Director Prem Song: ಅಮ್ಮನ ಕುರಿತ ಮತ್ತೊಂದು ಸುಮಧುರ ಹಾಡಿಗೆ ದನಿಯಾದ ಪ್ರೇಮ್... ಲಿರಿಕಲ್ ವಿಡಿಯೋ ಬಿಡುಗಡೆ
ಕೆ. ಕಲ್ಯಾಣ್ ಅಮ್ಮನ ಬಗ್ಗೆ ಒಳ್ಳೆಯ ಹಾಡು ಬರೆದಿದ್ದಾರೆ. ಅಷ್ಟೇ ಅದ್ಭುತವಾಗಿ ಜೋಗಿ ಪ್ರೇಮ್ ಕೂಡಾ ಹಾಡಿದ್ದಾರೆ. ಚಿತ್ರದ ಹಾಡುಗಳಿಗೆ ಕ್ರಿಸ್ಟೋಫರ್ ಜೇಸನ್ ಸಂಗೀತ ನೀಡಿದ್ದಾರೆ. ಝೇಂಕಾರ್ ಮ್ಯೂಸಿಕ್ ಮೂಲಕ ಈ ಹಾಡು ಬಿಡುಗಡೆಯಾಗಿದೆ. ಮರ್ಡರ್ ಮಿಸ್ಟರಿ ಜೊತೆಗೆ ಆಕ್ಷನ್, ಸೆಂಟಿಮೆಂಟ್ ಎಲ್ಲಾ ಅಂಶಗಳಿರುವ 'ಪರಿಮಳ ಡಿಸೋಜಾ' ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ.
'ಎಕ್ಸ್‌ಕ್ಯೂಜ್‌ಮಿ' ಸಿನಿಮಾ ಬಿಡುಗಡೆ ಆದಾಗಿನಿಂದ ತಾಯಿಯ ಕುರಿತಾದ ಹಾಡು ಎಂದರೆ ನಿರ್ದೇಶಕ ಪ್ರೇಮ್ ನೆನಪಾಗುತ್ತಾರೆ. ಈ ಚಿತ್ರದಲ್ಲಿ ಅವರು ಹಾಡಿರುವ ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ... ಹಾಡು ಕೇಳುತ್ತಿದ್ದರೆ ತಾಯಿ ಮೇಲಿನ ಪ್ರೀತಿ ದುಪ್ಪಟ್ಟಾಗುತ್ತದೆ. ನಂತರ 'ಜೋಗಿ' ಚಿತ್ರದಲ್ಲಿ ಬೇಡುವೆನು ವರವನ್ನು..ಹಾಡು ಹಾಡಿ ಮತ್ತೆ ಪ್ರೇಮ್, ಕೇಳುಗರ ಕಣ್ಣಂಚು ಒದ್ದೆ ಮಾಡಿದ್ದರು.
ಇದೀಗ ನಿರ್ದೇಶಕ ಪ್ರೇಮ್ ಮತ್ತೊಮ್ಮೆ ಅಮ್ಮನ ಹಾಡಿಗೆ ದನಿಯಾಗಿದ್ದಾರೆ. ಪ್ರಪಂಚದಲ್ಲಿ ಅಮ್ಮನ ಪ್ರೀತಿಗಿಂತ ಮಿಗಿಲಾದ ಪ್ರೀತಿ ಮತ್ತೊಂದಿಲ್ಲ. ಅಂತಹ ಅಮ್ಮ ಜೊತೆಗಿದ್ದರೆ ಸಕಲ ಸಂತೋಷ, ಧೈರ್ಯ ಎಲ್ಲವೂ ನಮ್ಮೊಂದಿಗೆ ಇದ್ದಂತೆ. ಅದ್ಭುತ ವ್ಯಕ್ತಿತ್ವದ ತಾಯಿಯ ಬಗ್ಗೆ "ಅಮ್ಮ ಎಂಬ ಹೆಸರೇ ಆತ್ಮ ಬಲ.... ಎಂಬ ಹಾಡನ್ನು ಪ್ರೇಮಕವಿ ಕೆ. ಕಲ್ಯಾಣ್ ಬರೆದಿದ್ದಾರೆ. 'ಪರಿಮಳ ಡಿಸೋಜಾ' ಸಿನಿಮಾಗಾಗಿ ಈ ಹಾಡನ್ನು ಪ್ರೇಮ್ ಹಾಡಿದ್ದಾರೆ. ಇತ್ತೀಚಿಗೆ ಈ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಸಮಾರಂಭ ನಡೆಯಿತು. ಕೆ. ಕಲ್ಯಾಣ್, ನಟಿ ಭವ್ಯ, ಝೇಂಕಾರ್ ಮ್ಯೂಸಿಕ್ ಸಂಸ್ಥೆಯ ಭರತ್ ಹಾಗೂ ಇನ್ನಿತರರು ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಡಾ. ಗಿರಿಧರ್, ''ನಮ್ಮ ಚಿತ್ರಕ್ಕಾಗಿ ಕೆ. ಕಲ್ಯಾಣ್ ಅಮ್ಮನ ಬಗ್ಗೆ ಒಳ್ಳೆಯ ಹಾಡು ಬರೆದಿದ್ದಾರೆ. ಅಷ್ಟೇ ಅದ್ಭುತವಾಗಿ ಜೋಗಿ ಪ್ರೇಮ್ ಕೂಡಾ ಹಾಡಿದ್ದಾರೆ. ಚಿತ್ರದ ಹಾಡುಗಳಿಗೆ ಕ್ರಿಸ್ಟೋಫರ್ ಜೇಸನ್ ಸಂಗೀತ ನೀಡಿದ್ದಾರೆ. ಝೇಂಕಾರ್ ಮ್ಯೂಸಿಕ್ ಮೂಲಕ ಈ ಹಾಡು ಬಿಡುಗಡೆಯಾಗಿದೆ. ಮರ್ಡರ್ ಮಿಸ್ಟರಿ ಜೊತೆಗೆ ಆಕ್ಷನ್, ಸೆಂಟಿಮೆಂಟ್ ಎಲ್ಲಾ ಅಂಶಗಳಿರುವ 'ಪರಿಮಳ ಡಿಸೋಜಾ' ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ'' ಎಂದು ಮನವಿ ಮಾಡಿದರು.
ಪ್ರೇಮಕವಿ ಕಲ್ಯಾಣ್ ಮಾತನಾಡಿ, ''ತಾಯಿ ಬಗ್ಗೆ ಹಾಡು ಬರೆಯಬೇಕೆಂದರೆ ಏನೋ ಒಂದು ರೀತಿಯ ಖುಷಿ. ಅಮ್ಮನ ಹಾಡನ್ನು ನಿರ್ದೇಶಕ ಪ್ರೇಮ್ ಕೂಡಾ ಅಷ್ಟೇ ಅದ್ಭುತವಾಗಿ ಹಾಡಿದ್ದಾರೆ'' ಎಂದರು. ಹಿರಿಯ ನಟಿ ಭವ್ಯ ಮಾತನಾಡಿ ''ನಿರ್ದೇಶಕರು ಹೇಳಿದ ಕಥೆ ಬಹಳ ಇಷ್ಟವಾಯ್ತು. ನಾನು ಈ ಚಿತ್ರದಲ್ಲಿ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ಹಾಡು ತುಂಬಾ ಚೆನ್ನಾಗಿದೆ'' ಎಂದರು. ''ಪರಿಮಳ ಡಿಸೋಜಾ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಇಂದು ಅಮ್ಮನ ಹಾಡು ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ಹಾಡು ಬರೆದ ಕಲ್ಯಾಣ್ ಅವರಿಗೆ, ಸುಮಧುರವಾಗಿ ಹಾಡಿರುವ ಪ್ರೇಮ್ ಹಾಗೂ ಇಡೀ ಚಿತ್ರತಂಡಕ್ಕೆ ಧನ್ಯವಾದ'' ತಿಳಿಸಿದ ನಿರ್ಮಾಪಕ ವಿನೋದ್ ಶೇಷಾದ್ರಿ, ತಾವು ಕೂಡಾ ಈ ಚಿತ್ರದಲ್ಲಿ ನಟಿಸಿರುವುದಾಗಿ ಹೇಳಿದರು.
ಸಂಗೀತ ನಿರ್ದೇಶಕ ಕ್ರಿಸ್ಟೋಫರ್ ಜೋಸನ್, ಛಾಯಾಗ್ರಾಹಕ ರಾಮು ಹಾಗೂ ಚಿತ್ರದಲ್ಲಿ ನಟಿಸಿರುವ ಕೋಮಲ್ ಬನವಾಸಿ ಸೇರಿದಂತೆ ಅನೇಕ ಕಲಾವಿದರು 'ಪರಿಮಳ ಡಿಸೋಜಾ' ಚಿತ್ರದ ಬಗ್ಗೆ ಮಾತನಾಡಿದರು. ತಾಯಿ ಬಗ್ಗೆಗಿನ ಹಾಡು ಬಿಡುಗಡೆ ಸಮಾರಂಭ ಆಗಿರುವುದರಿಂದ ವಿಶೇಷವಾಗಿ ಮೂರು ಜನ ತಾಯಂದಿರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
'ಕೆಡಿ' ಚಿತ್ರದಲ್ಲಿ ಪ್ರೇಮ್ ಬ್ಯುಸಿ
'ಕೆಡಿ' ಸಿನಿಮಾ ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗುತ್ತಿದೆ. ಈ ಚಿತ್ರದಲ್ಲಿ ಪ್ರೇಮ್ ಹಾಗೂ ಧ್ರುವ ಸರ್ಜಾ ಮೊದಲ ಬಾರಿಗೆ ಜೊತೆಯಾಗಿದ್ದಾರೆ. 1970ರಲ್ಲಿ ನಡೆದ ನೈಜ ಘಟನೆಗಳಿಂದ ಸ್ಫೂರ್ತಿ ಪಡೆದ ಕಥೆ ಈ ಚಿತ್ರದಲ್ಲಿದೆಯಂತೆ. ಬಾಲಿವುಡ್ ನಟ ಸಂಜಯ್ ದತ್ ಕೂಡಾ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ್ಕಕಾಗಿ ಬೆಂಗಳೂರಿನ ಸುಂಕದಕಟ್ಟೆಯಲ್ಲಿರುವ 20 ಎಕರೆ ಸ್ಥಳದಲ್ಲಿ ಅದ್ಧೂರಿ ಸೆಟ್ ಹಾಕಲಾಗಿದೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಕೂಡಾ ಈ ಚಿತ್ರದಲ್ಲಿ ಅಣ್ಣಯಪ್ಪ ಎಂಬ ಪಾತ್ರದಲ್ಲಿ ನಟಿಸಿದ್ದು ಈಗಾಗಲೇ ರವಿಚಂದ್ರನ್ ಅವರ ಫಸ್ಟ್‌ಲುಕ್ ಕೂಡಾ ಬಿಡುಗಡೆ ಆಗಿದೆ. ಚಿತ್ರದಲ್ಲಿ ಧ್ರುವ ಸರ್ಜಾ ಕಾಳಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯಾ ಸಂಗೀತ ನೀಡುತ್ತಿದ್ದಾರೆ.