ಕನ್ನಡ ಸುದ್ದಿ / ಮನರಂಜನೆ /
ಈ ನೀಲಿ ನೂಲಿನ ಕಥೆ ಸರಳ, ವಿರಳ; ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ನೋಡಲು ಸಪ್ತ ಕಾರಣಗಳು
ಸಪ್ತ ಸಾಗರದಾಚೆ ಎಲ್ಲೋ ಅನ್ನೋ ಸಿನಿಮಾ ಮಂಟಪಕ್ಕೆ ಸಂಗೀತ ಮತ್ತು ಛಾಯಾಗ್ರಹಣವೇ ಅಲಂಕಾರ. ಕಥೆ ನಿಧಾನವಾಯಿತು ಎನ್ನುವಾಗಲೇ, ಚರಣ್ ರಾಜ್ ಅವರ ಸಂಗೀತ, ಭಾವ ತೀರದ ಲೋಕಕ್ಕೆ ಕರೆದೊಯ್ಯುತ್ತದೆ. ಅದಕ್ಕೆ ತಕ್ಕಂತೆ ದೃಶ್ಯಗಳ ಹೆಣಿಗೆ ಚಿತ್ರವನ್ನು ಮತ್ತಷ್ಟು ಅಂದಗಾಣಿಸಿದೆ.
ಈ ನೀಲಿ ನೂಲಿನ ಕಥೆ ಸರಳ, ವಿರಳ; ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ನೋಡಲು ಸಪ್ತ ಕಾರಣಗಳು
Sapta Sagardaache Ello: ರಕ್ಷಿತ್ ಶೆಟ್ಟಿ ರುಕ್ಮಿಣಿ ವಸಂತ್ ಜೋಡಿಯ ಮೊದಲ ಸಿನಿಮಾ ಸಪ್ತ ಸಾಗರದಾಚೆ ಎಲ್ಲೋ. ಇಂದು (ಸೆ.1) ರಾಜ್ಯಾದ್ಯಂತ ಬಿಡುಗಡೆಯಾಗಿರುವ ಈ ಸಿನಿಮಾ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಕಥೆ, ಮೇಕಿಂಗ್, ಸಂಗೀತ, ಛಾಯಾಗ್ರಹಣ ಹೀಗೆ ಎಲ್ಲ ವಿಭಾಗಗಳಲ್ಲೂ ಸಿನಿಮಾ ಸೈ ಎನಿಸಿಕೊಂಡಿದೆ. ಇದರ ಜತೆಗೂ ಇನ್ನೂ ಹಲವು ಅಂಶಗಳಿವೆ. ಅವುಗಳ ಸಲುವಾಗಿಯೂ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ನೋಡಿಸಿಕೊಂಡು ಹೋಗುತ್ತದೆ.
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಎಂದಿನಂತೆ ಕಾಣುವ ಲವ್‌ಸ್ಟೋರಿಯಲ್ಲ. ಅದಕ್ಕೂ ಮಿಗಿಲಾದ ಒಂದು ಅಪ್ಯಾಯಮಾನ ಪ್ರಯತ್ನ. ಇದು ಮರ ಸುತ್ತುವ ಪ್ರೇಮಕಥೆಯಲ್ಲ. ಬದಲಿಗೆ ಪ್ರಬುದ್ಧ ಜೋಡಿಯ ಜೀವನದ ಕಥೆ. ಪ್ರೇಮ ಕಾವ್ಯದ ಅರಮನೆಯಲ್ಲಿ ಸಂಗೀತ ಮತ್ತು ಕ್ಯಾಮರಾ ಕೆಲಸ ಮೇಳೈಸಿದೆ. ನಿರ್ದೇಶಕರ ಕುಸುರಿ ಕೆಲಸ ವರ್ಕೌಟ್ ಆಗಿದೆ.ಸಪ್ತಸಾಗರದಾಚೆ ಎಲ್ಲೋ ಚಿತ್ರ ಏಕೆ ನೋಡಬೇಕು ಎಂಬುದಕ್ಕೆ ಇಲ್ಲಿವೆ ಸಪ್ತ ಕಾರಣಗಳು.
- 1. ಹೈ ಬಜೆಟ್ ಇರಬೇಕು, ಮಾಸ್ ಆಕ್ಷನ್ ದೃಶ್ಯಗಳು ಬೇಕು, ಅದ್ದೂರಿ ಸೆಟ್‌ಗಳಿಂದ ಸಿನಿಮಾ ಕಂಗೊಳಿಸಬೇಕು, ಮೈ ಜುಂ ಎನಿಸುವ ವಿಎಫ್‌ಎಕ್ಸ್‌ಗಳಿರಬೇಕು... ಇದ್ಯಾವುದರ ಗೊಡವೆ ಇಲ್ಲದೆ ನೀಟಾಗಿ ನೋಡಿಸಿಕೊಂಡು ಹೋಗುವ ಸಿನಿಮಾ ಸಪ್ತ ಸಾಗರದಾಚೆ ಎಲ್ಲೋ.
- 2. ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ಒಂದೊಳ್ಳೆಯ ಪ್ಯೂರ್ ಲವ್‌ಸ್ಟೋರಿ ಕಂಡದ್ದು ತುಂಬ ವಿರಳ. ಆ ಬಹು ದಿನಗಳ ಕೊರತೆಯನ್ನು ರಕ್ಷಿತ್ ಶೆಟ್ಟಿಯ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ನೀಗಿಸಿದೆ. ಆ ಕಾರಣಕ್ಕೂ ಈ ಸಿನಿಮಾ ಪ್ರೇಮಿಗಳ ಹಾಟ್ ಫೇವರಿಟ್ ಆಗಿ ಪರಿಣಮಿಸಿದೆ.
- 3. ಒಮ್ಮೆಲೆ ಉತ್ಪ್ರೇಕ್ಷೆಗೆ ಒಳಪಡಿಸದೇ, ನಿಧಾನವಾಗಿ, ಸಾವಧಾನವಾಗಿಯೇ ಸಪ್ತ ಸಾಗರದಾಚೆಗೆ ಈ ಸಿನಿಮಾ ನಿಮ್ಮನ್ನು ಕರೆದೊಯ್ಯುತ್ತದೆ. ನಿರ್ದೇಶಕ ಹೇಮಂತ್ ಎಂ. ರಾವ್ ಕಥೆ ಕಟ್ಟುವಿಕೆಯಲ್ಲಿ ಅಚ್ಚುಕಟ್ಟು. ಅವರ ಈ ಹಿಂದಿನ ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕವಲು ದಾರಿ ಸಿನಿಮಾಗಳಲ್ಲೂ ಅದು ಸಾಬೀತಾಗಿದೆ. ಇದೀಗ ಅವರ ಬತ್ತಳಿಕೆಯಿಂದ ಬಂದ ಸಪ್ತ ಸಾಗರವೂ ಅಷ್ಟೇ ಸ್ಪೆಷಲ್.
- 4. ಕಥೆ ಒಂದು ಬದಿಯಲ್ಲಿ ತೂಕ ಹೆಚ್ಚಿಸಿಕೊಂಡರೆ, ಅದಕ್ಕೆ ಪೈಪೋಟಿಯ ರೀತಿಯಲ್ಲಿ ಜಿದ್ದಿಗೆ ಬಿದ್ದು ನಟನೆ ನೀಡಿದ್ದಾರೆ ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್. ಚಿತ್ರದಲ್ಲಿ ಈ ಇಬ್ಬರು ಪ್ರೇಮಿಗಳು. ಮನು ಶ್ರೀಮಂತರ ಮನೆಯ ಕಾರು ಡ್ರೈವರ್, ಹಾಡೆಂದರೆ ಬಲು ಇಷ್ಟದ ಹುಡುಗಿ ಪ್ರಿಯಾ. ಆಕೆಗೆ ಮನವೇ ನೀಲಿ ಕಡಲು. ಇಬ್ಬರೂ ಮಾತನಾಡಲು ಶುರು ಮಾಡಿದರೆ, ಮಿಕ್ಕದ್ದೂ ಅವರಿಗೆ ಕಾಣಿಸದು.
- 5. ಪ್ರಿಯಾ ಸಲುವಾಗಿ ಮನು ತೆಗೆದುಕೊಳ್ಳುವ ರಿಸ್ಕ್ ಇಂಟರ್‌ವಲ್ ಬಳಿಕ ತೆರೆದುಕೊಳ್ಳುತ್ತದೆ. ಅಲ್ಲಿಂದ ಒಂದು ಭಾವುಕ ಜರ್ನಿಯ ಆರಂಭ. ತೆರೆಮೇಲೆ ಈ ಇಬ್ಬರು ಬರೀ ನಟನೆಯನ್ನಷ್ಟೇ ನೀಡಿಲ್ಲ. ನೋಡುಗರ ಕಣ್ಣಾಲಿಗಳನ್ನೂ ಇವರಿಬ್ಬರು ಒದ್ದೆ ಮಾಡಿಸಿದ್ದಾರೆ.
- 6. ಇಡೀ ಸಿನಿಮಾ ಮಂಟಪಕ್ಕೆ ಸಂಗೀತ ಮತ್ತು ಛಾಯಾಗ್ರಹಣವೇ ಅಲಂಕಾರ. ಕಥೆ ನಿಧಾನವಾಯಿತು ಎನ್ನುವಾಗಲೇ, ಚರಣ್ ರಾಜ್ ಅವರ ಸಂಗೀತ, ಭಾವ ತೀರದ ಲೋಕಕ್ಕೆ ಕರೆದೊಯ್ಯುತ್ತದೆ. ಅದಕ್ಕೆ ತಕ್ಕಂತೆ ದೃಶ್ಯಗಳ ಹೆಣಿಗೆ ಚಿತ್ರವನ್ನು ಮತ್ತಷ್ಟು ಅಂದಗಾಣಿಸಿದೆ. ಈ ಇಬ್ಬರ ಕಾಂಬಿನೇಷನ್ ಸಿನಿಮಾದ ಹೈಲೈಟ್.
- 7. ಸಣ್ಣ ಸಣ್ಣ ಎಲಿಮೆಂಟ್‌ಗಳೂ ಸಪ್ತ ಸಾಗರಾದಾಚೆ ಎಲ್ಲೋ ಸಿನಿಮಾದಲ್ಲಿ ಮಾತನಾಡಿವೆ ಎಂದರೆ ಅತಿಶಯೋಕ್ತಿ ಎನಿಸದು. ಕೋರ್ಟ್ ರೂಮ್, ಜೈಲು, ಕಡಲು, ಮನೆಯ ಮಹಡಿ, ಕತ್ತೆ.. ಹೀಗೆ ಒಂದು ಬೇರೆಯ ಜಗತ್ತನ್ನೇ ಈ ಇಬ್ಬರೂ ನೋಡುಗರಿಗೆ ಪರಿಚಯಿಸಿದ್ದಾರೆ. ನಿರ್ದೇಶಕರು ಮತ್ತೆ ಪ್ರೇಕ್ಷಕನ ತಾಳ್ಮೆ ಪರೀಕ್ಷಿಸಿದ್ದಾರೆ. ನಿಧಾನವಾಗುವ ಕಥೆಗೆ ಅಷ್ಟೇ ಚೆಂದದ ಕ್ಲೈಮ್ಯಾಕ್ಸ್ ಇಟ್ಟಿದ್ದಾರೆ. ಅದು ಮುಂದಿನ ಭಾಗದಲ್ಲೇನಿರಲಿದೆ ಎಂಬ ಕೌತುಕ ಹೆಚ್ಚಿಸಿದೆ.
ಕನ್ನಡ ಚಲನಚಿತ್ರ ಸುದ್ದಿ, ಟಿವಿ ಧಾರಾವಾಹಿಗಳು, ಒಟಿಟಿ, ವೆಬ್ ಸಿರೀಸ್, ಸಿನಿಮಾ ವಿಮರ್ಶೆ, ಸ್ಯಾಂಡಲ್ವುಡ್, ಬಾಲಿವುಡ್, ಹಾಲಿವುಡ್, ಟಾಲಿವುಡ್, ಕಾಲಿವುಡ್ ಲೋಕದ ತಾಜಾ ವಿದ್ಯಮಾನಗಳಿಗೆ 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಮನರಂಜನೆ ವಿಭಾಗ ನೋಡಿ.