ವಾರೆವ್ಹಾ! ಎಂಎಸ್ ಧೋನಿಯನ್ನು ನೆನಪಿಸಿದ ಮುಶೀರ್ ಖಾನ್ ಹೆಲಿಕಾಪ್ಟರ್ ಶಾಟ್; ವಿಡಿಯೋ ಇಲ್ಲಿದೆ
131 ರನ್ ಗಳಿಸುವ ಹಾದಿಯಲ್ಲಿ, ಮುಶೀರ್ ಅಪ್ರತಿಮ ಹೆಲಿಕಾಪ್ಟರ್ ಶಾಟ್ ಅನ್ನು ಕಾರ್ಯಗತಗೊಳಿಸಿದರು, ಮಧ್ಯಮ ವಿಕೆಟ್ನಲ್ಲಿ ಭಾರಿ ಸಿಕ್ಸರ್ ಬಾರಿಸಿದರು, ಬಹುಶಃ ಧೋನಿಗಿಂತಲೂ ಉತ್ತಮವಾಗಿದ್ದರು.
ಐಸಿಸಿ ಅಂಡರ್-19 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೂಪರ್ ಸಿಕ್ಸ್ ಹಂತದ ಪಂದ್ಯದಲ್ಲಿ (ICC U-19 World Cup 2023) ನ್ಯೂಜಿಲೆಂಡ್ ತಂಡದ ವಿರುದ್ಧ ಭರ್ಜರಿ ಶತಕ ಸಿಡಿಸಿದ ಮುಶೀರ್ ಖಾನ್ (Musheer Khan), ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಮುಶೀರ್ ಬ್ಯಾಟಿಂಗ್ 131 ರನ್ಗಳ ಜೊತೆಗೆ ಬೌಲಿಂಗ್ನಲ್ಲೂ ಎರಡು ವಿಕೆಟ್ ಪಡೆದು ಮಿಂಚಿದರು. ಅದ್ಭುತ ಆಟದ ನೆರವಿನಿಂದ ಸೂಪರ್ ಸಿಕ್ಸ್ ಹಂತದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 214 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ.
ಧೋನಿಯನ್ನು ನೆನಪಿಸಿದ ಮುಶೀರ್ ಹೆಲಿಕಾಪ್ಟರ್ ಸಿಕ್ಸ್
ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮುಶೀರ್, ಅಪ್ರತಿಮ ಹೆಲಿಕಾಪ್ಟರ್ ಶಾಟ್ ಪ್ಲೇ ಮಾಡಿ ಗಮನ ಸೆಳೆದಿದ್ದಾರೆ. ಆತ ಮಧ್ಯಮ ವಿಕೆಟ್ನಲ್ಲಿ ಬಾರಿಸಿದ ಹೆಲಿಕಾಪ್ಟರ್ ಸಿಕ್ಸರ್ ಧೋನಿಯನ್ನು ನೆನಪಿಸಿದೆ. ಎಂಎಸ್ ಧೋನಿ ಅವರ ಐಕಾನಿಕ್ 'ಹೆಲಿಕಾಪ್ಟರ್' ಶಾಟ್ ಅನ್ನು ಮುಶೀರ್ ಖಾನ್ ಪುನರಾವರ್ತಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಬ್ಲೋಮ್ಫಾಂಟೈನ್ನ ಮಂಗಾಂಗ್ ಓವಲ್ನಲ್ಲಿ ನಡೆದ ಪಂದ್ಯದಲ್ಲಿ ಭಾರತದ ಇನ್ನಿಂಗ್ಸ್ನ 46 ನೇ ಓವರ್ನಲ್ಲಿ ಮುಶೀರ್ ಸಿಕ್ಸರ್ ಸಿಡಿಸಿದರು. ಶಿಖರ್ ಧವನ್ (2004ರಲ್ಲಿ 3 ಶತಕಗಳು) ನಂತರ ಒಂದೇ ಅಂಡರ್ 19 ವಿಶ್ವಕಪ್ ಆವೃತ್ತಿಯಲ್ಲಿ ಹೆಚ್ಚು ಶತಕ ಸಿಡಿಸಿದ 2ನೇ ಭಾರತೀಯ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಬಲಗೈ ವೇಗದ ಬೌಲರ್ ಮೇಸನ್ ಕ್ಲಾರ್ಕ್ ನಿಧಾನಗತಿಯ ಎಸೆತವನ್ನು ನೀಡಿದರು. 18 ವರ್ಷದ ಭಾರತದ ಬ್ಯಾಟರ್ ಮಧ್ಯಮ ವಿಕೆಟ್ನಲ್ಲಿ ಅತ್ಯಮೋಘ ಹೆಲಿಕಾಪ್ಟರ್ ಸಿಕ್ಸರ್ ಬಾರಿಸಿದರು. ಈ ಸಿಕ್ಸರ್ ನೋಡಿದ ಸಹ ಆಟಗಾರರು ಶಾಕ್ ಆದರು.
126 ಎಸೆತಗಳಲ್ಲಿ 131 ರನ್ ಬಾರಿಸಿದ ಮುಶೀರ್ ತಮ್ಮ ಮ್ಯಾರಥಾನ್ ಇನ್ನಿಂಗ್ಸ್ನಲ್ಲಿ 13 ಬೌಂಡರಿಗಳು ಮತ್ತು ಮೂರು ಸಿಕ್ಸರ್ಗಳಿವೆ. ಆರಂಭಿಕ ಆಟಗಾರ ಆದರ್ಶ್ ಸಿಂಗ್ ಅವರೊಂದಿಗೆ ಐವತ್ತು ರನ್ಗಳ ಜೊತೆಯಾಟವಾಡಿದ ಮುಶೀರ್, ನಾಯಕ ಉದಯ್ ಶರಣ್ ಅವರೊಂದಿಗೆ 87 ರನ್ಗಳ ಪಾಲುದಾರಿಕೆ ನೀಡಿದರು. ಅಲ್ಲದೆ, ಉದಯ್ 34 ರನ್ ಗಳ ಕಾಣಿಕೆ ನೀಡಿದರು. ಅಂತಿಮವಾಗಿ ಭಾರತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 295 ರನ್ಗಳ ಸ್ಕೋರ್ ಕಲೆ ಹಾಕಿತು.
ಈ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್, ಅತ್ಯಂತ ಕಳಪೆ ಪ್ರದರ್ಶನ ನೀಡಿತು. ಆರಂಭದಿಂದಲೂ ಹಿನ್ನಡೆ ಅನುಭವಿಸಿದ ಕಿವೀಸ್ ಆಟಗಾರರು 28.1 ಓವರ್ಗಳಿಗೆ 81 ರನ್ ಗಳಿಸಿ ಸರ್ವಪತನವಾಯಿತು. ಇದಕ್ಕೆ ಉತ್ತರವಾಗಿ ಸೌಮ್ಯ ಪಾಂಡೆ 19 ರನ್ ನೀಡಿ 4 ವಿಕೆಟ್ ಕಬಳಿಸಿದರು. ರಾಜ್ ಲಿಂಬಾನಿ ಮತ್ತು ಮುಶೀರ್ ತಲಾ ಎರಡು ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಭಾರತ ಸತತ ಮೂರನೇ ಬಾರಿಗೆ 200ಕ್ಕೂ ಅಧಿಕ ರನ್ಗಳ ಜಯ ಸಾಧಿಸಿ ಸೆಮಿಫೈನಲ್ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವತ್ತ ಹೆಜ್ಜೆ ಹಾಕುತ್ತಿದೆ. ಭಾರತ ತನ್ನ ಕೊನೆಯ ಸೂಪರ್ ಸಿಕ್ಸ್ ಪಂದ್ಯವನ್ನು ಫೆಬ್ರವರಿ 2 ರಂದು ನೇಪಾಳ ವಿರುದ್ಧ ಆಡಲಿದೆ.