ಶುಭ್ಮನ್ ಗಿಲ್-ಜಾನಿ ಬೈರ್‌ಸ್ಟೋ ವಾಕ್ಸಮರ; ಸ್ಲೆಡ್ಜಿಂಗ್ನಲ್ಲೂ ಕಿಂಗ್ ಕೊಹ್ಲಿ ಸ್ಥಾನ ತುಂಬಿದ ಪ್ರಿನ್ಸ್ ಗಿಲ್, VIDEO
Shubman Gill : ಧರ್ಮಶಾಲಾದಲ್ಲಿ ನಡೆದ 5ನೇ ಟೆಸ್ಟ್ ಪಂದ್ಯದಲ್ಲಿ ಜಾನಿ ಬೈರ್‌ಸ್ಟೋ ಮತ್ತು ಶುಭ್ಮನ್ ಗಿಲ್ ನಡುವಿನ ವಾಕ್ಸಮರದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಧರ್ಮಶಾಲಾದಲ್ಲಿ ನಡೆದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೂರನೇ ದಿನದಾಟದಂದು ಭಾರತದ ಯುವ ಆಟಗಾರ ಶುಭ್ಮನ್ ಗಿಲ್ ಮತ್ತು ಇಂಗ್ಲೆಂಡ್ ತಂಡದ ಅನುಭವಿ ಜಾನಿ ಬೈರ್‌ಸ್ಟೋ ನಡುವೆ ವಾಕ್ಸಮರ ನಡೆದಿದೆ. ಇದೇ ವೇಳೆ ಸರ್ಫರಾಜ್ ಖಾನ್ ಗಿಲ್ಗೆ ಸಾಥ್ ನೀಡಿದ್ದಲ್ಲದೆ, ಬೈರ್ಸ್ಟೋಗೆ ಸ್ಲೆಡ್ಜ್ ಮಾಡಿದ್ದಾರೆ. ಘಟನೆಯಲ್ಲಿ ಏನೆಲ್ಲಾ ಮಾತಾಡಿದರು ಎಂಬುದು ಸ್ಟಂಪ್ ಮೈಕ್ನಲ್ಲಿ ರೆಕಾರ್ಡ್ ಆಗಿದೆ.
ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ 477 ರನ್ಗಳಿಗೆ ಆಲೌಟ್ ಆದ ಬಳಿಕ 2ನೇ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ಬ್ಯಾಟಿಂಗ್ ನಡೆಸಿತು. ಆದರೆ ತಂಡದ ಅಗ್ರ ಕ್ರಮಾಂಕದ ಮೂವರು ಬ್ಯಾಟರ್ಸ್ ಔಟಾದ ಬಳಿಕ ಕಣಕ್ಕಿಳಿದ ಜಾನಿ ಬೈರ್‌ಸ್ಟೋ ಅವರು ಜೋ ರೂಟ್ ಜೊತೆಗೂಡಿ ತಂಡಕ್ಕೆ ಚೇತರಿಕೆ ನೀಡಲು ಯತ್ನಿಸುತ್ತಿದ್ದರು. ಆದರೆ 18ನೇ ಓವರ್‌ನಲ್ಲಿ ಕುಲ್ದೀಪ್ ಯಾದವ್ ತನ್ನ ಮೊದಲ ಎಸೆತವನ್ನು ಬೌಲ್ ಮಾಡುವ ಮುನ್ನ ಸ್ಲಿಪ್ ಕಾರ್ಡನ್‌ನಲ್ಲಿದ್ದ ಗಿಲ್, ಜಾನಿ ಅವರನ್ನು ಕೆಣಕಿದ್ದಾರೆ.
ಆರಂಭದಲ್ಲಿ ಇಂಗ್ಲೆಂಡ್ ಬ್ಯಾಟರ್ ಜೊತೆಗೆ ಗಿಲ್ ತಮಾಷೆಯ ಮಾತುಗಳನ್ನಾಡಿದ್ದರು. ಆದರೆ ಆಂಡರ್ಸನ್ ವಿರುದ್ಧ ಔಟಾದ ಬಗ್ಗೆ ಶುಭ್ಮನ್ಗೆ ನೆನಪಿಸಿದ ಜಾನಿ, ಕೆಣಕಲು ಆರಂಭಿಸಿದರು. ಇದಕ್ಕೆ ಸರಿಯಾಗಿ ಉತ್ತರ ಕೊಟ್ಟ ಗಿಲ್, ಅದು ಸಂಭವಿಸಿದ್ದು ನನ್ನ ಶತಕದ ನಂತರ ಎಂದು ಪ್ರತಿಕ್ರಿಯೆ ನೀಡಿದ್ದಲ್ಲದೆ, ಜಾನಿ ಕಳಪೆ ಆಟವನ್ನು ಎಳೆದು ತಂದರು. ಉಭಯ ಆಟಗಾರರ ನಡುವಿನ ಮಾತಿಕ ಚಕಮಕಿ ಇಲ್ಲಿದೆ ನೋಡಿ.
ಜಾನಿ ಬೈರ್‌ಸ್ಟೋ: ಜಿಮ್ಮಿ ನಿವೃತ್ತಿಯಾಗುವ ಬಗ್ಗೆ ನೀವು ಹೇಳಿದ್ದೇನು?
ಶುಭ್ಮನ್ ಗಿಲ್: ನಾನು ಅವರಿಗೆ ನಿವೃತ್ತಿಯಾಗಲು ಹೇಳಿದೆ.
ಬೈರ್‌ಸ್ಟೋ: ನೀವು ಹೇಳಿದ ಮುಂದಿನ ಎಸೆತದಲ್ಲೇ ನಿಮ್ಮನ್ನು ಔಟ್ ಮಾಡಿದರು.
ಶುಭ್ಮನ್ ಗಿಲ್: ಅದು ನನ್ನ ಶತಕದ ನಂತರ ಸಂಭವಿಸಿತು. ಹಾಗಾದರೆ ನೀವೆಷ್ಟು ರನ್ ಗಳಿಸಿದ್ದೀರಿ?
ಬೈರ್‌ಸ್ಟೋ: ಚೆಂಡು ಸ್ವಿಂಗ್ ಆಗುವಾಗ ನೀವು ಎಷ್ಟು ಸ್ಕೋರ್ ಮಾಡಿದ್ದೀರಿ.
ಧ್ರುವ್ ಜುರೆಲ್: ಜಾನಿ ಭಾಯ್ ಶಾಂತವಾಗಿರಿ.
ಸರ್ಫರಾಜ್ ಖಾನ್: ಥೋಡೆ ಸೆ ರನ್ ಕ್ಯಾ ಬನಾ ದಿಯಾ, ಜ್ಯಾದಾ ಉಚಲ್ ರಹಾ ಹೈ (ಇಂದು ಕೆಲವು ರನ್ ಗಳಿಸಿ ಬೀಗುತ್ತಿದ್ದಾರೆ)
ಇದೇ ವೇಳೆ ಸರ್ಫರಾಜ್ ಖಾನ್ ಕೂಡ ಗಿಲ್ಗೆ ಸಾಥ್ ನೀಡಿ ಬೈರ್‌ಸ್ಟೋ ವೈಫಲ್ಯವನ್ನು ಉಲ್ಲೇಖಿಸಿದರು. ಆದರೆ ವಿಕೆಟ್ ಕೀಪರ್ ಧ್ರುವ್ ಜುರೆಲ್ ಬೈರ್‌ಸ್ಟೋ ಅವರನ್ನು ಶಾಂತಗೊಳಿಸಲು ಯತ್ನಿಸಿದರು. ಸ್ಲೆಡ್ಜಿಂಗ್ ಆದ ಕೆಲವೇ ಕ್ಷಣಗಳಲ್ಲಿ ಬೈರ್‌ಸ್ಟೋ ವಿಕೆಟ್ ಒಪ್ಪಿಸಿದರು. ತಮ್ಮ 100ನೇ ಟೆಸ್ಟ್ನ 2ನೇ ಇನ್ನಿಂಗ್ಸ್ನಲ್ಲಿ ಕುಲ್ದೀಪ್ ಯಾದವ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರು.
ಎದುರಿಸಿದ 31 ಎಸೆತಗಳಲ್ಲಿ ತಲಾ ಮೂರು ಬೌಂಡರಿ, ಸಿಕ್ಸರ್ ಸಿಡಿಸಿದ ಜಾನಿ, 39 ರನ್ಗಳ ಕಾಣಿಕೆ ನೀಡಿದರು. ಆದರೆ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಿಲ್ಲ. ಗಿಲ್-ಜಾನಿ ವಾಕ್ಸಮರದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸ್ಲೆಡ್ಜಿಂಗ್ನಲ್ಲೂ ಕಿಂಗ್ ಕೊಹ್ಲಿ ಸ್ಥಾನವನ್ನು ಪ್ರಿನ್ಸ್ ಗಿಲ್ ತುಂಬಿದ್ದಾರೆ ಎಂದು ಹೇಳುತ್ತಿದ್ದಾರೆ.
2ನೇ ದಿನದಾಟದ ಮುಕ್ತಾಯದ ನಂತರ ಆಂಡರ್ಸನ್ ಜೊತೆಗೆ ಮಾತಿನ ಚಕಮಕಿ ನಡೆಸಿದ್ದರ ಕುರಿತು ನಿರೂಪಕರು ಕೇಳಿದಾಗ ಗಿಲ್ ಅದನ್ನು ರಹಸ್ಯವಾಗಿಟ್ಟರು. ನಾವಿಬ್ಬರ ನಡುವಿನ ಚಾಟ್ ಅನ್ನು ರಹಸ್ಯವಾಗಿ ಇಟ್ಟುಕೊಳ್ಳುವುದು ಉತ್ತಮ ಎಂದು ನಾನು ಭಾವಿಸುತ್ತೇನೆ ಎಂದು ಪ್ರಸಾರಕರಿಗೆ ತಿಳಿಸಿದ್ದರು.
