ಲೋಕಸಭಾ ಚುನಾವಣೆ; ಕರ್ನಾಟಕದಲ್ಲಿ ಇಂದು 1ನೇ ಹಂತದ ಮತದಾನ, ಇವಿಎಂ ವಿವಿಪ್ಯಾಟ್ ಬಳಸುವುದು ಹೀಗೆ, 5 ಹಂತಗಳ ವಿವರಣೆಯ ಚಿತ್ರನೋಟ
ಲೋಕಸಭೆ ಚುನಾವಣೆಯ ಭಾಗವಾಗಿ ಕರ್ನಾಟಕದಲ್ಲಿ ಇಂದು 1ನೇ ಹಂತದ ಮತದಾನ ಬೆಳಗ್ಗೆ 7 ಗಂಟೆಗೆ ಶುರುವಾಗಿದೆ. ಸಂಜೆ 6 ಗಂಟೆ ತನಕ ಮತದಾನ ಮಾಡಬಹುದು. ಮತಗಟ್ಟೆಗೆ ತೆರಳಿದ ಬಳಿಕ ಇವಿಎಂ ಬಳಸುವುದು ಹೇಗೆ ಎಂಬ ಚಿಂತೆ ಬೇಡ. ಇವಿಎಂ ವಿವಿಪ್ಯಾಟ್ ಬಳಸುವುದು ಹೀಗೆ, 5 ಹಂತಗಳ ವಿವರಣೆಯ ಚಿತ್ರನೋಟ ಇಲ್ಲಿದೆ ಗಮನಿಸಿ.
(1 / 5)
ಮತಗಟ್ಟೆಗೆ ಪ್ರವೇಶಿಸಿ ಬೂತ್ ಚೀಟಿ ಕೊಟ್ಟು, ಮತಗಟ್ಟೆ ಅಧಿಕಾರಿಗಳು ಪರಿಶೀಲಿಸಿದ ಬಳಿಕ ಕೈ ಬೆರಳಿಗೆ ಮತದಾನದ ಗುರುತು ಹಾಕಿಸಿಕೊಂಡು ಇವಿಎಂ ಬಳಿ ಹೋದಾಗ ಗಮನಿಸಬೇಕಾದ್ದು ಇಷ್ಟು- ಮೊದಲ ಹಂತದಲ್ಲಿ ಮತಗಟ್ಟೆಯ ಪ್ರಿಸೈಡಿಂಗ್ ಅಧಿಕಾರಿ ಬ್ಯಾಲೆಟ್ ಯೂನಿಟ್ ಅನ್ನು ಚಾಲನೆಗೊಳಿಸುತ್ತಾರೆ.
(2 / 5)
ನೀವು ಇವಿಎಂ ಬಳಿ ಹೋಗಿ ಅಲ್ಲಿ ನಮೂದಿಸಿರುವ ಕ್ರಮ ಸಂಖ್ಯೆ, ಅಭ್ಯರ್ಥಿಗಳ ಹೆಸರು, ಪಕ್ಷ/ಪಕ್ಷೇತರ/ಸ್ವತಂತ್ರ ಮುಂತಾದ ವಿವರಗಳನ್ನು ಗಮನಿಸಿದ ಬಳಿಕ ಆಯಾ ಅಭ್ಯರ್ಥಿಗಳ ಎದುರು ಇರುವ ಬಟನ್‌ಗಳನ್ನು ನೋಡಿ. ಅದಾಗಿ ನಿಮ್ಮ ಆಯ್ಕೆಯ ಅಭ್ಯರ್ಥಿಯ ಹೆಸರು ಮತ್ತು ಚಿಹ್ನೆಯ ಪಕ್ಕದಲ್ಲಿರುವ ನೀಲಿ ಗುಂಡಿಯನ್ನು ಒತ್ತಬೇಕು.
(3 / 5)
ನೀಲಿ ಗುಂಡಿ ಒಮ್ಮೆ ಒತ್ತಿದಾಗ ನೀವು ಆಯ್ಕೆ ಮಾಡಿಕೊಂಡ ಅಭ್ಯರ್ಥಿಯ ಹೆಸರಿನ/ ಚಿಹ್ನೆಯ ಪಕ್ಕದಲ್ಲಿರುವ ಕೆಂಪು ದೀಪ ಬೆಳಗುತ್ತದೆ. ನೀಲಿ ಗುಂಡಿ ಒತ್ತಿದಾಗ ಕೆಂಪು ದೀಪ ಬೆಳಗಿರುವುದನ್ನು ಖಚಿತಪಡಿಸಿಕೊಳ್ಳಿ.
(4 / 5)
ಇಷ್ಟಾದ ಕೂಡಲೇ ಇವಿಎಂ ಪಕ್ಕದಲ್ಲೇ ಇರುವ ವಿವಿಪ್ಯಾಟ್‌ನ ಸಣ್ಣ ಪರದೆಯ ಮೇಲೆ ನಿಮ್ಮ ಆಯ್ಕೆಯ ಅಭ್ಯರ್ಥಿಗೆ ಮತ ಚಲಾವಣೆ ಆಗಿರುವುದರ ಮುದ್ರಿತ ರೂಪವನ್ನು ಗಾಜಿನ ಮೂಲಕ ಗಮನಿಸಬಹುದು. ಇದರ ಮುದ್ರಿತ ಪ್ರತಿ ಮತದಾರನ ಕೈಗೆ ಸಿಗುವುದಿಲ್ಲ.
(5 / 5)
ಇದು ಕೊನೆಯ ಹಂತ - ಇಲ್ಲಿ ವಿವಿಪ್ಯಾಟ್ ಮೇಲೆ ಮುದ್ರಿತ ಪ್ರತಿಯನ್ನು ಗಮನಿಸಬೇಕು. ನಿಮ್ಮ ಆಯ್ಕೆಯ ಅಭ್ಯರ್ಥಿಯ ಕ್ರಮ ಸಂಖ್ಯೆ, ಹೆಸರು ಮತ್ತು ಚಿಹ್ನೆಯನ್ನು ಹೊಂದಿರುವ ಬ್ಯಾಲೆಟ್ ಚೀಟಿ ಪರದೆ ಮೇಲೆ 7 ಸೆಕೆಂಡ್ ತನಕ ಕಾಣಿಸುತ್ತದೆ. ನಂತರ ಆ ಮುದ್ರಿತ ಪ್ರತಿ ಆ ಯಂತ್ರದ ಡ್ರಾಪ್ ಬಾಕ್ಸ್ ಒಳಗೆ ಬೀಳುತ್ತದೆ. ಆಗ ಬೀಪ್ ಶಬ್ದ ಕೇಳಿಸುತ್ತದೆ. ಇದನ್ನು ಖಾತರಿ ಮಾಡಿಕೊಳ್ಳಿ.
ಇತರ ಗ್ಯಾಲರಿಗಳು