‘ಅಣ್ಣಾವ್ರ ಜತೆ ಆ ಸಿನಿಮಾ ಮಾಡಿದ್ರೆ ನಿನ್ನ ತಲೆ ಕಡಿತೀನಿ ಅಂದಿದ್ರು ಪಾರ್ವತಮ್ಮ ರಾಜ್‌ಕುಮಾರ್!’ ಯಾರಿಗಂದಿದ್ರು, ಯಾವುದಾ ಸಿನಿಮಾ?
ಹೊಸಬೆಳಕು ಸಿನಿಮಾ ಬಳಿಕ ಅಣ್ಣಾವ್ರಿಗಾಗಿ ಆ ಸ್ಟಾರ್ ನಿರ್ದೇಶಕ ಕಾದಂಬರಿಯೊಂದನ್ನು ಹಿಡಿದು ತಂದಿದ್ರು. ಆ ಕಥೆ ಕೇಳಿದ ಪಾರ್ವತಮ್ಮ ರಾಜ್‌ಕುಮಾರ್, ಈ ಕಥೆಯನ್ನ ಅಣ್ಣಾವ್ರಿಗೆ ಸಿನಿಮಾ ಮಾಡಿದ್ರೆ, ನಿನ್ನ ತಲೆ ಕಡಿತೀನಿ ಎಂದು ಎಚ್ಚರಿಸಿದ್ದರು. ಯಾರು ಆ ನಿರ್ದೇಶಕ, ಕಥೆ ಯಾವುದು? ಪಾರ್ವತಮ್ಮ ಮಾತಿನ ಹಿಂದಿನ ಉದ್ದೇಶವೇನು? ಇಲ್ಲಿದೆ ನೋಡಿ ವಿವರ.
Parvathamma Rajkumar: ಡಾ. ರಾಜ್‌ಕುಮಾರ್ ಯಾವುದೇ ಸಿನಿಮಾ ಮಾಡಿದರೂ, ಅಲ್ಲಿ ಮೊದಲಿಗೆ ಪಾರ್ವತಮ್ಮ ರಾಜ್‌ಕುಮಾರ್ ಅವರ ಒಪ್ಪಿಗೆ ಪಡೆಯಬೇಕಿತ್ತು. ಏಕೆಂದರೆ, ಕಥೆಯ ಆಯ್ಕೆಯಲ್ಲಿ ಪಾರ್ವತಮ್ಮ ಮತ್ತು ವರದಪ್ಪ ಅವರ ಆಯ್ಕೆಯ ಬಳಿಕವೇ ರಾಜ್‌ಕುಮಾರ್ ಅದಕ್ಕೆ ಸಮ್ಮತಿಸುತ್ತಿದ್ದರು. ಹೀಗ್ಯಾಕೆ ಎಂದರೆ ಇದಕ್ಕೆ ಕಾರಣವೂ ಇದೆ. ಸಾಲು ಸಾಲು ಸಿನಿಮಾ ಶೂಟಿಂಗ್‌ನಲ್ಲಿ ರಾಜ್‌ಕುಮಾರ್ ಬಿಜಿಯಾಗಿದ್ದಾಗ, ಅವರಿಂದ ಕಥೆಯ ಆಳ ಅಗಲವನ್ನು ಕುಲಂಕಷವಾಗಿ ಆಲಿಸಲು ಆಗುತ್ತಿರಲಿಲ್ಲ. ಹಾಗಾಗಿ ಆ ಜವಾಬ್ದಾರಿ ಈ ಇಬ್ಬರ ಮೇಲೆ ಬಿದ್ದಿತ್ತು. ಹೀಗಿರುವಾಗಲೇ ಪಾರ್ವತಮ್ಮ ಅವರ ಬಳಿ ಒಂದು ಕಥೆ ತರ್ತಾರೆ ಆ ಸ್ಟಾರ್ ನಿರ್ದೇಶಕ. ಅದನ್ನು ಸಾರಾಸಗಟಾಗಿ ತಿರಸ್ಕರಿಸಿ, ಈ ಸಿನಿಮಾ ಮಾಡಿದ್ರೆ ನಿನ್ನ ತಲೆ ತಗೀತಿನಿ ಎಂದಿದ್ರಂತೆ.
ಪಾರ್ವತಮ್ಮನ ರೋಷಾವೇಷಕ್ಕೆ ಆ ಸಿನಿಮಾವನ್ನೇ ಕೈ ಬಿಡ್ತಾರೆ ಆ ಸ್ಟಾರ್ ನಿರ್ದೇಶಕ. ಹಾಗಾದರೆ, ಪಾರ್ವತಮ್ಮ ರಾಜ್‌ಕುಮಾರ್ ತಿರಸ್ಕರಿಸಿದ ಆ ಸಿನಿಮಾ ಯಾವುದು? ಆ ಸಿನಿಮಾ ಬೇಡ ಎನ್ನಲು ಕಾರಣವೇನು? ಆ ನಿರ್ದೇಶಕರು ಯಾರು? ಕನ್ನಡ ಮಾಣಿಕ್ಯ ಯೂಟ್ಯೂಬ್‌ನಲ್ಲಿ ಈ ಕುರಿತ ವಿವರ ಬಿತ್ತರವಾಗಿದೆ. ಇಲ್ಲಿದೆ ನೋಡಿ ವಿವರ. ಅದು 1992. ಹೊಸಬೆಳಕು ಸಿನಿಮಾ ಮಾಡಿ ಗೆದ್ದಿದ್ದ ದೊರೈ ಭಗವಾನ್, ಡಾ, ರಾಜ್‌ಕುಮಾರ್‌ಗೆ ಮುಂದಿನ ಸಿನಿಮಾ ಯಾವುದು ಎಂದು ಹುಡುಕಾಟದಲ್ಲಿದ್ದಾಗ, ಭಗವಾನ್ ಕಣ್ಣಿಗೆ ಬಿದ್ದದ್ದು, ಜ್ಞಾನಪೀಠ ಪ್ರಶಸ್ತಿ ವಿಜೇತ ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರ ಸುಬ್ಬಣ್ಣ ಕೃತಿ.
ಮಾಸ್ತಿ ಅವ್ರ ಕಥೆ ಹಿಡಿದು ಬಂದಿದ್ದ ಭಗವಾನ್..
ಈ ಕತೆ ತಮ್ಮ ಮನಸಿಗೆ ಹಿಡಿಸಿದ್ದೇ ತಡ, ನೇರವಾಗಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಹತ್ತಿರ ಮಾತನಾಡಿ, ಆಗಿನ ಕಾಲದಲ್ಲಿಯೇ ಈ ಒಂದು ಕಾದಂಬರಿಯ ಹಕ್ಕುಗಳನ್ನು ಬರೋಬ್ಬರಿ 10 ಸಾವಿರ ರೂಪಾಯಿಗೆ ಕೊಟ್ಟು ತರ್ತಾರೆ ನಿರ್ದೇಶಕ ಭಗವಾನ್. ಆಗ ಮಾಸ್ತಿ ಅವರಿಂದಲೂ ಒಂದು ಷರತ್ತು ವಿಧಿಸ್ತಾರೆ. ಒಂದು ವರ್ಷದ ಅವಧಿಯಲ್ಲಿ ಈ ಕಾದಂಬರಿ ಆಧರಿತ ಸಿನಿಮಾ ಶುರುವಾಗದಿದ್ದರೆ, ಇದರ ಹಕ್ಕುಗಳನ್ನು ನೀವು ಕಳೆದುಕೊಳ್ಳುತ್ತೀರಿ ಎನ್ನುತ್ತಾರೆ. ಅದು ನನಗೆ ಮರಳುತ್ತೆ ಎಂದಿರುತ್ತಾರೆ.
ಬಳಿಕ ಇದೇ ಕತೆಯನ್ನು ಭಗವಾನ್ ಅವರು ವರದಪ್ಪನವರಿಗೆ ಹೇಳ್ತಾರೆ. ಅವರಿಗೂ ಓಕೆ ಆಗುತ್ತೆ. ರಾಜ್‌ಕುಮಾರ್ ಅವರ ಗಮನಕ್ಕೂ ತರ್ತಾರೆ. ಅವರಿಂದಲೂ ಒಪ್ಪಿಗೆ ಸಿಕ್ಕಿರುತ್ತದೆ. ಮುಂದುವರಿದು ಸಿನಿಮಾ ಮಾಡೋಣ ಎಂಬ ಮಾತುಕತೆಯೂ ನಡೆದಿರುತ್ತದೆ. ಇದೇ ವಿಚಾರವನ್ನು ಪಾರ್ವತಮ್ಮನ ಗಮನಕ್ಕೂ ತಂದಿರುತ್ತಾರೆ ರಾಜ್‌ಕುಮಾರ್. ಆಗಿನ ಮಟ್ಟಿಗೆ ಸರಿ ಎಂದಿದ್ದ ಪಾರ್ವತಮ್ಮ, ಭಗವಾನ್ ಅವರನ್ನು ಇದೇ ಸಿನಿಮಾ ವಿಚಾರವಾಗಿ ಮನೆಗೆ ಕರೆಸಿಕೊಳ್ತಾರೆ. ಅವರು ಬರ್ತಿದ್ದಂತೆ, "ನೀನು ಏನಾದರೂ ಈ ಸಿನಿಮಾನ ಅಣ್ಣಾವ್ರನ್ನು ಹಾಕ್ಕೊಂಡು ಮಾಡಿದ್ರೆ, ನಿನ್ನ ತಲೆ ಕಡೀತಿನಿ!" ಅಂತಾರೆ. ಭಗವಾನ್‌ಗೆ ಒಂದು ಕ್ಷಣ ಏನಾಗ್ತಿದೆ ಅಂತಲೇ ತೋಚುವುದಿಲ್ಲ.
ಪಾರ್ವತಮ್ಮ ಹೀಗೆ ಹೇಳಲು ಕಾರಣ ಏನಿರಬಹುದು?
ಈ ಸುಬ್ಬಣ್ಣ ಕಾದಂಬರಿ ಹೇಗಿದೆ ಎಂದರೆ, ಇದು ಮಹಾರಾಜರ ಕಾಲದಲ್ಲಿ ನಡೆಯುವ ಕಥೆ. ಆಸ್ಥಾನ ವಿದ್ವಾಂಸರ ನಡುವೆ ಸಾಗುವ ಸ್ಟೋರಿ. ಆ ಆಸ್ಥಾನದ ನಾರಾಯಣಶಾಸ್ತ್ರಿಗಳು, ಪುರಾಣದ ಕಥೆಗಳನ್ನು ಹೇಳುತ್ತಿರುತ್ತಾರೆ. ಆ ಕಥೆಗಳಿಂದ ಬಹುಮಾನ ಸಿಗುತ್ತಿರುತ್ತದೆ. ಅದರಿಂದಲೇ ಜೀವನ ಸಾಗುತ್ತಿರುತ್ತದೆ. ಆ ನಾರಾಯಣ ಶಾಸ್ತ್ರಿಗಳ ಮಗನೇ ಸುಬ್ಬಣ್ಣ. ಸುಬ್ಬಣ್ಣನಿಗೆ ಕಥೆ ಪುರಾಣದಲ್ಲಿ ಆಸಕ್ತಿ ಕಡಿಮೆ. ಸಂಗೀತದಲ್ಲಿ ಆಸಕ್ತಿ ಹೆಚ್ಚು. ಒಮ್ಮೆ ಆಸ್ಥಾನದಲ್ಲಿ ಕಥೆ ಹೇಳು ಎಂದಾಗ, ಸಂಗೀತದ ಮೂಲಕ ಗುರುತಿಸಿಕೊಳ್ತಾನೆ ಸುಬ್ಬಣ್ಣ. ಅದನ್ನು ಮೆಚ್ಚಿ ರಾಜರಿಂದ ಬಹುಮಾನವೂ ಸಿಗುತ್ತೆ. ದೊಡ್ಡ ಸಂಗೀತಗಾರನಾಗು, ನಿನಗೂ ದೊಡ್ಡ ಬಹುಮಾನವನ್ನೇ ಕೊಡ್ತೆನೆ ಎನ್ನುತ್ತಾರೆ ರಾಜ.
ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ಸಂಗೀತದಲ್ಲಿಯೇ ಮುಳುಗುತ್ತಾನೆ ಸುಬ್ಬಣ್ಣ. ಮುಂದೆ ಸುಬ್ಬಣ್ಣನ ಮದುವೆ ಆಗುತ್ತೆ, ಮಕ್ಕಳಾಗುತ್ತವೆ. ಆದರೆ, ಮನೆ ಜವಾಬ್ದಾರಿ ನಿಭಾಯಿಸುವಲ್ಲಿ, ಹೆಂಡತಿ ಮಕ್ಕಳ ಬಗ್ಗೆ ಕಾಳಜಿಯೂ ಇರಲ್ಲ. ಬರೀ ಸಂಗೀತದ ಬಗ್ಗೆಯೇ ವಲವು. ಇದೇ ವಿಚಾರಕ್ಕೆ ಜಗಳವೂ ಆಗುತ್ತೆ. ಹೆಂಡತಿ ಮಕ್ಕಳ ಜತೆಗೆ ಮನೆ ಬಿಟ್ಟ ತೆರಳುತ್ತಾನೆ. ಬಳಿಕ ಅಪ್ಪನ ಅಮ್ಮನ ಸಾವಿನ ಸುದ್ದಿಯೂ ಅವನ ಗಮನಕ್ಕೆ ಬರುವುದಿಲ್ಲ. ಹೆಂಡತಿ ಮಕ್ಕಳೂ ತೀರಿಹೋಗ್ತಾರೆ. ಸುಬ್ಬಣ್ಣನ ಜೀವನ ನರಕ ಆಗುತ್ತೆ. ಇದು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಬರೆದ ಸುಬ್ಬಣ್ಣ ಕತೆ.
ಇಂಥ ಕಥೆಯಲ್ಲಿ ರಾಜ್‌ಕುಮಾರ್ ನಟಿಸಿದರೆ ಜನ ಒಪ್ಪಿಕೊಳ್ತಾರಾ? ಮನೆಯ ಜವಾಬ್ದಾರಿ ಇಲ್ಲದ ಮನುಷ್ಯನ ಕಥೆ ಬೇಕಾ? ರಾಜ್‌ಕುಮಾರ್ ಅವ್ರ ಇಮೇಜ್‌ಗೆ ತಕ್ಕ ಸಿನಿಮಾ ಆಗಲ್ಲ, ಪಾತ್ರ ಸರಿಹೊಂದಲ್ಲ ಎಂದಿದ್ದರು. ಇಂಥ ಕಥೆ ಕೇಳಿದಾಗ ಅವರಿಗೆ ತಮ್ಮ ಮತ್ತು ತಮ್ಮ ಮಕ್ಕಳನ್ನು ನಡು ದಾರಿಯಲ್ಲಿ ಬಿಟ್ಟು ಹೋದಂತೆ ಅನಿಸುತ್ತಿತ್ತು. ಆ ಕಾರಣಕ್ಕೆ ಸುಬ್ಬಣ್ಣ ಕಾದಂಬರಿ ಆಧರಿತ ಸಿನಿಮಾ ಮಾಡೋದು ಬೇಡ, ಮಾಡಿದ್ರೆ ನಿನ್ನ ತಲೆ ಕಡೀತಿನಿ ಅಂತ ಭಗವಾನ್‌ಗೆ ಎಚ್ಚರಿಸಿದ್ದರು.
ಮಾಸ್ತಿ ವೆಂಕಟೇಶ್ ಅಯ್ಯಂಗಾರರ ದೊಡ್ಡ ಗುಣ.
ಅದಾಗಿ ಭಗವಾನ್ ಸಹ ಪಾರ್ವತಮ್ಮ ಅವರ ಮಾತಿನಂತೆ ಆ ಕಥೆಯನ್ನು ಅಲ್ಲಿಗೆ ಕೈ ಬಿಡ್ತಾರೆ. ವರ್ಷ ಕಳೆಯುತ್ತೆ. ಆಗ ಮಾಸ್ತಿ ಅವರಿಂದ ಭಗವಾನ್‌ಗೆ ಪತ್ರವೊಂದು ಬರುತ್ತೆ. ಆ ಪತ್ರದಲ್ಲಿ 8400 ಹಣ ಕಳಿಸಿರುತ್ತಾರೆ. ಕಾಪಿರೈಟ್ಸ್ ಹಕ್ಕಿನ ಅವಧಿ ಮುಗೀತು. ಇದರ ಹಕ್ಕು ನನ್ನ ಬಳಿಯೇ ಉಳಿಯುತ್ತೆರ. ನೀವು ಕೊಟ್ಟ 10 ಸಾವಿರದಲ್ಲಿ 1600 ಟ್ಯಾಕ್ಸ್ ಕಟ್ ಆಗಿದೆ. ಮಿಕ್ಕ ಹಣವನ್ನು ನಿಮಗೆ ಕಳಿಸಿದ್ದೇನೆ ಎಂದು ಬರೆದಿರುತ್ತಾರೆ. ಆ ವಿಚಾರವನ್ನೇ ಮರೆತಿದ್ದ ಭಗವಾನ್‌ಗೆ, ಮಾಸ್ತಿ ಅವರ ಈ ದೊಡ್ಡ ಗುಣ ತುಂಬ ಹಿಡಿಸಿತ್ತು.