ಒಂದು ವರ್ಷದಿಂದ ಸೀರಿಯಲ್ ಬಿಡ್ತೀನಿ ಅಂತಿದ್ರಂತೆ ಸಂಜನಾ ಬುರ್ಲಿ; ಪುಟ್ಟಕ್ಕನ ಮಕ್ಕಳು ಸ್ನೇಹಾ ಸಾವಿಗೆ ಇಲ್ಲಿದೆ ಅಸಲಿ ಕಾರಣ
ಕನ್ನಡ ಸುದ್ದಿ  /  ಮನರಂಜನೆ  /  ಒಂದು ವರ್ಷದಿಂದ ಸೀರಿಯಲ್ ಬಿಡ್ತೀನಿ ಅಂತಿದ್ರಂತೆ ಸಂಜನಾ ಬುರ್ಲಿ; ಪುಟ್ಟಕ್ಕನ ಮಕ್ಕಳು ಸ್ನೇಹಾ ಸಾವಿಗೆ ಇಲ್ಲಿದೆ ಅಸಲಿ ಕಾರಣ

ಒಂದು ವರ್ಷದಿಂದ ಸೀರಿಯಲ್ ಬಿಡ್ತೀನಿ ಅಂತಿದ್ರಂತೆ ಸಂಜನಾ ಬುರ್ಲಿ; ಪುಟ್ಟಕ್ಕನ ಮಕ್ಕಳು ಸ್ನೇಹಾ ಸಾವಿಗೆ ಇಲ್ಲಿದೆ ಅಸಲಿ ಕಾರಣ

ಸಂಜನಾ ಬುರ್ಲಿ ಸೀರಿಯಲ್ ಬಿಟ್ಟಾಗಿನಿಂದ ಜನರು ನಿರ್ದೇಶಕರ ಮೇಲೆ ಸಿಟ್ಟಾಗಿದ್ದರು. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಪಾತ್ರವನ್ನು ಸಾಯಿಸಬಾರದಿತ್ತು, ಯಾಕೆ ಈ ನಿರ್ಧಾರ ತೆಗೆದುಕೊಂಡರು ಎಂದು ಎಲ್ಲರಿಗೂ ಆಶ್ಚರ್ಯವಾಗಿತ್ತು. ನಿರ್ದೇಶಕ ಆರೂರು ಜಗದೀಶ್‌ ಈ ಬಗ್ಗೆ ಏನು ಹೇಳಿದ್ದಾರೆ ನೋಡಿ.

ಒಂದು ವರ್ಷದಿಂದ ಸೀರಿಯಲ್ ಬಿಡ್ತೀನಿ ಅಂತಿದ್ರಂತೆ ಸಂಜನಾ ಬುರ್ಲಿ
ಒಂದು ವರ್ಷದಿಂದ ಸೀರಿಯಲ್ ಬಿಡ್ತೀನಿ ಅಂತಿದ್ರಂತೆ ಸಂಜನಾ ಬುರ್ಲಿ

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಪಾತ್ರದ ಕಥೆ ಮುಗಿದಿತ್ತು. ಸ್ನೇಹಾ ಪಾತ್ರ ಮಾಡುತ್ತಿದ್ದ ಸಂಜನಾ ಬುರ್ಲಿ ಸೀರಿಯಲ್‌ನಿಂದ ಹೊರ ನಡೆದಿದ್ದರು. ತಮ್ಮ ಅಧಿಕೃತ ಖಾತೆಯಲ್ಲಿ ಅವರು ಈ ಬಗ್ಗೆ ಸ್ಪಷ್ಟನೆ ಕೂಡ ನೀಡಿದ್ದರು. ಇದೀಗ ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಿರ್ದೇಶಕರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸಂಜನಾ ಬುರ್ಲಿ ಅವರಿಗೆ ಉನ್ನತ ವ್ಯಾಸಂಗ ಮಾಡುವ ಆಸೆ ಇತ್ತಂತೆ. ಆದರೆ ಅದನ್ನು ಸೀರಿಯಲ್ ಕಾರಣದಿಂದ ಮುಂದುವರೆಸಲು ಸಾಧ್ಯವಾಗಿರಲಿಲ್ಲವಂತೆ. ಆದರೆ ಮತ್ತೆ ಅವರಿಗೆ ತಮ್ಮ ವ್ಯಾಸಂಗ ಮುಂದುವರೆಸುವ ಅವಕಾಶ ಬೇಕು ಎಂದು ಕೋರಿದಾಗ ಅವಕಾಶವನ್ನು ನೀಡಲೇಬೇಕಾಗಿ ಬಂತು ಎಂದು ಧಾರಾವಾಹಿ ನಿರ್ದೇಶಕ ಆರೂರು ಜಗದೀಶ್‌ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

“ಸಂಜನ ಬುರ್ಲಿ ಅವರಿಗೆ ಸಿನಿಮಾಗಳಲ್ಲಿ ಅವಕಾಶ ಸಿಗುತ್ತದೆ ಎಂದು ನಾವು ಹೇಳಬಹುದು, ಅಥವಾ ಬೇರೆ ಸೀರಿಯಲ್‌ನಲ್ಲಿ ಉತ್ತಮ ಅವಕಾಶ ಬಂದು ನಿಮಗೆ ಅನುಕೂಲ ಆಗಬಹುದು ಎಂದು ಸಹ ಹೇಳಬಹುದು. ಆದರೆ ಅದ್ಯಾವುದಕ್ಕೂ ನಾವು ಭರವಸೆ ನೀಡಲು ಸಾಧ್ಯವಿಲ್ಲ. ಒಮ್ಮೊಮ್ಮೆ ಒಂದೊಂದು ಧಾರಾವಾಹಿಯಲ್ಲಿ ಇಷ್ಟವಾದರು ಎಂದು ಬೇರೆ ಧಾರಾವಾಹಿಗಳಲ್ಲಿ ಅವರ ಪಾತ್ರ ಕ್ಲಿಕ್ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ ನಾವು ಒತ್ತಾಯ ಮಾಡುವ ಹಾಗಿರಲಿಲ್ಲ” ಎಂದು ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಿರ್ದೇಶಕ ಆರೂರು ಜಗದೀಶ್ ತಿಳಿಸಿದ್ದಾರೆ.

ಇದನ್ನೂ ಓದಿ: ಭೈರತಿ ರಣಗಲ್‌ ಬಿಡುಗಡೆಗೆ ಕೌಂಟ್‌ಡೌನ್‌; ಚಿತ್ರದಲ್ಲಿ ಶ್ರೀಮುರಳಿ ನಟಿಸಿದ್ದಾರಾ? ಶಿವರಾಜ್‌ಕುಮಾರ್‌ ಹೇಳಿದ್ದೇನು?

ಬೇರೆ ಧಾರಾವಾಹಿಗಳಲ್ಲಿ ಮಾಡಿದಂತೆ ಈ ಧಾರಾವಾಹಿಯಲ್ಲೂ ನೀವು ಸ್ನೇಹಾ ಪಾತ್ರಕ್ಕೆ ಬೇರೆಯವರನ್ನು ಹಾಕಿಕೊಳ್ಳಬಹುದಿತ್ತು ಎಂಬ ಪ್ರಶ್ನೆಗ ಉತ್ತರಿಸಿದ ಅವರು, “ವೀಕ್ಷಕರು ಅಷ್ಟು ಬೇಗ ಇನ್ನೊಂದು ಪಾತ್ರಧಾರಿಯನ್ನು ಒಪ್ಪಿಕೊಳ್ಳುವುದಿಲ್ಲ. ಈ ಹಿಂದೆ ಯಾರು ಅಭಿನಯಿಸಿದ್ದರೋ ಅವರೊಡನೆ ಹೋಲಿಕೆ ಮಾಡಿ ನೋಡುತ್ತಾರೆ. ಪಾತ್ರ ಗೆದ್ದರೆ ಗೆದ್ದೀತು; ಇಲ್ಲವಾದರೆ ವೀಕ್ಷಕರು ಹೇಟ್ ಮಾಡಲು ಆರಂಭಿಸುತ್ತಾರೆ. ಹಾಗಾಗಿ ನಾವು ಆ ಪಾತ್ರವನ್ನು ಸಾಯಿಸಿಯೇಬಿಟ್ಟೆವು” ಎಂದು ಸ್ಪಷ್ಟನೆ ನೀಡಿದ್ದಾರೆ.

"ವೀಕ್ಷಕರು ಈ ಬಗ್ಗೆ ಸಾಕಷ್ಟು ಶಾಪ ಹಾಕಿದ್ದಾರೆ. ತುಂಬಾ ಜನ ಕಾಮೆಂಟ್ ಮಾಡಿ ನಿರ್ದೇಶಕನ ತಲೆ ಸರಿ ಇಲ್ಲ ಎಂದೆಲ್ಲ ಹೇಳಿದ್ದಾರೆ. ಜನರನ್ನು ಇಷ್ಟೊಂದು ನೋಯಿಸುವ ಉದ್ದೇಶ ನಮಗೂ ಇಲ್ಲ. ಆದರೆ ಏನೂ ಮಾಡೋಕಾಗಲ್ಲ" ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. “ವೀಕ್ಷಕರು ಏನೇ ಅಂದ್ರು ನಾವು ಅದನ್ನು ಒಪ್ಪಿಕೊಳ್ಳಲೇಬೇಕು. ಯಾಕೆಂದರೆ ಅವರು ಬೈದಾಗ ನಾವು ಬೈಸಿಕೊಳ್ತೀವಿ, ಅವರು ಹೊಗಳಿದಾಗ ಹೊಗಳಿಸಿಕೊಳ್ತೀವಿ. ಅದಕ್ಕೆ ವೀಕ್ಷಕರು ಪ್ರತಿಕ್ರಿಯೆ ನೀಡಲು ಅರ್ಹರು. ಯಾಕೆಂದರೆ ವೀಕ್ಷಕರು ಅವರ ಸಮಯವನ್ನು ನಮ್ಮ ಧಾರಾವಾಹಿಯ ಮೇಲೆ ಸ್ಪೆಂಡ್ ಮಾಡಿರುತ್ತಾರೆ” ಎಂದಿದ್ದಾರೆ ನಿರ್ದೇಶಕ ಆರೂರು ಜಗದೀಶ್.

ಇದು ಒಂದು ವರ್ಷದ ಬೇಡಿಕೆ

ಸದ್ಯ ಪುಟ್ಟಕ್ಕನ ಮಕ್ಕಳು ಸ್ನೇಹಾಳ ಸಾವನ್ನು ಅರಗಿಸಿಕೊಳ್ಳಲು ವೀಕ್ಷಕರಿಂದ ಸಾಧ್ಯವಾಗುತ್ತಿಲ್ಲ. ಸಾಕಷ್ಟು ಜನ ತುಂಬಾ ಕೆಟ್ಟ ಕೆಟ್ಟದಾಗಿ ಬೈದಿದ್ದಾರೆ ಕೂಡ. ಒಂದು ವರ್ಷದಿಂದ ಸಂಜನಾ ಬುರ್ಲಿ ತಮ್ಮ ಎಜುಕೇಶನ್‌ಗೆ ಅವಕಾಶ ಮಾಡಿಕೊಡಿ ಎಂದು ಹೇಳುತ್ತಲೇ ಇದ್ದರಂತೆ. ಆ ಬಗ್ಗೆ ಕೂಡ ಹೇಳಿದ್ದಾರೆ. ಇನ್ನು ಸಂಜನಾ ಬುರ್ಲಿ ಅವರ ಪಾಲಕರೂ ಸಹ ಅವಳು ಓದಬೇಕು ಅವಕಾಶ ಮಾಡಿಕೊಡಿ ಎಂದು ಕೇಳುತ್ತಲೇ ಇದ್ದರಂತೆ. ಹಾಗಾಗಿ ನಾನು ಚಾನೆಲ್‌ಗೆ ರಿಕ್ವೆಸ್ಟ್‌ ಮಾಡಿಕೊಂಡು ಅವರನ್ನು ಖುಷಿಯಿಂದ ಕಳಿಸಿಕೊಟ್ಟಿದ್ದೇನೆ. ಈ ಬಗ್ಗೆ ಅವರಿಗೂ ಖುಷಿ ಇರಬಹುದು ಆದರೆ ಇಲ್ಲಿ ಏನಾಗುತ್ತದೆ? ನಿಜವಾದ ಕಾರಣ ಏನಿರುತ್ತದೆ ಎಂದು ವೀಕ್ಷಕರಿಗೆ ಗೊತ್ತಿರುವುದಿಲ್ಲ ಎಂದು ಆರೂರು ಜಗದೀಶ್ ಸ್ಪಷ್ಟಪಡಿಸಿದ್ದಾರೆ.

Whats_app_banner