ಕರ್ನಾಟಕದಲ್ಲಿ ಆಡಳಿತ ವಿರೋಧಿ ಅಲೆಯಿದ್ದರೂ ಮತವಾಗಿ ಪರಿವರ್ತಿಸಲು ಬಿಜೆಪಿ ಎಡವಿದ್ದು ಎಲ್ಲಿ: ಪತ್ರಕರ್ತ ರಮೇಶ್‌ ದೊಡ್ಡಪುರ ವಿಶ್ಲೇಷಣೆ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದಲ್ಲಿ ಆಡಳಿತ ವಿರೋಧಿ ಅಲೆಯಿದ್ದರೂ ಮತವಾಗಿ ಪರಿವರ್ತಿಸಲು ಬಿಜೆಪಿ ಎಡವಿದ್ದು ಎಲ್ಲಿ: ಪತ್ರಕರ್ತ ರಮೇಶ್‌ ದೊಡ್ಡಪುರ ವಿಶ್ಲೇಷಣೆ

ಕರ್ನಾಟಕದಲ್ಲಿ ಆಡಳಿತ ವಿರೋಧಿ ಅಲೆಯಿದ್ದರೂ ಮತವಾಗಿ ಪರಿವರ್ತಿಸಲು ಬಿಜೆಪಿ ಎಡವಿದ್ದು ಎಲ್ಲಿ: ಪತ್ರಕರ್ತ ರಮೇಶ್‌ ದೊಡ್ಡಪುರ ವಿಶ್ಲೇಷಣೆ

Karnataka Election Results 2024 ಕರ್ನಾಟಕದಲ್ಲಿ ನಡೆದ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದದ್ದು ಹೇಗೆ, ಬಿಜೆಪಿ ಜೆಡಿಎಸ್‌ ಎಡವಿದ್ದು ಎಲ್ಲಿ ಎನ್ನುವ ವಿಶ್ಲೇಷಣೆಯನ್ನು ಪತ್ರಕರ್ತ ರಮೇಶ ದೊಡ್ಡಪುರ ಮಾಡಿದ್ದಾರೆ.

ಕರ್ನಾಟಕದಲ್ಲಿ ಮುಗಿದ ಉಪ ಚುನಾವಣೆಯ ಕುರಿತು ವಿಶ್ಲೇಷಣೆ ಹೀಗಿದೆ.
ಕರ್ನಾಟಕದಲ್ಲಿ ಮುಗಿದ ಉಪ ಚುನಾವಣೆಯ ಕುರಿತು ವಿಶ್ಲೇಷಣೆ ಹೀಗಿದೆ.

Karnataka Election Results 2024: ಕರ್ನಾಟಕದಲ್ಲಿ ನಡೆದ ಮೂರು ಕ್ಷೇತ್ರಗಳ (ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ) ಉಪಚುನಾವಣೆಗಳ ಕುರಿತು ಕಳೆದ ಕೆಲ ದಿನಗಳಿಂದ ಸ್ನೇಹಿತರುಗಳ ಮಾತನಾಡಿದ್ದರ ಒಟ್ಟಾರೆ ಅಭಿಪ್ರಾಯ ಹೇಗಿತ್ತು.

1. ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲುತ್ತಾರೆ, ಬಿಜೆಪಿ ಅಭ್ಯರ್ಥಿ ಸೋಲುತ್ತಾರೆ ಎನ್ನುವುದು ಹೆಚ್ಚು ಜನರಿಗೆ ಸ್ಪಷ್ವವಾಗಿತ್ತು.

2. ಚನ್ನಪಟ್ಟಣದಲ್ಲಿ ಯೋಗೇಶ್ವರ್‌ ಪ್ರಬಲ ಸ್ಪರ್ಧೆ ನೀಡುತ್ತಾರಾದರೂ ಅಂತಿಮವಾಗಿ ನಿಖಿಲ್‌ ಗೆಲ್ಲುತ್ತಾರೆ ಎಂದು ಭಾವಿಸಲಾಗಿತ್ತು.

3. ಶಿಗ್ಗಾಂವಿಯಲ್ಲಿ ಮಾಜಿ ಸಿಎಂಗಳ ಕುಟುಂಬದ ಕುಡಿ ಭರತ್‌ ಬೊಮ್ಮಾಯಿ ಗೆಲುವು ಬಹುತೇಕ ಖಚಿತ ಎನ್ನಲಾಗಿತ್ತು.

ಈ ನಿರ್ಧಾರಕ್ಕೆ ಬರಲು ಕಾರಣವಾಗಿದ್ದ ಪ್ರಮುಖ ಅಂಶಗಳು.

1. ಸಂಡೂರಿನಲ್ಲಿ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಜನಪ್ರಿಯರಾಗಿರಲಿಲ್ಲ, ಬಿಜೆಪಿಯಲ್ಲಿ ಒಗ್ಗಟ್ಟು ಇರಲಿಲ್ಲ. ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣ ಅವರು ಹಾಲಿ ಸಂಸದರ ಪತ್ನಿ, ಅವರದ್ದೇ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿರುವುದು.

2. ಚನ್ನಪಟ್ಟಣದಲ್ಲಿ ಯೋಗೇಶ್ವರ್‌ ಅವರು ಪದೇಪದೇ ಪಕ್ಷ ಬದಲಿಸಿದ್ದು ಜನರ ಮೇಲೆ ಪ್ರಭಾವ ಬೀರಬಹುದು ಎಂದು ಭಾವಿಸಿದ್ದು, ಜಮೀರ್‌ ಅಹ್ಮದ್‌ ಖಾನ್‌ ಹೇಳಿಕೆ ಡ್ಯಾಮೇಜ್‌ ಮಾಡಬಹುದು ಎಂದುಕೊಂಡಿದ್ದು, ಸ್ಥಳೀಯ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಒಡಕು ಮೂಡಬಹುದು ಎಂದುಕೊಂಡಿದ್ದು. ಹಾಗೆಯೇ ನಿಖಿಲ್‌ ಕುಮಾರಸ್ವಾಮಿ ಈಗಾಗಲೆ ಎರಡು ಬಾರಿ ಸೋತಿರುವ ಅನುಕಂಪ, 4 ದಶಕಗಳ ದೇವೇಗೌಡರ ರಾಜಕೀಯ ಹೆವಿ ವೇಯ್ಟ್‌, ಕೇಂದ್ರ ಸಚಿವ ಕುಮಾರಸ್ವಾಮಿಯವರ ಪ್ರಭಾವ, ಜೆಡಿಎಸ್‌ ಕಾರ್ಯಕರ್ತರಲ್ಲಿನ ಉತ್ಸಾಹ ಹಾಗೂ ಬಿಜೆಪಿ ಮತಗಳೂ ಜೆಡಿಎಸ್‌ ಕಡೆಗೆ ವಾಲಬಹುದು ಎಂಬ ನಿರೀಕ್ಷೆಯ ಕಾರಣಕ್ಕೆ ನಿಖಿಲ್‌ ಗೆಲುವಿನ ಸಾಧ್ಯತೆಯನ್ನು ಹೆಚ್ಚಿನವರು ಊಹಿಸಿದ್ದರು.

3. ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿ ಅವರು ದೆಹಲಿ ಮಟ್ಟದಲ್ಲೇ ಗುದ್ದಾಡಿ ಮಗನಿಗೆ ಟಿಕೆಟ್‌ ಪಡೆದಿದ್ದು, ಕ್ಷೇತ್ರದಲ್ಲಿ ಅವರು ಹೊಂದಿರುವ ಹಿಡಿತ, ರಾಜಕೀಯ ಚಾಣಾಕ್ಷತೆ, ಎದುರಾಳಿ ಪಕ್ಷದ ಅಭ್ಯರ್ಥಿಯನ್ನೂ (ವೀಕ್‌) ನಿರ್ಧರಿಸಬಲ್ಲಷ್ಟು ಪಕ್ಷಾತೀತ ನೆಟ್‌ವರ್ಕಿಂಗ್‌ ಹೊಂದಿದ್ದಾರೆ ಎಂಬ ಮಾತುಗಳ ಮೇಲೆ ಹೆಚ್ಚಿನವರು ನಂಬಿಕೆ ಇಟ್ಟಿದ್ದರು. ಕಾಂಗ್ರೆಸ್‌ ಅಭ್ಯರ್ಥಿ ಬದಲಾವಣೆ ಮಾಡಿದ್ದು ಸ್ಥಳೀಯ ಮುಸ್ಲಿಂ ಸಮುದಾಯದ ಮತಗಳು ಒಡೆಯುತ್ತವೆ ಎಂದು ಭಾವಿಸಲಾಗಿತ್ತು. ಹಾಗಾಗಿ ಶಿಗ್ಗಾಂವಿಯಲ್ಲಿ ಭರತ್‌ ಬೊಮ್ಮಾಯಿ ಅವರೇ ಗೆಲ್ಲುವುದು ಎಂದು ತಿಳಿಯಲಾಗಿತ್ತು.

ಎಡವಿದ್ದೆಲ್ಲಿ?

ಸಂಡೂರಿನಲ್ಲಿ ನಿರೀಕ್ಷೆಯಂತೆಯೇ ಫಲಿತಾಂಶ ಬಂದಿದೆ, ಇದರಲ್ಲಿ ಹೆಚ್ಚಿನ ಅಚ್ಚರಿಯಿಲ್ಲ. ಚನ್ನಪಟ್ಟಣ ಹಾಗೂ ಶಿಗ್ಗಾಂವಿಯಲ್ಲಿ ಹೆಚ್ಚಿನ ಜನರು ಕುಟುಂಬದ ಹಿನ್ನೆಲೆಗೇ ಹೆಚ್ಚು ವೇಯ್ಟೇಜ್‌ ನೀಡಿದರು. ಆದರೆ ಕರ್ನಾಟಕದ ಮಟ್ಟಿಗೆ ಉಪಚುನಾವಣೆಯಲ್ಲಿ ಆಡಳಿತಾರೂಢ ಪಕ್ಷಕ್ಕೆ ಜನರು ಒಲವು ತೋರುತ್ತಾರೆ. ಈ ವಿಧಾನಸಭೆಯ ಅವಧಿ ಇನ್ನೂ ಮೂರು ವರ್ಷ ಇರುವುದರಿಂದ, ಅನುದಾನ ಪಡೆಯಲು ಹಾಗೂ ತಮ್ಮ ಕೆಲಸಗಳನ್ನು ಸರಾಗವಾಗಿ ಮಾಡಿಕೊಳ್ಳಲು ಆಡಳಿತಾರೂಢ ಪಕ್ಷದೊಂದಿಗೇ ಇರುವುದು ಸೂಕ್ತ ಎಂದು ಮತದಾರರು ಭಾವಿಸುವುದು ಸಹಜ ಎಂಬ ವಿಚಾರಕ್ಕೆ ಹೆಚ್ಚು ವೇಯ್ಟೇಜ್‌ ನೀಡಬೇಕಿತ್ತು. ಕುಟುಂಬ ರಾಜಕಾರಣ ಸೋತಿದೆ ಎಂದು ಬಿಜೆಪಿಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಕುಟುಂಬದ ಹಿನ್ನೆಲೆಯನ್ನೇ ಜನರು ನಿರಾಕರಿಸಿದ್ದಾರೆ ಎಂದು ಹೇಳಲಾಗದು. ಏಕೆಂದರೆ ಸಂಡೂರಿನಲ್ಲಿ ಗೆದ್ದಿರುವವರೂ ಕುಟುಂಬದವರೆ. ಈಗಾಗಲೆ ಹೇಳಿದಂತೆ, ಆಡಳಿತಾರೂಢ ಪಕ್ಷದ ಕಡೆಗೆ ಜನರ ಒಲವು ಪ್ರಮುಖ ಕಾರಣ.

ಆಡಳಿತಾರೂಢ ಪಕ್ಷದ ವಿರುದ್ಧ ಪ್ರಬಲ ನರೇಟಿವ್‌ ನಿರ್ಮಿಸಿದರೆ ಮಾತ್ರ ಉಪಚುನಾವಣೆಯಲ್ಲಿ ಪ್ರತಿಪಕ್ಷಗಳು ಗೆಲ್ಲಲು ಸಾಧ್ಯ. ವಕ್ಫ್‌, ಮುಡಾ ಸೇರಿದಂತೆ ಅನೇಕ ವಿಚಾರಗಳು ಸರ್ಕಾರದ ಕುರಿತು ನಕಾರಾತ್ಮಕ ಭಾವನೆ ಮೂಡಿಸಿದವಾದರೂ, ಆಡಳಿತಾರೂಢ ಪಕ್ಷದ ಪರವಾದ ಅಲೆಯನ್ನು ಸೋಲಿಸುವಷ್ಟು ಪ್ರಭಾವ ಇರಲಿಲ್ಲ.

-ರಮೇಶ್‌ ದೊಡ್ಡಪುರ, ಹಿರಿಯ ಪತ್ರಕರ್ತ

Whats_app_banner