UI Release Date: ‘ಯುಐ’ ಚಿತ್ರದ ರಿಲೀಸ್ ದಿನಾಂಕ ಘೋಷಿಸಿ ಮತ್ತೆ ತಲೆಗೆ ಹುಳ ಬಿಟ್ಟ ರಿಯಲ್ ಸ್ಟಾರ್ ಉಪೇಂದ್ರ
UI The Movie: ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಯುಐ ಸಿನಿಮಾ ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇದೇ ತಿಂಗಳಲ್ಲಿ ಚಿತ್ರಮಂದಿರಕ್ಕೆ ಆಗಮಿಸಬೇಕಿತ್ತು. ಇದೀಗ ಇದೇ ಸಿನಿಮಾ ಹೊಸ ದಿನಾಂಕಕ್ಕೆ ಶಿಫ್ಟ್ ಆಗಿದೆ. ಬಿಡುಗಡೆ ಪೋಸ್ಟರ್‌ನಲ್ಲಿ ಜತೆಗೆ ತಲೆಗೆ ಹುಳ ಬಿಡುವ ಕೆಲಸವನ್ನೂ ಮಾಡಿದ್ದಾರೆ ಉಪೇಂದ್ರ.
UI Release Date: ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿ ನಟಿಸಿ ನಿರ್ದೇಶನ ಮಾಡಿರುವ ಯೂಐ ಸಿನಿಮಾ ಈಗಾಗಲೇ ಎಲ್ಲರ ಗಮನ ಸೆಳೆದಿದೆ. ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಈ ಸಿನಿಮಾ ಸಹ ಸ್ಥಾನ ಪಡೆದಿದೆ. ದಶಕದ ಬಳಿಕ ಉಪೇಂದ್ರ ಮತ್ತೆ UI ಸಿನಿಮಾ ಮೂಲಕ ನಿರ್ದೇಶಕನ ಕ್ಯಾಪ್ ಧರಿಸಿದ್ದಾರೆ. ಈ ಹಿಂದೆ ಬಿಡುಗಡೆ ಆಗಿರುವ ಇದೇ ಚಿತ್ರದ ಹಾಡುಗಳು, ಟೀಸರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಆಕಾಶಕ್ಕೆ ಏರಿಸಿದ್ದವು. ಈಗ ಸದ್ದಿಲ್ಲದೆ, ಚಿತ್ರದ ಬಿಡುಗಡೆ ದಿನಾಂಕ ರಿವೀಲ್ ಮಾಡಿದೆ ಚಿತ್ರತಂಡ.
ಇತ್ತೀಚೆಗಷ್ಟೇ ಅಂದರೆ ಸೆ. 18ರಂದು ಉಪೇಂದ್ರ ತಮ್ಮ ಬರ್ತ್‌ಡೇ ಆಚರಿಸಿಕೊಂಡಿದ್ದರು. ಆವತ್ತಾದರೂ ಸಿನಿಮಾ ರಿಲೀಸ್ ದಿನಾಂಕ ಘೋಷಣೆ ಆಗುವ ನಿರೀಕ್ಷೆ ಇತ್ತು. ಆದರೆ ಚಿತ್ರದ ಮೇಕಿಂಗ್ ವಿಡಿಯೋ ಶೇರ್ ಮಾಡಿ ಸುಮ್ಮನಾದ್ದರು ಉಪೇಂದ್ರ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಇದೇ ಅಕ್ಟೋಬರ್‌ನಲ್ಲಿ ಯುಐ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ, ಬೇರೆ ಬೇರೆ ಸಿನಿಮಾಗಳ ಬಿಡುಗಡೆಯಲ್ಲಿ ಏರಿಳಿತವಾದ ಹಿನ್ನೆಲೆಯಲ್ಲಿ ಈ ವರ್ಷಾಂತ್ಯಕ್ಕೆ ತೆರಳಿದೆ ಉಪೇಂದ್ರ ಯುಐ ಸಿನಿಮಾ.
ಮತ್ತೆ ತಲೆಗೆ ಹುಳ ಬಿಟ್ಟ ನಿರ್ದೇಶಕ ಉಪ್ಪಿ
"ಜನರು ಯಾವಾಗಲೂ ನನಗೆ ತಲೆಯಲ್ಲಿ ಹುಳ ಬಿಡುತ್ತೀರಾ ಎನ್ನುತ್ತಾರೆ. ಅದರೆ ಈ ಚಿತ್ರದಲ್ಲಿ ಹುಳ ತೆಗೆಯುವ ಕೆಲಸ ಮಾಡುತ್ತಿದ್ದೇನೆ. ಪ್ರೇಕ್ಷಕರು ನಮಗಿಂತ ತುಂಬಾ ಬುದ್ದಿವಂತರು. ಅವರ ನಿರೀಕ್ಷೆ ಹೆಚ್ಚು ಇರುತ್ತದೆ. ಅದಕ್ಕೆ ತಕ್ಕ ಹಾಗೆ ಸಿನಿಮಾ ಮಾಡುವ ಜವಾಬ್ದಾರಿ ನಮ್ಮ ಮೇಲಿರುತ್ತದೆ" ಎಂದು ಉಪೇಂದ್ರ ಹೇಳಿದ್ದರು. ಈಗ ಸಿನಿಮಾ ಬಿಡುಗಡೆಯ ಪೋಸ್ಟರ್ ರಿಲೀಸ್ ಮಾಡಿ, ಆ ಪೋಸ್ಟರ್‌ನಲ್ಲಿಯೂ ಕನ್‌ಫ್ಯೂಸ್ ಮಾಡಿದ್ದಾರೆ. "ಇಷ್ಟ್ ದಿನ ಸಿನಿಮಾ ನೋಡಿ, ನೀವ್ ಹಿಟ್\ ಪ್ಲಾಪ್ ಅಂತ ಹೇಳ್ತಿದ್ರಿ, ಈ ಸಿನಿಮಾ ನಿಮ್ಮನ್ ನೋಡಿ.." ಎಂದು ಒಂದು ಸಾಲನ್ನು ಬರೆದುಕೊಂಡಿದ್ದಾರೆ.
ಯಾವಾಗ ತೆರೆಗೆ?
ಉಪೇಂದ್ರ ಅವರ ಯುಐ ಸಿನಿಮಾ ಡಿಸೆಂಬರ್ 20ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ. ಕನ್ನಡದ ಜತೆಗೆ ತೆಲುಗು, ಹಿಂದಿ, ತಮಿಳು, ಮಲಯಾಳಂ ಭಾಷೆಯಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಈ ಮೂಲಕ ಕ್ರಿಸ್‌ಮಸ್ ರಜೆಯನ್ನು ಎನ್‌ಕ್ಯಾಶ್ ಮಾಡಿಕೊಳ್ಳಲು ಪ್ಲಾನ್ ಹಾಕಿದೆ. ಸದ್ಯ ರಿಲೀಸ್ ದಿನಾಂಕ ಘೋಷಣೆ ಮಾಡಿರುವ ಚಿತ್ರತಂಡ, ಇನ್ನೇನು ಪ್ರಚಾರ ಕೆಲಸಕ್ಕೂ ಚಾಲನೆ ನೀಡಿದೆ. ಆದಷ್ಟು ಬೇಗ ಟ್ರೇಲರ್ ಮತ್ತು ಹಾಡುಗಳ ಮೂಲಕ ಈ ಸಿನಿಮಾ ಸದ್ದು ಮಾಡಲಿದೆ. ಜೀ ಮನೋಹರನ್ ಮತ್ತು ಕೆ. ಪಿ ಶ್ರೀಕಾಂತ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ನವೀನ್ ಮನೋಹರನ್ ಈ ಸಿನಿಮಾದ ಸಹ ನಿರ್ಮಾಪಕ.
ತಾಂತ್ರಿಕ ವರ್ಗ ಹೇಗಿದೆ?
ಎಚ್ ಸಿ ವೇಣು ಛಾಯಾಗ್ರಹಣ ಇರುವ ಈ ಸಿನಿಮಾಕ್ಕೆ ಬಿ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಜಯ್ ರಾಜ್ ಬಿಜಿ ಈ ಸಿನಿಮಾಕ್ಕೆ ಸಂಕಲನ ಮಾಡಿದ್ದಾರೆ. ಥ್ರಿಲ್ಲರ್ ಮಂಜು, ಚೇತನ್ ಡಿಸೋಜಾ, ರವಿ ವರ್ಮಾ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.