Suraj Kumar: ಡಾ. ರಾಜ್ ಕುಟುಂಬದ ಕುಡಿ ಸೂರಜ್ಗೆ ನಂಜನಗೂಡು ಬಳಿ ಅಪಘಾತ; ದುರಂತದಲ್ಲಿ ಬಲಗಾಲು ಕಳೆದುಕೊಂಡ ಯುವ ನಟ
ಡಾ. ರಾಜ್ ಕುಟುಂಬದ ಕುಡಿ ಪಾರ್ವತಮ್ಮ ರಾಜ್ಕುಮಾರ್ ಅವರ ಸೋದರನ ಮಗ ಸೂರಜ್ ಕುಮಾರ್ ಭೀಕರ ರಸ್ತೆ ಅಪಘಾತದಲ್ಲಿ ತಮ್ಮ ಬಲಗಾಲನ್ನೇ ಕಳೆದುಕೊಂಡಿದ್ದಾರೆ. ನಂಜನಗೂಡು ಬಳಿ ಈ ದುರಂತ ಸಂಭವಿಸಿದೆ.
Suraj kumar: ಡಾ. ರಾಜ್ಕುಮಾರ್ ಕುಟುಂಬದ ಕುಡಿ ಯುವ ನಟ ಸೂರಜ್ ಬೈಕ್ ಅಪಘಾತದಲ್ಲಿ ತಮ್ಮ ಬಲಗಾಲನ್ನೇ ಕಳೆದುಕೊಂಡ ಘಟನೆ ಮೈಸೂರು -ನಂಜನಗೂಡು ಹೆದ್ದಾರಿಯಲ್ಲಿ ಶನಿವಾರ (ಜೂ 24) ಸಂಜೆ 4 ಗಂಟೆ ಸುಮಾರಿಗೆ ನಡೆದಿದೆ.
ಪಾರ್ವತಮ್ಮ ರಾಜ್ಕುಮಾರ್ ಅವರ ತಮ್ಮನ ಮಗನಾಗಿರುವ ಸೂರಜ್, ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಪ್ರವೇಶ ಪಡೆದಿದ್ದರು. ಆ ಸಿನಿಮಾ ಬಿಡುಗಡೆಗೂ ಮುನ್ನವೇ ಇದೀಗ ಅಪಘಾತದಲ್ಲಿ ತಮ್ಮ ಕಾಲನ್ನೆ ಕಳೆದುಕೊಂಡಿದ್ದಾರೆ.
ಚಿತ್ರರಂಗದಲ್ಲಿ ಈಗಷ್ಟೇ ಹಂತಹಂತವಾಗಿ ಬೆಳೆಯುತ್ತಿದ್ದ ಸೂರಜ್, ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ, ನಟ ಶಿವರಾಜ್ಕುಮಾರ್, ಚಿನ್ನೇಗೌಡ ಸೇರಿ ಹಲವರು ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ.
ಮೈಸೂರು- ನಂಜನಗೂಡು ರಸ್ತೆ ಮಾರ್ಗದಿಂದ ಊಟಿಗೆ ತೆರಳುವಾಗ ಈ ಅಪಘಾತ ಸಂಭವಿಸಿದೆ. ಬೈಕ್ನಲ್ಲಿ ಬರುತ್ತಿದ್ದಾಗ, ಟ್ರ್ಯಾಕ್ಟರ್ ಓವರ್ಟೇಕ್ ಮಾಡುವಾಗ ಎದುರಿನಿಂದ ಬಂದ ಟಿಪ್ಪರ್ ಸೂರಜ್ ಇದ್ದ ಬೈಕ್ಗೆ ಗುದ್ದಿದೆ. ಬೈಕ್ ಮೇಲೆಯೇ ಲಾರಿ ಹರಿದ ಪರಿಣಾಮ, ಬಲಕಾಲಿಗೆ ತೀವ್ರ ಪೆಟ್ಟಾಗಿತ್ತು.
ಗಂಭೀರವಾಗಿ ಗಾಯಗೊಂಡಿದ್ದ ಸೂರಜ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಕಾಲಿಗೆ ಬಲವಾದ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ವೈದ್ಯರು ಮಂಡಿಯವರೆಗೂ ಬಲಗಾಲನ್ನೇ ಕತ್ತರಿಸಿದ್ದಾರೆ. ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ
ಕೆಲ ಸಿನಿಮಾಗಳಲ್ಲಿ ನಟನೆ
ಸೂರಜ್ ಕನ್ನಡದ ಯುವ ಪ್ರತಿಭೆ. ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಹೆಸರಿನ ಸಿನಿಮಾದಲ್ಲಿಯೂ ನಟಿಸುತ್ತಿದ್ದರು. ಈಗಾಗಲೇ ಬಹುತೇಕ ಚಿತ್ರೀಕರಣವೂ ಮುಗಿದಿತ್ತು. ಈ ಸಿನಿಮಾ ಹೊರತುಪಡಿಸಿ ಬೇರೆ ಬೇರೆ ಪ್ರಾಜೆಕ್ಟ್ಗಳನ್ನೂ ಸೂರಜ್ ಒಪ್ಪಿಕೊಂಡಿದ್ದರು. ಅದಕ್ಕೂ ಮುನ್ನವೇ ಈ ದುರಂತ ಸಂಭವಿಸಿದೆ.