‘ಮಲಗಿದ್ರೂ ಬಿಡ್ತಿಲ್ಲ, ದಡೂತಿ ಪತಿಯ ಈ ಒಂದು ಅಭ್ಯಾಸದಿಂದ ಚಿಂತಿತಳಾಗಿದ್ದೇನೆ!’ ಮಹಾಲಕ್ಷ್ಮೀ ರವೀಂದರ್ ಕಣ್ಣೀರು
ಕಾಲಿವುಡ್‌ನ ಫ್ಯಾಟ್ ಮ್ಯಾನ್ ರವೀಂದರ್ ಚಂದ್ರಶೇಖರನ್ ಆಗಾಗ ಒಂದಿಲ್ಲೊಂದು ವಿಚಾರಕ್ಕೆ ಮುನ್ನೆಲೆಗೆ ಬರುತ್ತಿರುತ್ತಾರೆ. ಇದೀಗ ಪತಿಯ ಈ ಕಾಟದಿಂದ ಬೇಸತ್ತಿದ್ದೇನೆ ಎಂದು ಪತ್ನಿ ಮಹಾಲಕ್ಷ್ಮೀ ಸಂದರ್ಶನದಲ್ಲಿ ಹೇಳಿಕೊಂಡು ಅಳಲು ತೋಡಿಕೊಂಡಿದ್ದಾರೆ.
Ravindar Chandrasekaran: 2022ರಲ್ಲಿ ಕಾಲಿವುಡ್ ನಿರ್ಮಾಪಕ ರವಿಂದರ್ ಚಂದ್ರಶೇಖರನ್ ಮತ್ತು ಕಿರುತೆರೆ ನಟಿ ಮಹಾಲಕ್ಷ್ಮೀ ಶಂಕರ್ ಜೋಡಿಯ ವಿವಾಹ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ದಡೂತಿ ದೇಹದ ರವೀಂದರ್ ಜತೆ ಚೆಂದದ ಚೆಲುವೆ ಮಹಾಲಕ್ಷ್ಮೀ ಎರಡನೇ ಮದುವೆ ಆಗಿದ್ದರು. ಮೆಚ್ಚುಗೆಗಿಂತ ಈ ಜೋಡಿ ಟ್ರೋಲ್‌ಗೆ ಆಹಾರವಾಗಿದ್ದೇ ಹೆಚ್ಚು. ಹಣಕ್ಕಾಗಿ ಮದುವೆಯಾಗಿದ್ದಾಳೆ ಎಂಬಿತ್ಯಾದಿ ಕಟು ಮಾತುಗಳನ್ನೂ ಮಹಾಲಕ್ಷ್ಮೀ ಎದುರಿಸಿದ್ದಿದೆ. ಅಲ್ಲಿಂದ ಇಂದಿನವರೆಗೂ ಈ ಜೋಡಿ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿದೆ.
ಹೀಗೆ ಎಲ್ಲವೂ ಚೆನ್ನಾಗಿಯೇ ಸಾಗುತ್ತಿದೆ ಎಂದಾಗ, ಇದೇ ರವೀಂದರ್ ವಿರುದ್ಧ ಫ್ರಾಡ್ ಕೇಸ್ ಬುಕ್ ಆಗಿತ್ತು. ಘನತ್ಯಾಜ್ಯವನ್ನು ಇಂಧನವನ್ನಾಗಿ ಪರಿವರ್ತಿಸುವ ಪ್ರಾಜೆಕ್ಟ್‌ನಲ್ಲಿ ಹಣ ತೊಡಗಿಸಿದರೆ, ಅದರಿಂದ ಸಾಕಷ್ಟು ಲಾಭ ಗಳಿಸಬಹುದೆಂದು ಬಾಲಾಜಿ ಗಾಬಾ ಎಂಬುವವರಿಂದ 16 ಕೋಟಿ ಹಣವನ್ನು ಹೂಡಿಕೆ ಮಾಡಿಸಿದ್ದರು. ಆದರೆ, ಯೋಜನೆ ಮಾತ್ರ ಆರಂಭವಾಗಿರಲಿಲ್ಲ. ಬಳಿಕ ಇದೇ ವಿಚಾರಕ್ಕೆ ಇಬ್ಬರ ನಡುವಿನ ಕಿತ್ತಾಟ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಹಣ ನುಂಗಿದ್ದಾನೆ ಎಂದು ವಂಚನೆ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಜೈಲು ಪಾಲಾಗಿಯೂ ಮರಳಿದ್ದರು ರವೀಂದರ್.
ಜೈಲಿಂದ ಮರಳಿ ಮನೆಗೆ ಬಂದಿರುವ ರವೀಂದರ್, ಪತ್ನಿ ಜತೆಗೆ ವಾಸಿಸುತ್ತಿದ್ದಾರೆ. ಜೈಲಿನಲ್ಲಿ ಅನುಭವಿಸಿದ ಯಾತನೆಯನ್ನು ಯೂಟ್ಯೂಬ್‌ಗಳ ಸಂದರ್ಶನದಲ್ಲಿ ರವೀಂದರ್ ಹೇಳಿಕೊಂಡು ಕಣ್ಣೀರಾಗಿದ್ದರು. ಜೈಲಿನಲ್ಲಿ ಬಾಥ್‌ರೂಮ್‌ಗೆ ಹೋಗುವುದಕ್ಕೂ ಅವರ ದೇಹ ಸ್ಪಂದಿಸುತ್ತಿರಲಿಲ್ಲ. ದಡೂತಿ ದೇಹದಿಂದ ಹೇಳಲಾಗದಷ್ಟು ಸಮಸ್ಯೆ ಅನುಭವಿಸಿದ್ದೇನೆ ಎಂದಿದ್ದರು. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡೇ, ಮನೆಗೆ ಬಂದ ಪತಿಗೆ ಕಟ್ಟುನಿಟ್ಟಾದ ಆಹಾರ ಪದ್ಧತಿ ಪಾಲಿಸುವಂತೆ ತಾಕೀತು ಮಾಡಿದ್ದರು. ಆದರೆ, ಪತಿಯ ಈ ಒಂದು ಅಭ್ಯಾಸ, ಮಹಾಲಕ್ಷ್ಮೀಯನ್ನೇ ಇಕ್ಕಟ್ಟಿಗೆ ಸಿಲುಕಿಸುತ್ತಿದೆ.
ಪತಿಯ ದೇಹ ತೂಕ ಇಳಿಸಲು ಪರದಾಟ
ರವೀಂದರ್ ಮೊದಲಿಂದಲೂ ದಡೂತಿ. ಆ ದಡೂತಿ ದೇಹದ ತೂಕ ಕಡಿಮೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ತನ್ನ ಸೀರಿಯಲ್ ಕೆಲಸದ ನಡುವೆಯೇ ಪತಿಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ ಮಹಾಲಕ್ಷ್ಮೀ. ಆದರೆ, ಪತಿಯ ತೂಕ ಇಳಿಸುವ ಭರದಲ್ಲಿ, ತಮ್ಮ ತೂಕವನ್ನೇ ಹೆಚ್ಚಿಸಿಕೊಳ್ಳುತ್ತಿದ್ದಾರೆ. ನಿತ್ಯದ ಡಯಟ್ ಹಲವು ಕಾರಣಕ್ಕೆ ಹಾದಿ ತಪ್ಪುತ್ತಿದೆ. ಈ ವಿಚಾರವನ್ನು ಯೂಟ್ಯೂಬ್ ಸಂದರ್ಶನವೊಂದರಲ್ಲಿ ಹೇಳಿಕೊಂಡು ಬೇಸರಿಸಿಕೊಂಡಿದ್ದಾರೆ.
ಮಲಗಿದ್ರೂ ಬಿಡ್ತಿಲ್ಲ..
"ಅವರ ದೇಹ ತೂಕ ಕಡಿಮೆ ಮಾಡಲು, ಎಷ್ಟೇ ಪ್ರಯತ್ನಿಸುತ್ತಿದ್ದರೂ, ರವೀಂದರ್ ಅದಕ್ಕೆ ಸ್ಪಂದಿಸುತ್ತಿಲ್ಲ. ನಾನು ಅವರ ಜತೆಗಿದ್ದಾಗ ನನ್ನ ಡಯಟ್ ತಾಳ ತಪ್ಪುತ್ತಿದೆ. ರಾತ್ರಿ ನಾನು ಮಲಗಿದ್ದರೂ, ನನ್ನನ್ನು ಎಬ್ಬಿಸಿ ತಿನ್ನುವಂತೆ ಒತ್ತಾಯ ಮಾಡುತ್ತಾರೆ. ಸಾಕಷ್ಟು ಬಾರಿ ತಿಂದಿದ್ದೂ ಇದೆ. ತಿನ್ನಲು ಶುರು ಮಾಡಿದ್ರೆ ಹೊಟ್ಟೆ ತುಂಬುವಂತೇ ತಿನ್ನುತ್ತಿದ್ದೇನೆ. ಹೀಗಾಗಿ ಸರಿಯಾದ ಕ್ರಮದಲ್ಲಿ ಡಯಟ್ ಅನುಸರಿಸಲು ನನ್ನಿಂದಲೂ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ನನ್ನ ನಿದ್ರೆಯೂ ಹಾಳಾಗುತ್ತಿದೆ. ದಿನೇದಿನೆ ನನ್ನ ತೂಕವೂ ಹೆಚ್ಚಾಗುತ್ತಿದೆ. ಮುಂದೊಂದು ದಿನ ಅವರಂತೆ ಆದರೂ ಆಗಬಹುದು" ಎಂದು ಕಳವಳ ವ್ಯಕ್ತಪಡಿಸಿದ್ದಾರೆ ಮಹಾಲಕ್ಷ್ಮೀ.
2022ರ ಸೆಪ್ಟೆಂಬರ್ 1ರಂದು ಮದುವೆ
ತಮಿಳು ಸಿನಿಮಾ ನಿರ್ಮಾಪಕ ರವೀಂದರ್ ಮತ್ತು ಮಹಾಲಕ್ಷ್ಮೀ ಜೋಡಿ ಕಳೆದ ವರ್ಷದ ಸೆ. 1ರಂದು ತಿರುಪತಿಯಲ್ಲಿ ಅದ್ದೂರಿ ಮದುವೆಯಾಗಿತ್ತು. ಈ ಜೋಡಿಗೆ ಶುಭಾಶಯಗಳಿಗಿಂತ ನೆಗೆಟಿವ್ ಮಾತುಗಳೇ ಕೇಳಿಬಂದಿದ್ದವು. ಈ ಜೋಡಿ ಬಗ್ಗೆ ಕಟುವಾಗಿ ಕಾಮೆಂಟ್ ಮಾಡಿದವರೇ ಹೆಚ್ಚು. ಅದ್ಯಾವ ಮಟ್ಟಿಗೆ ಎಂದರೆ, ಈ ಜೋಡಿ ಮೂರು ತಿಂಗಳ ಬಾಳಿಕೆ ಬಂದರೆ ಹೆಚ್ಚು ಎಂದಿದ್ದರು. ಹಾಗೇ ಕೆಟ್ಟ ಮಾತುಗಳನ್ನಾಡಿರುವವರಿಗೆ ಮೊದಲ ವಿವಾಹ ವಾರ್ಷಿಕೋತ್ಸವದ ದಿನವೇ, ಪತ್ನಿಯ ಬಗ್ಗೆ ಸುದೀರ್ಘ ಪತ್ರ ಬರೆದು ತಮ್ಮ ಪ್ರೀತಿಯನ್ನು ಹೊರಗೆಡವಿದ್ದರು.