) ರಂದು ಮಧು ಈ ಪೋಸ್ಟ್ ಅನ್ನು ಹಾಕಿದ್ದಾರೆ. ಈಗಾಗಲೇ ಹಲವರು ಈ ಪೋಸ್ಟ್ ವೀಕ್ಷಿಸಿದ್ದು 100ಕ್ಕೂ ಹೆಚ್ಚು ಜನ ಲೈಕ್‌ ಮಾಡಿದ್ದಾರೆ. 42 ಮಂದಿ ಇವರ ಪೋಸ್ಟ್ ಶೇರ್ ಮಾಡಿದ್ದಾರೆ. 40ಕ್ಕೂ ಹೆಚ್ಚು ಜನ ಕಾಮೆಂಟ್ ಮಾಡಿದ್ದಾರೆ.

ಮಧು ಅವರ ‍ಪೋಸ್ಟ್‌ಗೆ ಬಂದ ಕಾಮೆಂಟ್‌ಗಳು

‘ನೀವು ಹೇಳಿರುವ ಒಂದೊಂದು ಪದಗಳು ಕಟು ಸತ್ಯ... ಈ ಭೂಮಿ ಮೇಲೆ ಮನುಷ್ಯರು ರಾಕೆಟ್ ಅಂತೆ ವೇಗವಾಗಿ ಚಲಿಸುತ್ತಿದ್ದಾರೆ ಇಲ್ಲಿ ಹೇಳಿರುವ ವಿಷಯ ಓದುವುದಕ್ಕೂ ಕೆಲವರಿಗೆ ಸಮಯ ಇರುವುದಿಲ್ಲ ಇಲ್ಲಿ ಹಣವೆಂಬುವ ಕುದುರೆಯ ಸವಾರಿ ಮಾಡುತ್ತಿದ್ದಾರೆ, ವಿವರಗಳನ್ನು ಅರ್ಥ ಪೂರ್ಣವಾಗಿ ವಿವರಿಸಿದಕ್ಕೆ ನಿಮ್ಮ ಅಂದದ ಬರವಣಿಗೆ ಹೃದಯಪೂರ್ವಕವಾದ ಧನ್ಯವಾದಗಳು‘ ಎಂದು ನಾರಾಯಣ್ ‌ಸ್ವಾಮಿ ಬಿ ಎನ್ನುವವರು ಕಾಮೆಂಟ್ ಮಾಡಿದ್ದಾರೆ.

ಹುಟ್ಟು, ಸಾವು ಎಲ್ಲವೂ ಏಕಾಂಗಿ: ‘ನಗ್ನ ಸತ್ಯ ಏನಂದ್ರೆ ಹುಟ್ಟಿದ್ದು ಒಬ್ಬರೇ ಸಾವು ಒಬ್ಬರನ್ನೇ ಕರೆದುಕೊಂಡು ಹೋಗೋದು, ದಫನ್ ಕೂಡ ಒಬ್ಬೊಬ್ಬರದ್ದು ಅಷ್ಟೇ , ಎಲ್ಲರನ್ನೂ ಇಟ್ಟಿಗೆ ಸಾಯೋದು ಮತ್ತು ದಫನ್ ಅಪರೂಪದಲ್ಲಿ ಅಪರೂಪ, ಈ ಸತ್ಯ ತಿಳಿದ್ರೆ ಮಿಕ್ಕೆಲ್ಲ ಅದಾಗೆ ಅದು ದಕ್ಕತ್ತೆ, ಇನ್ನೂ ನಾನು ಈ ಪ್ರಪಂಚದಲ್ಲಿ ಬರೀ ಒಂದು ಕಣ ಅಂದುಕೊಂಡು ಬಿಟ್ಟರೆ ಈ ಅಹಂಕಾರ ಅಳಿದು ನಮ್ಮ ಪಾಡಿಗೆ ಅನ್ನವೋ ನೀರೋ ಕುಡಿಯುತ್ತಾ ಬದುಕಿ ಬುಡಬಹುದು, ಎಲ್ಲವನ್ನೂ ಮೈ ಮೇಲೆ ಎಳೆದುಕೊಂಡು, ಇಷ್ಟೇ ಸತ್ಯ ಅಂದ್ರೆ ಇಷ್ಟೇ ಆಗೋದು‘ ಮಂಗಳ ಗೌರಮ್ಮ ಎನ್ನುವವರು ಕಾಮೆಂಟ್ ಮಾಡಿ ಬಹಳ ಮಾರ್ವಿಕವಾಗಿ ಮನದ ಮಾತು ತಿಳಿಸಿದ್ದಾರೆ.

ಅತಿ ಸೂಕ್ಷ್ಮ ಹತಾಶೆಗೆ ಕಾರಣವಾಗಬಹುದು: ‘ಒಮ್ಮೊಮ್ಮೆ ಅತಿಯಾಗಿ ಓದಿ ತಿಳಿದುಕೊಂಡವರು ಮನೆಯೊಳಗಿನ‌ ಹುಚ್ಚರ ಹಾಗೆ ಕಾಣಿಸ್ತಿರ್ತಾರೆ. ಅವರಿಗೆ ಯಾವುದೂ ಪ್ರಾಕ್ಟಿಕಲ್ ಸಮಸ್ಯೆ, ಖುಷಿ, ದುಃಖ ಕಾಣೋದೇ ಇಲ್ಲ. ‌ ಅತೀ ಸೂಕ್ಷ್ಮ‌ ಆಗಿ ಹತಾಶೆಗೆ ಬಲಿಯಾಗೊ ಬದಲು ಸ್ವಲ್ಪ ಉಡಾಫೆಯಿಂದ ಬದುಕನ್ನು ಸ್ವೀಕರಿಸೋ ಧೈರ್ಯ ಇರೋದು ವಾಸಿ‘ ಸಮುದ್ಯತಾ ಕಂಜರ್ಪಣೆ ಅವರು ಕಾಮೆಂಟ್ ಮಾಡುವ ಮೂಲಕ ನಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಏಕಾಂಗಿ ಬದುಕು ಸುಲಭವಲ್ಲ: ‘ಏಕಾಂಗಿ ಯಾಗಿ ಬದುಕುವುದು ಅಷ್ಟು ಸುಲಭದ ವಿಷಯವಲ್ಲ. ಅದನ್ನು ಅನುಭವಿಸಿದವರಿಗೆ ಅದರ ಬಗ್ಗೆ ಗೊತ್ತಿರುತ್ತೆ. ಅವರಿಗೆ ಎಷ್ಟು ಸಮಾಧಾನ ಏಳಿದರು ಕೇಳುವಸ್ಥಿತಿಯಲ್ಲಿ ಅವರು ಇರಲ್ಲ‘ ಅನಿತಾ ಗೋಪಿನಾಥ್ ಎನ್ನುವವರು ಕಾಮೆಂಟ್ ಮಾಡಿದ್ದಾರೆ.

ಸಹಜ ಬದುಕು ಕಳೆದು ಹೋಗಿದೆ: ‘ಇತ್ತೀಚಿಗೆ ಮನಸ್ಸು ತುಂಬಾ ಸೂಕ್ಷ್ಮ ಆಗಿದೆ..ಸಣ್ಣ ಸಂಗತಿಯನ್ನೂ ತಡೆದುಕೊಳ್ಳುವ ಶಕ್ತಿ ಉಳಿದಿಲ್ಲ.. ನಮ್ಮ ಬದುಕಿನ ಕ್ರಮವೇ ಬದಲಾಗುತ್ತಿದೆ.ನಮ್ಮಪಠ್ಯ, ಆಡಳಿತ,ರಾಜಕೀಯ ತೀರ್ಮಾನಗಳು,ಎಲ್ಲವೂ ಇದಕ್ಕೆ ಕಾರಣ.ಹೊರಗಿನಿಂದ ನಾವು ಏನೇ ಹೇಳಿದರೂ ಮನುಷ್ಯನಿಗೆ ಒಳಗಿನ ಹೊಡೆತ ತಾಳಿಕೊಳ್ಳುವದು‌ ತುಂಬ ಕಷ್ಟ.ಇವರಂಗಲ್ಲದಿದ್ದರೂ ಇವರಂಥವರೇ ಎಲ್ಲ ಕಡೆಗೂ ಇದ್ದಾರೆ. ಇಂಥವುಗಳಿಂದ ಹೊರಗೆ ಬರುವ ಯಾವ‌ ಥೆರಪಿಯೂ ಕೆಲಸ ಮಾಡಿದ್ದು ನಾ ಕಾಣೆ.ಸಹಜ ಬದುಕು ಕಳೆದುಕೊಂಡಿರುವದರ ಫಲ ಇದು‘ ಎಂದು ಬಸವರಾಜ್ ಹೂಗಾರ್ ಅವರು ಕಾಮೆಂಟ್ ಮಾಡಿದ್ದಾರೆ.

‘ಭಾವನೆಗಳ ಹಿಡಿತಕ್ಕೆ ಮನುಷ್ಯ ಸಿಕ್ಕಾಗ ಹೀಗಾಗೋದು ಸಹಜ...ಯಾವುದೇ ಖುಷಿ ಇರಲಿ ದುಃಖ ಇರಲಿ, ಇಡೀ ಮನುಕುಲದಲ್ಲಿ ಇಂಥದು ತುಂಬ ವ್ಯಕ್ಕಿಗಳ ಜೊತೆ ಆಗಿದೆ ಎಂಬ ಅರಿವು ಮೂಡಿದರೆ ಖಂಡಿತವಾಗಿ ಅಂತಹ ಹತಾಶ ಸ್ಥಿತಿಯಿಂದ ಹೊರಬರಬಹುದು‘ ವಿನಾಯಕ್ ಎಳಿಗಾರ್ ಅವರ ಕಾಮೆಂಟ್ ಹೀಗಿದೆ.

Whats_app_banner