ಕನ್ನಡ ಸುದ್ದಿ  /  ಮನರಂಜನೆ  /  Kaatera Day 5 Collection: ‘ಕಾಟೇರ’ ಚಿತ್ರಕ್ಕೆ ಐದನೇ ದಿನವೂ ಬಂಪರ್;‌ ನೂರು ಕೋಟಿಗೆ ಇನ್ನೆಷ್ಟು ಬೇಕು?

Kaatera Day 5 Collection: ‘ಕಾಟೇರ’ ಚಿತ್ರಕ್ಕೆ ಐದನೇ ದಿನವೂ ಬಂಪರ್;‌ ನೂರು ಕೋಟಿಗೆ ಇನ್ನೆಷ್ಟು ಬೇಕು?

ದರ್ಶನ್‌ ನಟನೆಯ ಕಾಟೇರ ಸಿನಿಮಾ ಅಕ್ಷರಶಃ ಬಾಕ್ಸ್‌ ಆಫೀಸ್‌ ಚಿಂದಿ ಮಾಡುತ್ತಿದೆ. ಕಳೆದ ನಾಲ್ಕು ದಿನಗಳಲ್ಲಿ 77 ಕೋಟಿ ಗಳಿಸಿದ್ದ ಈ ಸಿನಿಮಾ, ಇದೀಗ ಐದನೇ ದಿನವೂ ಗಳಿಕೆಯ ಓಟ ಮುಂದುವರಿಸಿ, ಶತಕೋಟಿಯತ್ತ ದಾಪುಗಾಲಿರಿಸಿದೆ. ಹಾಗಾದರೆ ಐದನೇ ದಿನದ ಗಳಿಕೆ ಎಷ್ಟು? ಇಲ್ಲಿದೆ ಮಾಹಿತಿ.

‘ಕಾಟೇರ’ ಚಿತ್ರಕ್ಕೆ ಐದನೇ ದಿನವೂ ಬಂಪರ್;‌ ನೂರು ಕೋಟಿಗೆ ಇನ್ನೆಷ್ಟು ಬೇಕು?
‘ಕಾಟೇರ’ ಚಿತ್ರಕ್ಕೆ ಐದನೇ ದಿನವೂ ಬಂಪರ್;‌ ನೂರು ಕೋಟಿಗೆ ಇನ್ನೆಷ್ಟು ಬೇಕು?

Kaatera Day 5 Collection: ಕರುನಾಡಿನಲ್ಲೀಗ ಕಾಟೇರ ಸಿನಿಮಾದ್ದೇ ಸದ್ದು. ಕಾಟೇರನದ್ದೇ ಮಾತು. ಕಾಟೇರನದ್ದೇ ಹವಾ. ಆ ಮಟ್ಟಿಗೆ ಸದ್ದು ಮಾಡುತ್ತಲೇ ಸುದ್ದಿಯಲ್ಲಿದೆ ಈ ಸಿನಿಮಾ. ಕರುನಾಡಿನ ಸಿನಿಮಾಪ್ರೇಕ್ಷಕರು ಕಾಟೇರನನ್ನು ಹೊತ್ತು ಮೆರೆಸುತ್ತಿದ್ದಾರೆ. ಕಲೆಕ್ಷನ್‌ ವಿಚಾರದಲ್ಲಿ ಕೇವಲ ನಾಲ್ಕೇ ದಿನಗಳಲ್ಲಿ 77 ಕೋಟಿ ಗಳಿಸಿ 100 ಕೋಟಿಯತ್ತ ಮುನ್ನುಗ್ಗುತ್ತಿದೆ. ದರ್ಶನ್‌ ಅವರ ಹೊಸ ಅವತಾರ, ನೈಜ ಘಟನೆ ಹಿನ್ನೆಲೆಯ ಎಳೆ ಎಲ್ಲರಿಗೂ ಇಷ್ಟವಾಗಿದೆ. ಇದೀಗ ಇದೇ ಚಿತ್ರದ ಐದನೇ ದಿನದ ಗಳಿಕೆಯ ಅಂಕಿ ಅಂಶ ಹೊರಬಿದ್ದಿದೆ. ಇನ್ನೇನು ನೂರು ಕೋಟಿಯ ಸನಿಹಕೆ ಬಂದಿದೆ ಕಾಟೇರ.

ಟ್ರೆಂಡಿಂಗ್​ ಸುದ್ದಿ

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಾಯಕನಾಗಿ ನಟಿಸಿದ ಕಾಟೇರ ಸಿನಿಮಾ ಶುಕ್ರವಾರವಷ್ಟೇ ಬಿಡುಗಡೆಯಾಗಿ, ಎಲ್ಲೆಡೆಯಿಂದ ಮೆಚ್ಚುಗೆಯನ್ನೇ ಪಡೆಯುತ್ತಿದೆ. ಬಾಯಿ ಮಾತಿನ ಪ್ರಚಾರದಿಂದ ಹೆಚ್ಚೆಚ್ಚು ನೋಡುಗರನ್ನು ಚಿತ್ರಮಂದಿರಕ್ಕೆ ಕರೆತರುತ್ತಿದೆ ಈ ಸಿನಿಮಾ. ಮೊದಲ ದಿನವೇ ದಾಖಲೆಯ 19.79 ಕೋಟಿ ಕಲೆಕ್ಷನ್‌ ಮಾಡಿ, ಮತ್ತೆ ಬಾಕ್ಸ್‌ ಆಫೀಸ್‌ ಸುಲ್ತಾನ ಎನಿಸಿಕೊಂಡಿದ್ದರು ದರ್ಶನ್‌. ಮೂರು ದಿನಗಳಲ್ಲಿ 58 ಕೋಟಿ ಬಾಚಿಕೊಂಡಿದ್ದ ಈ ಸಿನಿಮಾ, ನಾಲ್ಕನೇ ದಿನ 18.26 ಕೋಟಿ ಗಳಿಸಿ ಆರ್ಭಟ ಮುಂದುವರಿಸಿತ್ತು.

ಐದನೇ ದಿನವೂ ಬಂಪರ್ ಬೆಳೆ‌

ಬಿಡುಗಡೆಯಾದ ಮೊದಲ ದಿನ ಅಂದರೆ ಶುಕ್ರವಾರ 19.79 ಕೋಟಿ ಗಳಿಕೆ ಕಂಡ ಕಾಟೇರ, ಎರಡನೇ ದಿನ 17.35 ಕೋಟಿ ಬಾಚಿಕೊಂಡಿತ್ತು. ಅದಾದ ಮೇಲೆ ಮೂರನೇ ದಿನ 20.94 ಕೋಟಿ ಬಾಚಿಕೊಂಡು ಮೂರೇ ದಿನದಲ್ಲಿ 58.8 ಕೋಟಿ ಗಳಿಕೆ ಕಂಡಿತ್ತು. ನಾಲ್ಕನೇ ದಿನವಾದ ಸೋಮವಾರ ಕಾಟೇರನ ಬೊಕ್ಕಸಕ್ಕೆ ಹಣದ ಹೊಳೆಯೇ ಹರಿದು ಬಂದಿತ್ತು. ಬರೋಬ್ಬರಿ 18.26 ಕೋಟಿ ಗಳಿಸುವ ಮೂಲಕ ಕೇವಲ ನಾಲ್ಕೇ ದಿನದಲ್ಲಿ 77.6 ಕೋಟಿ ಬಾಕ್ಸ್‌ ಆಫೀಸ್‌ ಗಳಿಕೆ ಮಾಡಿದೆ ಕಾಟೇರ ಸಿನಿಮಾ. ಇದೀಗ ಐದನೇ ದಿನದಂದು 9.24 ಕೋಟಿ ಗಳಿಸುವ ಮೂಲಕ ಒಟ್ಟಾರೆಯಾಗಿ 86.84 ಕೋಟಿ ಬಾಚಿಕೊಂಡಿದೆ. ನೂರು ಕೋಟಿಗೆ ಬೇಕಿರುವುದು ಕೇವಲ 14 ಕೋಟಿ ಮಾತ್ರ.

ಸಂಭ್ರಮದಲ್ಲಿ ಚಿತ್ರತಂಡ

ಈ ಕಲೆಕ್ಷನ್‌ ವಿಚಾರವನ್ನು ಸ್ವತಃ ಚಿತ್ರತಂಡವೇ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಖಚಿತಪಡಿಸಿದೆ. ಕನ್ನಡ ಚಿತ್ರರಂಗದಲ್ಲೇ ಮೊಟ್ಟ ಮೊದಲ ಬಾರಿಗೆ 5 ದಿನಗಳಲ್ಲಿ 86 ಕೋಟಿ ಕ್ಲಬ್ ಸೇರಿದ ಮೊದಲ ನಾನ್ ಪ್ಯಾನ್ ಇಂಡಿಯಾ ಸಿನಿಮಾ ನಮ್ಮ ಕಾಟೇರ ಎಂದೂ ಹೇಳಿದೆ. ತರುಣ್‌ ಸುಧೀರ್‌ ನಿರ್ದೇಶನದಲ್ಲಿ ಮೂಡಿಬಂದಿರುವ ಕಾಟೇರ ಚಿತ್ರವನ್ನು ಸದ್ಯ ಕರ್ನಾಟಕದಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪರಭಾಷೆಗೆ ಡಬ್‌ ಆಗಿ ಅಲ್ಲಿಯೂ ಅಬ್ಬರಿಸಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಪರಭಾಷೆಗಳಿಗೂ ಕಾಟೇರನಿಗೆ ಬೇಡಿಕೆ

ಕಾಟೇರ ಸಿನಿಮಾ ಸದ್ಯ ಕರುನಾಡಿನಲ್ಲಿ ಮಾತ್ರ ಬಿಡುಗಡೆ ಆಗಿ ಯಶಸ್ಸು ಕಂಡಿದೆ. ಇದೀಗ ಇದೇ ಚಿತ್ರವನ್ನು ಪರಭಾಷಿಕರಿಗೂ ತೋರಿಸುವ ಪ್ಲಾನ್‌ ಮಾಡುತ್ತಿದ್ದಾರೆ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌. ಇದೇ ಜನವರಿಯಲ್ಲಿಯೇ ಪಕ್ಕದ ತೆಲುಗು, ತಮಿಳು, ಹಿಂದಿಯಲ್ಲಿಯೂ ಈ ಸಿನಿಮಾವನ್ನು ಡಬ್‌ ಮಾಡಿ ಬಿಡುಗಡೆ ಮಾಡಲಿದ್ದೇವೆ ಎಂದಿದ್ದಾರೆ ರಾಕ್‌ಲೈನ್.‌ ಅದೇ ರೀತಿ ವಿದೇಶಗಳಲ್ಲೂ ಕಾಟೇರ ಸಿನಿಮಾ ರಿಲೀಸ್‌ ಆಗಲಿದೆ. ಜ. 5ರಂದು ಕೆನಡಾ, ದುಬೈ, ಇಂಗ್ಲೆಂಡ್, ಅಮೆರಿಕಾಗಳಲ್ಲೂ ಸಿನಿಮಾ ಬಿಡುಗಡೆ ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ.

IPL_Entry_Point