ಕನ್ನಡ ಸುದ್ದಿ  /  ಕ್ರಿಕೆಟ್  /  ಕ್ರಿಕೆಟ್‌ ಬಗ್ಗೆ ಅಂಧಕಾರ, ದುರಭಿಮಾನ ಇದ್ದರಷ್ಟೇ ಧೋನಿಯನ್ನು ದ್ವೇಷಿಸಲು ಸಾಧ್ಯ; ರಾಜೀವ್‌ ಹೆಗಡೆ ಬರಹ

ಕ್ರಿಕೆಟ್‌ ಬಗ್ಗೆ ಅಂಧಕಾರ, ದುರಭಿಮಾನ ಇದ್ದರಷ್ಟೇ ಧೋನಿಯನ್ನು ದ್ವೇಷಿಸಲು ಸಾಧ್ಯ; ರಾಜೀವ್‌ ಹೆಗಡೆ ಬರಹ

MS Dhoni IPL 2024: ಧೋನಿಯೆಂದರೆ ಕೇವಲ ಆಟಗಾರನಲ್ಲ, ಅದೊಂದು ಭಾವನಾ ಲೋಕ. ಕ್ರಿಕೆಟ್‌ ಜಗತ್ತಿನಲ್ಲಿ ‘ಔಟ್‌ ಆಪ್‌ ದಿ ಬಾಕ್ಸ್‌’ ಚಿಂತನೆಗಳ ಮೂಲಕ ಹೊಸ ಭಾವನೆಗಳ ಲೋಕ ಸೃಷ್ಟಿಸಿದ್ದು ಧೋನಿ. ಮಾಹಿ ಕುರಿತ ವಿಶೇಷ ಬರಹ ಇಲ್ಲಿದೆ. (ರಾಜೀವ ಹೆಗಡೆ)

ಕ್ರಿಕೆಟ್‌ ಬಗ್ಗೆ ಅಂಧಕಾರ, ದುರಭಿಮಾನ ಇದ್ದರಷ್ಟೇ ಧೋನಿಯನ್ನು ದ್ವೇಷಿಸಲು ಸಾಧ್ಯ
ಕ್ರಿಕೆಟ್‌ ಬಗ್ಗೆ ಅಂಧಕಾರ, ದುರಭಿಮಾನ ಇದ್ದರಷ್ಟೇ ಧೋನಿಯನ್ನು ದ್ವೇಷಿಸಲು ಸಾಧ್ಯ (AFP)

ಐಪಿಎಲ್ 2024ರ ಆವೃತ್ತಿಯು ಅಂತಿಮ ಹಂತಕ್ಕೆ ಬರುತ್ತಿದೆ. ಟೂರ್ನಿಯಿಂದ ಮಾಜಿ ಚಾಂಪಿಯನ್ ಸಿಎಸ್‌ಕೆ ತಂಡವು ಲೀಗ್‌ ಹಂತದಲ್ಲಿ ಹೊರಬಿದ್ದಿತು. ಆ ಮೂಲಕ ದಿಗ್ಗಜ ಆಟಗಾರ ಎಂಎಸ್‌ ಧೋನಿ ಅವರ ಕ್ರಿಕೆಟ್‌ ಜೀವನ ಯುಗಾಂತ್ಯವಾಯ್ತು. ಸಿಎಸ್‌ಕೆ ಆಟಗಾರ ಅಧಿಕೃತವಾಗಿ ವಿದಾಯ ಘೋಷಿಸಿಲ್ಲವಾದರೂ, ಇದು ಅವರ ಕೊನೆಯ ಆವೃತ್ತಿ ಎಂಬುದು ಅಭಿಮಾನಿಗಳಿಗೆ ಅರ್ಥವಾಗಿದೆ. ಭಾರತ ಕ್ರಿಕೆಟ್‌ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಎಂಎಸ್‌ಡಿ, ಅಭಿಮಾನಿಗಳ ಆರಾಧ್ಯ ದೈವ. ಮಾಹಿಯ ಆಟವನ್ನು ಕಣ್ತುಂಬಿಕೊಳ್ಳಲು ಅದೆಷ್ಟೋ ಅಭಿಮಾನಿಗಳು ಕಾಯುತ್ತಿರುತ್ತಾರೆ. ಆದರೆ, ಮುಂದೆ ಇಂಥಾ ಅವಕಾಶ ಸಿಗುವ ಸಾಧ್ಯತೆ ತೀರಾ ಕಡಿಮೆ. ಭಾರತ ಕ್ರಿಕೆಟ್‌ನಲ್ಲಿ ಧೋನಿಯಂಥಾ ಸಾಧಕ ಇಲ್ಲ ಎಂಬುದನ್ನು ಬರಹಗಾರ ರಾಜೀವ್‌ ಹೆಗಡೆ ತಮ್ಮ ಫೇಸ್‌ಬುಕ್‌ ವಾಲ್‌ನಲ್ಲಿ ಬರೆದಿದ್ದಾರೆ. ಇಲ್ಲಿಂದ ಮುಂದಿರುವುದು ರಾಜೀವ್‌ ಅವರ ಸಾಲುಗಳು...

ಟ್ರೆಂಡಿಂಗ್​ ಸುದ್ದಿ

ಧೋನಿ ಸಾಧನೆಯ ಪಥದ ಕನಸು ಕಾಣುವುದು ಕೂಡ ಕಷ್ಟ!

ಈ ಬಾರಿಯ ಐಪಿಎಲ್‌ ಕೇವಲ ಫ್ರಾಂಚೈಸಿಗಳ ಕ್ರಿಕೆಟ್‌ ಕದನವಾಗಿರಲಿಲ್ಲ. ವಿಶ್ವ ಕ್ರಿಕೆಟ್‌ ಕಂಡ ಶ್ರೇಷ್ಠ ನಾಯಕನಿಗೆ ಬೀಳ್ಕೊಡುಗೆಯ ಉತ್ಸವದಂತೆ ಸಾಗಿತು. ಈ ಮಹಾನ್‌ ನಾಯಕ ಹೋದಲ್ಲೆಲ್ಲ ಅಭಿಮಾನಿಗಳಿಗೆ ತವರು ತಂಡಗಳೇ ಮರೆತು ಹೋಯಿತು. ಚೆನ್ನೈ ಸೋತರೂ ಪರವಾಗಿಲ್ಲ, ಧೋನಿಯನ್ನು ಸಂಭ್ರಮಿಸಬೇಕು, ಮಾಹಿಯನ್ನು ಕಣ್ತುಂಬಿಕೊಳ್ಳಬೇಕು ಎಂದು ಮೈದಾನ ಹಾಗೂ ಟಿವಿಯ ಮುಂದೆ ಕುಳಿತರು. ಧೋನಿ ಸಿಕ್ಸರ್‌ ಹೊಡೆದಾಗಲೆಲ್ಲ, ಎರಡು ದಶಕಗಳ ಪಯಣದ ಎಲ್ಲ ಸಿಕ್ಸರ್‌ಗಳನ್ನು ನೆನಪಿಸಿಕೊಂಡು ಕುಣಿದು ಕುಪ್ಪಳಿಸಿದರು. ಧೋನಿಯ ಪ್ರತಿ ಕ್ಯಾಚ್‌ ನೋಡಿ ಹಳೆಯ ನೆನಪುಗಳನ್ನು ಕೆದಕಿ ಖುಷಿಪಟ್ಟರು. ಧೋನಿಯು ಮೈದಾನದಲ್ಲಿ ಕಾಲಿಟ್ಟಾಗಲೆಲ್ಲ ಅದೊಂದು ಮೆಗಾ ಸ್ಕ್ರೀನ್‌ ಮೇಲಿನ ಸಿನೆಮಾ ಎನ್ನುವ ರೀತಿ ಆರಾಧಿಸಿದರು.

ಏಕೆಂದರೆ ಧೋನಿಯೆಂದರೆ ಕೇವಲ ಮಾಹಿಯಲ್ಲ, ಅದೊಂದು ಭಾವನಾ ಲೋಕ. ಕ್ರಿಕೆಟ್‌ ಪುಸ್ತಕದಲ್ಲಿರುವ ಆಟಗಳಿಂದ ಸಚಿನ್‌ ತೆಂಡೂಲ್ಕರ್‌ ದೇವರೆನಿಸಿಕೊಂಡಿದ್ದರು. ಆದರೆ ಅದೇ ಕ್ರಿಕೆಟ್‌ ಲೋಕದಲ್ಲಿ ʼಔಟ್‌ ಆಪ್‌ ದಿ ಬಾಕ್ಸ್‌ʼ ಚಿಂತನೆಗಳ ಮೂಲಕ ಹೊಸ ಭಾವನೆಗಳ ಲೋಕ ಸೃಷ್ಟಿಸಿದ್ದು ಧೋನಿ.

ಧೋನಿಯು ಭಾರತೀಯ ಕ್ರಿಕೆಟ್‌ ಲೋಕದ ಅಪ್ರತಿಮ ಸ್ಟಾರ್‌ ಆಗಿದ್ದು ಸಣ್ಣ ಮಾತಲ್ಲ. ಬೆಂಗಳೂರಿನಿಂದ ಹಿಡಿದು ಧರ್ಮಶಾಲಾದವರೆಗೆ ಅತಿಥೇಯ ತಂಡಕ್ಕಿಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವುದು ಖಂಡಿತವಾಗಿಯೂ ಅಸಾಮಾನ್ಯ. ಭಾರತದಲ್ಲಿ ಕ್ರಿಕೆಟ್‌ ದೇವರು ಎಂದು ಕರೆಯಿಸಿಕೊಳ್ಳುವ ಸಚಿನ್‌ ತೆಂಡೂಲ್ಕರ್‌ಗಿಂತ ಒಂದು ಕೈ ಮೇಲು ಎನಿಸುವ ಮಟ್ಟಿಗೆ ಮಾಹಿಯ ಕ್ರೇಜ್‌ ತನ್ನಿಂತಾನೆ ಹುಟ್ಟಿದ್ದಲ್ಲ. ಇದರಲ್ಲಿ ಎರಡು ದಶಕಗಳ ತಪಸ್ಸಿದೆ. ಧೋನಿಯೇ ರೂಪಿಸಿಕೊಂಡ ಅಧ್ಯಯನಕ್ಕೆ ಸಿಲುಕದ ಮಹಾನ್‌ ವ್ಯಕ್ತಿತ್ವವಿದೆ. ಟೀಕೆಗಳ ರಾಶಿಯನ್ನು ಬದಿಗೊತ್ತುವ ಸಾಧನೆಯ ಶಿಖರವಿದೆ. ಅದೆಲ್ಲಕ್ಕಿಂತ ವಿಶೇಷವಾಗಿ ಧೋನಿ ಕಟ್ಟಿಕೊಟ್ಟ ದೊಡ್ಡ ಭಾವನೆಗಳ ಲೋಕವಿದೆ. ರಾಂಚಿಯ ಸಾಮಾನ್ಯ ಹುಡುಗನು ಸುಖಾಸುಮ್ಮನೇ ನಮ್ಮೆಲ್ಲರ ಪ್ರೀತಿಯ ಧೋನಿಯಾಗಿಲ್ಲ. ಧೋನಿ ಎಂದರೆ ಹುಚ್ಚು ಪ್ರೀತಿ ಹುಟ್ಟಿಸುವ ಕಡಲನ್ನೇ ಸೃಷ್ಟಿಸಿ ಅಲ್ಲಿ ಭಾವನೆಗಳ ಅಲೆಯನ್ನು ತೇಲಿ ಬಿಟ್ಟಿದ್ದಾನೆ. ಆ ಭಾವನೆಗಳ ಅಲೆಗಳು ಹಾಗೂ ಸಾಧನೆ ಅಬ್ಬರದಲ್ಲಿ ಧೋನಿಯನ್ನು ದ್ವೇಷಿಸಲು ಕ್ರಿಕೆಟ್‌ ಬಗೆಗಿನ ಅಂಧಕಾರ ಅಥವಾ ದುರಭಿಮಾನವೇ ಬೇಕಾಗುತ್ತದೆ.

ಭಾರತದಲ್ಲಿ ಕ್ರಿಕೆಟ್‌ನ್ನು ಒಂದು ಧರ್ಮದ ರೀತಿ ಆರಾಧಿಸುತ್ತಿದ್ದರೆ, ನಾನು ಆ ಕ್ರಿಕೆಟ್‌ನ ದೈನಂದಿನ ಆರಾಧಕ. ನನ್ನ ಇಲ್ಲಿವರೆಗಿನ ಕ್ರಿಕೆಟ್‌ ಆರಾಧನೆಯ ಮೊದಲಾರ್ಧವನ್ನು ಸಚಿನ್‌ ತೆಂಡೂಲ್ಕರ್‌ ಆವರಿಸಿಕೊಂಡಿದ್ದರು. ಇಂದಿಗೂ ಸಚಿನ್‌ ಅವರ ಇನ್ನಿಂಗ್ಸ್‌ ಎಲ್ಲಿಯೇ ಕಂಡರೂ ಕಣ್ತುಂಬಾ ಆಸ್ವಾದಿಸುತ್ತೇನೆ. ಸಚಿನ್‌ ಗಳಿಸಿದ್ದ ಮೊದಲ ಏಕದಿನ ದ್ವಿಶತಕವನ್ನು ಅದೆಷ್ಟು ಬಾರಿ ನೋಡಿದ್ದೇನೋ, ನನಗೆ ಗೊತ್ತಿಲ್ಲ. ಸಚಿನ್‌ ಬ್ಯಾಟಿಂಗ್‌ ಮುಗಿದ ತಕ್ಷಣ ರೇಡಿಯೋ ಕಾಮೆಂಟರಿ ಆಫ್‌ ಮಾಡಿಟ್ಟು ಮಲಗುತ್ತಿದ್ದವರಲ್ಲಿ ನಾನೂ ಒಬ್ಬನಾಗಿದ್ದೆ. ಅಂತಹ ಸಂದರ್ಭದಲ್ಲಿ ಆಶಾ ಕಿರಣವಾಗಿ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದು ಮಹೇಂದ್ರ ಸಿಂಗ್‌ ಧೋನಿ.

ಅಂದಿನಿಂದ ಧೋನಿಯು ಕ್ರಿಕೆಟ್‌ ಲೋಕವನ್ನು ಆವರಿಸಿಕೊಂಡ ಪರಿಯೇ ಅವರ್ಣನೀಯ. ಟೆನ್ನಿಸ್‌ನಲ್ಲಿ ರೋಜರ್‌ ಫೆಡರರ್‌, ಫುಟ್ಬಾಲ್‌ನಲ್ಲಿ ಮೆಸ್ಸಿ ಯಾವ ರೀತಿ ಮಾಯೆ ಮಾಡುತ್ತಾರೋ ಅದಕ್ಕಿಂತ ದೊಡ್ಡದಾಗಿ ಧೋನಿಯ ಪ್ರಭಾವಳಿಯಿದೆ. ಕ್ರಿಕೆಟ್‌ ಲೋಕದಲ್ಲಿ ಇನ್ಯಾವ ನಾಯಕನೂ ಮಾಡದ ಹಾಗೂ ಮಾಡಲಾಗದ ಸಾಧನ ಶಿಖರವನ್ನು ಧೋನಿ ಏರಿ ಕುಳಿತಿದ್ದಾರೆ. ಅವರು ಕ್ರಿಕೆಟ್‌ ಆಡುವಾಗ ಇದ್ದ ಎಲ್ಲ ಪ್ರತಿಷ್ಠಿತ ಟ್ರೋಫಿಗಳ ಮೇಲೆ ಮುತ್ತಿಕ್ಕಿದ್ದಾರೆ. ಧೋನಿ ಕಾಲವನ್ನು ಬಿಟ್ಟು ಉಳಿದೆಲ್ಲ ಸಂದರ್ಭದಲ್ಲಿ ಭಾರತದ ಉಳಿದ ಆಟಗಾರರಿಗೆ ಇವೆಲ್ಲ ಗಗನ ಕುಸುಮವಾಗಿರುವುದನ್ನು ಒಮ್ಮೆ ನೆನೆಸಿಕೊಂಡರೆ, ಧೋನಿ ಯಾರೆನ್ನುವುದು ಅರ್ಥವಾಗುತ್ತದೆ.

ಧೋನಿಯೇ ಒಂದು ಫ್ರಾಂಚೈಸಿ

ಗಾಯದ ಮಧ್ಯೆಯೇ ಕಳೆದ ವರ್ಷ ಐಪಿಎಲ್‌ ಆಡಿದ್ದ ಧೋನಿಯು, ಚೆನ್ನೈಗೆ ದಾಖಲೆಯ ಐದನೇ ಬಾರಿ ಟ್ರೋಫಿ ಗೆಲ್ಲಿಸಿಕೊಟ್ಟಿದ್ದರು. ಆಗಲೇ ಕ್ರಿಕೆಟ್‌ಗೆ ವಿದಾಯ ಹೇಳಿ ಆರಾಮಾಗಿ ಉಳಿಯಬಹುದಿತ್ತು. ಟೂರ್ನಿ ಗೆಲ್ಲುವ ಮೂಲಕ ಅತ್ಯದ್ಭುತವಾಗಿ ವಿದಾಯ ಹೇಳಬಹುದಿತ್ತು. ಆದರೆ ಚೆನ್ನೈ ಮೈದಾನ ಹಾಗೂ ಅಭಿಮಾನಿಗಳಿಗಾಗಿ ಮತ್ತೆ ಆಡುವುದಾಗಿ ಭರವಸೆ ನೀಡಿದರು. ಸುಮಾರು ಒಂದು ವರ್ಷ ವೃತ್ತಿಪರ ಕ್ರಿಕೆಟ್‌ನಿಂದ ದೂರ ಉಳಿದ್ದರೂ ಮತ್ತೆ ಮೈದಾನಕ್ಕೆ ಇಳಿದಿದ್ದರು. ಮೊಣಕಾಲಿನ ಗಾಯ ಹಾಗೂ ತೀವ್ರ ಬೆನ್ನು ನೋವಿನ ಮಧ್ಯೆಯೂ ತಂಡದ ಭಾಗವಾಗಿ ಮುಂದುವರಿದರು. ಇಷ್ಟೆಲ್ಲ ಸಮಸ್ಯೆಗಳ ಮಧ್ಯೆ ಧೋನಿ ಏಕೆ ಆಡಬೇಕಿತ್ತು ಎಂದು ಸಾಕಷ್ಟು ಜನರು ಪ್ರಶ್ನಿಸುತ್ತಾರೆ. ಆದರೆ ಧೋನಿ ಈ ಬಾರಿ ಆಡಿದ್ದು ಯಾವುದೇ ಕಿರೀಟಕ್ಕಲ್ಲ. ಅಷ್ಟಕ್ಕೂ ಧೋನಿ ತೊಡದ ಕಿರೀಟವೇ ಇಲ್ಲದಿರುವಾಗ ಇಂತಹ ಮಾತುಗಳನ್ನು ಆಡುವುದೇ ಬಾಲಿಶ ಎನಿಸುತ್ತದೆ. ಚೆನ್ನೈ ಆಡಿದ ಪ್ರತಿ ಪಂದ್ಯವೂ ಧೋನಿ ಅಭಿಮಾನಿಗಳಿಗೆ ಅದೊಂದು ಉತ್ಸವವಾಗಿತ್ತು. ಚೆನ್ನೈ ಸೋತರೂ, ಧೋನಿ ಬ್ಯಾಟಿಂಗ್‌ ನೋಡಬೇಕು ಎಂದು ಜನ ಕಾಯುತ್ತಿದ್ದರು. ಈ ಬಾರಿಯ ಐಪಿಎಲ್‌ನಲ್ಲಿ ನನ್ನಂತ ಕೋಟ್ಯಂತರ ಜನರು ಕೇವಲ ಧೋನಿ ಮುಖ ನೋಡಲೆಂದೇ ಪಂದ್ಯ ವೀಕ್ಷಿಸಿದ್ದರು. ಸ್ಕ್ರೀನ್‌ ಮೇಲೆ ಧೋನಿಯ ಆ ನಗು ಕಾಣಿಸಿದಾಗ ಮನದೊಳಗೆ ಕಚಗುಳಿಯಿಟ್ಟಂಥ ಅನುಭವವಾಗುತ್ತಿತ್ತು. ಮೈದಾನದಲ್ಲಿದ್ದ ಜನರು ಹುಚ್ಚೆದ್ದು ಕುಣಿಯುತ್ತಿದ್ದರು. ಧೋನಿ ಬ್ಯಾಟಿಂಗ್‌ ಬಂದರೆ ವೀಕ್ಷಕರ ಸಂಖ್ಯೆ ದುಪ್ಪಟ್ಟಾಗುತ್ತಿತ್ತು. ಇವೆಲ್ಲವೂ ಅಭಿಮಾನಿಗಳ ಪಾಲಿಗೆ ಉತ್ಸವವಾದರೆ, ಧೋನಿ ಕೂಡ ಈ ಬಾರಿಯ ಐಪಿಎಲ್‌ನ್ನು ತನ್ನ ಕೃತಜ್ಞತೆ ಸಲ್ಲಿಕೆ ಎನ್ನುವ ರೂಪದಲ್ಲಿ ಬಳಸಿಕೊಂಡರು.

ಕಳೆದ ಬಾರಿ ಟ್ರೋಫಿ ಹಿಡಿದು ಸಹ ಆಟಗಾರರಿಗೆ ಕೊಡುವ ಕ್ಷಣದಲ್ಲಿ ಹೇಳಿದ್ದಂತೆ, 'ಅಭಿಮಾನಿಗಳಿಗಾಗಿ ಧನ್ಯವಾದ ಹೇಳಲು' ದೇಶದ ಎಲ್ಲ ಮೈದಾನಗಳಿಗೆ ಹೋದರು. ಪಂದ್ಯ ಮುಗಿದ ತಕ್ಷಣ ಕಾಲಿಗೆ ಐಸ್‌ ಪ್ಯಾಕ್‌ ಹಾಗೂ ಬೆನ್ನಿಗೆ ಬೆಲ್ಟ್‌ ಹಾಕಿಕೊಳ್ಳುವ ಸ್ಥಿತಿಯಿದ್ದರೂ ಆಡಿದರು. ಹೀಗಾಗಿ ತನ್ನ ಎಲ್ಲ ನೋವನ್ನು ಮರೆತು ಅಭಿಮಾನಿಗಳ ಖುಷಿಗಾಗಿ ಧೋನಿ ಆಡಿದರು. ಅದೇ ರೀತಿ ತಂಡ ಸೋಲುವ ನೋವನ್ನು ಮರೆತು ಧೋನಿಗಾಗಿ ಅಭಿಮಾನಿಗಳು ಖುಷಿಪಟ್ಟರು. ಇದೆಲ್ಲ ಶೋಕಿಯೆಂದು ಕೆಲವರು ಟೀಕಿಸಬಹುದು. ಆದರೆ ಒಮ್ಮೆ ಪಕ್ಕದ ಮುಂಬೈ ಇಂಡಿಯನ್ಸ್‌ ತಂಡದ ಸ್ಥಿತಿಗತಿಯನ್ನು ನೋಡಿದರೆ ಅದರ ನಿಜವಾದ ಕಾಳಜಿ ಅರ್ಥವಾಗುತ್ತದೆ. ನಾಲ್ಕು ಬಾರಿ ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕನನ್ನು ಮುಂಬೈ ಫ್ರಾಂಚೈಸಿ ಹೇಗೆ ನಡೆಸಿಕೊಂಡಿತು ಹಾಗೂ ತಂಡದೊಳಗೆ ಯಾವ ರೀತಿಯ ವಾತಾವರಣ ಸೃಷ್ಟಿಸಿತು ಎನ್ನುವುದಕ್ಕೆ ಪ್ರತಿ ದಿನ ಉದಾಹರಣೆ ಸಿಗುತ್ತಿದೆ. ಯಾವುದೇ ತಂಡವನ್ನು ಚಾಂಪಿಯನ್‌ ಮಾಡುವುದಷ್ಟೇ ಮುಖ್ಯವಲ್ಲ. ಆ ತಂಡದ ಸ್ಥಿರತೆ ಹಾಗೂ ವ್ಯವಸ್ಥಿತ ಯೋಜನೆಯನ್ನು ಮುಂದುವರಿಸಿಕೊಂಡು ಹೋದಾಗಲೇ ಫ್ರಾಂಚೈಸಿಯು ತನ್ನ ಗತವೈಭವ ಉಳಸಿಕೊಳ್ಳಲು ಸಾಧ್ಯವಿದೆ.

ಇದನ್ನೂ ಓದಿ | ಆಗದು ಎಂದು ಕೈ ಕಟ್ಟಿ ಕುಳಿತರೆ..; ಅಸಾಧ್ಯವನ್ನೂ ಸಾಧಿಸಿ ಪ್ಲೇಆಫ್ ಪ್ರವೇಶಿಸಿದ ಆರ್​ಸಿಬಿ ವಿನೂತನ ದಾಖಲೆ

ಪ್ರತಿ ಬಾರಿ ಐಪಿಎಲ್‌ ಹರಾಜು ಮುಗಿದಾಗ ಚೆನ್ನೈಯನ್ನು ಅಂಕಲ್‌ಗಳ ತಂಡವೆಂದು ಹೀಯಾಳಿಸಿದ ಸ್ಟಾರ್‌ ಆಟಗಾರರ ಫ್ರಾಂಚೈಸಿಗಳಿಗೆ ಇವತ್ತಿನವರೆಗೂ ಒಂದೇ ಒಂದು ಟ್ರೋಫಿ ಗೆಲ್ಲಲಾಗಲಿಲ್ಲ. ಸ್ಟಾರ್‌ ಆಟಗಾರರ ಮೂಲಕ ಟ್ರೋಫಿ ಗೆಲ್ಲಲಾಗದು, ಆಟಗಾರನ್ನು ಸ್ಟಾರ್‌ಗಳನ್ನಾಗಿಸಿದರೆ ಮಾತ್ರ ಟ್ರೋಫಿ ಒಲಿಯಲಿದೆ ಎನ್ನುವುದು ಧೋನಿ ಮಂತ್ರ. ಇದಕ್ಕಾಗಿಯೇ ತಂಡ ಹೇಗೇ ಇದ್ದರೂ ಧೋನಿಯ ಬಳಿ ಐದು ಐಪಿಎಲ್‌ ಟ್ರೋಫಿಗಳಿವೆ. ತನ್ನ ಬಳಿ ಇರುವ ಪದಾರ್ಥಗಳ ಮೂಲಕ ಅತ್ಯುತ್ತಮ ಊಟವನ್ನು ಉಣಬಡಿಸುವುದು ಹೇಗೆ ಎನ್ನುವುದನ್ನು ಧೋನಿ ಪದೇಪದೆ ಸಾಧಿಸಿ ತೋರಿಸಿದ್ದಾರೆ. ಉಳಿದ ಫ್ರಾಂಚೈಸಿಗಳು ತಿರಸ್ಕರಿಸಿದ ಶೇನ್‌ ವ್ಯಾಟ್ಸನ್‌, ರಾಬಿನ್‌ ಉತ್ತಪ್ಪ, ಅಂಬಾಟಿ ರಾಯುಡು ಅಜಿಂಕ್ಯ ರಹಾನೆ, ಶಿವಂ ದುಬೆ ಮೂಲಕವೇ ಟ್ರೋಫಿಯನ್ನು ಎತ್ತಿಹಿಡಿದಿದ್ದಾರೆ. ಹೀಗಾಗಿ ತಂಡದಲ್ಲಿ ಮರಿ ಧೋನಿಯನ್ನು ಸೃಷ್ಟಿಸದೇ ʼಮಹಾʼ ಧೋನಿಯು ಪಕ್ಕಕ್ಕೆ ಸರಿಯುವುದು ಸುಲಭವಲ್ಲ. ಒಂದೊಮ್ಮೆ ಸರಿದಿದ್ದರೆ ಮುಂಬೈನಲ್ಲಿ ಹಾರ್ದಿಕ್‌ಗೆ ಆದ ಪರಿಸ್ಥಿತಿಯೇ ರುತುರಾಜ್‌ ಗಾಯಕ್ವಾಡ್‌ಗೂ ಬರುತ್ತಿತ್ತು. ಹೀಗಾಗಿ ಫ್ರಾಂಚೈಸಿಗಾಗಿ ಆರು ಪ್ರಮುಖ ಟ್ರೋಫಿ ಗೆದ್ದ ನಾಯಕನಿಗೆ ಕ್ರಿಕೆಟ್‌ ಬ್ಯಾಟ್‌ ಹಿಡಿಯಲು ಬರದವರ ಪಾಠದ ಅಗತ್ಯವೇ ಇಲ್ಲ. ಇದೊಂಥರ ಕೊರೊನಾ ಬಂದವರು ಅಡುಗೆಯ ರುಚಿ ಹೇಳಿದಂತಾಗುತ್ತದೆ.

ಟೀಕಿಸುವರು ಇದನ್ನು ಮರೆಯಬೇಡಿ!

ಭಾರತಕ್ಕೆ ಎರಡು ವಿಶ್ವಕಪ್‌ ಗೆದ್ದುಕೊಟ್ಟ ನಾಯಕನನ್ನು ಫಿಕ್ಸರ್‌ ಎಂದು ಜರಿಯುತ್ತಾರೆ. ತಂಡದ ಸಹ ಆಟಗಾರರಿಗೆ ಅವಕಾಶ ಕೊಡುವ ಉದ್ದೇಶದಿಂದ ನಂ.3 ಬದಲಿಗೆ ಪಿಂಚ್‌ ಹಿಟ್ಟರ್‌ ಅಥವಾ ಫಿನಿಶರ್‌ ರೋಲ್‌ನ್ನು ಮೈಮೇಲೆ ಎಳೆದುಕೊಂಡ ನಾಯಕನನ್ನು ಸ್ವಾರ್ಥಿ ಎನ್ನುತ್ತಾರೆ. ಅದೆಷ್ಟೋ ಸ್ಮರಣೀಯ ಇನ್ನಿಂಗ್ಸ್‌ಗಳನ್ನು ಆಡಿ ತಂಡಕ್ಕೆ ಗಗನ ಕುಸುಮವಾಗಿದ್ದ ಗೆಲುವನ್ನು ತಂದುಕೊಟ್ಟ ಅಥವಾ ದಡ ಸೇರಿಸಲು ಪ್ರಯತ್ನಪಟ್ಟ ಆಟವನ್ನು ಬಾಯಿಗೆ ಬಂದಂತೆ ಟೀಕಿಸುತ್ತಾರೆ. ಆದರೆ ಈ ವಿಚಾರಗಳು ಗಮನದಲ್ಲಿರಲಿ. ಟ್ರೋಫಿ ಗೆಲ್ಲಲು ಫಿಕ್ಸಿಂಗ್‌ ಮಾಡಿಕೊಳ್ಳಬೇಕಿದ್ದರೆ, ಅದನ್ನು ಕಳೆದುಕೊಳ್ಳುವ ತಂಡ ಕೂಡ ಅದೇ ಕೆಲಸ ಮಾಡಬೇಕಾಗುತ್ತದೆ. ಇಲ್ಲಿಯವರೆಗೆ ಒಂದೇ ಒಂದು ಟ್ರೋಫಿ ಗೆಲ್ಲಲು ಸಾಧ್ಯವಾಗದ ತಂಡಗಳು ಸೋಲಲು ಹಣ ಪಡೆದಿರಬಹುದು ಎಂದು ಹೇಳುವುದ ಕೂಡ ಧೋನಿಯನ್ನು ಫಿಕ್ಸರ್‌ ಎನ್ನುವಷ್ಟೇ ಬಾಲಿಶ ಎನಿಸುತ್ತದೆ. ಒಂದೊಮ್ಮೆ ಧೋನಿಯು ನಂ.3ನಲ್ಲಿ ಬ್ಯಾಟಿಂಗ್‌ ಮಾಡಿದ್ದರೆ ಅದೆಷ್ಟೋ ದಾಖಲೆಗಳು ಉಡೀಸ್‌ ಆಗುತ್ತಿದ್ದವು. ಭಾರತೀಯ ಕ್ರಿಕೆಟ್‌ಗೆ ವಿರಾಟ್‌ ಕೊಹ್ಲಿ ಪ್ರವೇಶ ಇಷ್ಟೊಂದು ವಿರಾಟ ರೂಪದಲ್ಲಿ ಆಗುತ್ತಲೇ ಇರಲಿಲ್ಲ. ಇಂತಹ ಟೀಕೆಗಳ ಬಗ್ಗೆ ಧೋನಿ ತಲೆ ಕೆಡಿಸಿಕೊಂಡು ಕುಳಿತಿದ್ದರೆ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ, ರವೀಂದ್ರ ಜಡೇಜಾ, ರವಿಚಂದ್ರನ್‌ ಅಶ್ವಿನ್‌ ರೀತಿಯ ಆಟಗಾರರು ಭಾರತಕ್ಕೆ ಸಿಗುತ್ತಲೇ ಇರಲಿಲ್ಲ. ಟೀಕಿಸಿದವರ ಕೇಳಿ ತಂಡದ ಪ್ಲೇಯಿಂಗ್‌ XI ನಿರ್ಧರಿಸಿದ ಕಾರಣಕ್ಕಾಗಿಯೇ ಕೆಲ ತಂಡಗಳು ಒಂದೇ ಒಂದು ಟ್ರೋಫಿ ಗೆಲ್ಲಲು ಆಗಲಿಲ್ಲ. ಆದರೆ ತನ್ನ ಸಂಘಟನೆ ಮೇಲೆ ನಂಬಿಕೆಯಿಟ್ಟಿದ್ದಕ್ಕೆ ಧೋನಿ ಬಳಿ ಒಂದು ಕೈನಲ್ಲಿ ಎಣಿಸಲಾಗದಷ್ಟು ಟ್ರೋಫಿಗಳಿವೆ. ಹೀಗಾಗಿ ಧೋನಿಯನ್ನು ಟೀಕಿಸುವ ಬದಲಿಗೆ, ಧೋನಿಯಂತೆ ತಂಡ ಕಟ್ಟುವುದು ಹೇಗೆ, ನಮ್ಮ ಜೀವನದಲ್ಲಿ ಆ ರೀತಿಯ ನಾವಿಕನಾಗುವುದು ಹೇಗೆ ಎನ್ನುವ ಮಂತ್ರ ಕಲಿಯುವ ಪ್ರಯತ್ನ ಮಾಡೋಣ.

ದಿಗ್ಗಜ ಪಟ್ಟ ಗಳಿಸಿದ್ದು!

ಕ್ರಿಕೆಟ್‌ ಲೋಕದ ದಿಗ್ಗಜ ನಾಯಕ ಎನ್ನುವುದನ್ನು ಪಿಆರ್‌ ಏಜೆನ್ಸಿಗಳ ಮಹೇಂದ್ರ ಸಿಂಗ್‌ ಧೋನಿ ಖರೀದಿಸಿದ್ದಲ್ಲ. ಅದೆಷ್ಟೋ ಆಟಗಾರರು ಪ್ರತಿಷ್ಠಿತಿ ಟೂರ್ನಿಯಲ್ಲಿ ಭಾಗವಹಿಸಿದ ಸಂಖ್ಯೆಗಿಂತ ಹೆಚ್ಚು ಟ್ರೋಫಿಗಳು ಧೋನಿಯ ಬಳಿಯಿವೆ. ಈ ಟ್ರೋಪಿಗಳ ಹತ್ತಿರ ಹೋಗಲು ಕೂಡ ಅದಷ್ಟೋ ದಿಗ್ಗಜರಿಗೆ ಸಾಧ್ಯವಾಗಿಲ್ಲ. ಇವೆಲ್ಲ ಅಸಾಧ್ಯವನ್ನು ಸಾಧ್ಯವಾಗಿಸಲು ನಾವಿಕನಾಗಿದ್ದ ಕಾರಣಕ್ಕಾಗಿಯೇ ಕ್ರಿಕೆಟ್‌ ಜಗತ್ತು ಮಾಹಿಯನ್ನು ಶ್ರೇಷ್ಠ ಎಂದು ಗುರುತಿಸುತ್ತದೆ. ಕ್ರಿಕೆಟ್‌ ಖಂಡಿತವಾಗಿಯೂ ಒಂದು ತಂಡದ ಆಟ. ಆದರೆ ಆ ತಂಡಕ್ಕೆ ಧೋನಿ ರೀತಿಯ ನಾಯಕನಿಲ್ಲದಿದ್ದರೆ ಗೆಲುವು ಕಷ್ಟಸಾಧ್ಯ. ತಂಡ ಬಲಿಷ್ಠವಾಗಿದ್ದರೆ ವಿಶ್ವಕಪ್‌ ಗೆಲ್ಲಬಹುದು ಎಂದಿದ್ದರೆ 2003 ಹಾಗೂ 2023ರಲ್ಲಿ ಭಾರತವು ವಿಶ್ವಕಪ್‌ ಗೆಲ್ಲದಿರಲು ಯಾವುದೇ ಕಾರಣ ಇರುತ್ತಿರಲಿಲ್ಲ.

  • ಐಸಿಸಿ ಟಿ20 ವಿಶ್ವಕಪ್‌-1
  • ಐಸಿಸಿ ಏಕದಿನ ವಿಶ್ವಕಪ್‌-1
  • ಐಸಿಸಿ ಚಾಂಪಿಯನ್ಸ್‌ ಟ್ರೋಫಿ-1
  • ಏಷ್ಯಾ ಕಪ್‌-2
  • ಐಸಿಸಿ ಟೆಸ್ಟ್‌ ಅಗ್ರಸ್ಥಾನದ ಟ್ರೋಫಿ-2
  • ಐಪಿಎಲ್‌-5
  • ಚಾಂಪಿಯನ್ಸ್‌ ಲೀಗ್‌-2

ಧೋನಿ ಇಲ್ಲದ ಕ್ರಿಕೆಟ್‌...

ಒಂದು ಕಾಲದಲ್ಲಿ ರಣಜಿ ಕ್ರಿಕೆಟ್‌ ಪಂದ್ಯದ ಕಾಮೆಂಟರಿಯನ್ನು ಕೂಡ ನಾನು ಕೇಳುತ್ತಿದ್ದೆ. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ ಪಂದ್ಯಗಳನ್ನು ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ನೋಡುತ್ತಿದ್ದೆ. ಐಪಿಎಲ್‌ ಬಂದ ಬಳಿಕ ಕ್ರಿಕೆಟ್‌ ಮೇಲಿನ ಆಸಕ್ತಿ ಕಡಿಮೆಯಾಯಿತು. ಇತ್ತೀಚಿನ ದಿನಗಳಲ್ಲಿ ಭಾರತದ ಪಂದ್ಯದೊಟ್ಟಿಗೆ, ಐಪಿಎಲ್‌ ಎಂದರೆ ಧೋನಿ, ಕೊಹ್ಲಿ, ರೋಹಿತ್‌ ಎನ್ನುವ ಮಟ್ಟಿಗೆ ಸೀಮಿತವಾಗಿತ್ತು. ಈ ವರ್ಷದ ಐಪಿಎಲ್‌ಗಳೆಂದರೆ ಧೋನಿ ಆಡಿದ ಪಂದ್ಯಗಳು ಹಾಗೂ ಉಳಿದ ಅದ್ಭುತ ಇನ್ನಿಂಗ್ಸ್‌ಗಳ ಹೈಲೈಟ್ಸ್‌ ಎನ್ನುವ ಹಾಗಾಯಿತು. ಬಹುಶಃ ಧೋನಿಯಿಲ್ಲದ ಮುಂದಿನ ಐಪಿಎಲ್‌ಗಳು ರೋಹಿತ್‌ ಹಾಗೂ ಕೊಹ್ಲಿಯ ಕೆಲವು ಅದ್ಭುತ ಇನ್ನಿಂಗ್ಸ್‌ಗಳಿಗೆ ಸೀಮಿತವಾಗಬಹುದು. ಅಂದ್ಹಾಗೆ ನಾನು ಚೆನ್ನೈ ಸೂಪರ್‌ ಕಿಂಗ್ಸ್‌ನ ಅಭಿಮಾನಿ ಅಲ್ಲವೇ ಅಲ್ಲ. ನಾನು ಪಕ್ಕಾ ಹಾಗೂ ಕೇವಲ ಧೋನಿಯ ಅಭಿಮಾನಿ ಮಾತ್ರ.

ಧೋನಿ ಮುಂದಿನ ಆವೃತ್ತಿ ಆಡಬಹುದು ಎಂದು ಫ್ರಾಂಚೈಸಿ ಹೇಳಿದೆ. ಆದರೆ ಧೋನಿಯ ಕ್ರಿಕೆಟ್‌ ಪಥವನ್ನು ಗಮನಿಸಿದಾಗ ದುಃಖಕರ ಅಂತ್ಯವೇ ಅವರ ಕ್ರಿಕೆಟ್‌ ಬದುಕಿನ ಕೊನೆಯ ಪಂದ್ಯಗಳು ಎನಿಸುತ್ತವೆ. ಭಾರತ ತಂಡಕ್ಕೆ ಇನ್ಯಾವುದೇ ಆಟಗಾರ ಮಾಡದಷ್ಟು ಸೇವೆ ಮಾಡಿದ ಹೊರತಾಗಿಯೂ ಶಾಂತ ರೀತಿಯಿಂದ ತೆರೆಮರೆಗೆ ಸರಿಯುವುದು ಧೋನಿಯ ಅಭ್ಯಾಸವಾಗಿದೆ. ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಔಟಾಗಿ ಬೇಸರದಿಂದ ಹೊರ ನಡೆದಿದ್ದ ಧೋನಿ, ಕೆಲ ತಿಂಗಳುಗಳ ಬಳಿಕ, 'ಮೈ ಪಲ್‌ ದೋ ಪಲ್‌ ಕಾ ಶಾಯರ್‌ ಹೂ' ಎಂದು ಕೊನೆ ಹಾಡಿದ್ದರು. ಈಗಲೂ ಅದೇ ದಾರಿ ಹಿಡಿಯಬಹುದು ಎನಿಸುತ್ತದೆ. ಧೋನಿ ಬಯಸಿದರೆ ವಿದಾಯದ ಪಂದ್ಯವನ್ನು ಯಾವುದೇ ಫ್ರಾಂಚೈಸಿ ಅಥವಾ ಬಿಸಿಸಿಐ ಆಯೋಜಿಸದಷ್ಟು ಮೂರ್ಖತನ ತೋರುವುದಿಲ್ಲ. ಆದರೆ ಪ್ರಚಾರ, ಖ್ಯಾತಿ, ಸ್ಪಾಟ್‌ಲೈಟ್‌ನ್ನು ಧೋನಿ ಹುಡುಕಿಕೊಂಡು ಎಂದೂ ಹೋಗಿಲ್ಲ. ಧೋನಿಯ ಕಾಯಕದ ಕಾರಣದಿಂದ ಅವೆಲ್ಲವೂ ಧೋನಿಯ ಹಿಂದೆ ಬಿದ್ದಿವೆ. ಆದರೆ ಆ ಮನುಷ್ಯ ಮಾತ್ರ ಕೆಲಸ ಮುಗಿಸಿಕೊಂಡು ಹೋಗಿ ಕಾಯಕ ಜೋಗಿಯಂತೆ ಮತ್ತದೇ ರಾಂಚಿಯ ಗೂಡಿಗೆ ಸೇರಿಕೊಳ್ಳುತ್ತಾರೆ. ಆಗ ಧೋನಿಯ ನಾಯಕತ್ವವಿಲ್ಲದೇ ನಾವೆಷ್ಟು ಟ್ರೋಪಿಗಳನ್ನು ಕಳೆದುಕೊಂಡೆವು ಹಾಗೂ ಧೋನಿ ಬರುವ ಮುನ್ನ ಹೇಗಿತ್ತು ಎನ್ನುವುದನ್ನು ಒಮ್ಮೆ ಲೆಕ್ಕ ಹಾಕಿದರೆ ಧೋನಿಯೆಂದರೆ ಏನು ಎನ್ನುವುದು ಆಗ ತಿಳಿಯುತ್ತದೆ.

ಅಂದ್ಹಾಗೆ ಈ ಬಾರಿ ಕೊಹ್ಲಿಯ‌ ತಂಡ ಐಪಿಎಲ್ ಟ್ರೋಫಿ ಗೆಲ್ಲಲಿ, ಆ‌ ಮೂಲಕ ಬರ ನೀಗಲಿ ಎಂದು ಕೊಹ್ಲಿಗೋಸ್ಕರ ಆಶಿಸುತ್ತೇನೆ.

ಕೊನೆಯದಾಗಿ...

ಅಬ್‌ ಕೆ ಬರಸ್‌ ಯೇ ಸಾವನ್‌,

ಜಾನ್‌ ನಾ ಮೇರಿ ಲೇ ಜಾಯೆ

ಬೋಲೆ ಜೋ ಕೋಯಲ್‌ ಬಾಗೋ ಮೇ....

ಬೋಲೆ ಜೋ ಕೋಯಲ್‌.....ʼ

ಕ್ರಿಕೆಟ್‌ ಮೈದಾನದಲ್ಲಿ ಧೋನಿಯ ಇಂಪು ಇನ್ನು ಸಿಗದು ಎನಿಸುತ್ತದೆ. ರಾಂಚಿಯ ತೋಟದಲ್ಲಿ ಮಾತ್ರ ಈ ಕೋಗಿಲೆಯಿನ್ನು ಹಾಡುತ್ತಿರಬಹುದು. ಕ್ರಿಕೆಟ್‌ಗಿಂತ ಆ ಮಾಹಿ ಎನ್ನುವ ವ್ಯಕ್ತಿತ್ವದ ವಿಶ್ವವಿದ್ಯಾಲಯವನ್ನು ಕ್ರೀಡಾ ಪ್ರೇಮಿಗಳು ಮಿಸ್‌ ಮಾಡಿಕೊಳ್ಳಬಹುದು. ಕಾಗೆಗಳು ಎಷ್ಟೇ ಕಿರುಚಾಡಿದರೂ ಕೋಗಿಲೆಯ ಒಂದು ಕೂಗು ಇಡೀ ಲೋಕವನ್ನೇ ಇಂಪಾಗಿಸುತ್ತದೆ, ಅದುವೇ ಧೋನಿ.

ಅಂದ್ಹಾಗೆ ಭವಿಷ್ಯದಲ್ಲಿ ಧೋನಿಯನ್ನು ಏನಾಗಿ ನೋಡಲು ಬಯಸುತ್ತೀರಿ? ನಾನು ಅವರನ್ನು ಯಾವುದಾದರೂ ರೂಪದಲ್ಲಿ ಒಬ್ಬ ಸಮರ್ಥ ಆಡಳಿತಗಾರ, ನಾಯಕನನ್ನಾಗಿ ಕಾಣಲು ಇಷ್ಟಪಡುತ್ತೇನೆ.

ಇದನ್ನೂ ಓದಿ | KKR vs SRH live score IPL 2024: ಕೆಕೆಆರ್‌ vs ಎಸ್‌ಆರ್‌ಎಚ್‌ ಕ್ವಾಲಿಫೈಯರ್‌ ಪಂದ್ಯದ ಲೈವ್‌ ಅಪ್ಡೇಟ್

(ರಾಜೀವ ಹೆಗಡೆ)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ