ನೈಜ ಘಟನೆ ಆಧರಿಸಿದ ದಿ ಸಾಬರಮತಿ ರಿಪೋರ್ಟ್ ಶುಕ್ರವಾರ ರಿಲೀಸ್; 27 ಫೆಬ್ರವರಿ 2002 ರಂದು ಜರುಗಿದ ಆ ದುರಂತ ಏನು?
ಧೀರಜ್ ಸರ್ನಾ ನಿರ್ದೇಶನದ ನೈಜ ಘಟನೆ ಆಧಾರಿತ ದಿ ಸಾಬರಮತಿ ರಿಪೋರ್ಟ್ ಸಿನಿಮಾ ನವೆಂಬರ್ 15 ಶುಕ್ರವಾರ ರಂದು ತೆರೆ ಕಾಣುತ್ತಿದೆ. 27 ಫೆಬ್ರವರಿ 2002 ರಂದು ಗೋಧ್ರಾ ಜಂಕ್ಷನ್ ಬಳಿ ನಡೆದ ರೈಲು ದುರಂತವನ್ನು ಚಿತ್ರದಲ್ಲಿ ತೋರಿಸಲಾಗಿದೆ. ಚಿತ್ರದಲ್ಲಿ ವಿಕ್ರಾಂತ್ ಮೆಸ್ಸಿ ಪತ್ರಕರ್ತನ ಪಾತ್ರದಲ್ಲಿ ನಟಿಸಿದ್ದಾರೆ.
ನೈಜ ಘಟನೆ ಆಧಾರಿತ ಬಹಳಷ್ಟು ಸಿನಿಮಾಗಳು ತಯಾರಾಗಿವೆ. ಆ ಸಿನಿಮಾಗೆ ಉತ್ತಮ ಪ್ರಶಂಸೆ ಕೂಡಾ ವ್ಯಕ್ತವಾಗಿದೆ. ಇದೀಗ 2002ರಲ್ಲಿ ನಡೆದ ಕರಾಳ ಘಟನೆ ಆಧರಿಸಿದ ಮತ್ತೊಂದು ಸಿನಿಮಾ ತಯಾರಾಗಿದ್ದು, ಚಿತ್ರ ಶುಕ್ರವಾರ ತೆರೆ ಕಾಣುತ್ತಿದೆ. 2002 ಫೆಬ್ರವರಿ 27 ರಂದು ನಡೆದ ಗೋಧ್ರಾ ಹತ್ಯಾಕಾಂಡದ ದುರಂತ ಆಧರಿಸಿ ತಯಾರಾದ ಚಿತ್ರವೇ ದಿ ಸಾಬರಮತಿ ರಿಪೋರ್ಟ್.
ಧೀರಜ್ ಸರ್ನಾ ನಿರ್ದೇಶನದ ಸಿನಿಮಾ
ದಿ ಸಾಬರಮತಿ ರಿಪೋರ್ಟ್ ಚಿತ್ರವನ್ನು ಬಾಲಾಜಿ ಮೋಷನ್ ಪಿಕ್ಚರ್ಸ್, ವಿಕಿರ್ ಫಿಲ್ಮ್ಸ್ ಪ್ರೊಡಕ್ಷನ್, ವಿಪಿನ್ ಅಗ್ನಿಹೋತ್ರಿ ಫಿಲ್ಮ್ಸ್ ಬ್ಯಾನರ್ ಅಡಿ ನಿರ್ಮಾಣವಾಗಿದ್ದು ಧೀರಜ್ ಸರ್ನಾ ನಿರ್ದೇಶನ ಮಾಡಿದ್ದಾರೆ. ಕಾರ್ತಿಕ್ ಖುಷ್, ರಾಮಶ್ರಿತ್ ಜೋಷಿ, ಐಕರ್ತ್ ಪುರೋಹಿತ್ ಹಾಡುಗಳಿಗೆ ಸಂಗೀತ ನೀಡಿದ್ದರೆ ಕೇತನ್ ಸೋಧಾ ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ವಿಕ್ರಾಂತ್ ಮೆಸ್ಸಿ, ರಾಶಿ ಖನ್ನಾ, ರಿದ್ದಿ ಡೋಗ್ರಾ, ಬರ್ಖಾ ಸಿಂಗ್ ಹಾಗೂ ಇನ್ನಿತರರು ನಟಿಸಿದ್ದಾರೆ. ಆರಂಭದಲ್ಲಿ ಕೆಲವೊಂದು ದೃಶ್ಯಗಳನ್ನು ರಂಜನ್ ಚಂದೇಲ್ ನಿರ್ದೇಶನ ಮಾಡಿದ್ದರು. ನಂತರ ಕಾರಣಾಂತರಗಳಿಂದ ಅವರು ಸಿನಿಮಾದಿಂದ ಹೊರ ನಡೆದ ಕಾರಣ ಧೀರಜ್ ಸರ್ನಾ ಸಿನಿಮಾ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡರು.
ಏನಿದು ಗೋಧ್ರಾ ಹತ್ಯಾಕಾಂಡ?
2002 ಫೆಬ್ರವರಿ 27 ರಂದು ಅಯೋಧ್ಯೆಯಿಂದ ವಾರಣಾಸಿಗೆ ಹೋಗುತ್ತಿದ್ದ ಸಬರಮತಿ ಎಕ್ಸ್‌ಪ್ರೆಸ್ ರೈಲಿನ ಮೇಲೆ ದಾಳಿ ನಡೆಸಲಾಯ್ತು. ಯಾತ್ರಾರ್ಥಿಗಳು ಸ್ವಯಂಸೇವಕರು ಸೇರಿದಂತೆ ರೈಲಿನಲ್ಲಿ ಸುಮಾರು 1,700 ಪ್ರಯಾಣಿಕರಿದ್ದರು. ರೈಲು , ಗೋಧ್ರಾ ಜಂಕ್ಷನ್ ರೈಲು ನಿಲ್ದಾಣವನ್ನು ದಾಟಿದ ನಂತರ ಸುಮಾರು 2,000 ಜನರ ಗುಂಪೊಂದು ರೈಲಿನಲ್ಲಿದ್ದವರ ಮೇಲೆ ದಾಳಿ ನಡೆಸಿತು. ಕಲ್ಲು ತೂರಾಟದಿಂದ ಆರಂಭವಾದ ಈ ಹಿಂಸೆ ಆ ರೈಲಿನ ಬೋಗಿಗಳಿಗೆ ಬೆಂಕಿ ಹಚ್ಚುವವರೆಗೂ ಮುಂದುವರೆಯಿತು. 4 ಬೋಗಿಗಳಿಗೆ ವ್ಯಾಪಿಸಿದ ಬೆಂಕಿಗೆ ಸಿಲುಕಿ 59 ಮಂದಿ ಸಜೀವ ದಹನವಾಗಿದ್ದರು. ಈ ಘಟನೆ ನಂತರ ನಾಗರಿಕ ನ್ಯಾಯಮಂಡಳಿಯು ಇದು ಬೆಂಕಿ ಆಕಸ್ಮಿಕ ಎಂದರೆ, ನಾನಾವತಿ-ಮೆಹ್ತಾ ಆಯೋಗವು 2008 ರ ವರದಿಯಲ್ಲಿ ಇದೊಂದು ಯೋಜಿತ ಪಿತೂರಿ ಎಂದಿತ್ತು.
ನಟ ವಿಕ್ರಾಂತ್ ಮೆಸ್ಸಿಗೆ ಕೊಲೆ ಬೆದರಿಕೆ
ದಿ ಸಾಬರಮತಿ ರಿಪೋರ್ಟ್ ಸಿನಿಮಾದಲ್ಲಿ ನಟ ವಿಕ್ರಾಂತ್ ಮೆಸ್ಸಿ, ಇದು ಪೂರ್ವಯೋಜಿತ ದಾಳಿ ಎಂದು ವರದಿ ಮಾಡುವ ಪತ್ರಕರ್ತನಾಗಿ ನಟಿಸಿದ್ದಾರೆ. ಕೆಲವು ದಿನಗಳ ಹಿಂದೆ ವಿಕ್ರಾಂತ್ ಗೋಧ್ರಾ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ್ದರು. ಈ ಚಿತ್ರದಲ್ಲಿ ನಟಿಸಿದ್ದಕ್ಕಾಗಿ ಅವರಿಗೆ ಕೊಲೆ ಬೆದರಿಕೆ ಕರೆಗಳು ಬಂದಿದ್ದಾಗಿ ಮೆಸ್ಸಿ ಹೇಳಿದ್ದಾರೆ. ನನಗೆ ಮಾತ್ರವಲ್ಲ ನನ್ನ 9 ತಿಂಗಳ ಮಗುವಿನ ಮೇಲೂ ದಾಳಿ ಮಾಡುವಂತೆ ಬೆದರಿಕೆ ಒಡ್ಡಿದ್ದರು ಎಂದು ವಿಕ್ರಾಂತ್ ಮೆಸ್ಸಿ ಬೇಸರ ವ್ಯಕ್ತಪಡಿಸಿದ್ದರು.