Ravindar Chandrasekaran: ಈ ಬದುಕೇ ಸಾಕು.. ಕಟು ಟೀಕೆ, ಟ್ರೋಲ್‌ನಿಂದ ಹಿಂಸೆ; ಸಾಮಾಜಿಕ ಜೀವನಕ್ಕೆ ರವೀಂದರ್ ಚಂದ್ರಶೇಖರನ್ ಗುಡ್ ಬೈ!
ವಂಚನೆ ಪ್ರಕರಣದಲ್ಲಿ ಬಂಧನವಾಗಿ ಅದಾದ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾದ ತಮಿಳಿನ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ತುಂಬ ಬದಲಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಿರುತ್ತಿದ್ದ ಈ ಫ್ಯಾಟ್ ಮ್ಯಾನ್, ಅದೇ ಬದುಕಿನಿಂದ ಹಿಂದೆ ಸರಿದಿದ್ದಾರೆ.
Ravindar Chandrasekaran: ಕಾಲಿವುಡ್ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಕಳೆದ ವರ್ಷದಿಂದ ಸುದ್ದಿಯಲ್ಲಿದ್ದಾರೆ. 2022ರ ಸೆಪ್ಟೆಂಬರ್ 1ರಂದು ನಟಿ ಮಹಾಲಕ್ಷ್ಮೀ ಶಂಕರ್ ಅವರನ್ನು ಮದುವೆ ಆಗುವ ಮೂಲಕ ಸಾಕಷ್ಟು ಚರ್ಚೆಯಲ್ಲಿದ್ದ ರವೀಂದರ್, ಈ ವರ್ಷ ವಿವಾದಗಳ ಮೂಲಕ ವರ್ಷವನ್ನು ಮುಗಿಸಲು ಹೊರಟಿದ್ದಾರೆ. ವಂಚನೆ ಪ್ರಕರಣದಲ್ಲಿ ಜೈಲು ಸೇರಿ, ಜಾಮೀನಿನ ಮೇಲೆ ಹೊರ ಬಂದ ಬಳಿಕ ರವೀಂದರ್ ಚಂದ್ರಶೇಖರನ್ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ.
ಕಿರುತೆರೆ ನಟಿ ಮಹಾಲಕ್ಷ್ಮೀ ಶಂಕರ್ ಅವರ ಅವರೊಂದಿಗೆ ತಿರುಪತಿಯಲ್ಲಿ ಎರಡನೇ ಮದುವೆಯಾದ ರವೀಂದರ್ ಚಂದ್ರಶೇಖರನ್, ಒಂದೀಡಿ ವರ್ಷ ಟ್ರೋಲ್‌ಗೆ ಆಹಾರವಾಗಿದ್ದೇ ಹೆಚ್ಚು. ಈ ಜೋಡಿಯನ್ನು ಕೆಟ್ಟದಾಗಿ ನಿಂದಿಸಿದವರೇ ಹೆಚ್ಚು. ನಟಿ ಮಹಾಲಕ್ಷ್ಮೀಗೂ ಟ್ರೋಲ್ ಕಾಟ ಅಂಟಿಕೊಂಡಿತ್ತು. ಹಣಕ್ಕಾಗಿ ನೀವು ಮದುವೆ ಆಗಿದ್ದೀರಿ, ನಿಮ್ಮ ದಾಂಪತ್ಯ ಎಷ್ಟು ದಿನ ಸುಗಮವಾಗಿರುತ್ತೆ ನಾವೂ ನೋಡ್ತಿವಿ ಎಂದು ಟೀಕಿಸಿದವರೇ ಹೆಚ್ಚು.
ಹೀಗಿರುವಾಗಲೇ ಇಂತ ಟೀಕೆಯ ಮಾತುಗಳಿಗೆ ಯಾವತ್ತೂ ಕಿವಿಗೊಡದ ಈ ಜೋಡಿ, ಸದಾ ಪಾಸಿಟಿವ್ ಆಗಿಯೇ ಕಾಣಿಸಿಕೊಳ್ಳುತ್ತಿತ್ತು. ಸೋಷಿಯಲ್ ಮೀಡಿಯಾದಲ್ಲಿ ಪತ್ನಿಯ ಬಗ್ಗೆ ಫುಂಕಾನು ಫುಂಕವಾಗಿ ಪತ್ರಗಳನ್ನು ಪೋಸ್ಟ್ ಮಾಡುತ್ತಿದ್ದರು ರವೀಂದರ್ ಚಂದ್ರಶೇಖರ್. ಎಲ್ಲವೂ ಚೆನ್ನಾಗಿಯೇ ಹೋಗುತ್ತಿದ್ದ ಸಂದರ್ಭದಲ್ಲಿ ವಂಚನೆ ಪ್ರಕರಣ ಮುನ್ನೆಲೆಗೆ ಬಂದು ಒಂದು ತಿಂಗಳ ಕಾಲ ಜೈಲು ಸೇರಿದರು ರವೀಂದರ್ ಚಂದ್ರಶೇಖರ್. ಆ ಬಂಧನದ ಬಳಿಕ ರವೀಂದರ್ ಬದುಕೇ ಬದಲಾಗಿದೆ.
ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಯೋಜನೆಗೆ ಹಣ ಹೂಡಿದರೆ ದುಪ್ಪಟ್ಟು ಲಾಭ ಸಿಗುತ್ತದೆ ಎಂದು ಚೆನ್ನೈನ ಬಾಲಾಜಿ ಗಾಬಾ ತಮ್ಮ ಮಾಧವ ಮೀಡಿಯಾ ಪ್ರೈ. ಲಿಮಿಟೆಡ್‌ನ ಬಾಲಾಜಿ ಎಂಬುವವರಿಗೆ ರವೀಂದರ್ ನಂಬಿಸಿದ್ದರು. ಅವರಿಂದ 16 ಕೋಟಿ ಹಣವನ್ನು ಹೂಡಿಕೆ ಸಹ ಮಾಡಿಸಿದ್ದರು. ಈ ಯೋಜನೆಯಲ್ಲಿ ಹೂಡಿಕೆ ಮಾಡುವಂತೆ ಹೇಳಿ ನಕಲಿ ದಾಖಲೆಗಳನ್ನು ಬಳಸಿ ವಂಚನೆಯಲ್ಲಿ ತೊಡಗಿದ್ದರು ಎಂದು ಉದ್ಯಮಿ ಬಾಲಾಜಿ ರವೀಂದರ್ ವಿರುದ್ಧ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ರವೀಂದರ್ ಅವರನ್ನು ಚೆನ್ನೈ ಪೊಲೀಸರು ಸೆ. 7ರಂದು ಬಂಧಿಸಿದ್ದರು. ಬಳಿಕ ತಿಂಗಳ ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದರು.
ಈ ಬೆಳವಣಿಗೆ ನಡೆದ ಬಳಿಕ ರವೀಂದರ್ ಚಂದ್ರಶೇಖರ್ ಮೊದಲಿನಂತಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಿದ್ದ ಅವರು, ಕಳೆದ ಮೂರು ತಿಂಗಳಿಂದ ಒಂದೇ ಒಂದು ಪೋಸ್ಟ್ ಹಂಚಿಕೊಂಡಿಲ್ಲ. ಸದಾ ಪತ್ನಿಯನ್ನು ಹೊಗಳುತ್ತ, ಸರಣಿ ಪೋಸ್ಟ್‌ಗಳನ್ನು ಶೇರ್ ಮಾಡುತ್ತಿದ್ದ ರವೀಂದರ್, ಮೌನಕ್ಕೆ ಜಾರಿದ್ದಾರೆ. ಸಾರ್ವಜನಿಕ ಬದುಕು ಸಾಕೇ ಸಾಕು ಎಂಬಂತೆ ವರ್ತಿಸುತ್ತಿದ್ದಾರೆ.
ಇದೇ ವರ್ಷದ ಸೆಪ್ಟೆಂಬರ್ 1ರಂದು ಪತ್ನಿ ಮಹಾಲಕ್ಷ್ಮೀ ಶಂಕರ್ ಜತೆಗಿನ ಫೋಟೋ ಶೇರ್ ಮಾಡಿದ್ದ ರವೀಂದರ್, ಮೊದಲ ವಿವಾಹ ವಾರ್ಷಿಕೋತ್ಸವಕ್ಕೆ ಸುದೀರ್ಘ ಪತ್ರ ಬರೆದಿದ್ದರು. ನೆಟ್ಟಿಗರಿಂದಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಲವರು ಹರಸಿದರೆ, ಇನ್ನು ಕೆಲವರು ಟೀಕೆ ಮುಂದುವರಿಸಿದ್ದರು. ಅದಾದ ಮಾರನೇ ದಿನವೇ ರವೀಂದರ್ ಅವರ ಬಂಧನವಾಗಿತ್ತು. ಅಲ್ಲಿಂದ ಈ ವರೆಗೂ ಒಂದೇ ಒಂದು ಪೋಸ್ಟ್ ಶೇರ್ ಮಾಡಿಲ್ಲ ರವೀಂದರ್.
ಟ್ರೋಲ್, ಟೀಕೆಗಳೇ ಹೆಚ್ಚಾದ ಹಿನ್ನೆಲೆಯಲ್ಲಿ ರವೀಂದರ್ ಸೋಷಿಯಲ್ ಮೀಡಿಯಾಕ್ಕೆ ಗುಡ್ ಬೈ ಹೇಳಿದ್ದಾರೆ. ಸಾವರ್ಜನಿಕ ಬದುಕಿನಿಂದಲೂ ದೂರ ಉಳಿದಿದ್ದಾರೆ. ಆಹಾರ, ಆರೋಗ್ಯದ ಕಡೆಗೆ ಅವರು ಹೆಚ್ಚು ಗಮನ ಹರಿಸುತ್ತಿದ್ದಾರೆ ಎಂದು ಇತ್ತೀಚೆಗಷ್ಟೇ ಪತ್ನಿ ಮಹಾಲಕ್ಷ್ಮೀ ಸಂದರ್ಶನದಲ್ಲಿ ಹೇಳಿದ್ದರು.