Seetha Rama Serial: ಮಾವಯ್ಯನ ಬಾಯಿಂದ ಬಂತು ಆ ಮಾತು; ಹಾಲು ಕುಡಿದಷ್ಟೇ ಖುಷಿಯಲ್ಲಿದ್ದಾಳೆ ಭಾರ್ಗವಿ
ಸೀತಾ ಮನೆಗೆ ತೆರಳಿದ ಸೂರ್ಯಪ್ರಕಾಶ್ ದೇಸಾಯಿಗೆ ಸೀತಾಗೆ ಓರ್ವ ಮಗಳಿದ್ದಾಳೆ ಎಂಬ ಸತ್ಯ ತಿಳಿದಿದೆ. ಹೆಚ್ಚು ಹೊತ್ತು ನಿಲ್ಲದ ಸೂರಿ, ಕೊಂಚ ಕೋಪದಲ್ಲಿಯೇ ಮನೆಗೆ ದೌಡಾಯಿಸಿ, ಮನೆ ಮಂದಿಯನ್ನೂ ತರಾಟೆಗೆ ತೆಗೆದುಕೊಂಡಿದ್ದಾನೆ.
Seetha Rama Serial: ಹೇಗಾದ್ರೂ ಮಾಡಿ ಸೀತಾ ಮತ್ತು ರಾಮನ ಮದುವೆಯನ್ನು ಮುರಿಯುವ ಪ್ಲಾನ್‌ನಲ್ಲಿದ್ದಾಳೆ ಭಾರ್ಗವಿ. ಅದಕ್ಕಾಗಿ ಒಂದಿಲ್ಲೊಂದು ಪ್ರಯತ್ನ ಮಾಡುತ್ತಲೇ ಇದ್ದಾಳೆ. ಆದರೆ, ಅದ್ಯಾವುದೂ ಫಲಿಸುತ್ತಿಲ್ಲ. ಇದೀಗ ಮೊಮ್ಮಗನ ಮದುವೆಯ ತರಾತುರಿಯಲ್ಲಿರುವ ತಾತ ಸೂರ್ಯ ಪ್ರಕಾಶ್ ದೇಸಾಯಿ ಹೇಗಾದ್ರೂ ಮಾಡಿ, ಆದಷ್ಟು ಬೇಗ ಸೀತಾ ರಾಮನ ಮದುವೆ ಮಾಡುವ ಪ್ಲಾನ್‌ನಲ್ಲಿದ್ದಾನೆ. ಆದರೆ, ಈ ನಡುವೆ ಅಚ್ಚರಿಯ ವಿಚಾರ ತಿಳಿದು ಕೊಂಚ ಶಾಕ್‌ಗೆ ಒಳಗಾಗಿದ್ದಾನೆ ಸೂರಿ.
ಮನೆಯಲ್ಲಿ ಆಸ್ತಿ ವಿಚಾರ ಚರ್ಚೆಯಾದ ಬಳಿಕ ನೇರವಾಗಿ ಸೀತಾ ಮನೆಗೆ ಹೋಗಿದ್ದಾನೆ ಸೂರಿ. ಶಾಂತಮ್ಮನ ವಠಾರಕ್ಕೆ ತೆರಳುತ್ತಿದ್ದಂತೆ, ತಾತನನ್ನು ನೋಡಿದ ತಕ್ಷಣ ಸಿಹಿ ಓಡೋಡಿ ಬಂದು ತಬ್ಬಿಕೊಂಡಿದ್ದಾಳೆ. ನಿಮ್ಮ ಮನೆನೋ ಇಲ್ಲೇ ಇರೋದಾ ಎಂದೆಲ್ಲ ಕೇಳಿದ್ದಾನೆ. ಜತೆಗೆ ನಾನಿಲ್ಲಿ ಸೀತಾ ಅವರ ಮನೆಗೆ ಬಂದಿದ್ದೇನೆ, ಅವರನ್ನು ಭೇಟಿ ಆಗಬೇಕಿತ್ತು ಎಂದಿದ್ದಾನೆ. ನಮ್ಮ ಸೀತಮ್ಮನ ಮನೆಗಾ.. ಬನ್ನಿ ಬನ್ನಿ ನಾನೇ ಕರೆದುಕೊಂಡು ಹೋಗ್ತಿನಿ ಅಂತ ಕರೆದುಕೊಂಡು ಬಂದಿದ್ದಾಳೆ.
ಸೀತಾ ಮನೆಗೆ ಬಂದ ಸೂರಿ
ಇದೇ ನೋಡಿ ನಮ್ಮ ಮನೆ ಎಂದಿದ್ದಾಳೆ. ಅಷ್ಟರಲ್ಲಿ, ನಿಮ್ಮ ಮನೆ ಅಲ್ಲಮ್ಮ, ಸೀತಾ ಮನೆ ಎಂದಿದ್ದಾನೆ ಸೂರಿ. ಇದೇ ಸೀತಮ್ಮನ ಮನೆ ಎನ್ನುತ್ತಿದ್ದಂತೆ, ಅತ್ತ ಕಡೆಯಿಂದ ಆಫೀಸ್‌ನಿಂದ ಸೀತಾ ಆಗಮನವಾಗಿದೆ. ಸೂರ್ಯಪ್ರಕಾಶ್ ಅವರನ್ನು ನೋಡಿದ ಕೂಡಲೇ ಕೊಂಚ ಭಯದಲ್ಲಿಯೇ ಅವರನ್ನು ಮನೆವೊಳಗೆ ಕರೆದು ಕೂರಿಸಿದ್ದಾಳೆ. ಸಿಹಿ ನೀರು ತಂದುಕೊಟ್ಟಿದ್ದಾಳೆ. ಇದೇ ವೇಳೆ ಗೋಡೆ ಮೇಲಿನ ಪೋಟೋ ನೋಡಿ ಹೊರ ನಡೆದಿದ್ದಾನೆ. ನಿನ್ನ ಜತೆ ಮಾತನಾಡಬೇಕು ಸಮಯ ಮಾಡಿಕೊಂಡು ಭೇಟಿಯಾಗು ಎಂದು ಅಲ್ಲಿಂದ ಹೊರಟಿದ್ದಾನೆ.
ಮನೆಯವರ ಮೇಲೂ ಗರಂ ಆದ ತಾತ
ಇತ್ತ ಮನೆಗೆ ಬಂದು ಮನೆಯವರ ಜತೆಗೆ ಕೊಂಚ ಖಾರವಾಗಿಯೇ ಮಾತನಾಡಿದ್ದಾರೆ ಸೂರಿ. ಮನೆಯಲ್ಲಿ ಇಷ್ಟು ಜನ ಇರೋವಾಗ, ಸೀತಾಳಿಗೆ ಮಗಳಿರೋ ವಿಚಾರವನ್ನು ಒಬ್ಬರೂ ಹೇಳಿಲ್ಲ ಎಂದು ಗರಂ ಆಗಿದ್ದಾನೆ. ಅಲ್ಲೇ ಇದ್ದ ರಾಮ ತಾತನ ಮಾತಿಗೆ ಸಮಜಾಯಿಷಿ ನೀಡಲು ಬಂದರೆ, ಆತನಿಗೂ ಕ್ಲಾಸ್ ತೆಗೆದುಕೊಂಡಿದ್ದಾನೆ. ನೀನಾದ್ರೂ ಹೇಳಬಾರದಿತ್ತಾ ಭಾರ್ಗವಿ ಎನ್ನುತ್ತಿದ್ದಂತೆ, ನಿಮಗೆ ಹುಷಾರಿರಲಿಲ್ಲ. ಆ ಕಾರಣಕ್ಕೆ ಸದ್ಯಕ್ಕೆ ಹೇಳುವುದು ಬೇಡ ಎಂದು ಸುಮ್ಮನಾದೆವು ಮಾವ ಎಂದಿದ್ದಾಳೆ.
ಗೆದ್ದ ಖುಷಿಯಲ್ಲಿ ಭಾರ್ಗವಿ
ಆದಷ್ಟು ಬೇಗ ಸೀತಾಳ ಜತೆ ನಾನು ಮಾತನಾಡಬೇಕು. ನಾನೊಬ್ಬನೇ ಮಾತನಾಡ್ತಿನಿ ಎಂದಿದ್ದಾನೆ ಸೂರಿ. ಇತ್ತ ಭಾರ್ಗವಿ ಒಳಗೊಳಗೆ ಗೆದ್ದ ಖುಷಿಯಲ್ಲಿದ್ದಾಳೆ. ಎಲ್ಲಿ ತನ್ನ ಕೈಯಿಂದ ಆಸ್ತಿ ತಪ್ಪಿ ಹೋಗುತ್ತೋ ಎಂಬ ಭಯದಿಂದ ಕೆಟ್ಟ ಆಲೋಚನೆಯಲ್ಲಿಯೇ ಮುಳಿಗಿದ್ದ ಭಾರ್ಗವಿಗೆ, ರಾಮನ ಮದುವೆ ತಪ್ಪಿಸೋಕೆ ಸಿಹಿಯನ್ನೇ ದಾಳವಾಗಿಸಿಕೊಂಡಿದ್ದಾಳೆ. ಅಷ್ಟಕ್ಕೂ ಭಾರ್ಗವಿ ತಂತ್ರ ಫಲಿಸುತ್ತಾ? ಸೀತಾ ರಾಮನ ಮದುವೆಗೆ ತಾತ ಒಪ್ಪಿಗೆ ಸೂಚಿಸಬಹುದೇ? ಕಾದು ನೋಡಬೇಕು.
ವಿಭಾಗ