ಕನ್ನಡ ಸುದ್ದಿ  /  ಚುನಾವಣೆಗಳು  /  ಸ್ಯಾಮ್ ಪಿತ್ರೋಡಾ ಯಾರು, ಪಿತ್ರಾರ್ಜಿತ ತೆರಿಗೆ ಹೇಳಿಕೆ ನೀಡಿ ಟೀಕೆಗೊಳಗಾದ ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್ ಅಧ್ಯಕ್ಷ, 5 ಅಂಶಗಳ ಕಿರುಪರಿಚಯ

ಸ್ಯಾಮ್ ಪಿತ್ರೋಡಾ ಯಾರು, ಪಿತ್ರಾರ್ಜಿತ ತೆರಿಗೆ ಹೇಳಿಕೆ ನೀಡಿ ಟೀಕೆಗೊಳಗಾದ ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್ ಅಧ್ಯಕ್ಷ, 5 ಅಂಶಗಳ ಕಿರುಪರಿಚಯ

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪಿತ್ರಾರ್ಜಿತ ತೆರಿಗೆ ಹೇಳಿಕೆ ನೀಡಿ ಟೀಕೆಗೊಳಗಾದ ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಯಾರು?. ನೆಹರು-ಗಾಂಧಿ ಕುಟುಂಬ ಜೊತೆಗೆ ಅವರ ಒಡನಾಟ ಮೂರು ತಲೆಮಾರುಗಳದ್ದು. 5 ಅಂಶಗಳ ಮೂಲಕ ಅವರ ಕಿರುಪರಿಚಯ ಹೀಗಿದೆ.

ಪಿತ್ರಾರ್ಜಿತ ತೆರಿಗೆ ವಿಚಾರ ಪ್ರಸ್ತಾಪಿಸಿ ತೀವ್ರ ಟೀಕೆಗೆ ಒಳಗಾಗಿರುವ ಸ್ಯಾಮ್ ಪಿತ್ರೋಡಾ ಮತ್ತು ರಾಹುಲ್ ಗಾಂಧಿ (ಕಡತ ಚಿತ್ರ)
ಪಿತ್ರಾರ್ಜಿತ ತೆರಿಗೆ ವಿಚಾರ ಪ್ರಸ್ತಾಪಿಸಿ ತೀವ್ರ ಟೀಕೆಗೆ ಒಳಗಾಗಿರುವ ಸ್ಯಾಮ್ ಪಿತ್ರೋಡಾ ಮತ್ತು ರಾಹುಲ್ ಗಾಂಧಿ (ಕಡತ ಚಿತ್ರ)

ನವದೆಹಲಿ: ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಸಮೀಪವಿರುವಾಗ ಪಿತ್ರಾರ್ಜಿತ ತೆರಿಗೆ (Inheritance Tax) ಕುರಿತಾದ ಹೇಳಿಕೆ ನೀಡಿ ತೀವ್ರ ಟೀಕೆಗೆ ಒಳಗಾಗಿದ್ದಾರೆ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ (Congress leader Sam Pitroda). ಅವರ ಪಿತ್ರಾರ್ಜಿತ ಹೇಳಿಕೆಯನ್ನು ಬಿಜೆಪಿ ಈಗ ತನ್ನ ಚುನಾವಣಾ ಪ್ರಚಾರದ ಅಸ್ತ್ರವನ್ನಾಗಿ ಮಾಡಿಕೊಂಡಿದೆ.

ಟ್ರೆಂಡಿಂಗ್​ ಸುದ್ದಿ

ಸ್ಯಾಮ್ ಪಿತ್ರೋಡಾ ಅವರು ಎಎನ್‌ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸಹಜವಾಗಿಯೆ ಅಮೆರಿಕದ ಪಿತ್ರಾರ್ಜಿತ ಆಸ್ತಿ ತೆರಿಗೆ ವಿಚಾರ ಪ್ರಸ್ತಾಪಿಸಿದ್ದಾರೆ. ಭವಿಷ್ಯದಲ್ಲಿ ಇದು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಇದರ ಬಗ್ಗೆ ಜನ ಚರ್ಚಿಸಬೇಕು ಎಂದು ಹೇಳಿದ್ದರು. ಅವರ ಈ ಹೇಳಿಕೆ ಪ್ರಸಾರವಾದ ಕೂಡಲೇ ರಾಜಕೀಯ ಸಂಚಲನ ಮೂಡಿತು. ತೀವ್ರ ಟೀಕೆಗಳು ವ್ಯಕ್ತವಾಗತೊಡಗಿದವು. ಕೂಡಲೇ ಸ್ಯಾಮ್ ಪಿತ್ರೋಡಾ ಅವರು ಸ್ಪಷ್ಟೀಕರಣ ನೀಡಿದರು. ಅದೇ ರೀತಿ ಕಾಂಗ್ರೆಸ್ ಪಕ್ಷವೂ ಪಿತ್ರೋಡಾ ಅವರ ಹೇಳಿಕೆ ವೈಯಕ್ತಿಕ ಎಂದು ಅಂತರ ಕಾಯ್ದುಕೊಂಡಿತಲ್ಲದೆ, ಪಿತ್ರಾರ್ಜಿತ ತೆರಿಗೆ ಜಾರಿಗೊಳಿಸುವ ಉದ್ದೇಶ ಇಲ್ಲ ಎಂದು ಸ್ಪಷ್ಪಪಡಿಸಿತು.

ಇದನ್ನೂ ಓದಿ| ಸ್ಯಾಮ್ ಪಿತ್ರೋಡಾ ಪ್ರಸ್ತಾಪಿಸಿದ ಪಿತ್ರಾರ್ಜಿತ ಕಾನೂನು ಎಂದರೇನು? ಭಾರತದಲ್ಲಿ ಏಕಿಷ್ಟು ವಿರೋಧ? ನೀವು ತಿಳಿಯಬೇಕಾದ 10 ಅಂಶಗಳಿವು

ಸ್ಯಾಮ್ ಪಿತ್ರೋಡಾ ಯಾರು?

(1.) ಸ್ಯಾಮ್‌ ಪಿತ್ರೋಡಾ ಅವರು ಕಾಂಗ್ರೆಸ್ ಪಕ್ಷದ ಸಾಗರೋತ್ತರ ವಿಭಾಗ ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್‌ನ ಅಧ್ಯಕ್ಷ. ಈ ವಿಭಾಗವು "ಕಾಳಜಿಯುಳ್ಳ, ಬದ್ಧತೆ, ವೈವಿಧ್ಯಮಯ, ಸಮರ್ಥ ಮತ್ತು ಧೈರ್ಯಶಾಲಿ ಸಾಗರೋತ್ತರ ಭಾರತೀಯರು ಮತ್ತು ಭಾರತದ ಸ್ನೇಹಿತರ" ಗುಂಪು ಎಂದು ಕಾಂಗ್ರೆಸ್ ಹೇಳಿಕೊಳ್ಳುತ್ತದೆ.

(2.) ಸ್ಯಾಮ್‌ ಪಿತ್ರೋಡಾ ಅವರ ವೈಯಕ್ತಿಕ ವೆಬ್‌ಸೈಟ್ ಅವರನ್ನು "ಅಂತಾರಾಷ್ಟ್ರೀಯವಾಗಿ ಗೌರವಾನ್ವಿತ ಟೆಲಿಕಾಂ ಉದ್ಯಮಿ, ಹೂಡಿಕೆದಾರ, ಅಭಿವೃದ್ಧಿ ಚಿಂತಕ ಮತ್ತು ನೀತಿ ನಿರೂಪಕ", ಐಟಿ ಕ್ಷೇತ್ರದಲ್ಲಿ 50 ವರ್ಷಗಳ ಅನುಭವ, ಪರಿಣತಿ ಹೊಂದಿದವರು ಎಂದು ಪರಿಚಯಿಸಿದೆ.

(3.) ಪಿತ್ರೋಡಾ ಅವರು ಕಾಂಗ್ರೆಸ್ ಆಳ್ವಿಕೆಯಲ್ಲಿ ಮೂವರು ಪ್ರಧಾನ ಮಂತ್ರಿಗಳೊಂದಿಗೆ ಕೆಲಸ ಮಾಡಿದ್ದಾರೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರೊಂದಿಗೆ ಕೆಲಸ ಮಾಡಿದ್ದಾರೆ. ರಾಜೀವ್ ಗಾಂಧಿ ಅವರೊಂದಿಗೆ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಗೆ ಕಾರಣಕರ್ತರು ಎಂದು ಹೇಳಿಕೊಳ್ಳುತ್ತಾರೆ. ಡಾ.ಮನಮೋಹನ್ ಸಿಂಗ್ (2005-2009) ಅವಧಿಯಲ್ಲಿ ರಾಷ್ಟ್ರೀಯ ಜ್ಞಾನ ಆಯೋಗದ ನೇತೃತ್ವ ವಹಿಸಿದ್ದರು.

(4.) ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಪಿತ್ರೋಡಾ ಅವರು ಆರು ತಂತ್ರಜ್ಞಾನ ಮಿಷನ್‌ಗಳನ್ನು (ದೂರಸಂಪರ್ಕ, ನೀರು, ಸಾಕ್ಷರತೆ, ರೋಗನಿರೋಧಕ, ಡೈರಿ ಉತ್ಪಾದನೆ ಮತ್ತು ಎಣ್ಣೆ ಬೀಜಗಳು) ಮುನ್ನಡೆಸಿದರು. ಅವರು ಈಗ ಮಾಜಿ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ, ರಾಜೀವ್ ಅವರ ಮಗ ಮತ್ತು ಇಂದಿರಾ ಅವರ ಮೊಮ್ಮಗ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದಾರೆ.

(5.) ಸ್ಯಾಮ್ ಪಿತ್ರೋಡಾ ಅವರಿಗೆ ಈಗ 81 ವರ್ಷ. ಅವರು ಇಂಡಿಯಾ ಫುಡ್ ಬ್ಯಾಂಕ್, ಗ್ಲೋಬಲ್ ನಾಲೆಡ್ಜ್ ಇನಿಶಿಯೇಟಿವ್ ಮತ್ತು ಇನ್‌ಸ್ಟಿಟ್ಯೂಟ್ ಆಫ್ ಟ್ರಾನ್ಸ್‌ಡಿಸಿಪ್ಲಿನರಿ ಹೆಲ್ತ್ ಸೇರಿದಂತೆ ಐದು ಎನ್‌ಜಿಒಗಳ ಸ್ಥಾಪಕ ಅಧ್ಯಕ್ಷರೂ ಆಗಿದ್ದಾರೆ. ತನ್ನ ಪತ್ನಿಯೊಂದಿಗೆ ಷಿಕಾಗೋ ನಿವಾಸಿಯಾಗಿರುವ ಅವರು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಹಲವಾರು ಕಂಪನಿಗಳ ಮಾಲೀಕತ್ವ ಹೊಂದಿದ್ದಾರೆ.

“ಹುವಾ ತೋ ಹುವಾ” ವಿವಾದ

ಹಿಂದಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿಯೂ, ರಾಹುಲ್ ಗಾಂಧಿಯವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ, ಸ್ಯಾಮ್‌ ಪಿತ್ರೋಡಾ ಅವರು 1984 ರ ಸಿಖ್ ವಿರೋಧಿ ದಂಗೆ ಕುರಿತು "ಹುವಾ ತೋ ಹುವಾ" ಎಂಬ ಹೇಳಿಕೆಯ ಮೂಲಕ ಭಾರೀ ಟೀಕೆಗೆ ಗುರಿಯಾಗಿದ್ದರು. ಸಿಖ್ ವಿರೋಧಿ ದಂಗೆ ಅಂದಿನ ಪ್ರಧಾನಿ ಇಂದಿರಾಗಾಂಧಿ ಹತ್ಯೆ ಬಳಿಕ ನಡೆದುದಾಗಿತ್ತು. ಹಲವು ವರ್ಷಗಳಿಂದ ಇದು ಚುನಾವಣೆ ಸಂದರ್ಭದಲ್ಲಿ ಪದೇಪದೆ ಮುನ್ನೆಲೆಗೆ ಬರುತ್ತಿದೆ.

“1984 ರ ವಿಚಾರ ಈಗೇಕೆ? ಕಳೆದ 5 ವರ್ಷ ನೀವು ಏನು ಮಾಡಿದ್ರಿ, ಅದರ ಕುರಿತು ಮಾತನಾಡಿ, 1984ರಲ್ಲಿ ಆಗಿ ಹೋಗಿದ್ದು ಆಗಿ ಹೋಯಿತು (1984 mein hua toh hua) ನೀವೇನು ಮಾಡಿದ್ರಿ?” ಎಂದು 2019ರ ಲೋಕಸಭಾ ಚುನಾವಣೆ ವೇಳೆ ಸ್ಯಾಮ್ ಪಿತ್ರೋಡಾ ಹೇಳಿದ್ದರು. ಈ ಹೇಳಿಕೆಯನ್ನೇ ಇಟ್ಟುಕೊಂಡು ಬಿಜೆಪಿ ನಾಯಕರು ಕಾಂಗ್ರೆಸ್ ಮೇಲೆ ಪದೇಪದೆ ವಾಗ್ದಾಳಿ ನಡೆಸಿದ್ದರು.