ಕನ್ನಡ ಸುದ್ದಿ  /  ಚುನಾವಣೆಗಳು  /  ಲೋಕಸಭಾ ಚುನಾವಣೆ; ಏಪ್ರಿಲ್ 26ರಂದು ಮತದಾನ ಮಾಡಿ ಬೆಂಗಳೂರು ಹೋಟೆಲ್‌ಗಳಲ್ಲಿ ಫ್ರೀಯಾಗಿ ಫ್ರೆಶ್ ಜ್ಯೂಸ್ ತಗೊಳ್ಳಿ

ಲೋಕಸಭಾ ಚುನಾವಣೆ; ಏಪ್ರಿಲ್ 26ರಂದು ಮತದಾನ ಮಾಡಿ ಬೆಂಗಳೂರು ಹೋಟೆಲ್‌ಗಳಲ್ಲಿ ಫ್ರೀಯಾಗಿ ಫ್ರೆಶ್ ಜ್ಯೂಸ್ ತಗೊಳ್ಳಿ

ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಏಪ್ರಿಲ್ 26ರಂದು ನಡೆಯಲಿದೆ. ಈ ದಿನ ಮತದಾನ ಮಾಡಿದವರಿಗೆ ಬೃಹತ್ ಬೆಂಗಳೂರು ಹೊಟೇಲ್ ಅಸೋಸಿಯೇಷನ್‌ ಅಧೀನದ ಹೋಟೆಲ್‌ಗಳಲ್ಲಿ ಫ್ರೀಯಾಗಿ ಫ್ರೆಶ್ ಜ್ಯೂಸ್, ಲಡ್ಡು ಸೇರಿ ವಿವಿಧ ಆಫರ್‌ ನೀಡಲು ತೀರ್ಮಾನಿಸಿವೆ. ವಿವರ ವರದಿ ಇಲ್ಲಿದೆ. (ವರದಿ- ಪ್ರಿಯಾಂಕಾ, ಬೆಂಗಳೂರು)

ಲೋಕಸಭಾ ಚುನಾವಣೆ; ಮತದಾನ ಮಾಡಿದವರಿಗೆ ಫ್ರೆಶ್ ಜ್ಯೂಸ್ ಮತ್ತು ಇತರೆ ಆಫರ್‌ ನೀಡಲಿದೆ ಬೃಹತ್ ಬೆಂಗಳೂರು ಹೊಟೇಲ್ ಅಸೋಸಿಯೇಷನ್‌. (ಸಾಂಕೇತಿಕ ಚಿತ್ರ)
ಲೋಕಸಭಾ ಚುನಾವಣೆ; ಮತದಾನ ಮಾಡಿದವರಿಗೆ ಫ್ರೆಶ್ ಜ್ಯೂಸ್ ಮತ್ತು ಇತರೆ ಆಫರ್‌ ನೀಡಲಿದೆ ಬೃಹತ್ ಬೆಂಗಳೂರು ಹೊಟೇಲ್ ಅಸೋಸಿಯೇಷನ್‌. (ಸಾಂಕೇತಿಕ ಚಿತ್ರ) (PTI/canva)

ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಸನ್ನಿಹಿತವಾಗಿದೆ. ರಾಜ್ಯದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಏಪ್ರಿಲ್ 26 ರಂದು ಮತದಾನ ನಡೆಯಲಿದೆ. ಪ್ರತಿಸಲವೂ ರಾಜ್ಯದ ವಿವಿಧೆಡೆಗಳಿಗಿಂತ ಬೆಂಗಳೂರಿನಲ್ಲಿ ಮತದಾನದ ಪ್ರಮಾಣ ಕಡಿಮೆ ದಾಖಲಾಗುವುದು ಕಂಡುಬಂದಿದೆ. ಈ ಬಾರಿ ವೀಕೆಂಡ್‌ನಲ್ಲೇ ಬೆಂಗಳೂರಿನಲ್ಲಿ ಮತದಾನ ಇರುವುದರಿಂದ ಈ ಕಳವಳ ಮತ್ತಷ್ಟು ಹೆಚ್ಚಿದೆ.

ಟ್ರೆಂಡಿಂಗ್​ ಸುದ್ದಿ

ಹೊರನಾಡಿನವರೇ ಬೆಂಗಳೂರಲ್ಲಿ ಅಧಿಕ ಇದ್ದು, ಮತದಾರರ ಪೈಕಿ ಇವರ ಪ್ರಮಾಣವೂ ಹೆಚ್ಚಿದೆ. ವಾರಾಂತ್ಯ ಇರುವ ಕಾರಣ ಚುನಾವಣೆಯಲ್ಲಿ ನಿರಾಸಕ್ತರಾದವರು ಔಟಿಂಗ್‌ ಹೋಗುವುದು ಇದುವರೆಗಿನ ಪರಿಪಾಠ. ಹೀಗಾಗಿ ಪ್ರತಿಬಾರಿಯೂ ಎಲ್ಲರೂ ಮತದಾನ ಮಾಡುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಈ ಸಲ ರೆಸ್ಟೋರೆಂಟ್‌ಗಳು ಕೂಡ ಮತದಾನ ಮಾಡಿದ ಜನರಿಗೆ ಜ್ಯೂಸ್, ತಿಂಡಿಗಳನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ.

ಮತದಾರರಿಗೆ ಜ್ಯೂಸ್, ಪಾನೀಯ, ಲಡ್ಡು ವಿತರಿಸಲು ತೀರ್ಮಾನ

ಬೆಂಗಳೂರು ಮಹಾನಗರದ ವ್ಯಾಪ್ತಿಯಲ್ಲಿ ಯಾರೆಲ್ಲಾ ಮತದಾನ ಮಾಡಿದ್ದಾರೋ ಅವರೆಲ್ಲರಿಗೂ ತಾಜಾ ಹಣ್ಣಿನ ರಸ, ಲಡ್ಡೂಗಳು ಮತ್ತು ಪಾನೀಯಗಳನ್ನು ನೀಡಲು ಬೃಹತ್ ಬೆಂಗಳೂರು ಹೊಟೇಲ್ ಅಸೋಸಿಯೇಷನ್‌ನ (ಬಿಬಿಎಚ್‌ಎ) ವ್ಯಾಪ್ತಿಗೆ ಬರುವ ಹೋಟೆಲ್‌ಗಳು ನಿರ್ಧರಿಸಿವೆ. ಮತದಾನ ಮಾಡಿದವರು ತೋರು ಬೆರಳಿಗೆ ಹಾಕಿರುವ ಶಾಯಿ ಗುರುತು ತೋರಿಸಿದರೆ ಸಾಕು ಈ ವಿಶೇಷ ಆಫರ್ ಅನ್ನು ಪಡೆಯಬಹುದು. ಮಹಾನಗರದಲ್ಲಿ ಮತದಾರರು ಮತಗಟ್ಟೆಗೆ ಬಂದು ಮತಚಲಾಯಿಸುವುದನ್ನು ಉತ್ತೇಜಿಸಲು ಈ ನಿರ್ಧಾರ ಮಾಡಲಾಗಿದೆ ಎಂದು ಬಿಬಿಎಚ್‌ಎ ತಿಳಿಸಿದೆ.

ಮುಂದಿನವಾರವೇ ನಗರದಾದ್ಯಂತ ಹಲವಾರು ಹೋಟೆಲ್‌ಗಳು ಮತದಾನದ ಮಹತ್ವದ ಕುರಿತು ಪೋಸ್ಟರ್‌ಗಳನ್ನು ಹಾಕಲಿವೆ. ಈ ಮೂಲಕ ಬೆಂಗಳೂರಿನ ಮತದಾರರಲ್ಲಿ ಜಾಗೃತಿ ಮೂಡಿಸಲಿದೆ ಎಂದು ಬಿಬಿಎಚ್‌ಎ ಅಧ್ಯಕ್ಷ ಪಿ.ಸಿ. ರಾವ್ ತಿಳಿಸಿದ್ದಾಗಿ ಡೆಕ್ಕನ್ ಹೆರಾಲ್ಡ್ ವರದಿ ಹೇಳಿದೆ.

ಕಳೆದ ಬಾರಿ ಬೆಂಗಳೂರು ನಗರದಲ್ಲಿ ಮತದಾನ ಪ್ರಮಾಣ ಶೇಕಡ 54

ಬೆಂಗಳೂರು ಕೋಟ್ಯಂತರ ವಿದ್ಯಾವಂತ ಯುವಕರನ್ನು ಹೊಂದಿದ್ದು, ದೇಶದ ಐಟಿ ಕೇಂದ್ರ ಎಂದೇ ಖ್ಯಾತಿ ಪಡೆದಿದೆ. ಆದರೆ, ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಗರದಲ್ಲಿ ಕೇವಲ ಶೇ. 54ರಷ್ಟು ಮತದಾನವಾಗಿತ್ತು. ಈ ಬಾರಿ ಲೋಕಸಭೆ ಚುನಾವಣೆ ನಡೆಯುತ್ತಿದ್ದು, ಜನರು ಮತಗಟ್ಟೆಗೆ ಬಂದು ಮತ ಚಲಾಯಿಸುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಪಿ.ಸಿ. ರಾವ್ ತಿಳಿಸಿದ್ದಾರೆ.

ಹಲವು ವರ್ಷಗಳಿಂದ ಮಹಾನಗರಿ ಬೆಂಗಳೂರು ಕಡಿಮೆ ಮತದಾನದ ಪ್ರಮಾಣ ದಾಖಲಾಗಿರುವ ಕುಖ್ಯಾತಿ ಹೊಂದಿದೆ. ಮತದಾನದ ಪ್ರಮಾಣವು ನಮ್ಮ ನಗರದ ಸಾಮಾಜಿಕ ಪ್ರಜ್ಞೆಯನ್ನು ಬಿಂಬಿಸುತ್ತದೆ. ಭಾರತದ ಪ್ರಮುಖ ಮೆಟ್ರೋಪಾಲಿಟನ್ ನಗರವಾಗಿರುವ ರಾಜಧಾನಿಯ ಜನರು ಹೆಚ್ಚು ಜಾಗೃತರಾಗಿದ್ದಾರೆ. ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ ಎಂಬ ಭರವಸೆಯಿದೆ ಎಂದು ಅವರು ಹೇಳಿದರು.

ಮತದಾರರಿಗೆ ಉಚಿತ ಕೊಡುಗೆಗಳು ಮತ್ತು ಕೊಡುಗೆಗಳನ್ನು ನೀಡುವ ನಿರ್ಧಾರವನ್ನು ಶೀಘ್ರದಲ್ಲೇ ರೆಸ್ಟೋರೆಂಟ್‌ಗಳು ಮಾಡಲಿವೆ ಎಂದು ಅವರು ಈ ವೇಳೆ ಸ್ಪಷ್ಟಪಡಿಸಿದರು. ಮೊದಲೇ ಬಿಸಿಲಿನ ತಾಪ ಹೆಚ್ಚಿರುವುದರಿಂದ ಮತದಾನಕ್ಕೆ ಬರುವ ಮತದಾರರಿಗೆ ಹೊಟ್ಟೆ ತಣ್ಣಗಾಗಿಸಲು ಹಣ್ಣಿನ ರಸವನ್ನು ನೀಡಲು ಹಲವಾರು ರೆಸ್ಟೋರೆಂಟ್‌ಗಳು ಒಪ್ಪಿಕೊಂಡಿವೆ ಎಂದು ಅವರು ತಿಳಿಸಿದರು.

ಅಂದಹಾಗೆ, ಈ ಹಿಂದಿನ ವರ್ಷಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉತ್ತಮ ಮತದಾನವಾಗಿದ್ದರೆ, ಬೆಂಗಳೂರಿನಲ್ಲಿ ಮಾತ್ರ ಕಡಿಮೆ ಮತದಾನದ ಪ್ರಮಾಣ ದಾಖಲಾಗಿದೆ. ಅದರಲ್ಲೂ ಗ್ರಾಮೀಣ ಭಾಗಗಳಲ್ಲಿ ಮತದಾರರು ಅತ್ಯಂತ ಉತ್ಸಾಹದಲ್ಲಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡುತ್ತಾರೆ. ಆದರೆ, ವಿದ್ಯಾವಂತ ಯುವಕರು ಮಾತ್ರ ಮತದಾನದಿಂದ ದೂರವಿರುವುದು ಕಳವಳ ಮೂಡಿಸಿದೆ. ಹೀಗಾಗಿ ಈಗಾಗಲೇ ಅನೇಕ ಜಾಗೃತಿ ಅಭಿಯಾನಗಳನ್ನು ನಡೆಸಲಾಗಿದೆ. ಇದಕ್ಕೆ ಹೋಟೆಲ್ ಮಾಲೀಕರು ಕೂಡ ಕೈಜೋಡಿಸಿದ್ದು, ಮತದಾನ ಮಾಡಿದವರಿಗೆ ಉಚಿತವಾಗಿ ಪಾನೀಯ, ಜ್ಯೂಸ್, ತಿಂಡಿಗಳನ್ನು ವಿತರಿಸಲು ನಿರ್ಧರಿಸಿದ್ದಾರೆ. ಈ ಬಾರಿಯಾದರೂ ನಗರದ ಜನತೆ ಎಚ್ಚೆತ್ತು ಹೆಚ್ಚಿನ ಪ್ರಮಾಣದಲ್ಲಿ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸುತ್ತಾರಾ ನೋಡಬೇಕಿದೆ.

(ವರದಿ- ಪ್ರಿಯಾಂಕಾ, ಬೆಂಗಳೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.